ಶಿವರಾಮ ಕಾರಂತರ “ಮರಳಿ ಮಣ್ಣಿಗೆ” ಕಾದಂಬರಿಯು ಕನ್ನಡ ಸಾರಸ್ವತ ಲೋಕದಲ್ಲಿ ಮೆಚ್ಚುಗೆ
ಪಡೆದ ಸಾಹಿತ್ಯದಾಕರಗಳಲೊಂದು. ಈ ಕಾದಂಬರಿಯಲ್ಲಿ ಕಾರಂತರು ಕರಾವಳಿ ತೀರ ಪ್ರದೇಶದ ಐತಾಳ
ಕುಟುಂಬವೊಂದರ ತಲೆಮಾರನ್ನು ಕೇಂದ್ರಬಿಂದುವಾಗಿರಿಸಿಕೊಂಡು ಕಥೆಯನ್ನು ತುಂಬಾ
ಸ್ವಾರಸ್ಯವಾಗಿ ಎಣೆದಿದ್ದಾರೆ. ಕಾದಂಬರಿಯನ್ನು ಓದುತ್ತಾ ಹೋದರೆ ಕರಾವಳಿಯ ತೀರ
ಪ್ರದೇಶಗಳಿಗೆ ನಮ್ಮನ್ನು ನಮಗರಿವಿಲ್ಲದೆ ಕರೆದೊಯ್ಯತ್ತದೆ.
ಕೋದಂಡರಾಮ ಐತಾಳರ
ಮಗ ರಾಮ ಐತಾಳರು ನಾರಾಯಣ ಮಯ್ಯನವರ ಮಗಳು ಪಾರ್ವತಿಯನ್ನು ವಿವಾಹವಾಗುವುದರಿಂದ ಕಥೆಯು
ಪ್ರಾರಂಭವಾಗುತ್ತದೆ. ಇವರೀರ್ವರ ಮದುವೆಯಾದ ಕಲವೇ ವರುಷಗಳಲ್ಲಿ ಇಬ್ಬರು ಬೀಗರು ಅಂದರೆ
ಕೋದಂಡರಾಮ ಐತಾಳರು ಹಾಗೂ ನಾರಾಯಣ ಮಯ್ಯನವರು ಕಾಲವಶವಾಗಿಬಿಡುತ್ತಾರೆ. ಮನೆಯ ಜವಾಬ್ದಾರಿ
ಹಾಗೂ ಅಪ್ಪನಿಂದ ಬಳುವಳಿಯಾಗಿ ಬಂದ ಪೌರೋಹಿತ್ಯದ ಕೆಲಸವು ರಾಮ ಐತಾಳರ ಹೆಗಲ ಮೇಲೆ
ಬೀಳುತ್ತದೆ. ರಾಮ ಐತಾಳರದು ಸ್ವಲ್ಪ ಆಸೆಬುರಕ ಸ್ವಭಾವ, ಪೌರೋಹಿತ್ಯದಲ್ಲಿ ತಮಗೆ ಸಿಕ್ಕ
ಯಾವ ವಸ್ತುವನ್ನೂ ಬಿಡದೆ ಎಲ್ಲವನ್ನೂ ಮನೆಗೆ ಬಾಚಿಕೊಂಡು ಬರುತ್ತಿರುತ್ತಾರೆ.
ಚಿಕ್ಕವಯಸಿನಲ್ಲೇ ತನ್ನ ಗಂಡನನ್ನು ಕಳೆದಕೊಂಡು ರಾಮ ಐತಾಳರ ತಂಗಿ ಸರಸ್ವತಿ ತನ್ನ ತೌವರು
ಮನೆಯಲ್ಲೇ ಇರುತ್ತಾಳೆ. ರಾಮ ಐತಾಳರು ಹಾಗೂ ಪಾರ್ವತಿ ದಂಪತಿಗಳಿಗೆ ಮಕ್ಕಳಾಗದ ಕಾರಣ
ರಾಮ ಐತಾಳರು ಸತ್ಯಭಾಮೆ ಎನ್ನುವ ಕನ್ಯೆಯನ್ನು ವಿವಾಹವಾಗಿತ್ತಾರೆ. ಈ ದಂಪತಿಗಳಿಗೆ ಗಂಡು
ಮಗುವೊಂದು ಜನಿಸುತ್ತದೆ. ಆ ಮಗುವಿಗೆ ಲಕ್ಷ್ಮಿ ನಾರಾಯಣ (ಲಚ್ಚ) ಎಂಬ ಹೆಸರನ್ನು
ಇಡುತ್ತಾರೆ. ಆ ಲಚ್ಚನೇ ಮರಳಿ ಮಣ್ಣಿಗೆ ಕಾದಂಬರಿಯ ಪ್ರಮುಖ ಪಾತ್ರಧಾರಿ. ಅವನು ಐತಾಳರ
ಕುಟುಂಬಕ್ಕೆ ಕೀರುತಿ ತರುತ್ತಾನೋ ಇಲ್ಲ ಅಪಕೀರುತಿಯನ್ನು ತರುತ್ತಾನೋ ಅಲ್ಲದೆ ತನ್ನ
ಪತ್ನಿಯಾಗಿ ಬರುವ ಸುಸಂಸ್ಕೃತ ಸಂಪ್ರಾದಯದ ಮನೆತನದ ಹುಡುಗಿ ನಾಗವೇಣಿಯನ್ನು ಹೇಗೆ
ನೋಡಿಕೊಳ್ಳುತ್ತಾನೆ ಎಂಬುದೇ ಈ ಕಾದಂಬರಿಯ ಪ್ರಮುಖ ತಿರುಳು.
