Tuesday, April 21, 2015

ನಗ್ನ ಸತ್ಯ - ಅ. ನ. ಕೃ

Nagna Satya - A Na Krishnaraya (A Na Kru)



ನಾನು ಮತ್ತು ನಮ್ಮ ಕನ್ನಡಿಗರು ನೋಡಿರುವ ನೂರೆಂಟು ಕನ್ನಡ ಚಿತ್ರಗಳಲ್ಲಿ "ಭಕ್ತ ಕುಂಬಾರ' ಮತ್ತು "ರಂಗ ನಾಯಕಿ" ಎರಡು ಅದ್ಭುತ ಚಿತ್ರಗಳು. ಈ ಚಿತ್ರಗಳು ಬಿಡುಗಡೆಯಾಗಿ ಹತ್ತಿಪತ್ತು ವರ್ಷಗಳೇ ಕಳೆದರು ಇನ್ನು ನಮ್ಮ ಮನಸ್ಸಿನ್ನಲ್ಲಿದೆ, ಯಾಕೆಂದರೆ ಈ ಚಿತ್ರಗಳಲ್ಲಿ ನಿರ್ದೇಶನ, ಕಥೆ, ಹಾಡುಗಳು, ನಟ-ನಟಿಯರ ನಟನ ಎಲ್ಲವು ತುಂಬ ಚೆನ್ನಾಗಿ ಮೂಡಿಬಂದಿದೆ. ಇಲ್ಲಿ ನಾನು ಹೇಳಬೇಕೆಂದಿರುವುದು ಈ ಚಿತ್ರಗಳಲ್ಲಿ ಮೂಡಿಬಂದಿರುವ ಎರಡು ಸನ್ನಿವೇಶಗಳು.

ಮೊದಲನೆಯದು 'ಭಕ್ತ ಕುಂಬಾರ' ಚಿತ್ರದ ಒಂದು ಸನ್ನಿವೇಶದಲ್ಲಿ ನಾಮದೇವ ದೇವಸ್ಥಾನದ ಒಳಗೆ ಹೋದಾಗ ಒಬ್ಬ ಸನ್ಯಾಸಿಯು ಕಾಲನ್ನು ಶಿವ ಲಿಂಗದ ಮೇಲೆ ಇತ್ತು ಮಲಗಿರುತ್ತಾನೆ, ಅದನ್ನು ನೋಡಿ ಕೋಪಗೊಂಡ ನಾಮದೇವ ಅವನನ್ನು ಗದರಿಸಿದಾಗ ಅವರು ನನಗೆ ಕಣ್ಣು ಕಾಣೋದಿಲ್ಲ ಮತ್ತು ಕಾಲನ್ನು ಎತ್ತಲೂ ಸಹ ಆಗುವುದಿಲ್ಲ, ಸ್ವಲ್ಪ ನೀವೇ ಸಹಾಯ ಮಾಡಿ ನನ್ನ ಕಾಲನ್ನು ಎಲ್ಲಿ ಶಿವ ಇಲ್ಲವೋ ಅಲ್ಲಿ ಇಡ್ತಿಯ ಎಂದು ಕೇಳುತ್ತಾನೆ. ಅದಕ್ಕೆ ಸರಿ ಎಂದು ಕಾಲನ್ನು ಬೇರೆ ಕಡೆ ಇಡಲು ಪ್ರಯತ್ನಿಸುತ್ತಾನೆ ಆದರೆ ಎಲ್ಲಿ ಇಡಲು ಹೋದರು ಎಲ್ಲೇ ಶಿವಲಿಂಗ ಪ್ರತ್ಯಕ್ಷ ವಾಗುತ್ತದೆ. ಇದನ್ನು ನೋಡಿ ತನ್ನ ತಪ್ಪಿನ ಅರಿವಾಗಿ ಶಿವ ಇಲ್ಲದ ಜಾಗವೇ ಇಲ್ಲ ಎಂದು ಗೊತ್ತಿದ್ದರು ತನ್ನ ಆಹಂಕಾರದಿಂದ ಅದನ್ನು ಮರೆತಿದ್ದೆ ಎಂದು ಕ್ಷಮಾಪಣೆ ಕೇಳುತ್ತಾನೆ. ಎರಡನೆಯದು "ರಂಗ ನಾಯಕಿ" ಚಿತ್ರದಲ್ಲಿ ಮಗ ತನ್ನ ತಾಯಿಗೆ ತಾನು ಅವಳನ್ನು ಪ್ರೀತಿಸುತ್ತೀದ್ದೇನೆ ಎಂದು ಹೇಳುತ್ತಾನೆ. ಈ ಎರಡು ಸನ್ನಿವೇಶ ನಮ್ಮೆದುರಿಗೆ ಬಂದರೆ ನಾವು ಕೋಪ ತೋರಿಸುವುದಿಲ್ಲ, ಇದು ಕೆಟ್ಟ ವಿವರಣೆ ಎಂದು ತೆಗಳುವುದಿಲ್ಲ ಏಕೆಂದರೆ ಆಗಿನ ಕಾಲದಲ್ಲಿ ವಿಷಯವನ್ನು ಅರ್ಥೈಸುವ ಪರಿ, ನೋಡುವ ರೀತಿ  ಬೇರೆ ಇತ್ತು. ಈಗ ಯಾರಾದರು ಈ ಎರಡು ಸನ್ನಿವೇಶವನ್ನು ತಮ್ಮ ಚಿತ್ರದಲ್ಲಿ ಚಿತ್ರಿಸಿದರೆ ಆ ಚಿತ್ರ ತೆರೆ ಕಾಣುಹುದೇ ಕಷ್ಟ. ಎಕೆಂದರ ನಮ್ಮ ವಿಶಾಲ ಮನೋಭಾವನ್ನು ಕಳೆದುಕೊಂಡಿದ್ದೇವೆ (ನಮ್ಮ ಮನೋಭಾವನ್ನು ಕೆಲವರ ತಮ್ಮ ಲಾಬಕ್ಕೆ ದುರುಪಯೋಗ ಮಾಡಿಕ್ಕೆ ಇರಬಹುದು). ಒಂದು ಕಾಲಕ್ಕೆ ಒಳ್ಳೆಯದಾಗಿ ಕಾಣಿಸುವ ಕೆಲಸ, ಸ್ಥಿತಿ, ಸನ್ನಿವೇಶ ಮುಂದೊಂದು ದಿನ ಕೆಟ್ಟದಾಗಬಹುದು ಮತ್ತು ಇಂದು ದೂರುವ ಜನ ಹೋಗಳಬಹುದು ಅದು ಆ ಕಾಲಕ್ಕೆ ಮತ್ತು ಆ ಸಮಾಜಕ್ಕೆ ಬಿಟ್ಟಿದ್ದು. ಇದನ್ನೆಲ ಮೀರಿ ಒಂದು ತತ್ವ ಮತ್ತು ಸಿದ್ದಾಂತವನ್ನು ಬಿಡದೆ ಅಭಿಪ್ರಾಯವನ್ನು ನಿರ್ಬೀತಿಯಿಂದ ಹೇಳುವವನು ಮಾತ್ರ ಜನರ ಮನಸ್ಸಿನಲ್ಲಿ ಉಳಿಯುವವನು.

ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಅ. ನ. ಕೃ ರವರು ೧೯೫೦ ರಲ್ಲಿ ಬರೆದಿರುವ ವೇಶ್ಯಾವಾಟಿಕೆ ಕುರಿತು ಬರೆದಿರುವ "ನಗ್ನ ಸತ್ಯ" ಮತ್ತು ಅದರ ಮುಂದುವರಿದ ಭಾಗಗಳಾದ  "ಶನಿ ಸಂತಾನ" ಮತ್ತು "ಸಂಜೆ ಗತ್ತಲು" ಕಾದಂಬರಿಗಳ ಬಗ್ಗೆ ಬರೆಯುವ ಮುನ್ನ ಒಂದು ಕೆಲಸ, ಒಂದು ಸಿದ್ದಾಂತ, ಒಂದು ನಿಯಮ ಒಂದು ಕಾಲದಲ್ಲಿ ಸಮಾಜಕ್ಕೆ ತಪ್ಪೆಂದು ಕಂಡರೂ ಮುಂದೆ ಅವರು ಅದೇ ಸರಿ ಎಂದು ಹೇಳುತ್ತಾರೆ ಮತ್ತು ಸರಿ ಇದ್ದುದ್ದು ಮುಂದೆ ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಯಾಕೆಂದರೆ "ನಗ್ನ ಸತ್ಯ" ಕಾದಂಬರಿ ಬಿಡುಗಡೆ ಯಾದಾಗ ಅ. ನ. ಕೃ ರವರು ಕನ್ನಡ ಸಾಹಿತ್ಯಕ್ಕೆ ಕಾಮದ ಬಣ್ಣ ಬಳಿದು ಹಾಳು ಮಾಡುತ್ತಿದ್ದಾರೆ ಎಂದು ಮತ್ತು ಅವರನ್ನು ಬಹಿಷ್ಕರಿಸಬೇಕೆಂದು ಕೆಲವು ಸಾಹಿತಿಗಳು ಮತ್ತು ಗುಂಪುಗಳ ಅಭಿಪ್ರಾಯ ಪಟ್ಟರು. ಆದರೆ ಈಗ ಕಾಮದ ಸನ್ನಿವೇಶ ವಿಲ್ಲದ ಕಾದಂಬರಿಗಳು ಸಿಕ್ಕುವುದೇ ಕಷ್ಟ. ಅವರು ತಮ್ಮ ಸುತ್ತ ಮುತ್ತಲಿನ ಸಮಜಾದಲ್ಲಿ ಆಗುತ್ತಿರುವ ಘಟನೆಗಳನ್ನು ಆದರಿಸಿ ಕಾದಂಬರಿ ಬರೆಯುತ್ತಿದ್ದರು ಮತ್ತು ಎಂದು ಅವರ ಅಭಿಪ್ರಾಯವನ್ನು ಹೇಳಲು ಹಿಂಜರಿಯುತ್ತಿರಲ್ಲ. 

ಈ ಕಾದಂಬರಿಯಲ್ಲಿ ಬರುವ ಕಾಮ ಪ್ರಚೋದನೆ ಆ ಕಾಲಕ್ಕೆ (೧೯೫೧) ಅತಿಯಾದರಿ ಇಂದು ಓದಿದವರು ಇಷ್ಟಕ್ಕೆ ಅ. ನ. ಕೃ ರವರನ್ನು ಟೀಕಿಸಿದರ ಎಂದು ಕೇಳಬಹುದು. ಇಂದಿನ ಕಾದಂಬರಿಗಳಲ್ಲಿ ಬರುವ ಕಾಮ ಪ್ರಚೋದಾತ್ಮಕ ಸನ್ನಿವೇಶಗಳು ಮತ್ತು ವಿವರೆನೆಗಳು "ನಗ್ನ ಸತ್ಯ"ದಲ್ಲಿ ಬರುವ ವಿವರಣೆ ಏನೇನು ಅಲ್ಲ ಅನ್ನಿಸುತ್ತದೆ. 

"ನಗ್ನ ಸತ್ಯ"  ಒಬ್ಬ ವೇಶ್ಯಯ ಕಥೆಯಲ್ಲ ಇದು ವೇಶ್ಯವಾಟಿಕೆಯ ಕುರಿತು ಬರೆದಿರುವ ಕಾದಂಬರಿ. ಇಲ್ಲಿ ಬರುವ ಪಾತ್ರಗಳ ಸಮಜಾದ ಒಂದೊಂದು ಮುಖಗಳು. ಪೊಲೀಸರು, ರಾಜಕಾರಣಿಗಳು, ವ್ಯಾಪಾರಿಗಳು ಹೇಗೆ ತಮಗೆ ಬೇಕಾದ ಹಾಗೆ ಮಹಿಳೆಯರನ್ನು ಊಪಯೋಗಿಸಿ ಮತ್ತು ಬೇಡವಾದಾಗ ಅವರನ್ನು ಬಿಸಾಡಿ ಹೋಗುವ ಸಮಾಜದ ವಿಕೃತ ಕಾಮಿಗಳ ಮನಸ್ಸು ಮತ್ತು ಮುಖವನ್ನು ಸೇರಿಹಿಡಿದ್ದಿದ್ದಾರೆ. 

ಮುತ್ತಮ್ಮ,, ಕಮಲ, ನಾಗು, ಬಾಳು, ವೆಂಕಟಿ ಈ ಸಮಾಜದ ಒಂದು ಮುಖವಾದರೆ, ಮಾಡಿದ ಕೆಲಸವೆಲ್ಲ ಬಿಟ್ಟು ಹರಟೆ ಹೊಡೆದುಕೊಂಡು ಕಾಲ ಹರಣ ಮಾಡಿ ಕೊನೆಗೆ ಮುತ್ತಮ್ಮನ ಮನೆಗೆ ಗಿರಾಕಿಗಳನ್ನೂ ಹುಡುಕಿಕೊಡುವ ನಾಗರಾಜು ಇನ್ನೊದು ಮುಖ. ಮುತ್ತಮ್ಮನ ಮನೆಗೆ ಬರುವ ಹೆಂಗಸರು ಮತ್ತು ಗಿರಾಕಿಗಳನ್ನು ತನ್ನ ಮುಗ್ದ ಕಣ್ಣುಗಳಿಂದ ನೋಡುವ ಪುಟ್ಟಾ ಈ ಸಮಾಜದ ಸಂಕೇತಾವಾಗಿ ಕಾದಂಬರಿಯ ಮೂಖ ಸಾಕ್ಷಿಯಾಗುತ್ತಾಳೆ. ಶೇಷಗಿರಿ ತನ್ನ ಕಾಮಶಮನಕ್ಕಾಗಿ ಅಚ್ಚಮ್ಮ ಬಳಸಿಕೊಂಡು, ಅವರಿಬ್ಬರ ವಿಷ್ಯ ಮನೆಯಲ್ಲಿ ತಿಳಿದಾಗ ಮನೆಯಿಂದ ಹೊರಗೆ ಹೊಡಿಸುವಾಗ ಏನು ಮಾಡದೆ ಸುಮ್ಮನಿರುತ್ತಾನೆ. ಕೊನೆಗೆ ಮುತ್ತಮ್ಮನ ವೇಶ್ಯಾಗೃಹಕ್ಕೆ ಸೇರುತ್ತಾಳೆ. 

ಶ್ರೀನಾಥನಾಥ ಕಾದಂಬರಿ ಬರೆಯುವಾಗ ವೇಶ್ಯ ಸಮಾಜದ ಬಗ್ಗೆ ಬರೆದು(ಒಂದು ಬಾರಿಯೂ ವೇಶ್ಯಯಾ ಬೇಟಿ ಮಾಡದೆ ತನ್ನ ಕಲ್ಪನೆಯಿಂದ ಬರೆದ್ದಿದ್ದು), ಚಿಕ್ಕಮ್ಮನ ಬಲವಂತದಿಂದ  ಮನೆಯಿಂದ ಹೊರಗೆ ಹೋಗುತ್ತಾನೆ ತನ್ನ ಸ್ನೇಹಿತ ಶರ್ಮನಿಂದ ಮುತ್ತಮ್ಮನ ಮನೆಯಲ್ಲಿ ಕಮಲನ ಪರಿಚಯ ವಾಗುತ್ತೆ. ಪರಿಚಯ ಪ್ರೀತಿಗೆ ತಿರುಗಿ ಅವರಿಬ್ಬರೂ ಕಮಲನ ತಾಯಿ ಸುಶೀಲಮ್ಮನ ಜೊತೆ ಬೇರೆ ಮನೆ ಮಾಡುತ್ತಾರೆ. ಕಮಲಾ ಶ್ರೀನಾಥನ್ನು ಪ್ರೀತಿಸಿದರು ತಾಯಿಯ ಒತ್ತಾಯದ ಮೇಲೆ ಮುತ್ತಮ್ಮನ ಮನೆಗೆ ಹೋಗಿ ಬಂದು ಮಾಡುತ್ತಿರುತ್ತಾಳೆ, ಶ್ರೀನಾಥನಿಗೆ ಇಷ್ಟವಿಲ್ಲದ್ದಿದ್ದರು ಮತ್ತು ಹಾಗೆ ಮಾಡುವುದಿಲ್ಲ ಎಂದು ಭಾಷೆ ಕೊಟ್ಟಿದ್ದರು.  

ಹೀಗೆ ಕಾದಂಬರಿಯಲ್ಲಿ ಸಮಾಜದ ಪ್ರತಿಯೊಂದು ಮುಖವನ್ನು ಚಿತ್ರಿಸಿದ್ದಾರೆ ಕೃಷ್ಣರಾಯರು. ಇಲ್ಲಿ ಕಥೆ ಸಮಾಜದ ಸುತ್ತ ಸುತ್ತುತ್ತದೆಯೇ ಹೊರತು ಕೆಲವು ಜನರ ಸುತ್ತ ಅಲ್ಲ. ಜೀವನದಲ್ಲಿ ನಾವು ಮಾಡುವ ಒಳ್ಳೆ ಕೆಲಸಗಳಿಗೆ ಫಲ, ಕೆಟ್ಟ ಕೆಲಸಗಳಿಗೆ ಕಷ್ಟ ದೊರಕುವುದು ಕರ್ಮ. ನಾವು ಬೇರೆಯವರ ಕಷ್ಟ ಕಾಲದಲ್ಲಿ ಅವರಿಂದ ಲಾಭ ಪಡೆದು ಮುಂದೆ ಅವರನ್ನು ಮರೆತರೆ  ನಾವು ಸುಖವನ್ನು ಅನುಭವಿಸಲಾರೆವು. ಕೃಷ್ಣರಾಯರೇ ಮುನ್ನುಡಿಯಲ್ಲಿ ಹೇಳುವ ಹಾಗೆ " ಶೀಲ ಉಪದೆಶದಿಂದಾಗಲಿ ಬರುವುದಿಲ್ಲ. ಅದು ಸ್ವಯಂಭೂಶಕ್ತಿ, ಅಶ್ಲೀಲ ಜೀವನದಲ್ಲಿ ಒಂದು ಬಗೆಯ ಕೃತಕ ಸೌಂದರ್ಯ, ಕೃತಕ ಆನಂದ, ಕೃತಕ ತೃಪ್ತಿ ಕಾಣುವ ವ್ಯಕ್ತಿ ಒಳಗಣ್ಣು ತೆರೆದು ನೋಡಿ ಶೀಲದಿಂದ ಲಭಿಸುವ ಸಾಶ್ವತ ಆನಂದ, ಸೌಂದರ್ಯ, ತೃಪ್ತಿಯನ್ನು ಗ್ರಹಿಸಬೇಕು. ಮನುಷ್ಯ ಬದುಕಬೇಕು, ಬಾಳಬೇಕು ನಿಜ; ಹೇಗಾದರು ಬಾಳಿದರೆ ಆಯಿತೇ? ಕಂಡವರ ರಕ್ತ ಹೀರಿ ಬದುಕುವುದು ಒಂದು ಬದುಕೇ! ಪರರ ಬಾಳನ್ನು ಮುಟ್ಟಿ ಬಾಳುವುದು ಒಂದು ಬಾಳೇ!!!"

