Mandra- S L Bhyrappa
ಯಾವುದೇ ಕಾದಂಬರಿಯನ್ನು ಒಮ್ಮೆ ಕೈಯಲ್ಲಿ ಹಿಡಿದರೆ ಮುಗಿಸುವವರೆಗೆ ಬಿಡಲಾರದ ಆಸಕ್ತಿ ಹುಟ್ಟಲು ಕಾರಣವೇನು ? ಅದರ ಭಾಷಾ ಪ್ರಯೋಗವೇ, ವಸ್ತುವೇ, ಕಥೆಯ ಹಂದರವೇ, ಪಾತ್ರಗಳ ನಡೆಯೇ ಎಂದು ನೋಡುವಾಗ, ಅದು ಯಾವುದೇ ಒಂದೆರಡು ಕಾರಣಗಳಿಗೆ ಸೀಮಿತವಾಗುವುದಿಲ್ಲ. ಅಂತಹ ಹಲವಾರು ಕಾರಣಗಳಿಂದಾಗಿ ಒಂದು ಕತಿ ಓದುಗರಲ್ಲಿ ಕಟ್ಟಿಕೊಡುವ ಒಟ್ಟಾರೆ ಅನುಭವ ಅಂದರೆ, ತಾದಾತ್ಮ್ಯ ಭಾವವೇ ಅದರ ಸಾಫಲ್ಯಕ್ಕೆ ಕಾರಣವಾಗುತ್ತದೆ. ಸಷ್ಟಿಪೂರ್ವದಲ್ಲಿ ಕವಿಯಲ್ಲಿ ಮೆತೋರುವ ರಸಭಾವಗಳು ಸಹದಯ ಓದುಗರಲ್ಲಿಯೂ ಅಂತಹದೇ ರಸ ಸಂವೇದನೆಗಳನ್ನು ಉದ್ದೀಪನಗೊಳಿಸುವುದು ಅಪೂರ್ವ ಸಿದ್ಧಿ. ಅಂತಹ ಸಿದ್ಧಿಯನ್ನು ಸಾಧಿಸಿರುವ ಬೆರಳೆಣಿಕೆಯ ಕವಿ/ಲೇಖಕರಲ್ಲಿ ಎಸ್.ಎಲ್.ಭೆರಪ್ಪ ಒಬ್ಬರು ಎನ್ನುವುದಕ್ಕೆ ಅವರ ಅಸಂಖ್ಯಾತ ಓದುಗರೇ ಸಾಕ್ಷಿ. ಅದರೊಂದಿಗೆ ಈಗ ಅವರಿಗೆ ಸಂದಿರುವ ಪ್ರತಿಷ್ಠಿತ ಸರಸ್ವತಿ ಸಮ್ಮಾನದ ಪುಷ್ಟಿಯೂ ದೊರೆತಿದೆ. ಈ ಸಮ್ಮಾನಕ್ಕೆ ನೇರ ಕಾರಣವಾಗಿರುವ ಅವರ ಮಂದ್ರದಲ್ಲಿ ಮೊದಲಿನಿಂದ ಕೊನೆಯವರೆಗೂ ಬೇರೆಲ್ಲಾ ರಸಭಾವಗಳಿಗಿಂತಲೂ ಸಾಂದ್ರವಾಗಿ ಹರಿಯುವ ಸಂಗೀತ ಝರಿಯಲ್ಲಿ ಸಹದಯ ಓದುಗರು ಮುಳುಗುತ್ತಾ ತೇಲುತ್ತಾ ಆರ್ದ್ರವಾಗುತ್ತಾರೆ.
ಜೀವನದ ವಿವಿಧ ಮಜಲುಗಳ ಸತ್ಯದರ್ಶನ ಮಾಡಿಸುತ್ತಾ ಮಂದ್ರದ ಚಿಕ್ಕ ದೊಡ್ಡ ಪಾತ್ರಗಳನ್ನು ಆವರಿಸುತ್ತಾ ಸಾಗುವ ವಿಶಾಲವಾದ ಸಂಗೀತದ ಹರವಿನಿಂದ ಈಚೆ ನಿಂತು ಇಲ್ಲಿನ ಸ್ತ್ರೀ ಪಾತ್ರಗಳ ಮೂಲಕ ಅಭಿವ್ಯಕ್ತವಾಗಿರುವ ವೌಲ್ಯ ಸಂಘರ್ಷದತ್ತ ಒಂದು ಕಿರು ನೋಟಬೀರುವ ಆಶಯ ಇಲ್ಲಿದೆ.