ಕಾರಂತರು
ಕಥೆಯನ್ನು ಎಳೆ ಎಳೆಯಾಗಿ ಬರೆದಿದ್ದಾರೆ. ಈ ಕಥೆಯಲ್ಲಿ ಕಡಲತೀರದ ಜನರ ಆಚಾರ-ವಿಚಾರವಿದೆ,
ಕನ್ನಡ ಸಾಹಿತ್ಯಲೋಕಕ್ಕೆ ಉಡುಗೊರೆಯಾಗಿ ಹರಿದು ಬಂದಿರುವ ಹೊಸಹೊಸ ನುಡಿಮುತ್ತುಗಳಿವೆ,
ಹಾಗೇನೇ ಪ್ರಾಯದ ಯುವಕರ ಕೆಡುಕಿನ ವಿಚಾರವೂ ಇದೆ, ಇವೆಲ್ಲಕ್ಕಿಂತ ಮಿಗಿಲಾಗಿ ಹೆಂಗಳೆಯರು
ಹೊರಗಿನ ಕೆಲಸಕಾರ್‍ಯಗಳಲ್ಲಿ ಗಂಡಸರಿಗಿಂತ ಕಡಿಮೆ ಇಲ್ಲ ಎಂಬುದನ್ನು ತಿಳಿಸುವ ಮಾರ್ಮಿಕ
ಸಂದೇಶವಿದೆ ಹಾಗೂ ಅವರು ಸಂಸಾರದಲ್ಲಿ ಅನುಭವಿಸುವ ಒಣ ನೋವುಗಳ ವ್ಯಾಕ್ಯಾನವಿದೆ. ನಿಜ
ಹೇಳಬೇಕೆಂದರೆ ನಲವಿಗಿಂತ ನೋವೇ ಕಾರಂತರ ಈ ಕಥೆಯಲ್ಲಿದೆ. ಕೊನೆಯಲ್ಲಿ ನಗುವಿನ
ಆಶಾಕಿರಣವೊಂದನ್ನು ಹುಟ್ಟಿಸುವುದರಲ್ಲಿ ಕಾರಂತರು ಯಶಸ್ವಿಯಾಗಿದ್ದಾರೆ.
ಮೂಲ:- http://goo.gl/u4DZv
ಮರಳಿ ಮಣ್ಣಿಗೆ
ಕೃತಿಯು ಕಾರಂತರ ಮೊದ ಮೊದಲ ಬರವಣಿಗೆಗಳಲ್ಲಿ ಒಂದು. ೧೯೪೧ ನಲ್ಲಿ ಮೊದಲ ಮುದ್ರಣ ಕಂಡ ಈ ಪ್ರತಿ
ಇಂದಿಗೂ ಕಾರಂತರ ಜನಪ್ರಿಯ ಪುಸ್ತಕಗಳಲ್ಲಿ ಒಂದು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ರೀತಿ
ಕಾರಂತರು ತಮ್ಮನ್ನು ತೊಡಗಿಸಿಕೊಳ್ಳದ ವಿಷಯವೇ ಇಲ್ಲವೇನೋ.. ಬರವಣಿಗೆ, ಸಮಾಜ ಸೇವೆ, ಯಕ್ಷಗಾನ ಕಲೆ, ಪರಿಸರವಾದ, ಬಾಲವನ, ರಾಜಕೀಯ ಚಿಂತನೆ ಹೀಗೆ ಹಲವು ಹತ್ತು ಪ್ರಕಾರಗಳಲ್ಲಿ ಪಾಂಡಿತ್ಯ
ಸಾಧಿಸಿದ್ದರು. ಅವರ ಬರವಣಿಗೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸಾಮಾಜಿಕ ಕಾಳಜಿ ಹಾಗು ಪರಿಸರ
ಪ್ರೇಮ ವ್ಯಕ್ತವಾಗುತ್ತಿತ್ತು… 'ಮರಳಿ
ಮಣ್ಣಿಗೆ' ಸಾಮಾಜಿಕ
ಕಾದಂಬರಿಯೂ ಅದಕ್ಕೆ
ಹೊರತಾಗಿಲ್ಲ.