ಈ ಕಾದಂಬರಿಯ ಮುಂದುವರಿದ ಭಾಗಗಳು "ಶನಿ ಸಂತಾನ" ಮತ್ತು "ಸಂಜೆಗತ್ತಲು"


Wednesday, April 15, 2015

ಪ್ರೀತಿ ಎಂಬುದು ಚಂದ್ರನ ದಯೆ - ಎಸ್. ಎಫ಼್. ಯೋಗಪ್ಪನವರ್

Preethi Embudu Chandrana Daye -  S F Yogappanavar



ಕನ್ನಡ ಪ್ರಭ ದಿನ ಪತ್ರಿಕೆಯಿಂದ

ವಿಮರ್ಶೆ - ವಾಸುದೇವ ಶೆಟ್ಟಿ 

ನಮ್ಮ ಪುರಾಣದಲ್ಲಿ ಚಂದ್ರ ಒಬ್ಬ ಖಳನಾಯಕ, ಗುರುದ್ರೋಹಿ. ತನ್ನ ಗುರು ಬೃಹಸ್ಪತಿಯ ಪತ್ನಿಯನ್ನೇ ಅಪಹರಿಸಿ ಇಟ್ಟುಕೊಂಡವನು ಅವನು. ಈತನಿಗೆ ಇಪ್ಪತ್ತೇಳು ಪತ್ನಿಯರೂ (ದಕ್ಷನ ಪುತ್ರಿಯರು) ಇದ್ದರು. ಈ ಚಂದ್ರ ತನ್ನ ಮೋಹಕ ರೂಪದಿಂದಾಗಿಯೇ ಪ್ರೇಮಿಗಳಲ್ಲಿ ಕಾಮನೆಗಳನ್ನು ಕೆರಳಿಸಬಲ್ಲ. ಆತನ ಬೆಳದಿಂಗಳು, ತಂಪುಗಾಳಿ ಮನದಲ್ಲಿ ಪ್ರೇಮದ ಬೀಜಗಳು ಮೊಳೆಯುವುದಕ್ಕೆ ಪೂರಕವಾದವು. ಈ ಕಾರಣಕ್ಕೇ ಇರಬೇಕು ಪ್ರೀತಿ ಎಂಬುದು ಚಂದ್ರನ ದಯೆ ಎಂದು ಕೆಲವರು ಭಾವಿಸುವುದು. ಎಸ್.ಎಫ್. ಯೋಗಪ್ಪನವರ್ ತಮ್ಮ ಹೊಸ ಕಾದಂಬರಿಗೆ ‘ಪ್ರೀತಿ ಎಂಬುದು ಚಂದ್ರನ ದಯೆ’ ಎಂದೇ ಹೆಸರಿಟ್ಟಿದ್ದಾರೆ. 

ಲೇಖಕರ ವರ್ಣನಾಶಕ್ತಿ, ಕಲ್ಪನಾಪ್ರತಿಭೆ, ನವಿರೇಳಿಸುವ ತಣ್ಣಗಿನ ಶೈಲಿ, ಜೋಗುಳ ಹಾಡುವಹಾಗಿನ ಕಥನ ಕಲೆಯಿಂದಾಗಿ ಓದುಗನನ್ನು ಇದು ಹಿಡಿದಿಟ್ಟುಕೊಳ್ಳುತ್ತದೆ. ಇದನ್ನು ಅವರು ಕಾದಂಬರಿ ಎಂದು ಕರೆದಿರುವ ಕಾರಣಕ್ಕೆ ನಾವು ಕಾದಂಬರಿ ಎಂದು ಓದಿಕೊಳ್ಳುತ್ತೇವೆ ಅಷ್ಟೇ. ಇಲ್ಲದಿದ್ದರೆ ಇದು ಪ್ರತ್ಯೇಕವಾದ ಕವಿತೆಗಳು ಅನಿಸಿಕೊಳ್ಳುವಷ್ಟು ಗದ್ಯಗಂಧಿಯಾಗಿದೆ. ಅಧ್ಯಾಯಗಳೂ ಪುಟ್ಟಪುಟ್ಟವು. ಇದರಲ್ಲಿರುವುದು ಒಂದೇ ವಾಕ್ಯಗುಚ್ಛದ ಕತೆ. ಕಾದಂಬರಿಯಲ್ಲಿಯ ನಿರೂಪಕಿ - ಅವಳೇ ನಾಯಕಿ- (ಅವಳ ಹೆಸರು ಎಲ್ಲಿಯೂ ಉಲ್ಲೇಖಗೊಂಡಿಲ್ಲ) ಮೋಹನ ಎಂಬವನನ್ನು ಗಾಢವಾಗಿ ಪ್ರೀತಿಸಿ ತನ್ನನ್ನು ಅವನಿಗೆ ಸರ್ವರೀತಿಯಿಂದಲೂ ಅರ್ಪಿಸಿಕೊಂಡುಬಿಟ್ಟವಳು. ಆದರೆ ಈ ಮೋಹನ ಅವಳಿಗೆ ಕೈಕೊಟ್ಟು ಬೇರೆಯವಳನ್ನು ಮದುವೆಯಾಗುತ್ತಾನೆ. ಆದರೆ ಅವನಿಗೆ ಅಲ್ಲಿ ಯಾವುದೇ ಸುಖ ಸಿಕ್ಕುವುದಿಲ್ಲ. ಅವಳು ಸತ್ತ ಮೇಲೆಯೇ ಅವನ ಆತ್ಮನಿವೇದನೆಯ ಒಂದು ಅಧ್ಯಾಯ ಮಾತ್ರ ಇರುವುದು. ಪ್ರಿಯತಮನ ಹೆಂಡತಿಯ ಆತ್ಮನಿವೇದನೆಯ ಒಂದು ಅಧ್ಯಾಯವೂ ಇಲ್ಲಿದೆ. 

ಈ ನಡುವಿನದು ಮಾತ್ರ ಲೇಖಕರ ಕಥನ ವೈಭವ, ವರ್ಣನ ವೈಖರಿ, ಭಾಷಾ ಪ್ರೌಢಿಮೆಯಿಂದಾಗಿ ಚಂದಿರನ ಬೆಳದಿಂಗಳ ರಾತ್ರಿಯ ಹಬ್ಬದೂಟ. ಅರ್ಧ ವಾಸ್ತವದೊಂದಿಗೆ ಅರ್ಧ ಕಲ್ಪನೆಯೊಂದಿಗೆ, ಅರ್ಧ ಎಚ್ಚರದಲ್ಲಿ ಇನ್ನರ್ಧ ಕನಸಿನಲ್ಲಿ ರೆಕ್ಕೆ ಪಡೆದುಕೊಳ್ಳುವ ಕಥನದ ಓಘ ಹಗ್ಗ ಬಿಚ್ಚಿದ ಅಶ್ವಮೇಧದ ಕುದುರೆಯಂತೆ ಸಿಕ್ಕಸಿಕ್ಕಲ್ಲಿ ಚಲಿಸುತ್ತದೆ. ಕೆಲವು ಅಧ್ಯಾಯಗಳಂತೂ ಅನಗತ್ಯವೆಂದು ಆ ಓದಿನ ಕ್ಷಣಕ್ಕೆ ಅನಿಸಿದರೂ ಇಡೀ ಕಾದಂಬರಿಯನ್ನು ಒಟ್ಟಾಗಿ ಪರಿಭಾವಿಸಿದಾಗ ಕುವೆಂಪು ರಾಮಾಯಣದ ಮಹೋಪಮೆಗಳಂತೆ ಕಥಾವಸ್ತುವಿನಲ್ಲಿ ಸಂಗತವಾಗಿಬಿಡುತ್ತವೆ. ಇಡೀ ಕಾದಂಬರಿ ರೂಪಕಾತ್ಮಕವಾಗಿ ಒಂದು ಬೆಚ್ಚಗಿನ ಅನುಭವವನ್ನು ಕೊಡುತ್ತದೆ. ಯೋಗಪ್ಪನವರ್ ಅವರ ಅನನ್ಯ ಶೈಲಿ ನಿಮ್ಮನ್ನು ಹಿಡಿದಿಡುತ್ತದೆ.

ಹೆಣ್ಣು ಗಂಡಿನ ಸಂಬಂಧದ ಶೋಧ ಕಾದಂಬರಿಯ ಚೌಕಟ್ಟಿನಲ್ಲಿ ನಡೆದಿದೆ. ಪ್ರೀತಿಸಿದ್ದು ಒಬ್ಬಳನ್ನು, ಮದುವೆಯಾಗಿದ್ದು ಇನ್ನೊಬ್ಬಳನ್ನು. ಈ ಸಂಸಾರದಲ್ಲಿ ಸಮರಸ ಎನ್ನುವುದು ಎಲ್ಲಿಂದ ಬರುವುದು ಸಾಧ್ಯ? ಇಲ್ಲಿರುವುದು ವ್ಯಾಧಿ. ವ್ಯಾಧಿಯ ಜೊತೆ ಸಂಧಾನ ಮಾಡಿಕೊಳ್ಳುವವರಿಗೆ ಸಂತೋಷವೂ ಇದೆ. ಊರಿಗೆ ಹಲವು ದಾರಿ ಇರುವಂತೆ ಬದುಕಿನ ಅರ್ಥ ಕಂಡುಕೊಳ್ಳುವ ಮಾರ್ಗವೂ ಹಲವು.