'ನನಗೆ ಯಾವ ಪಂಥದಲ್ಲಿಯೂ ವಿಶ್ವಾಸವಿಲ್ಲ' ಎನ್ನುವ ಭೆರಪ್ಪನವರು ಎಲ್ಲಾ ಪಂಥಗಳ ತಿರುಳನ್ನೂ ಸಾರವತ್ತಾಗಿ ಗ್ರಹಿಸಿ, ಅವೆಲ್ಲವನ್ನೂ ಮೀರಿನಿಂತು, ತನ್ನದೇ ಆದ ಸ್ವತಂತ್ರ ಹಾದಿಯಲ್ಲಿ ಸಾಗಿ ಬಂದಿದ್ದಾರೆ. ನಾಲಕ್ಕೂವರೆ ದಶಕಗಳಿಂದಲೂ ಸಾಹಿತ್ಯ ಸಷ್ಟಿಸುತ್ತಿರುವ ಭೆರಪ್ಪನವರನ್ನು ನಮ್ಮ ಪಾರಂಪರಿಕ ವೌಲ್ಯಗಳಲ್ಲಿರುವ ಗಟ್ಟಿತನ ಹಾಗೂ ಕಾಲಾಂತರದಲ್ಲಿ ಅದರ ಸುತ್ತಲೂ ಸಷ್ಟಿಯಾಗಿರುವ ಹಲವು ಆವರಣಗಳು ಬಹುವಾಗಿ ಕಾಡುತ್ತವೆ ಎನ್ನುವುದು ನನ್ನ ವೆಯಕ್ತಿಕ ಅನಿಸಿಕೆ. ಈ ಪಾರಂಪರಿಕ ವೌಲ್ಯಗಳು ಮಹಿಳೆಯರ ಮೇಲೆ ಹೇರಿರುವ ಒತ್ತಡಗಳು ಹಾಗೂ ಅವುಗಳಿಂದ ಹೊರಗೆ ಬರಲು ತವಕಿಸುವ ಆಧುನಿಕ ಮಹಿಳೆಯ ಇಬ್ಬಂದಿತನವನ್ನು ಇವರ ಹಲವು ಕತಿಗಳು ಬಿಚ್ಚಿಡುತ್ತವೆ. 'ವಂಶವಕ್ಷ'ದ ಕಾತ್ಯಾಯನಿಯಿಂದ ಹಿಡಿದು 'ಮಂದ್ರ'ದ ಮಧುಮಿತಾಳವರೆಗೆ ಈ ತಳಮಳ ಓದುಗರನ್ನು ಆರ್ದ್ರಗೊಳಿಸುತ್ತದೆ.
'ಮಂದ್ರ'ದಲ್ಲಿ ಅನೀತಿಯ ವೆಭವೀಕರಣವಾಗಿದೆ ಎನ್ನುವ ಆಪಾದನೆ ಅಲ್ಲಲ್ಲಿ ಕೇಳಿಬಂದಿದೆ. ಆದರೆ, ಯಾವುದು ನೀತಿ ? ಯಾವುದು ಅನೀತಿ ? ಇದನ್ನು ನಿರ್ಧರಿಸುವುದು ಸಮಾಜವೇ ಅಥವಾ ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ಅಂತಃ ಪ್ರಜ್ಞೆಯೇ ? ಸಮಾಜ ನಿರ್ಧರಿಸುವ ನೀತಿ ಸಂಹಿತೆ ಸಾರ್ವಕಾಲಿಕ ಸತ್ಯವಂತೂ ಅಲ್ಲ ಎನ್ನುವುದನ್ನು ನಮ್ಮ ಚರಿತ್ರೆ ನಮಗೆ ತಿಳಿಸುತ್ತಿದೆ. ಮಹಾಭಾರತದ ಆದಿ ಭಾಗದಲ್ಲಿ ಸಮಾಜಕ್ಕೆ ಒಪ್ಪಿತವಾದ ನಿಯೋಗ ಪದ್ಧತಿ ಹಾಗೂ ಕಾನೀನ ಮಕ್ಕಳು ನಂತರ ಚರ್ಚಾಸ್ಪದವಾಗುವುದನ್ನು ಭೆರಪ್ಪನವರ 'ಪರ್ವ' ಎತ್ತಿ ತೋರಿಸುತ್ತದೆ. ಪರ್ವ ಪ್ರಾರಂಭವಾಗುವುದೇ ಈ ಬದಲಾಗುತ್ತಿದ್ದ ವೌಲ್ಯಗಳ ಚರ್ಚೆಯಿಂದ ಎನ್ನುವುದನ್ನು ಗಮನಾರ್ಹ. ನಂತರ, ದುರ್ಯೋಧನ ತನ್ನ ತಂದೆಯ ಹುಟ್ಟಿನ ಹಿಂದಿರುವ ಸತ್ಯವನ್ನು ತಿಳಿದರೂ, ಪಾಂಡವರ ಹುಟ್ಟಿನ ಬೇರನ್ನೇ ಅಲ್ಲಾಡಿಸುತ್ತಾ , ಅದನ್ನೇ ತನ್ನ ನೀತಿ ಸಂಹಿತೆಯಾಗಿಸುತ್ತಾನೆ. ಈ ಹಿನ್ನೆಲೆಯಲ್ಲಿ, ವಂಶವಕ್ಷದ ಕಾತ್ಯಾಯನಿಯಿಂದ ಮಂದ್ರದ ಮಧುಮಿತಾಳವರೆಗಿನ ನಾಲಕ್ಕು ದಶಕಗಳ ಕಾಲಘಟ್ಟದಲ್ಲಿ ನಮ್ಮ ಸಮಾಜದಲ್ಲಿ ಬದಲಾಗುತ್ತಿರುವ ವೌಲ್ಯಗಳನ್ನೂ ಹಾಗೂ ಅವುಗಳಿಗೆ ಸ್ಪಂದಿಸುತ್ತಾ ತಮ್ಮ ಅಂತಃ ಪ್ರಜ್ಞೆಯನ್ನು ಗಟ್ಟಿಗೊಳಿಸುತ್ತಾ ಸಾಗಿರುವ ಮಹಿಳೆಯರ ನಾನಾ ಮುಖಗಳನ್ನೂ ತೆರೆದಿಟ್ಟಿರುವ ಭೆರಪ್ಪನವರ ಸಾಹಿತ್ಯದಲ್ಲಿರುವ ಒಳನೋಟ ನನಗೆ ಮುಖ್ಯವಾಗುತ್ತದೆ. ಸಮಕಾಲೀನ ಸಮಾಜಕ್ಕೆ ಒಪ್ಪಿಗೆಯಾಗಿರಲಿ ಬಿಡಲಿ ನಮ್ಮ ಸುತ್ತ ಮುತ್ತ ಕಾಣುವ ಮಹಿಳೆಯರ ನೆತಿಕ ಬಲವನ್ನು ಗುರುತಿಸಿ ಅದು, ವಿಕಾಸದ ಹಾದಿಯಲ್ಲಿರುವುದನ್ನು ಭೆರಪ್ಪನವರು ತಮ್ಮ ಸ್ತ್ರೀ ಪಾತ್ರಗಳ ಮೂಲಕ ದಾಖಲಿಸುತ್ತಾರೆ.
'ಮಂದ್ರ'ದಲ್ಲಿ ಪ್ರಧಾನ ಪಾತ್ರ ಸಂಗೀತವೇ ಎನ್ನುವುದು ಮೇಲಿನ ನೋಟಕ್ಕೇ ತೋರುವುದಾದರೂ , ಅದರ ಹಿಂದೆ ಮುಂದೆ ನಡೆಯುವ ನೀತಿ-ಅನೀತಿಗಳ ದೊಂಬರಾಟಗಳು ಓದುಗರನ್ನು ಬಹಳವಾಗಿ ಕಾಡುತ್ತವೆ. ಮೊದಲಿನಿಂದ ಕೊನೆಯವರೆಗೂ ಇಲ್ಲಿ ವಿಜಂಭಿಸುವುದು ಸಂಗೀತದ ಝೇಂಕಾರ. ಅದರ ಔನ್ನತ್ಯದಲ್ಲಿ ಮತ್ತೆಲ್ಲವೂ, ಪ್ರೇಮ-ಕಾಮಗಳೂ ಕುಬ್ಜವಾಗಿಬಿಡುತ್ತವೆ. ಮೋಹನಲಾಲನ ಕಾಮವಾಸನೆಯಂತೆಯೇ ಮಧುಮಿತಾಳ ವೈವಾಹಿಕ ಜೀವನದ ಹಂಬಲವೂ ಕೂಡ ವ್ಯಾವಹಾರಿಕ ಸ್ತರದಲ್ಲಿಯೇ ಉಳಿದುಬಿಡುತ್ತದೆ. ಬೇರೆಲ್ಲಾ ಭಾವಗಳನ್ನೂ ಮೀರಿ ನಿಲ್ಲುವುದು ಸಂಗೀತದ ಒಲವು. ಇದು ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಆವರಿಸಿಕೊಂಡು ಕುಣಿಸುತ್ತದೆ. ಮನೋಹರಿ ದಾಸ್ ಅಂತಹವರು ಕಲಾ ಪ್ರಪಂಚದಲ್ಲಿ ಅದರಲ್ಲಿಯೂ ಚಲನಚಿತ್ರರಂಗದಲ್ಲಿ ಸಾಮಾನ್ಯವಾಗಿ ಕಾಣುವುದರಿಂದ ವಿಶೇಷವೆನಿಸುವುದಿಲ್ಲ. ಎಲ್ಲೆಡೆಯೂ ಚರ್ಚೆಗೆ ಗ್ರಾಸವಾಗಿರುವುದು ಮಧುಮಿತಾಳ ಜೀವನದಲ್ಲಿ ನುಗ್ಗಿ ಬರುವ ಸುನಾಮಿಯಂತಹ ಅಲೆಗಳು. ಅದರಲ್ಲಿ ಅವಳು ಸಿಲುಕಿಯೂ ಸಿಲುಕದಂತೆ ತೇಲುತ್ತಾ ಮುಳುಗುತ್ತಾ ತನ್ನ ಮೂಲ ಗುರಿಯನ್ನು ಸಾಧಿಸುವುದು ಆಧುನಿಕ ಮಹಿಳೆಯಲ್ಲಿ ವಿಕಾಸವಾಗಿರುವ ಅಂತಃಸತ್ತ್ವದ ದ್ಯೋತಕವಾಗುತ್ತದೆ.