ಸರಳವಾಗಿ
ಹೇಳುವುದಾದರೆ 'ಮರಳಿ
ಮಣ್ಣಿಗೆ' ಕಾದಂಬರಿ, ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಇದ್ದಂತಹ
ಒಂದು ಗ್ರಾಮೀಣ ಕುಟುಂಬದ ಮೂರು ತಲೆಮಾರಿನ ಕತೆ. ಅಂದಾಜಿನ ಪ್ರಕಾರ, ಕತೆ ನಡೆದ
ಕಾಲಮಾನ ೧೮೬೦ - ೧೯೪೦ ನಡುವಿನ ೬೦ - ೭೦ ವರ್ಷಗಳು. ದಕ್ಷಿಣ ಕನ್ನಡದ
ಸಾಲಿಗ್ರಾಮ - ಕೋಟ ಸುತ್ತಮುತ್ತಲ ವ್ಯಾಪ್ತಿಯ ಹದಿನಾಲ್ಕು ಕೂಟ ಗ್ರಾಮಗಳಾದ ಕೋಡಿ, ಕನ್ಯಾನ, ಮಂದರ್ತಿ, ಹಂಗಾರುಕಟ್ಟೆ
ಇತ್ಯಾದಿ ಊರುಗಳ ಹಿನ್ನಲೆಯಲ್ಲಿ, ಆ
ಪ್ರದೇಶಕ್ಕೆ ಸೀಮಿತವಾಗಿರುವ 'ಕೋಟ' ಆಡು ಭಾಷೆಯನ್ನೇ ಬಳಸಿ, ಅತ್ಯಂತ ಸುಂದರವಾಗಿ ಪ್ರಾದೇಶಿಕ
ವೈಶಿಷ್ಟ್ಯತೆ ಎತ್ತಿ ಹಿಡಿಯುತ್ತ, ಈ
ಸಾಮಾಜಿಕ ಕಾದಂಬರಿಯನ್ನು ನಮ್ಮ ಮುಂದೆ ಪ್ರಸ್ತುತ
ಪಡಿಸಿದ್ದಾರೆ ನಮ್ಮ ಕಾರಂತರು. ಈ ಕಾದಂಬರಿ ಮೊದಲು ಪ್ರಕಟಣೆಗೊಂಡಿದ್ದು ೧೯೪೧. ತದ ನಂತರ ಸುಮಾರು
ಬಾರಿ ಮರು ಪ್ರಕಟಣೆಗೊಂಡಿದೆ. ಒಂದು ಶತಕದಷ್ಟು
ಹಿಂದಿನ ಪುಸ್ತಕವಾದರೂ, ಇದರಲ್ಲಿ
ಎತ್ತಿ ಹಿಡಿದಂತಹ ವಿಚಾರಗಳು, ಮೌಲ್ಯಗಳು, ಸಮಸ್ಯೆಗಳು, ತರ್ಕ ತಾಕಲಾಟಗಳು ಇಂದಿಗೂ ಪ್ರಸ್ತುತವೇ
ಆಗಿವೆ.