ಕಥಾನಾಯಕಿಯ ಹೆಸರು ನಮಗೆ ಗೊತ್ತಿಲ್ಲ ಎಂದು ಚಿಂತಿಸುವುದು ಬೇಡ. ಶ್ಯಾವಂತ್ರವ್ವತ್ತಿಯ ವರ್ಣನೆಯು ಅವಳನ್ನು ನಿಮ್ಮೆದುರು ಮೂರ್ತಿಯನ್ನಾಗಿ ಕಟೆದು ನಿಲ್ಲಿಸುತ್ತದೆ. ಅವಳು ಇವಳ ಪ್ರಿಯಕರ ಮೋಹನನಿಗೆ ಹೇಳುವ ಮಾತುಗಳು ಇವು: ‘‘ತಮ್ಮ, ಆ ಹುಡುಗಿ ಸಾಕ್ಷಾತ್ ಪರಮಾತ್ಮನ ಮಗಳು. ಅಕಿನ್ನ ಆಟ ಆಡೋ ವಸ್ತು ಎಂದು ತಿಳಿಬ್ಯಾಡ. ಆಕೆಯ ಚೆಲುವಿನ ಮುಂದ ಭೂದೇವಿ ಕೂಡ ನಾಚಿ ನಿಲ್ಲತಾಳ. ಆಕೆ ನಮ್ಮ ತೋಟದ ನಿಂಬೆ ಹಣ್ಣಿನ ಫಸಲು. ಯಾವಾಗಾದ್ರು ಬನಶಂಕರಮ್ಮನ ದರ್ಶನ ಮಾಡಿಕೊಂಡಿಯೇನು? ಆ ದೇವಿಯಲ್ಲಿರಲಾರದ ಚೆಲುವು ಈ ನನ್ನವ್ವನಲ್ಲಿದೆ. ಈಕಿನ್ನ ಬರಿ ಹುಡುಗಿಯಂತ ತಿಳಿಬ್ಯಾಡ, ಸಮುದ್ರ ಕಡದಾಗ ಹುಟ್ಟಿದ ಅಮೃತ ಇದು. ಹ್ಯಾಗೂ ಪ್ರೀತಿ ಮಾಡಿ, ಆದಷ್ಟು ಬೇಗ ಮದುವ್ಯಾಗು, ಅಕಿನ್ನ ಸರಿಯಾಗಿ ಸಂಭಾಳಿಸು. ಅಕಿ ನಡಿದಾಡೋ ದೀಪ ಇದ್ದಾಂಗ, ಅದು ಎಂದೂ ಆರದ್ಹಂಗ ಜೋಪಾನ ಮಾಡು. ಅಕಿ ನನ್ನ ಕಣ್ಣಾಗ ಹೂವು ಹಣ್ಣು ತುಂಬಿದ ವನ ಕಂಡ್ಹಾಂಗ ಆಗ್ತಾಳ. ಆದ್ರ ವನದಾಗ ಮಂಗ್ಯಾ ಮುಶ್ಯಾ ಬಂದ ಹೋಗಾಕ ನಾನು ಬಿಡೂದಿಲ್ಲ. ನನ್ನ ಎದಿಯೊಳಗಿನ ಜೀವ ಅಕಿ ದೇಹದಾಂಗ ಹರಿದ್ಯಾಡಕ ಹತ್ತೈತಿ ಅಂತ ತಿಳಕೊ. ನಾನು ಒಳ್ಳೇದಕ ಭಾಳ ಒಳ್ಯಾಕಿ, ಸಿಟ್ಟ ಬಂದ್ರ ಮನಸ್ಯಾಳಲ್ಲ. ಅಕಿ ಹಾಲಕೇರಿ ಅನ್ನದಾನಸ್ವಾಮಿ ಆ ಮನೆತನಕ ಆಶೀರ್ವಾದ ಮಾಡಿದ ಪುಣ್ಯದ ಫಲ. ನೀನು ಅಕಿ ಮುಖ ಒಮ್ಮೆರ ಬೇಸ್ಯಾಗ ನೋಡಿ ಏನು? ಅಲ್ಲಿ ಒಮ್ಮೊಮ್ಮೆ ಚಂದ್ರನ ಬೆಳಕು ಚೆಲ್ಲಿದ್ಹಾಂಗ ಕಂಡ್ರ, ಮತ್ತೊಮ್ಮೆ ಹುಲಿಗಳು ಸಾಲುಗಟ್ಟಿ ನಿಂತ್ಹಾಂಗ ಕಾಣಸ್ತೈತಿ. ಅಕಿ ದೇವತಾ ಮನುಷ್ಯಳದಾಳ. ಆಕಿಗೆ ನಿನ್ನಿಂದ ಏನಾದ್ರೂ ಧೋಕಾ ಆಯ್ತಂದ್ರ ನಾನು ನಿನ್ನ ಬಿಡಾಕಿ ಅಲ್ಲ, ಆಕಿ ನನ್ನ ಮಗಳ ಅಂತ ತಿಳಿ.....’’

ಹೀಗೆ ಶ್ಯಾವಂತ್ರವ್ವತ್ತಿ ತನ್ನ ಮಗಳಂಥವಳ ಬಾಳಿನಲ್ಲಿ ಯಾವುದೇ ಧೋಕಾ ಮಾಡದಂತೆ ಮೋಹನನಿಗೆ ಎಚ್ಚರಿಕೆ ನೀಡುತ್ತಲೇ ಆಕೆಯ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತಾಳೆ. ಹಲವು ಮಂಡಲಗಳನ್ನು ದಾಟಿ ಈ ಮೋಹನನನ್ನು ಸಾಕ್ಷಾತ್ಕರಿಸಿಕೊಳ್ಳುವ ಅವಳ ಪ್ರಯತ್ನ ಸಾಧ್ಯವಾಗುವುದೇ ಇಲ್ಲ. ಎಲ್ಲಿಗೋ ಹೋದವನು ಮತ್ತೆ ಬರಲೇ ಇಲ್ಲ. ಆತನಿಗೆ ಹುಡುಗಿ ನೋಡಿದ ಸುದ್ದಿ ತಿಳಿಯುತ್ತದೆ. ಮದುವೆಯೂ ನಡೆದುಹೋದದ್ದು ತಿಳಿಯುತ್ತದೆ. ಇವಳು ಹಾಗೆಯೇ ಕಾಯುತ್ತಲೇ ಕಾಯುತ್ತಲೇ ದಿನಗಳೆಯುತ್ತ ವೃದ್ಧೆಯಾಗುತ್ತ ಒಂದು ದಿನ ಇಲ್ಲವಾಗುತ್ತಾಳೆ. ಸಂಬಂಧಗಳು ಹಲವು ತೀರಗಳ ಮಧ್ಯೆ ಸಂಪರ್ಕ ಕಲ್ಪಿಸಲು ಕಟ್ಟಿದ ಸೇತುವೆಗಳು. ಇವು ಧ್ವಂಸವಾದಾಗ ತೀರಗಳು ದೂರವಾಗುತ್ತವೆ. ಸೇತುವೆಗಳು ಕಳಚಿ ಬೀಳುತ್ತವೆ. ಇವುಗಳನ್ನು ಮತ್ತೆ ಕಟ್ಟುವುದು ಅಷ್ಟು ಸುಲಭವಲ್ಲ. ವಿಧ್ವಂಸಕ ಕೃತ್ಯದಲ್ಲಿಯ ಪಾಲುದಾರರು ಕಟ್ಟುವ ಕೆಲಸವನ್ನು ಮತ್ತೆ ಮಾಡಲಾರರು. ಕಟ್ಟಿದರೂ ಅದು ಮತ್ತೊಂದು ವಿಧ್ವಂಸಕ ಕೃತ್ಯಕ್ಕೆ ದಾರಿ ಮಾಡಿಕೊಡುತ್ತದೆ. ಸಂಬಂಧ ಒಂದು ಅಂಗಕ್ಕೆ ಬೇರೆ ಅಂಗವನ್ನು ಕಸಿ ಮಾಡಿದಂತಿರುತ್ತದೆ. ಆ ಕಸಿ ಫಲ ಕೊಡದೇ ಹೋದಾಗ ಪ್ರಾಣ ಕಳೆದುಕೊಂಡ ಸಂಕಟವಾಗುತ್ತದೆ. 