ಮಂದ್ರದಲ್ಲಿ ಪ್ರಮುಖವಲ್ಲದ ಪಾತ್ರ ಎಂದೆನಿಸುವ ಮೋಹನಲಾಲನ ಹೆಂಡತಿ ರಾಮಕುಮಾರಿಯ ಪಾತ್ರವೂ ಓದುಗರಲ್ಲಿ ಬೆರಗನ್ನೂ ಮೆಚ್ಚುಗೆಯನ್ನೂ ಸಷ್ಟಿಸುತ್ತಾ ಸಾಗುತ್ತದೆ. ಓದು-ಬರಹ ಕಾಣದ ಹಳ್ಳಿಯ ಬಡ ಹೆಣ್ಣು ರಾಮಕುಮಾರಿ ಮೋಹನಲಾಲನನ್ನು ಮದುವೆಯಾಗಿ ಎರಡು ಮಕ್ಕಳನ್ನು ಪಡೆದು ಅವನಿಂದ ಪರಿತ್ಯಕ್ತಳಾಗಿ ದೂರವೇ ನಿಂತವಳು. ತನ್ನ ಸಂಸಾರ ಸಾಕಲು ಅಡಿಗೆ ಕೆಲಸಕ್ಕೆ ನಿಂತ ಮನೆಯ ಯಜಮಾನ, ಗೋರೆ ಅವಳಿಗೆ ಸುಲಭವಾಗಿ ಕೆಲಸ ಕೊಟ್ಟದ್ದೇ , ಅವಳು ಮಹಾಗಾಯಕ ಮೋಹನಲಾಲನ ಮಡದಿ ಎಂದು ತಿಳಿದಮೇಲೆ. ಸಂಗೀತಗಾರನ ವೆಯಕ್ತಿಕ ಬದುಕಿನ ಬಗ್ಗೆ ಚಿಂತಿಸದೆ, ಅವನು ತನ್ನ ಸಂಗೀತದಲ್ಲಿ ಹೊರಹೊಮ್ಮಿಸುವ ಉದಾತ್ತ ಭಾವದಲ್ಲಿ ಮಿಂದು ಪುಳಕಗೊಳ್ಳಬಲ್ಲಂತಹ ಸಂಗೀತ ಪ್ರೇಮಿ ಹಾಗೂ ಸಂಗೀತಗಾರರ ಪೋಷಕರಾದ ಗೋರೆಯವರದು ಉದಾತ್ತ ಪಾತ್ರ. ಅಂತಹ ಪ್ರಾಮಾಣಿಕ ಗಹಸ್ಥನಿಗೂ ತನ್ನಲ್ಲಿ ಕೆಲಸಕ್ಕಿರುವ ರಾಮಕುಮಾರಿಯೊಂದಿಗೆ ಸಂಬಂಧ ಬೆಳೆಸುವ ಆಸೆ ಚಿಗುರಿ ಅವಳನ್ನು ಕೇಳಿಯೂ ಬಿಡುತ್ತಾನೆ. ಬೇರೆ ಯಾವ ದಿಕ್ಕೂ ಕಾಣದಂತಹ ಪರಿಸ್ಥಿತಿಯಲ್ಲಿ, ತನ್ನ ಸಂಸಾರ ಸಾಗಲು ನೆರವಾದ, ಹಲವಾರು ವರ್ಷಗಳಷ್ಟು ಕಾಲ ಸಭ್ಯತೆಯ ಎಲ್ಲೆಯನ್ನು ದಾಟದಿದ್ದ ತನ್ನ ಧಣಿ ಗೋರೆಸಾಹೇಬರಲ್ಲಿ ಪರಮ ಪೂಜ್ಯ ಭಾವ ತೆಳೆದಿದ್ದ ರಾಮಕುಮಾರಿಗೆ ಒಮ್ಮಿಂದೊಮ್ಮೆಗೇ ಬಂದ ಅವನ ಬೇಡಿಕೆ ದಿಗ್ಭ್ರಮೆ ಹುಟ್ಟಿಸುತ್ತದೆ. ಅಂತಹ ವಿಷಮ ಪರಿಸ್ಥಿತಿಯನ್ನು ದಾಟಲು ಅವಳಿಗೆ ನೆರವಾಗುವುದು ಅವಳು ಕಟ್ಟಿಕೊಂಡು ಬಂದ ಪಾರಂಪರಿಕ ವೌಲ್ಯಗಳು.