ಕತೆ
ಶುರುವಾಗುವುದು ಪಾರೋತಿಯ (ಪಾರ್ವತಿಯ ರೂಢಿನಾಮ) ಲಗ್ನದ ವಿವರಣೆಯೊಂದಿಗೆ. ಜೇಷ್ಠ ಮಾಸದ ಜೋರು
ಮಳೆಯಲ್ಲೇ ಮದುವೆಯಾಗಿ ರಾಮ ಐತಾಳರ ಮನೆ ತುಂಬುವ ಪಾರೋತಿಯ
ಮುಂದಿನ ಬಾಳೆಲ್ಲ ಬರಿ ಬಿಡುವಿಲ್ಲದ ದುಡಿತ. ಮನೆ ಒಳ ಹೊರ ಕೆಲಸಗಳನೆಲ್ಲ
ಬರೋಬ್ಬರಿ ನಿಭಾಯಿಸಿ, ಗಂಡನ
ಇಷ್ಟಾನಿಷ್ಟ, ಕೋಪ-ತಾಪ, ಧೂರ್ತತೆಯನೆಲ್ಲ ಸಹಿಸುತ್ತ, ನಿರಂತರ ನಿರ್ಲಕ್ಷ್ಯದಲ್ಲೇ
ನೊಂದರು ತುಟಿ ಪಿಟಕ್ ಎನ್ನದೆ ಬೇರೆಯವರ ಹಿತಕ್ಕಾಗಿ ಒಂದೇ ಸಮ ದುಡಿವ
ಪಾರೋತಿ, ಒಂದರ್ಥದ
ಸತಿ ಸಾವಿತ್ರಿ, ಆದರ್ಶ
ಪತ್ನಿ! ಸಂತಾನಕ್ಕಾಗಿ ಸದಾ ಹಂಬಲಿಸಿ ಅದು ಕೈಗೂಡದೆ ಮನ ನೊಂದಿರುವ ಹೆಣ್ಣಾದರೂ ಸವತಿಯ ಮಗನನ್ನು
ಸ್ವಂತ ಕೂಸಿಗಿಂತ ಹೆಚ್ಚಾಗಿ ಹಚ್ಚಿಕೊಂಡಂತ ಮಾತೃ ಹೃದಯ ಉಳ್ಳವಳು. ಪಾರೋತಿಯ ಸಹವರ್ತಿ, ಹಿತೈಷಿ, ಸ್ನೇಹಿತೆ, ಸಮಾನದುಖಿ
ಎಲ್ಲವೂ ಆಗಿರುವುದು ರಾಮ ಐತಾಳರ ಏಕಮೇವ ಸಹೋದರಿ ಬಾಲ ವಿಧವೆಯಾದ ಸರಸೋತಿ (ಸರಸ್ವತಿಯ ರೂಢಿನಾಮ).
ಪಾರೋತಿಯಂತೆ ಹೊಲ ಮನೆ ಕೃಷಿ ಕೆಲಸದಲ್ಲಿ ಅವಿರತ ದುಡಿಮೆಯಲ್ಲೇ ಅಣ್ಣನ ಮನೆಗಾಗಿ ಜೀವ ಸವೆಸಿದರು, ಪಾರೋತಿಯಂತೆ ಮೂಕವಾಗಿ ನಿರ್ಲಕ್ಷ್ಯ
ಸಹಿಸಲಾರಳು. ಕೆಲಸದಲ್ಲಿ ಗಟ್ಟಿಗಿತ್ತಿ, ಮಾತಲ್ಲಿ
ಹದ ತಪ್ಪಳು ಆದರೆ ಏನೊಂದು ತಪ್ಪು ಎಂದು ಕಂಡಲ್ಲಿ ಅಣ್ಣನನ್ನು ಖಂಡಿಸದೆ ಇರಲಾರಳು... ತೀರ ಅಧರ್ಮ
ಎನಿಸಿತೋ ಮನೆ ಬಿಟ್ಟು ಹೊರಟೇ ಬಿಟ್ಟಾಳು. ಸರಸೋತಿಯು, ಸಂಪ್ರದಾಯ ಮೀರದೆ ಕೆಂಪು ಸೀರೆ ಬೋಳು ತಲೆ
ಒಂದು ಹೊತ್ತು ಊಟದ ಚೌಕಟ್ಟಲ್ಲೇ ಕಾಲ ಕಳೆದರು, ಆ
ಕಾಲಮಾನಕ್ಕೆ ಅಪರೂಪವೆನಿಸುವ ನೇರ ನಡೆ ನುಡಿಗಳ ದಿಟ್ಟ ಮಹಿಳೆ, ಸಶಕ್ತೆ!