ಇಲ್ಲಿ ಘಟನೆಗಳೆಲ್ಲ ಬೆಳದಿಂಗಳ ಸಾಕ್ಷಿಯಲ್ಲಿಯೇ ನಡೆಯುವುದು. ಆಕೆಯ ಸಾವಿನ ಸುದ್ದಿಯೊಂದಿಗೇ ಕತೆ ಶುರುವಿಟ್ಟುಕೊಳ್ಳುವುದು. ಆಕೆ ಮಸಾರಿ ಮಣ್ಣಿನ ಜೀವಂತ ಪುತ್ಥಳಿ ಎಂದು ಆಕೆಯ ವರ್ಣನೆ ಆರಂಭಿಸುವ ಲೇಖಕರು, ಬದುಕಿದ್ದಾಗ ಬಂಗಾರದ ಒಡವೆ ಎಂದು ಹೊಗಳಿಸಿಕೊಳ್ಳುವ ಹೆಣ್ಣು ಹೆಣವಾದಾಗ ದುರ್ಘಟನೆಗೀಡಾದಂತೆ, ಆಕಾರ ಕಳೆದುಕೊಂಡು ನೀರು ಹತ್ತಿದ ಮಣ್ಣಿನಂತೆ ಕರಗುತ್ತಾಳೆ ಎಂದು ಹೇಳುವರು. ವರ್ಣನೆಯ ಧಾವಂತದಲ್ಲಿ ಅವರು ಮಣ್ಣಿನ ಸಂಬಂಧವನ್ನು ಮರೆಯದಿರುವುದು ಮಹತ್ವದ್ದು. 

ಇಲ್ಲಿ ನಡೆದಿರುವುದು ಒಂದು ವಿಶ್ವಾಸಘಾತ. ನಂಬಿಕೆ, ವಿಶ್ವಾಸದ ತುದಿಯಲ್ಲಿ ವಿಷದ ಹಲ್ಲು. ಸಂಬಂಧಿಕರು, ಬೀಗರು, ತಂದೆ ತಾಯಿಗಳು ಎನ್ನುವ ಸಂತೆಯಲ್ಲಿ ಕಳೆದುಹೋಗುವವನನ್ನು ಹಿಡಿದು ನಿಲ್ಲಿಸಲಾಗದ ಅಸಹಾಯಕತೆ ಗಾಢವಾಗಿ ಇಲ್ಲಿ ತಟ್ಟುತ್ತದೆ. ಪ್ರೇಮ ಭಾರಿ ಮಂಜಿನಂತೆ ಕರಗಿ ಹೋಗುತ್ತದೆ, ಬಿದ್ದ ನೀರಿನಂತೆ ಇಲ್ಲವಾಗುತ್ತದೆ ಎಂಬ ಸತ್ಯ ಮುಖಕ್ಕೆ ರಾಚುತ್ತದೆ. ನಿನ್ನ ಪತ್ನಿಯ ಜೊತೆ ಮಲಗುವಾಗ ನನ್ನ ಮುಖದ ಒಂದು ಪ್ರತಿ ಛಾಯೆಯು ನಿನ್ನ ಬಳಿ ಸುಳಿಯುವುದಿಲ್ಲವಾ. ಹೇಳು, ಸತ್ಯ ಹೇಳು ಎಂದು ಒತ್ತಾಯಿಸಿದರೆ ಆತನ ಬಳಿ ಉತ್ತರವಿಲ್ಲ. ಅವಳು ಹೇಳುತ್ತಾಳೆ, ‘ಬನದ ಹುಣ್ಣಿಮೆಯ ಬಿದಿಗೆಯ ಚಂದ್ರ ಪ್ರೇಮದ ಬಂಧಮುಕ್ತನಂತೆ ಎಷ್ಟೇ ಆಟವಾಡಿದರೂ ಮರುದಿನದಿಂದ ಕ್ಷಯಿಸಹತ್ತುತ್ತಾನೆ. ನಿಮ್ಮಂಥವರ ಸ್ವಭಾವ ಭೂಮಿಯ ಮೇಲೆ ಇರುವ ವರೆಗೂ ಚಂದ್ರನ ಕ್ಷಯ ಗುಣವಾಗಲಾರದು.’ ನಾನು ಸತ್ತ ನಂತರ ನನ್ನ ಹೆಣವನ್ನಾದರೂ ಪ್ರೀತಿಯಲ್ಲಿ ನೋಡು ಎನ್ನುವ ಹೆಣ್ಣಿನ ಆರ್ತತೆ ಜಗತ್ತೇ ಸ್ಥಗಿತಗೊಂಡ ಒಂದು ಕ್ಷಣದ ಅನುಭೂತಿಯನ್ನು ಹುಟ್ಟಿಸದೆ ಇರದು. 

ಎಲ್ಲಿಯೋ ಬಾಣನ ಕಾದಂಬರಿ, ಆಕೆಯ ಚಂದ್ರಾಪೀಡ, ಮಹಾಶ್ವೇತೆ, ವೈಶಂಪಾಯನರ ಅಗಲಿಕೆ ಕೂಡುವಿಕೆ ಜನ್ಮಾಂತರದ ಪ್ರಲಾಪ, ಬೋದಿಲೇರನ ಪಾಪದ ಹೂಗಳ ಬಿಕ್ಕಳಿಕೆಗಳು ನಿಮಗೆ ನೆನಪಿಗೆ ಬಂದರೆ ಅದು ಆಕಸ್ಮಿಕವಲ್ಲ. ಕನ್ನಡದಲ್ಲಿ ಇದೊಂದು ಅಪರೂಪದ ಬರೆವಣಿ


Tuesday, April 14, 2015

ಹಾರಿಕೊಂಡು ಹೋದವನು - ದಿವಾಕರ್ ಎಸ್

Haarikondu Hodavanu - Divakar s



ಕಥಾ ಜಗತ್ತು (ನೊಬೆಲ್ ಪ್ರಶಸ್ತಿ ವಿಜೇತ ಲೇಖಕರು ಬರೆದ 50 ಕತೆಗಳ ಅನುವಾದ), ಜಗತ್ತಿನ ಅತಿ ಸಣ್ಣ ಕತೆಗಳು, ಉತ್ತರ ದಕ್ಷಿಣ ದಿಕ್ಕುಗಳನ್ನು ಬಲ್ಲವನು (ವಿವಿಧ ದೇಶಗಳ ಕತೆಗಳು) ನಂತರ ಇದೀಗ ಎಸ್ ದಿವಾಕರ್ 'ಹಾರಿಕೊಂಡು ಹೋದವನು'ವಿನಲ್ಲಿರುವ ಕತೆಗಳನ್ನು ಕನ್ನಡಕ್ಕೆ ತಂದಿದ್ದಾರೆ. 

ಇಷ್ಟಕ್ಕೂ ಪರದೇಶದ ಕತೆಗಳನ್ನು ನಾವೇಕೆ ಓದುತ್ತೇವೆ? ನಮ್ಮದು ಮತ್ತು ಹೊರಗಿನ ಕತೆಗಳನ್ನು ಓದುವಾಗ ನಮ್ಮ ಮನಸ್ಸು ಹೇಗೆ ಸ್ಪಂದಿಸುತ್ತದೆ? ಇಂತಹ ಕವಲು ನಿಜಕ್ಕೂ ಹಾಗೆಯೇ ಉಳಿಯುತ್ತಾ? ಮಸುಕಾಗುತ್ತಾ?ಎಲ್ಲ ಕತೆಗಳಲ್ಲೂ ಸಾಧಾರಣೀಕರಣ ಸಾಧ್ಯವಾಗುತ್ತಾ? ನಾವೇಕೆ ಇಂತಹ ಬರಹಗಳಿಗೆ ಹಾತೊರೆಯುತ್ತೇವೆ? ಮತ್ತೆ ಮತ್ತೆ ಜತೆಯಾಗುತ್ತೇವೆ? ತನ್ನ ಲಹರಿಗೆ ತಕ್ಕಂತೆ ಕತೆಯ ರಾಶಿಯಲ್ಲಿ ಹೆಕ್ಕಿ ಅದನ್ನು ನುಡಿ ಮಾರ‌್ಪುಗೊಳಿಸಿ ಕಳುಹಿಸುವ ಅನುವಾದಕ ಕತೆಗಾರನೂ ಆಗಿದ್ದಾಗ (ದಿವಾಕರ್ ಪ್ರತಿಭಾಶಾಲಿ ಕತೆಗಾರರೂ ಹೌದು) ಈ ಕತೆಗಳ ಮೂಲಕ ಹುಡುಕಾಟ ನಡೆಸುವುದು ಏನನ್ನು? ಆಯ್ಕೆ ಮಾಡಿಕೊಂಡ ಕತೆಗಳಲ್ಲಿ ಪದೇಪದೇ ಮರುಕಳಿಸುವ ಆಶಯ ಆಕಸ್ಮಿಕವಾಗಿರಲು ಸಾಧ್ಯವಿಲ್ಲವೇ? ಹೀಗೆಂದಾಗ ನಾವು ಬಿಡಿ ಬಿಡಿ ಕತೆಗಳನ್ನು ಓದುತ್ತಿರುತ್ತೇವೆಯೋ, ಅದನ್ನು ನಮ್ಮದೇ ಆದ ರೀತಿಯಲ್ಲಿ ಕಾದಂಬರಿ ಅಧ್ಯಾಯಗಳಂತೆ ಜೋಡಿಸಿಕೊಳ್ಳುತ್ತಿರುತ್ತೇವೆಯೋ? ಎನ್ನುವ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಜಾಣ್ಮೆ, ವರದಿ, ಸುಭಾಷಿತ, ಅಸಾಮಾನ್ಯ ಎಂಬ ಭ್ರಮೆ ಹುಟ್ಟಿಸಿ ಒಳಗನ್ನು ಕೊಂಚವೂ ತಟ್ಟದ ಹೇಳಿಕೆಗಳು, ಗುಟ್ಟುಗಳು, ಸಿಕ್ಕುಗಳು; ತಿಜೋರಿ ಒಳಗೆ ಏನೋ ಇದೆ ಎಂದೆನ್ನಿಸಿ ಅದರ ಕೀಲಿ ಕೊಡಲು ಸತಾಯಿಸುವ ಕತೆಗಳು, ಚಮತ್ಕಾರಗಳು, ತಾತ್ತ್ವಿಕ ಜಿಜ್ಞಾಸೆಗಳು, ಕಲಾ ವಿದ್ಯಾರ್ಥಿ ಪಾಲಿನ ಗಣಿತದ ಲೆಕ್ಕಗಳು, ಕಣ್ಕಟ್ಟುಗಳು, ಅಟಮಟಗಳು, ದಿಗ್ಭ್ರಮೆಗಳು, ಹೊಸ ಕಾಣ್ಕೆಗಳು, ನಿಟ್ಟುಸಿರು, ಮೌನ, ದಣಿವು- ಹೀಗೆ ಈ ಕತೆಗಳ ಕಟ್ಟು ನಮ್ಮನ್ನು ಕಾಡಿ ಕಂಗೆಡಿಸುತ್ತವೆ.

ಶ್ರೇಷ್ಠ ಬರಹ ಅನುಭವವನ್ನು ಹಲವು ಮಟ್ಟದಲ್ಲಿ ಆಗುವ ಕ್ರಿಯೆಯಾಗಿಸುತ್ತದೆ. ನಿಮ್ಮನ್ನು ನಂಬಿಸುತ್ತದೆ; ಒಪ್ಪಿಸುತ್ತದೆ. ಇದರಲ್ಲಿ ಕೊಂಚವೂ ಬಿರುಕು, ಬಿಂಕಗಳಿರುವುದಿಲ್ಲ. ಪರದೇಶದ ಕತೆಗಳು ಸಾಧಾರಣೀಕರಣವಾಗುವುದಕ್ಕೆ ಒಂದು ಉದಾಹರಣೆ ಗಮನಿಸೋಣ. ಜರ್ಮನಿಯ ಯೊಹಾನ್ ಪೀಟರ್ ಹೆಬೆಲ್ ಬರೆದ 'ವಿಚಿತ್ರ ಮನುಷ್ಯ' ಕತೆಯ ಮನುಷ್ಯ 75 ವರ್ಷ ಪ್ಯಾರಿಸ್ ಬಿಟ್ಟು ಎಲ್ಲೂ ಹೋಗಿರುವುದಿಲ್ಲ. ಹುಚ್ಚನೂ ಅಲ್ಲ ಬೆಪ್ಪನೂ ಅಲ್ಲ, ಕಾಲಿಲ್ಲದವನೂ ಅಲ್ಲ , ಹೊರಗಡೆ ಹೋಗಲು ದುಡ್ಡು ಕಾಸು, ಅವಕಾಶ ಇಲ್ಲದವನೂ ಅಲ್ಲ. ಸಂತೋಷ ಕಳೆದುಕೊಂಡವನೂ ಅಲ್ಲ. ಆ ವಿಚಿತ್ರ ವ್ಯಕ್ತಿಯನ್ನು ಕರೆಸಿಕೊಂಡ ರಾಜ, ಇನ್ನು ಮೇಲೆ ಅನುಮತಿ ಇಲ್ಲದೆ ಈ ಊರಿಂದಾಚೆ ಕಾಲಿಡಬೇಡ ಎಂದು ಆಜ್ಞೆ ಮಾಡುತ್ತಾನೆ. ನಾನೀರೋದೇ ಹೀಗೆ. ಹೀಗಾಗಿ ಕಾನೂನು ಬಂದೋಬಸ್ತ್ ಏನೂ ಮಾಡದು ಎಂಬ ನಮ್ಮ ನಿರೀಕ್ಷೆ ಬುಡಮೇಲಾಗುತ್ತದೆ. ಆಜ್ಞೆಯಾಗಿದ್ದೇ ತಡ 75 ವರ್ಷದ ವ್ಯಕ್ತಿಗೆ ಯಾತನೆ ಮೊದಲಾಗುತ್ತದೆ. ಊರಿಂದ ಹೊರಗೆ ಹೋಗುವವರೆಲ್ಲ ಭಾಗ್ಯವಂತರಂತೆ ಕಾಣುತ್ತಾರೆ. ಯಾವಾಗಲೂ ಖುಷಿಯಾಗಿದ್ದವನು ಅದನ್ನು ಕಳೆದುಕೊಳ್ಳುತ್ತಾನೆ. ರುಚಿಯಾಗಿರುವುದೆಲ್ಲ ರುಚಿ ಕಳೆದುಕೊಂಡಿದೆ ಎಂದೆನಿಸುತ್ತದೆ. 8-10 ತಿಂಗಳು ಕಳೆದ ಮೇಲೆ ಹೊರಗೆ ಹೋಗಲು ಅಂಗಲಾಚುತ್ತಾನೆ. ಎಲ್ಲರಿಗೂ ದಮ್ಮಯ್ಯಗುಡ್ಡೆ ಹಾಕುತ್ತಾನೆ. ವರ್ಷ ಕಳೆದ ಮೇಲೆ ಮನೆ ಮುಂದೆ ಸಾರೋಟು ಬಂದು ನಿಲ್ಲುತ್ತದೆ. 'ದೊರೆಯೇ ಅದನ್ನು ಕಳುಹಿಸಿ ಎಲ್ಲಿಗಾದರೂ ಹೋಗಿಬನ್ನಿ ಎಂದು ಹೇಳಿದ್ದಾರೆ' ಎಂದು ಹೆಂಡತಿ, ಹಳ್ಳಿಗಾಡಿಗೆ ಹೋಗೋಣ ಎನ್ನುತ್ತಾಳೆ. ಹೊರಗೆ ಹೋಗಲು ತಹತಹಿಸುತ್ತಿದ್ದ ಆ ಮನುಷ್ಯ ತಣ್ಣಗೆ 'ನಾಳೆಯಲ್ಲದಿದ್ದರೆ ನಾಡಿದ್ದು ಹೋದರಾಯಿತು. ಇಷ್ಟಕ್ಕೂ ಹಳ್ಳಿಗಾಡಿಗೆ ಹೋಗಿ ನಾವೇನು ಮಾಡಬೇಕಾಗಿದೆ? ನಮ್ಮ ಪ್ಯಾರೀಸೇ ಸೊಗಸಾಗಿದೆಯಲ್ಲ?' ಎಂದುಬಿಡುತ್ತಾನೆ.

ತನಗೆ ತಾನೇ ವಿಧಿಸಿಕೊಂಡ ನಿರ್ಬಂಧ ಸ್ವಾತಂತ್ರ್ಯದಂತೆ ಕಂಡರೆ ಬೇರೆಯವರು ವಿಧಿಸುವ ಕಟ್ಟುಪಾಡು ಸೆರೆಮನೆಯಂತೆ ಕಾಡತೊಡಗುತ್ತದೆ. ಕಾಲ-ದೇಶ ಬದ್ಧತೆಗಳನ್ನು ಮೀರಿ ಯಾರಿಗೇ ಆದರೂ ಆಗುವ ಅನುಭವವಿದು. ತನಗೆ ಬೇಕಾದಂತೆ ಇರುವ ಮನುಷ್ಯನ ಮೂಲಭೂತ ಪ್ರವೃತ್ತಿಯನ್ನು ಈ ಕತೆ ಅದ್ಭುತವಾಗಿ ಬಿಡಿಸಿಡುತ್ತದೆ. ಆಜ್ಞೆ-ಅಪ್ಪಣೆಗಳ ಪರಿಸರದಲ್ಲಿ ಉಂಟಾಗುವ ಮನಸ್ಸಿನ ಬಿಗಿತಗಳನ್ನು ಅನುಭವಿಸಿದವರಿಗೆ ಅಜ್ಜನ ಇಕ್ಕಟ್ಟು ಮತ್ತು ನಿರಾಳತೆಗಳು ತಮ್ಮನ್ನೇ ಕುರಿತು ಹೇಳಿದಂತೆ ಅನ್ನಿಸುತ್ತದೆ. ಇದೇಕೆ ಹೀಗೆ ಎಂಬ ಪ್ರಶ್ನೆ ಆಲೋಚನೆಯಅಲೆಗಳನ್ನು ಎಬ್ಬಿಸುತ್ತದೆ. ಮನುಷ್ಯ ತನಗೆ ತಾನೇ ಕಟ್ಟುಪಾಡುಗಳನ್ನು ಹಾಕಿಕೊಳ್ಳಬಹುದು. ಆದರೆ ಅದನ್ನು ಯಾವಾಗ ಬೇಕಾದರೂ ಮುರಿಯಬಹುದು ಎನ್ನುವ ಅವಕಾಶವೇ ಅಪರಿಮಿತ ಸ್ವಾತಂತ್ರ್ಯವನ್ನು ಆತನಿಗೆ ಕೊಟ್ಟಿರುತ್ತದೆ. ಸ್ವಾತಂತ್ರ್ಯ ಮತ್ತು ನಿರ್ಬಂಧದ ಅಧಿಕಾರ ಎಂಬುದು ಬೇರೆ ಬೇರೆಯವರಲ್ಲಿ ಹಂಚಿಹೋದಾಗ ಸಮಸ್ಯೆಗಳುಂಟಾಗುತ್ತದೆ. ಹೀಗೆ ಆಲೋಚನೆಗಳ ದಾರಿಗಳನ್ನು ಈ ಕತೆ ತೆರೆಸುತ್ತದೆ.