ಈಗ, ಸಾಹಿತ್ಯಾಸಕ್ತರಲ್ಲಿ ಬಹು ಚರ್ಚಿತವಾಗಿರುವ ಮಧುಮಿತಾಳ ಪಾತ್ರ ಸಷ್ಟಿಯನ್ನು ನೋಡೋಣ. ಮಧುಮಿತಾ ತನ್ನ ಗುರುವಿನ ಕಾಮದಾಹಕ್ಕೆ ಬಲಿಯಾಗುವುದನ್ನು ಅವಳ ನೆತಿಕ ಪತನವೆಂದು ವಿಚಾರಗೋಷ್ಠಿಗಳಲ್ಲಿ ಹಾಗೂ ಸಂವಾದದಲ್ಲಿ ಕೇಳಿಬಂದದ್ದು ಆ ಪಾತ್ರ ಬೆಳೆದು ಬಂದ ನಿಲುವಿಗೆ ಸರಿ ಎನಿಸುವುದಿಲ್ಲ. ಆಗ ತಾನೇ ಕಾಲೇಜಿನ ಓದು ಮುಗಿಸಿದ್ದ ನವ ಯುವತಿ ಮನಸೋಲುವಂತಹ ಯಾವುದೇ ಬಾಹ್ಯ ಆಕರ್ಷಣೆ ಮೋಹನಲಾಲನಲ್ಲಿ ಇರಲಿಲ್ಲ ಎನ್ನುವುದು ಸ್ಪಷ್ಟವಾಗಿ ಕಾಣುತ್ತದೆ. ಹರೆಯ ಮೀರಿದ, ಹಲ್ಲುಗಳ ಮೂಲಕ ತಂಬಾಕಿನ ಒರಟು ವಾಸನೆ ಬೀರುವ ವಿಷಯ ಲಂಪಟನಾದ ಅರವತ್ತು ವರ್ಷಗಳ ಮುದುಕ ಮೋಹನಲಾಲ್. ಅವನು ಸಂಗೀತದಲ್ಲಿ ಸಾಧಿಸಿದ್ದ ಶಕ್ತಿ ಅಪ್ರತಿಮ. ಸ್ವರಗಳನ್ನು ಹಿಂಜಿ ಹಿಂಜಿ ರಾಗದ ರಸವನ್ನು ಹೊರತೆಗೆಯುವುದಷ್ಟೇ ಅಲ್ಲದೆ, ತಾನು ಸಾಧಿಸಿದ್ದನ್ನು ವಿದ್ಯಾರ್ಥಿಗಳಿಗೆ ಉಣಬಡಿಸಬಲ್ಲ ಸಮರ್ಥ ಗುರು. ಸಂಗೀತ ಸಾಧನೆಯನ್ನೇ ಜೀವನದ ಗುರಿಯಾಗಿಸಿಕೊಂಡ ಮಧುಮಿತಾಳಿಗೆ ಇದ್ದ ವಿಕಲ್ಪ ಎರಡೇ ಎರಡು. ಅಂತಹ ಗುರು ಹೇಳಿದ್ದಕ್ಕೆ ತಲೆ ಬಾಗುವುದು ಅಥವಾ ಸಂಗೀತ ಸಾಧನೆಗೆ ತಿಲಾಂಜಲಿ ಬಿಡುವುದು.
ಸಾಂಪ್ರದಾಯಿಕತೆಯ ಮಡಿಲಲ್ಲಿ, ಸುಖ-ಸಮದ್ಧಿಯ ತೊಟ್ಟಿಲಲ್ಲಿ ಬೆಳೆದ ಸುಸಂಸ್ಕತ ಮನೆತನದ ಮಧುಮಿತಾಳ ಜೀವನದಲ್ಲಿ ಬಂದ ಮೊದಲ ಸುನಾಮಿ ಅಲೆಯೇ ಮೋಹನಲಾಲನ ಕಾಮವಾಸನೆಗೆ ಆಹಾರವಾಗುವುದು. ಅವಳು ಅದಕ್ಕೆ ಒಪ್ಪುವುದು ಸುಲಭವಾಗಿರಲಿಲ್ಲ. ಗುರುವಿನ ನಿರ್ಲಜ್ಜ ಕಾಮನೆಗೆ ಅವಳಲ್ಲಿ ಮೊದಲು ಹುಟ್ಟಿದ್ದು ಕೋಪ-ಅಸಹ್ಯ-ಜಿಗುಪ್ಸೆ. ಸಂಗೀತ ಕಲಿಯದಿದ್ದರೆ ಏನಾಯಿತು ? ನೀತಿಯನ್ನೇ ಕಳೆದುಕೊಂಡು ಬದುಕಿದರೆ ಏನು ಸುಖ ? ಎಂಬ ಆಲೋಚನೆಯಲ್ಲಿ ಎರಡು ದಿನ ಕಳೆದು ಸಂಗೀತವನ್ನು ಮರೆತು, ಸಾಹಿತ್ಯಾಭ್ಯಾಸ ಮಾಡುವ ನಿರ್ಧಾರದಿಂದ ಕಾದಂಬರಿ ಓದಲು ತೊಡಗಿದ ಮಧುಮಿತಾ ಗುರುವಿನ ಮುಖ ಮುರಿಯಲಿಕ್ಕೆಂದೇ ತನ್ನ ಪಾಠಕ್ಕೆ ನಿಗದಿಯಾದ ದಿನ ಹೋಗಿ 'ಶಿಷ್ಯೆ ಅಂದರೆ ಮಗಳ ಸಮಾನ ಅಲ್ಲವೇ ?' ಎಂದು ಕೇಳುತ್ತಾಳೆ. ಅದಕ್ಕೆ ಮೋಹನಲಾಲನದು ತಣ್ಣಗಿನ ಪ್ರತಿಕ್ರಿ0ೆು. ಯಾವ ಭಾವಾವೇಶವೂ ಇಲ್ಲದ ಅದೇ ಕಾಮನೆ .. ಬಲವಂತವೇನೂ ಇಲ್ಲವೆಂದು ನಿರ್ಧಾರದ ಎಲ್ಲಾ ಭಾರವನ್ನೂ ಅವಳ ಮೇಲೇ ಹಾಕುವ ವ್ಯಾವಹಾರಿಕ ಚಾಣಾಕ್ಷತನ.