ಇನ್ನು
ರಾಮ ಐತಾಳರು ತಮ್ಮ ಪರಂಪರಾಗತ ಕುಲಕಸುಬಾದ ಪೌರೋಹಿತ್ಯ ಪೂಜೆ ಪುನಸ್ಕಾರದ ಹೊರತು ಬೇರೆ ಯಾವ
ಕೆಲಸಕ್ಕು ತಲೆ ಹಾಕರು. ಹಾಗಂತ ಮನೆಯ ಆಡಳಿತ, ಅಧಿಕಾರ, ದರ್ಬಾರು ಯಾರಿಗೂ ಬಿಟ್ಟು ಕೊಡರು. ಮನೆ
ಹೆಂಗಸರ ದುಡಿಮೆಯನ್ನು ತಾವು ಗಂಟು ಕಟ್ಟುತ್ತ,
ಅವರನ್ನೇ ನಿಕೃಷ್ಟವಾಗಿ ಕಾಣುತ್ತ ತಮ್ಮ ದೌಲತ್ತು ಮೆರೆಸುವಂತ ದುರುಳರು. ಇಂತಹ ರಾಮ ಐತಾಳರು
ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಶೀನ ಮೈಯ್ಯರ ಪಾರುಪತ್ಯದಲ್ಲಿ ಎರಡನೇ ಮದುವೆ ಮಾಡಿಕೊಂಡು
ಸತ್ಯಭಾಮೆಯನ್ನು ಮನೆ ತುಂಬಿಸಿಕೊಳ್ಳುವರು. ಕಾಲಕ್ರಮದಲ್ಲಿ ಅವರಿಗಿಬ್ಬರು ಮಕ್ಕಳು ಆಗುವವು. ಅದೇ
ರೀತಿ ರಾಮ ಐತಾಳರ ಮಗನಾದ ಲಕ್ಷ್ಮಣ, ಅವನ ಪತ್ನಿ ನಾಗವೇಣಿ ಹಾಗು ಸುಪುತ್ರ ರಾಮನ
ಬದುಕಿನ ಆಗುಹೊಗುಗಳೇ ಮುಂದಿನೆರಡು ತಲೆಮಾರಿನ ಕತೆ.
ರಾಮ
ಐತಾಳರು ಆ ಕಾಲದ ದ್ವಂದ್ವದ ಪ್ರತೀಕ ಎನ್ನಬಹುದು. ಒಂದೆಡೆ ತಲೆತಲಾಂತರದಿಂದ ಬಂದ ರೂಢಿ ಪದ್ಧತಿ
ಅನುಶಾಸನ ಕಟ್ಟುಪಾಡುಗಳ ಬಿಡಲಾಗದ ಪರಿಸ್ಥಿತಿ. ಇನ್ನೊಂದೆಡೆ ಬದಲಾವಣೆಯ ಗಾಳಿಯ ಒತ್ತಡಕ್ಕೆ
ಸಿಲುಕಿ ಸಾಮಾಜಿಕ ಸ್ಥಾನ ಮಾನ ಮನ್ನಣೆ ಭದ್ರತೆಯ ಕಡೆಗೆ ಒಲವು, ಅದಕ್ಕಾಗಿ ತುಡಿತ. ಈ ತೂಗು
ಮನಸ್ಥಿತಿಯಿಂದಾಗಿ ಮಗನನ್ನು ಪದ್ದತಿಯಂತೆ ಮಠ ಶಿಕ್ಷಣಕ್ಕೆ ಕಳುಹಿಸದೆ ಇಂಗ್ಲಿಷ್ ಶಾಲೆ
ಸೇರಿಸಿದರೂ, ಎಲ್ಲೋ
ಒಂದು ಅಳುಕು ಕಾಡುತ್ತದೆ. ಮಗ ಕೈ ತಪ್ಪಿ ಹೋದಮೆಲಂತೂ ಅಪರಾಧಿ ಪ್ರಜ್ಞೆ ಭಾದಿಸುತ್ತದೆ. ಅದೇ ತರಹ
ಸಾಮಾಜಿಕವಾಗಿ ದೊಡ್ಡ ವ್ಯಕ್ತಿ ಎಂದು ಗುರುತಿಸಿಕೊಳ್ಳಲು ರಾಮ ಐತಾಳರು ಶೀನ ಮೈಯರ ನಡುವಿನ
ಪೈಪೋಟಿ, ಲಾಭದಾಯಕವಾದ್ದರಿಂದ
ಬೆಂಗಳೂರಿನ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡರು ಆ ವೃತ್ತಿ ಬಗ್ಗೆ ಒಂದು ಬಗೆಯ ತಾತ್ಸಾರ, ಕೃಷಿ
ಆಧಾರಿತ ಬದುಕಿನ ಅನಿಶ್ಚಿತತೆ, ಕಷ್ಟ
ನಷ್ಟ ಪರಿಪಾಟಲುಗಳ ಎಲ್ಲದರ ಬಗ್ಗೆಯು ವಿನೋದವಾಗಿ, ವಿಸ್ತಾರವಾಗಿ
ಬರೆದಿದ್ದಾರೆ ಕಾರಂತರು.