ಇಲ್ಲಿನ ಬಹುತೇಕ ಕತೆಗಳು ನಿರೂಪಣೆಯಲ್ಲಿ ಪ್ರಜ್ಞಾಪ್ರವಾಹ ತಂತ್ರವನ್ನು ಅನುಸರಿಸುತ್ತವೆ. ಒಂದು ಕ್ಷಣದ ಬೀಸಿನಲ್ಲಿ ಸಂಭವಿಸುತ್ತವೆ. ರಷ್ಯಾದ ಅರ್ಕಾದಿ ಅವೆರ್‌ಚೆಂಕೋ ಬರೆದ 'ಹಾರಿಕೊಂಡು ಹೋದವನು' ಕತೆಯನ್ನು ತಿಳಿಯೋಣ: ಒಂದು ದೊಡ್ಡ ಅಪಾರ್ಟ್‌ಮೆಂಟ್‌ನ ಆರನೇ ಮಹಡಿಯಲ್ಲಿ ಲಂಪಟತನದ ಆರೋಪ ಹೊರಿಸಿ ಯುವಕನೊಬ್ಬನನ್ನು ಓವರ್ ಕೋಟು ತೊಟ್ಟುಕೊಂಡು ಬಲಿಷ್ಠವಾಗಿದ್ದ ವ್ಯಕ್ತಿ, 'ಏನೂ ಮಾಡಿಲ್ಲವಾ? ಒಂದು ಕೊಡ್ತೀನಿ, ತಕ್ಕೋ ಖದೀಮ' ಎಂದು ಯುವಕನನ್ನು ಮೇಲಕ್ಕೆತ್ತಿ ಎಸೆಯುತ್ತಾನೆ. ಆರನೇ ಮಹಡಿಯಿಂದ ಕೆಳಹಂತಸ್ತಿನವರೆಗೆ ಹಾರಿಕೊಂಡು ಬರುವಾತನೊಳಗೆ ಏನೆಲ್ಲಾ ಆಗುತ್ತದೆ ಎಂಬುದನ್ನು ಈ ಕತೆ ನಿರೂಪಿಸುತ್ತದೆ. ಕಣ್ಣಿಗೆ ಬೀಳುವ ಕಿಟಕಿಯೊಳಗಿನ ಬೇರೆಬೇರೆಯವರ ಬದುಕುಗಳಿಗೆ ಇವನು ಪ್ರತಿಸ್ಪಂದಿಸುತ್ತಾನೆ. ಪುಸ್ತಕ ಓದುತ್ತಿರುವ ವಿದ್ಯಾರ್ಥಿ, ಹೊಲಿಗೆ ಯಂತ್ರದ ಮುಂದೆ ಕುಳಿತ ಯುವತಿ, ಮಗು ಆಡಿಸುತ್ತಿರುವ ಹೆಂಗಸು, ಆತ್ಮಹತ್ಯೆಗೆ ರೆಡಿಯಾಗುತ್ತಿರುವ ಯುವಕ, ಪ್ರೇಮಿಗಳಿಬ್ಬರ ಸಲ್ಲಾಪ- ಕಣ್ಣಿಗೆ ಬೀಳುತ್ತದೆ.

ಈ ಯುವಕನಿಗೆ ವಿದ್ಯಾರ್ಥಿಯ ಹಾಗೆ ತಾನು ಕಲಿಯಬೇಕೆಂಬ ಹಂಬಲವಾಗುತ್ತದೆ. ನಾಲ್ಕನೇ ಮಜಲೆಯಲ್ಲಿರುವ ಹುಡುಗಿಯನ್ನು ಮದುವೆಯಾಗುವ, ಮೂರನೇ ಮಜಲೆಯಲ್ಲಿ ಕಂಡಂತೆ ಸುಖಶಾಂತಿಯಿಂದ ಸಂಸಾರ ಮಾಡುವಂತೆ ಅನ್ನಿಸುತ್ತದೆ. ಆತ್ಮಹತ್ಯೆಗೆ ಸಿದ್ಧವಾಗಿರುವ ಯುವಕನನ್ನು ನೆನೆದು ಬದುಕಿರುವುದರಿಂದ ಏನೂ ಪ್ರಯೋಜನವಿಲ್ಲವೆಂಬುದನ್ನು ಕಣ್ಣಾರೆ ಕಂಡದ್ದಾಯಿತು ಎಂದು ಯೋಚಿಸಿದ. ತನ್ನ ಉಡ್ಡಯನ ಮುಗಿಸಿಬಿಟ್ಟ- ಫುಟ್‌ಪಾತಿನ ಮೇಲೆ. ಚಪ್ಪಡಿ ಕಲ್ಲೊಂದಕ್ಕೆ ಆತನ ತಲೆ ಬಡಿಯಿತು. ಆತನ ತಲೆಯಲ್ಲಿ ಎಂತಹ ಸಂಕೀರ್ಣ ನಾಟಕ ನಡೆಯಿತು ಎಂಬುದು ಯಾರಿಗೂ ಹೊಳೆಯಲೇ ಇಲ್ಲ ಎಂದು ಕತೆ ಕೊನೆಗೊಳ್ಳುತ್ತದೆ. ಆದರೆ ಓದು ಮುಗಿಸದ ಮೇಲೂ ಈ ಕತೆ ಓದುಗನಲ್ಲಿ ಮುಂದುವರಿಯುತ್ತದೆ. ಸಾವಿನತ್ತ ವೇಗವಾಗಿ ದೂಡಲ್ಪಟ್ಟವನ ಆತ್ಮಜ್ಞಾನ ಕ್ಷಣಕ್ಷಣಕ್ಕೂ ಬದಲಾಗುತ್ತದೆ. ಸಾವೆಂಬ ನಿಲ್ದಾಣದಲ್ಲಿ ಆತನ ನಿರ್ಧಾರಗಳೂ ಒಂದು ನಿಲುಗಡೆಗೆ ಬರುತ್ತವೆ.

ಒಳ್ಳೆಯ ಕತೆಗಾರರಾದ ದಿವಾಕರರು ಈ ಕಥಾರಾಶಿಯಲ್ಲಿ ಏನನ್ನು ಹುಡುಕಾಟ ನಡೆಸಿದ್ದಾರೆ ಎಂಬುದಕ್ಕೆ ಆಯ್ಕೆಯ ಕಟ್ಟುಗಳನ್ನು ಗಮನಿಸಿದರೆ ಪದೇಪದೇ ಬಂದು ಹೋಗುವ ಕೆಲವಸ್ತುಗಳಿಂದ ಧೋರಣೆ, ಒಲವು-ನಿಲುವುಗಳನ್ನು ಅಂದಾಜಿಸಿಕೊಳ್ಳಬಹುದು. ಸೃಜನಶೀಲ ವ್ಯಕ್ತಿಯ ಸಾಹಿತ್ಯಕ ಪ್ರಯತ್ನಗಳು ಒಂದು ಗೊತ್ತಾದ ಹುಡುಕಾಟವೇ ಆಗಿರುತ್ತದೆ. ಈ ಕತೆಗಳ ಮೂಲಕ ವೇಗ, ಉದ್ವಿಗ್ನತೆ, ನಿದ್ರೆಗಳೇ ಇಲ್ಲದ ನಗರಗಳ ಯಾಂತ್ರಿಕೃತ ದೈನಿಕದಲ್ಲಿ ನಿರುಮ್ಮಳತೆಯನ್ನು ಅರಸುತ್ತಾರೆ. ರೈಲು ನಿಲ್ಲಿಸಿ ತಲೆ ಮೇಲಿಂದ ಹಾರಿ ಹೋದ ಹ್ಯಾಟನ್ನು ಹುಡುಕಿಕೊಂಡು ಹೋಗುವ ಚಾಲಕನ ಕತೆ ಇದಕ್ಕೆ ನಿದರ್ಶನ. ಅದೇ ರೀತಿ ಸೇಬು ಮರದ ಕೆಳಗೆ ನಿಂತು ಉಸಿರಾಟದ ಖುಷಿ ಅನುಭವಿಸುವವನ ಕತೆ ಅಭಿವೃದ್ಧಿಯ ಭರಾಟೆಯಲ್ಲಿ ನಾವು ಕಳೆದುಕೊಂಡ ಸಂತಸವನ್ನು ಹೇಳುತ್ತವೆ. ಈ ಕಥಾರಾಶಿಯಲ್ಲಿ ಹತ್ತಾರು ಕತೆಗಳು ಆಯಾ ದೇಶದ ರಾಜಕೀಯ, ಸಾಮಾಜಿಕ ಪರಿಸ್ಥಿತಿಗಳಿಗೆ ರೂಪಕಗಳಾಗುವುದು ಕಾಣುತ್ತದೆ.

ಈ ಪುಸ್ತಕದ ಹೊದಿಕೆಯಲ್ಲಿ ಅನಂತಮೂರ್ತಿ, ಅಕ್ಷರ. ನರೇಂದ್ರ ಪೈ, ಟಿ.ಪಿ. ಅಶೋಕ, ವಿವೇಕ ಶಾನಭಾಗ ಅವರ ಮೆಚ್ಚು ನುಡಿಗಳಿವೆ. ಇವೇನೂ ಓದಿಗೆ ನೆರವಾಗುವುದಿಲ್ಲ. 'ಹಾರಿಕೊಂಡು ಹೋದವನು' ಸದಾ ಜತೆಯಲ್ಲಿಟ್ಟುಕೊಳ್ಳಬಹುದು.