ಮತ್ತೆರಡು ದಿನಗಳಲ್ಲೇ, ಕಥೆ-ಕಾದಂಬರಿ ಓದುವುದು ಬರಡು ಎನಿಸಿ, ಬೇರೆ ಗುರುಗಳನ್ನು ಅರಸಿ ಅಲ್ಲಿಯೂ ನಿರಾಶಳಾಗಿ, ಮತ್ತೆ ಮತ್ತೆ , ಮೋಹನಲಾಲನಂತಹ ಗುರುವಿನಲ್ಲಿಯೇ ಸಂಗೀತ ಕಲಿಯಬೇಕೆನ್ನುವ ಅದಮ್ಯ ಆಸೆಯೇ ಹೆಚ್ಚಾಗಿ ಮನಸ್ಸು ಅವನು ಬಯಸಿದ ಅನಿವಾರ್ಯ ಸಂಬಂಧಕ್ಕೆ ಸಿದ್ಧವಾಗುತ್ತದೆ. ' ಇವನದು ನೇರವಾಗಿ ಭಾವ ಸಾಗರವನ್ನು ಹೊಗಿಸಿ ಮುಳುಗಿಸಿಬಿಡುವ ವಿಧಾನ... ಬೇರೆ ಯಾರ ಗಾಯನದಲ್ಲಿಯೂ ಈ ಶಕ್ತಿ ಇಲ್ಲ...ಉಜ್ಜುಗಿಸುವ ಕಸುವಿಲ್ಲ...' ಎಂದು ಮನಸ್ಸು ತನ್ನದೇ ವಾದವನ್ನು ಮುಂದಿಟ್ಟು , ಸಂಗೀತ ಒಂದು ಗಂಧರ್ವ ವಿದ್ಯೆ , ಹಾಗಾಗಿ ತಮ್ಮದು ಗಾಂಧರ್ವ ವಿವಾಹ ಎಂದುಕೊಳ್ಳುವ ಸಮರ್ಥನೆಗೆ ಬಂದು ಮುಟ್ಟುವಲ್ಲಿ ಆರು ತಿಂಗಳು ಕಳೆದುಹೋಗಿ, ತನ್ನ ಸಂಗೀತ ಸಾಧನೆಗೆ ಅಷ್ಟು ವಿಳಂಬವಾಯಿತು ಎಂದು ಕೊರಗುವ ಮಧುಮಿತಾಳ ನಿರ್ಧಾರದಲ್ಲಿ ಓದುಗರೂ ತನ್ಮಯತೆಯಿಂದ ಭಾಗಿಗಳಾಗುವಂತೆ ಮಾಡುವ ರಸಸಷ್ಟಿ ಭೆರಪ್ಪನವರ ಸಿದ್ಧಹಸ್ತದಲ್ಲಿ ನಳಪಾಕವಾಗಿಸಿದೆ. ಇಲ್ಲಿ ಯಾವ ಅನೀತಿಯೂ ಕಾಣುವುದಿಲ್ಲ.
ಅಷ್ಟರಲ್ಲಾಗಲೇ, ಚಂಪಾಳ ದಬ್ಬಾಳಿಕೆಯನ್ನು ಸಹಿಸಿ, ಮನೋಹರಿ ದಾಸಳಿಂದ ಅವಹೇಳನಕ್ಕೆ ಗುರಿಯಾಗಿ ಇನ್ನು ಯಾವುದೇ ರೀತಿಯ ಬಂಧನವೂ ಬೇಡವೆಂದು ನಿರ್ಧರಿಸಿದ್ದ ಮನೋಹರಲಾಲ, ಆಗಲೂ ಯಾವ ಭಾವಾವೇಶಕ್ಕೂ ಒಳಗಾಗುವುದಿಲ್ಲ. ಮತ್ತೆ, ವಿವಾಹಿತಳಾದ ಮಧುಮಿತಾಳನ್ನು ಅಮೆರಿಕದಲ್ಲಿ ತನ್ನ ಭಾವೋದ್ದೀಪನಕ್ಕೆ ಒತ್ತಾಯಿಸಿದಾಗಲೂ ತನ್ನ ಸ್ವಾರ್ಥ ಸಾಧನೆಯೊಂದೇ ಅವನ ಗುರಿ. ಮಧುಮಿತಾಳಿಗೆ ಮಾತ್ರ ತನ್ನ ಬಾಳಿನಲ್ಲಿ ಮತ್ತೊಮ್ಮೆ ಇನ್ನೂ ಬಲವಾಗಿ ಬಂದೆರಗಿದ ಸುನಾಮಿ ಅಲೆಯನ್ನು ತಡೆದುಕೊಳ್ಳುವ ತ್ರಾಣ ಉಳಿದಿರುವುದಿಲ್ಲ. ಅಲ್ಲಿಯೂ ಸಂಗೀತವೇ ಗೆಲ್ಲುತ್ತದೆ. ಆದರೆ ಅದಕ್ಕೆ ಎರವಾಗುವುದು ಅವಳ ಸಾಂಸಾರಿಕ ಬಂಧನ. ಇಬ್ಬಂದಿ ಜೀವನದ ಒತ್ತಡವನ್ನು ತಾಳಲಾಗದೆ, ಮತ್ತೆ ಸಂಗೀತಕ್ಕೇ ಪೂರ್ಣವಾಗಿ ಅರ್ಪಿಸಿಕೊಳ್ಳಲು ಸಂಸಾರ ತೊರೆದು ಬಂದ ಮಧುಮಿತಾಳಿಗೆ, ಗುರುವಿನ ನಿರಾಕರಣೆ ಮೊದಲಿಗೆ ಆಘಾತಕರವಾದರೂ, ಅಷ್ಟರಲ್ಲಿ ಪ್ರಬುದ್ಧತೆಗೆ ಏರಿದ್ದ ಅವಳ ಮನಸ್ಸು, ಅಂತಃಸತ್ತ್ವವನ್ನು ಬೆಳೆಸಿಕೊಂಡು ಕೊನೆಗೆ ಗುರಿಸಾಧಿಸುವಲ್ಲಿ ಸಾಫಲ್ಯ ಹೊಂದುತ್ತದೆ ಎನ್ನುವಲ್ಲಿ ಭೆರಪ್ಪನವರು ಕಟ್ಟಿಕೊಡುವ ರಸಪಾಕ ಪೂರ್ಣವಾಗುತ್ತದೆ.
ವೆಯಕ್ತಿಕ ಭದ್ರ ಜೀವನದ ಹಲವು ಸುಖ-ಸೌಕರ್ಯಗಳನ್ನು ಬಲಿತೆತ್ತು, ಸಂಗೀತದ ಸಾಧನೆಯಲ್ಲಿ ತನ್ನ ಗುರಿ ಸಾಧಿಸಿದ ಪರ್ವಕಾಲದಲ್ಲಿಯೂ ಮಧುಮಿತಾಳಿಗೆ ಗಂಡನ ನೆನಪು ಕಾಡುವುದು ಅವನ ಮೇಲಿನ ಪ್ರೇಮದಿಂದಲ್ಲ... ಅಲ್ಲಿಯೂ ವಿಜಂಭಿಸುವುದು ಸಂಗೀತ ಪ್ರೇಮವೇ.. ಗಂಡ ವಿಕ್ರಮ ತನ್ನಿಂದಾಗಿ, ಅವನಿಗೆ ಪ್ರಿಯವಾದ ಸಂಗೀತದಿಂದ ವಂಚಿತನಾದ ಎನ್ನುವಂತಹ ಅವಳ ಕೊರಗೂ ಕೂಡ ಸಂಗೀತ ಅವಳನ್ನು ಆವರಿಸಿರುವ ಆಳವನ್ನು ಸೂಚಿಸುತ್ತದೆ. ಮಧುಮಿತಾಳ ನಿರ್ಧಾರಗಳಿಗೆ ನೀತಿ ಸಂಹಿತೆಯನ್ನು ತೊಡಿಸಿ, ಕೋರ್ಟಿನಲ್ಲಿ ನ್ಯಾಯಾಧೀಶರಂತೆ ನಿರ್ಣಯಕ್ಕೆ ಕೂತರೆ, ಓದುಗ ಅಲ್ಲಿ ಸಿಗುವ ರಸಾನುಭವದಿಂದ ವಂಚಿತನಾಗುತ್ತಾನೆ. ಇದು, ನಾನು ಕಂಡು ಮೆಚ್ಚಿದ ಮಂದ್ರದ ಪಾರ್ಶ್ವ ನೋಟ.