ಐತಾಳರ
ಮಗ ಲಕ್ಷ್ಮಣ ಉರುಫ್ ಲಚ್ಚ ಮುಂದಿನ ಪೀಳಿಗೆಯ ಪರಮ ಸ್ವಾರ್ಥದ ಪ್ರತೀಕ. ಉಂಡು ತಿಂದ ಮನೆಗೂ, ಸಾಕಿ ಬೆಳೆಸಿದ ತಂದೆ ತಾಯಿಗಳಿಗೂ, ಕಟ್ಟಿಕೊಂಡ ಹೆಂಡತಿಗೂ, ಕಡೆಗೆ ತನಗೆ ಹುಟ್ಟಿದ ಮಗನಿಗೂ ಎರಡು
ಬಗೆಯಲು ಹೇಸದ ಮೋಸಗಾರ. ಉನ್ನತ ಶಿಕ್ಷಣ ದೊರೆತಿದ್ದರು ಬದುಕಿನಲ್ಲಿ ದಾರಿ ತಪ್ಪಿದ ಯುವ ಜನಾಂಗದ
ಪ್ರತಿನಿಧಿ. ಸಾಯುವ ಗಳಿಗೆವರೆಗೂ ಒಂದು ಹನಿ ಪಶ್ಚಾತ್ತಾಪವಿಲ್ಲದ ಸ್ವಲ್ಪ
ಅತಿರೇಕವೇನೊ ಎಂಬಂತೆ ಚಿತ್ರಿತಗೊಂಡಿರುವ ದುಷ್ಟ ಪಾತ್ರ. ಸಾತ್ವಿಕ
ಮನೆತನದಲ್ಲಿ ಹುಟ್ಟಿದರೂ, ಎಲ್ಲ
ರೀತಿಯ ಸೌಕರ್ಯ ಸವಲತ್ತುಗಳಿದ್ದರೂ, ತನ್ನ
ಇಂಗ್ಲಿಷ್ ಓದಿನ ಅಹಂಕಾರ ಹಾಗು ಹಳ್ಳಿ ಜೀವನದ ಬಗ್ಗೆಯ ತಾತ್ಸಾರದಿಂದಾಗಿ, ಪಟ್ಟಣ ಸೇರಿ ಕೆಟ್ಟು ತನ್ನ ಬಾಳನ್ನು ತಾನೇ
ಹಾಳು ಮಾಡಿಕೊಂಡಂತ ಮೂಢಮತಿ. ಯಾವ ತಪ್ಪು ಮಾಡದ, ಕುಲೀನ
ಮನೆತನದಲ್ಲಿ ಹುಟ್ಟಿದಂತಹ ಪತ್ನಿ ನಾಗವೇಣಿಗೆ ಕೊಡಬಾರದ ಕಷ್ಟಗಳೆಲ್ಲ ಕೊಟ್ಟು, ಪಡಬಾರದಂತ ಬಾಧೆಗೆ ನೂಕಿದ ಸ್ವಾರ್ಥಿ. ಅದೇ
ಪೀಳಿಗೆಯ ಇನ್ನೊಂದು ಮುಖ ನಾಗವೇಣಿ. ತನ್ನದಲ್ಲದ ತಪ್ಪಿಗೆ ಕಡು ಶಿಕ್ಷೆ ಅನುಭವಿಸುತ್ತ, ಆದರೂ ಕರ್ತವ್ಯ ಬಿಟ್ಟು ಓಡದೆ, ತುಂಬಿದ ಮನೆಗೂ, ಮನೆಯ ಜನರಿಗೂ ನಿಸ್ವಾರ್ಥ ಸೇವೆಗೈವ ಒಳ್ಳೆ
ಮನಸಿನಾಕೆ. ಒಂಟಿ ಮಹಿಳೆ ಎಂದು ಧೈರ್ಯಗೆಡದೆ ಮನೆ ಮತ್ತು ಮಗನನ್ನು ಉತ್ತಮ ರೀತಿಯಲ್ಲಿ
ಸಂಭಾಳಿಸಿಕೊಂಡು ಹೋಗಿ, ಬದುಕಿನಲ್ಲಿ
ಸಾರ್ಥಕತೆ ಕಂಡುಕೊಂಡ ಸಾಧ್ವಿ. ಈ ಕಾಲಮಾನದಲ್ಲಿ ನಡೆದಂತಹ ಅನೇಕ ನೈಜ ಘಟನೆಗಳಾದ ಗೇಣಿ
ಪದ್ಧತಿಯಲ್ಲಿನ ಬದಲಾವಣೆ, ಪ್ಲೇಗು
ಮಾರಿ ಹಾವಳಿ, ಊರು
ಬಿಟ್ಟು ಪಟ್ಟಣ ಸೇರಿದ ಯುವಕರು ಹಾಗೇ ಊರಲ್ಲಿ ಹಿಂದೆ ಬಿಟ್ಟು ಹೋದಂತಹ ಮುದುಕರ ಸಂಕಟ ನೋವುಗಳು, ಕೃಷಿ ಬಗ್ಗೆಯ ಉದಾಸೀನ ಎಲ್ಲವೂ ಕಣ್ಣಿಗೆ
ಕಟ್ಟುವಂತೆ ವಿವರಿಸಿದ್ದಾರೆ ಕಾರಂತರು. ಒಂದು ಹಂತದಲ್ಲಿ ಬರುವ ಪಾತ್ರವೊಂದು ಹೇಳುವ ಮಾತು
"ನಮ್ಮೂರು ನೋಡಿದ್ದೀಯಾ ಈಗ? ನನ್ನಂಥ
ಕಣ್ಣು ಕಾಣದ ಜಬ್ಬುಗಳ (=ಮುದುಕರು) ಮಾತ್ರ ಇರುವ ಊರು."
ಹೆಚ್ಚಿನ ಓದಿಗಾಗೋ ಇಲ್ಲ ಹೊಟ್ಟೆಪಾಡಿಗಾಗೋ ಪಟ್ಟಣ ಸೇರುವ ಯುವ ಜನಾಂಗ ಪೇಟೆಯ ಜೀವನಶೈಲಿಯ
ಮೋಹಕ್ಕೆ ಒಳಗಾಗಿ,
ತಾವು ಹುಟ್ಟಿ ಬೆಳೆದು ಹಿಂದೆ ಬಿಟ್ಟು ಬಂದತಹ ಚಿಕ್ಕ ಹಳ್ಳಿ ಅಥವಾ ಊರನ್ನು ಮರೆತೇ ಬಿಡುವುದು
ಇಂದಿಗೂ ಅಷ್ಟೇ ಸತ್ಯವಲ್ಲವೇ?
ಕೊನೆಯದಾಗಿ, ಮೂರನೇ ತಲೆಮಾರಿನ ಕಥೆ ರಾಮ ಐತಾಳರ ಮೊಮ್ಮಗ
ರಾಮನದು. ರಾಮನು ತಂದೆಯ ಪರಿಚಯವೇ ಇಲ್ಲದೆ ಕಡು ಬಡತನದಲ್ಲಿ ಬೆಳೆದು, ಮಂಗಳೂರಿನ ಅಜ್ಜನ ಮನೆಯಲ್ಲಿ ಕಷ್ಟದಲ್ಲೇ ಓದು ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮದ್ರಾಸಿಗೆ ಹೋಗಿರುತ್ತಾನೆ.
ಸ್ವಾಭಿಮಾನಿ ರಾಮ ಮನೆಪಾಠ, ಸಂಗೀತ
ಪಾಠ ಹೇಳಿಕೊಡುತ್ತ ಹೇಗೋ ತನ್ನ ಓದಿಗೆ ದಾರಿ ಕಂಡು ಕೊಂಡಿರುತ್ತಾನೆ. ಅಂತ
ಸಮಯದಲ್ಲಿ ಸ್ವಾತಂತ್ರ್ಯ ಚಳುವಳಿ ಅವನನ್ನು ತೀವ್ರವಾಗಿ ಸೆಳೆಯುತ್ತದೆ.