ಯಾವುದೇ ಸಜನಾತ್ಮಕ ಕ್ರಿಯೆಯಲ್ಲಿ ಸಹದಯ ಓದುಗ ಅರಸುವುದು ಕಾವ್ಯ ಕಟ್ಟಿಕೊಡುವ ರಸಾನುಭವವನ್ನು. ಕವಿಗಳು (ಸಾಹಿತಿಗಳು) ಸಹಜವಾಗಿಯೇ, ತಾವು ಕಂಡು ಕೇಳಿ ಅರಿತ ಸಮಾಜ ದರ್ಶನವನ್ನು ತಮಗೆ ಒಗ್ಗಿದ ಪ್ರಕಾರದಲ್ಲಿ ಹೊರಗಿಡುತ್ತಾರೆ. ಅಲ್ಲಿ ಬಳಕೆಯಾಗುವ ತಂತ್ರ ಹಾಗೂ ಭಾಷೆ ವೆಯಕ್ತಿಕವಾದರೂ, ಒಂದು ಕತಿಯ ಅಂತಿಮ ಅಭಿವ್ಯಕ್ತಿ ಕತಿಕಾರನ ವೆಯಕ್ತಿಕ ನಿಲುವಿನ ಪ್ರತಿಬಿಂಬವಾಗಬೇಕಿಲ್ಲ. ಬಹಳಷ್ಟು ಬಾರಿ ಹಾಗೆ ಆಗುವುದೂ ಇಲ್ಲ. ಕತಿಕಾರ ತನ್ನ ಅನುಭವವನ್ನು ಸಾಕ್ಷಿಪ್ರಜ್ಞೆಯೊಂದಿಗೆ ನೋಡಿ ಅಭಿವ್ಯಕ್ತಿಸಿದಾಗ ಅದು, ಬಹುಜನರ ಹದಯವನ್ನು ತಟ್ಟುತ್ತಾ ಬಹುಕಾಲ ನಿಲ್ಲಬಲ್ಲದು. ಹಾಗಾಗಿಯೇ ಭೆರಪ್ಪನವರು, ಇಂದು ಬರುವ ಯಾವುದೇ ರೀತಿಯ ಋಣಾತ್ಮಕ ವಿಮರ್ಶೆಗಳಿಂದ ವಿಚಲಿತಗೊಳ್ಳದೆ, ಯಾವುದೇ ಕತಿಯು ಎಷ್ಟು ದಶಕಗಳು ನಿಲ್ಲುತ್ತವೆ ಎನ್ನುವುದರಿಂದ ಅದರ ವೌಲ್ಯ ನಿರ್ಧಾರವಾಗುತ್ತದೆ ಎನ್ನುತ್ತಾರೆ.
ಪ್ರಸಕ್ತ ಶಕೆಯ ಎಂಟನೆಯ ಶತಮಾನದಲ್ಲಿದ್ದ 'ಉತ್ತರ ರಾಮಚರಿತಂ' ಎಂಬ ಉತಷ್ಟ ನಾಟಕವನ್ನು ರಚಿಸಿದ ಕವಿ, ಭವಭೂತಿ ತನ್ನ ನಾಟಕದ ಪ್ರಾರಂಭದಲ್ಲಿ, *ಉತ್ಪತ್ಸ್ಯತೇಸ್ತಿ ಮಮ ಕೋಪಿ ಸಮಾನಧರ್ಮಾ ಕಾಲೋಹ್ಯಯಂ ನಿರವಧಿರ್ವಿಪುಲಾ ಚ ಪಥ್ವೀ - ಯಾರಿಗೆ ಸಹದಯತೆಯ ಅರಿವಿಲ್ಲವೋ ಅವರು ಈ ಕತಿಯಿಂದ ದೂರವಿರಲಿ. ಈ ಭೂಮಿಯೂ ವಿಶಾಲವಾಗಿದೆ. ಕಾಲಕ್ಕೂ ಕೊನೆಯೆಂಬುದಿಲ್ಲ (ನಿರವಧಿ). ನನಗೆ ಸಮಾನಧರ್ಮನಾದ ಯಾವನಾದರೂ ಸಹದಯ ಎಂದಾದರೂ (ಎಲ್ಲಿಯಾದರೂ) ಹುಟ್ಟಿಬರುವನು* ಎಂದು ಆತ್ಮವಿಶ್ವಾಸದಿಂದ ಹೇಳುತ್ತಾನೆ.
ನಮ್ಮ ರಾಷ್ಟ್ರಕವಿ ಕುವೆಂಪುರವರೂ, 'ನಾನೇರುವಾ ಎತ್ತರಕೆ ನೀನೇರಬಲ್ಲೆಯಾ ನಾನಿಳಿವಾ ಆಳಕ್ಕೆ ನೀನಿಳಿಯಬಲ್ಲೆಯಾ' ಎಂದು ವಿಮರ್ಶಕರತ್ತ ಸವಾಲು ಹಾಕಿದ್ದು ಎಲ್ಲಾ ಕಾಲದಲ್ಲಿಯೂ ಕವಿಗಳಿಗೂ ವಿಮರ್ಶಕರಿಗೂ ಇರುವಂತಹ ಸಂಬಂಧ ಎಂತಹುದೆಂಬುದನ್ನು ತಿಳಿಸುತ್ತದೆ. ಹಾಗಾಗಿ, ಅಂತಹ ವಿಮರ್ಶಕರನ್ನು ಹೊರತು ಪಡಿಸಿದರೂ, ತಮ್ಮ ಜೀವಿತಾವಧಿಯಲ್ಲಿಯೇ, ಸಹದಯರ ಪ್ರೀತಿಯನ್ನು ಪಡೆಯುವ ಲೇಖಕರು ವಿರಳವೆನ್ನುವುದು ಎಲ್ಲಾ ಕಾಲಕ್ಕೂ ಅನ್ವಯಿಸುವ ಮಾತು. ಅಂತಹ ಪ್ರೀತಿಗೆ ಭಾಜನರಾಗಿರುವ ಭೆರಪ್ಪನವರ ಮಂದ್ರದಲ್ಲಿ ಕಾಣುವ ಒಂದು ಪಾರ್ಶ್ವ ನೋಟವನ್ನು ಇಲ್ಲಿಡುವುದು ನನ್ನ ಆಶಯ.
ಮೂಲ:- http://tinyurl.com/mandrareview