ಒಂದೆಡೆ ತಮ್ಮ ಬಡತನದ ಒತ್ತಡ, ತಾಯಿಯ
ಅಪಾರ ನಿರೀಕ್ಷೆ.. ಇನ್ನೊಂದು ಕಡೆ ಗಾಂಧಿವಾದದ ಕಡೆ ಒಲವು. ಆದರೂ
ದೇಶಪ್ರೇಮವು ತಾಯಿಪ್ರೇಮಕ್ಕಿಂತ ದೊಡ್ಡದೆಂದು ಭಾವಿಸಿ, ಇನ್ನೇನು ಮುಗಿದೇ ಹೋಯಿತು ಎಂಬಂತ
ಘಟ್ಟದಲ್ಲಿದ್ದ ಓದನ್ನು ಅಲ್ಲಿಗೆ ನಿಲ್ಲಿಸಿ, ಪೂರ್ತಿಯಾಗಿ
ತನ್ನನ್ನು ತಾನೇ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳುವನು. ಈ ಪಾತ್ರದ ಚಿತ್ರಣ ಕಾರಂತರ
ನಿಜ ಜೀವನದ ವ್ಯಕ್ತಿತ್ವ ಹಾಗು ಕೆಲ ಘಟನೆಗಳ ಮೇಲೆ ಆಧರಿಸಿದೆ. ಮದರಾಸಿನಿಂದ ಮರಳಿ ತನ್ನ ಊರಿಗೆ
ಬರುವ ರಾಮ ಅನೇಕ ಟೀಕೆ ಟಿಪ್ಪಣಿ ಅವಮಾನಗಳಿಗೆ ಒಳಗಾದರೂ ಎದೆಗುಂದದೆ, ಗ್ರಾಮೀಣ ಅಭಿವೃದ್ದಿ, ಸ್ವಜನ ಹಿತಚಿಂತನೆ, ಖಾದಿ ತಯಾರಿಕೆ ಪ್ರೋತ್ಸಾಹನೆ, ಕುಡಿತ ಚಟಗಳ ನಿವಾರಣೆ, ಭಾಷಣ ಮಾತುಕತೆ ಇತ್ಯಾದಿ ಸಾಮಾಜಿಕ
ಕಾರ್ಯಗಳಲ್ಲಿ ತೊಡಗಿ ತನ್ನ ಬಾಳಿನ ಗುರಿ ಕಾಣುತ್ತಾನೆ. ಒಂದು ಹಂತದಲ್ಲಿ ತನ್ನ ಓದು
ಮುಂದುವರಿಸಿದರೂ, ಮತ್ತೆ
ಮರಳಿ ಮಣ್ಣಿಗೆ ಬಂದು ತಲೆತಲಾಂತರದಿಂದ ಬಂದ ಕೃಷಿ ವ್ಯವಸಾಯಕ್ಕೆ ತನನ್ನು ತಾನೇ ತೊಡಗಿಸಿಕೊಂಡು
ತನ್ನ ಜೀವನದ ಯಶಸ್ಸು ಕಾಣುತ್ತಾನೆ. ಇಂತ ರಾಮ ಅಂದಿಗೂ ಇಂದಿಗೂ ಎಂದೆಂದಿಗೂ ಯುವ ಜನಾಂಗಕ್ಕೆ
ಮಾದರಿ ವ್ಯಕ್ತಿ.
ಈ
ಎಲ್ಲ ಪಾತ್ರಗಳ ಜೊತೆಗೆ ಇನ್ನೊಂದು ಅತ್ಯಂತ ಮನ ಸೆಳೆಯುವ ಹಾಗು ಬಹು ಮುಖ್ಯ ಪಾತ್ರವೆಂದರೆ ಕೋಟ
ಸುತ್ತಮುತ್ತಲಿನ ಹಳ್ಳಿಗಾಡಿನ ಸುಂದರ ಪರಿಸರದ್ದು. ಕಡಲು, ದಂಡೆ, ಅಳುವೆ, ನದಿ ತೀರ, ಕೆರೆ, ತೋಟ, ಗದ್ದೆ, ಮನೆ, ಕೊಟ್ಟಿಗೆ, ಅಗೇಡಿ, ಅರಾಲು, ಚಪ್ಪರ ಹೀಗೆ ಹಲವಾರು ವಿಭಿನ್ನ ಚಿತ್ರಣಗಳು ಕತೆಯ ಜೊತೆಗೆ ಹಾಸುಹೊಕ್ಕಾಗಿವೆ… ದಕ್ಷಿಣ ಕನ್ನಡದ ಪಾರಂಪರಿಕ ವ್ಯವಸಾಯ
ಪದ್ಧತಿ, ಜೀವನ
ಶೈಲಿ ಹಾಗು ಜೀವನದ ಬಹು ಮುಖ್ಯ ಭಾಗವಾದ ಕಡಲಿನ ಬಗ್ಗೆ ಹಿಡಿದ ಕನ್ನಡಿಯಂತಿದೆ. ಸ್ವಲ್ಪ
ಧೀರ್ಘವೇನೋ ಎನ್ನಿಸಿದರು, 'ಮರಳಿ
ಮಣ್ಣಿಗೆ' ಯುವಕರೆಲ್ಲ
ಓದಬೇಕಾದಂತ ಒಂದು ಉತ್ತಮ ಪುಸ್ತಕ.
ಮೂಲ:- http://goo.gl/hF4UC