* ಕೆ ವೆಂಕಟೇಶ


ಮೂಲ :- http://goo.gl/7fp04A


Monday, April 13, 2015

ಸೀಕ್ರೆಟ್ ಡೈರಿ - ಜೋಗಿ ( ಗಿರೀಶ್ ರಾವ್ )

Secret Dairy - Jogi ( Girish Rao )




ಪುಸ್ತಕದ ಮುನ್ನುಡಿಯಿಂದ 


ನಾವು ಹೇಳಲಾರದ ತಾಳಲಾರದ ಕತೆಗಳನ್ನು ಜೋಗಿ ಹೇಳತೊಡಗಿ...

ಈ ಮಹಾನಗರದ ಮಹಾಸಾಗರದ ಮಧ್ಯೆ ಅವರಿಬ್ಬರೂ ಭೇಟಿಯಾಗುತ್ತಾರೆ.

ಬಹುಶಃ ಹೆಣ್ಣು ಮತ್ತು ಗಂಡು.

ಅವರಿಬ್ಬರೂ ಅಚಾನಕ್ ಸಂಧಿಸಿ, ಪ್ರೇಮದಲಿ ಕನವರಿಸಿ ಇಬ್ಬರೂ ಒಂದು ಸೂರಿನಡಿ ಸೇರುವ ತೀರ್ಮಾನಕ್ಕೆ ಬರುತ್ತಾರೆ. ಯಾವುದೋ ವಾಹನವನ್ನೇರಿ, ಅವಳಿರುವ ಅಪಾರ್ಟ್‌ಮೆಂಟ್‌ಗೆ ಇಬ್ಬರೂ ಬರುತ್ತಾರೆ. 

ಸಮಾಗಮವಾಗುತ್ತದೆ.

ಎಚ್ಚರವಾದಾಗ ಕಾಫಿ ಕುಡಿಯಬೇಕೆಂದು ತುಂಬ ಅನ್ನಿಸಿ, ಅವನು ಹಾಲು ತರುತ್ತೇನೆಂದು ಹೊರಡುತ್ತಾನೆ.

ಕೆಳಗೆ ಬಂದು ಹಾಲು ತೆಗೆದುಕೊಂಡು ವಾಪಾಸ್ ಹೊರಡಬೇಕು ಅಂದಾಗ ಅವನು ಒಂದು ಕ್ಷಣ ಬೆಚ್ಚಿ ನಿಲ್ಲುತ್ತಾನೆ.

ಅವನು ಅವಳ ಹೆಸರು ಕೇಳಲಿಲ್ಲ, ಅವರಿರುವ ಅಪಾರ್ಟ್‌ಮೆಂಟ್ ಹೆಸರು ಗೊತ್ತಿರಬಹುದಾದರೂ ಯಾವ ಫ್ಲೋರ್‌ ಅಂತ ಗೊತ್ತಿಲ್ಲ, ವಿಚಾರಿಸುವುದಕ್ಕೆ ವಿಳಾಸವಿಲ್ಲ, ಸಂಪರ್ಕಿಸುವುದಕ್ಕೆ ನಂಬರ್ ಇಲ್ಲ.

ಹೀಗೆ ಈ ಕಡೆ ಹಾಲು ಹಿಡಿದುಕೊಂಡು ನಿಂತ ಅವನು, ಆ ಕಡೆ ಕಾಫಿಗಾಗಿ ಹಾಲು ತರಲಿರುವ ಇವನಿಗಾಗಿ ಕಾದು ಕುಳಿತ ಅವಳು..

-ಮಹಾನಗರದ ಕತೆಗಳು ಅಂತೇನೋ ಕಥಾಮಾಲಿಕೆ ಬರೆಯಲು ಹೊರಟಿದ್ದ ಜೋಗಿ, ಅದರಲ್ಲೊಂದು ಕತೆ ಅಂತ ಇದನ್ನು ಒಮ್ಮೆ ಹೇಳಿದ್ದರು. ನಮ್ಮ ಮಹಾನಗರದ ಬದುಕಿನ ವಿಚಿತ್ರ ಅಪರಿಚಿತತೆಯನ್ನು ಸಣ್ಣಗೆ, ತಣ್ಣಗೆ, ಶಾಕ್ ಆಗುವಂತೆ ಕಟ್ಟಿಕೊಟ್ಟ ಕತೆ ಅದು. ಅವರ ಒಡನಾಟದಲ್ಲಿ ಕೇಳಿದ ಅದೆಷ್ಟೋ ಕತೆಗಳಲ್ಲಿ ಇದೂ ಒಂದಷ್ಟೇ. ಅವರ ಅಂಕಣ ಬರಹಗಳೂ ಇಂಥದೇ ಬರೆಯದ, ಬರೆದುಬಿಟ್ಟರೆ ಬಹುಶಃ ಅದು ಕತೆ ಅಂತಲೇ ಅನಿಸದ ಆದರೆ ಕಥನಕ್ಕಿರುವ ತೀವ್ರತೆಯ ಗುಣವನ್ನೊಳಗೊಂಡ ಬರಹಗಳ ಸಂಕಲನ, ಸಂಕಥನ.

ನಿಕಟ ಎಂದು ಧೈರ್ಯವಾಗಿ ಕರೆಯಬಹುದಾದ ಅವರ ಒಂದು ಒಡನಾಟ ಈಚೆಗೆ ಮೂರು ವರ್ಷಗಳಿಂದ ನನಗೆ ಸಿಕ್ಕಿದೆ. ಆವರೆಗೆ ಅವರನ್ನು ಅeತ ಓದುಗನಾಗಿ ನೋಡಿನೋಡಿ, ಅವರನ್ನು ಭೇಟಿಯಾದಾಗ ಕೊಂಚ ಭಯಭಕ್ತಿ, ಮುಕ್ತವಾಗಿ ಮಾತಾಡುವುದಕ್ಕೆ ಹಿಂಜರಿಕೆಗಳೆಲ್ಲಾ ಇದ್ದವಾದರೂ ನಿಧಾನವಾಗಿ ಅದನ್ನೆಲ್ಲಾ ಕಳೆಯುತ್ತಾ ಹೋಗಿದ್ದು ಜೋಗಿ ಅವರೊಳಗೆ ಇರುವ ಒಬ್ಬ ಅಪ್ರತಿಮ ಕತೆಗಾರನಿಂದಾಗಿ. 'ಇವರಿಗೇ ಸಿಗೋದು ಹೇಳಿ', 'ಕತೆ ಕಟ್ಟಿ ಹೇಳುತ್ತಿರಬಹುದಾ' ಅಂತೆಲ್ಲಾ ಅಂದುಕೊಳ್ಳುತ್ತಾ, ಅವರು ಭೇಟಿಯಾಗುವ ಸ್ವಾರಸ್ಯಗಳಲ್ಲಿ ಕೆಲವನ್ನು ನಾವೇ ಕಣ್ಣಾರೆ ಕಂಡಮೇಲೆ ಒಪ್ಪಿಕೊಳ್ಳಲೇಬೇಕಾಯಿತು. ಆ ಘಟನೆಗಳನ್ನು ಅವರು ಸ್ವಾರಸ್ಯಕರವಾಗಿ ನಿರೂಪಿಸುವ ರೀತಿ, ಅವರ ಜೀವನಪ್ರೀತಿಗಳಂತೆ ಜೋಗಿ ಅವರ ಸಂಕಲನಗಳೂ ಪುಟಪುಟಕ್ಕೂ ನವನವೀನ, ಹೆಚ್ಚು ಹಾರ್ದಿಕ.

ಅಷ್ಟಕ್ಕೂ ಅಂಕಣಬರಹ ಎಂದರೇನು? ಚಿಕ್ಕಂದಿನಿಂದ ನಾವು ನೋಡುತ್ತಾ , ಓದುತ್ತಾ ಬಂದ ಅಂಕಣಗಳೆಲ್ಲಾ ಕತೆಯಾಗದ, ಕವಿತೆಯಾಗದ, ಲೇಖನವಾಗದ, ನುಡಿಚಿತ್ರವಾಗದ, ಆತ್ಮಚರಿತೆಯಾಗದ ಒಂದು ವಿಚಿತ್ರ ಬರಹ ಪ್ರಕಾರ. ನಮ್ಮ ಓದಿನ ಪ್ರಾರಂಭದ ದಿನಗಳಲ್ಲಂತೂ ಇಂಥ ಅಂಕಣಗಳೆಲ್ಲಾ ನಿರ್ಗುಣ, ನಿರಾಕಾರವಾಗಿ ಕಾಣುತ್ತಿದ್ದಾಗ ಅದಕ್ಕೊಂದು ಶಬ್ದ, ರುಚಿ, ವಾಸನೆಗಳನ್ನು ಕೊಡಲಾರಂಭಿಸಿದ್ದೇ ಆಮೇಲಾಮೇಲೆ ಬರೆಯತೊಡಗಿದ ಜಯಂತ್ ಕಾಯ್ಕಿಣಿ ಮೊದಲಾದವರು. ಆ ಮಧ್ಯೆ 'ಜಾನಕಿ' ಎಂಬ ಗುಪ್ತನಾಮದಲ್ಲಿ ಜೋಗಿ ಬರೆದ ಅಂಕಣಗಳೆಲ್ಲಾ ಅಂಕಣದ ವ್ಯಾಖ್ಯೆ, ವ್ಯಾಪ್ತಿಗಳನ್ನು ಹಿಗ್ಗಿಸಿದವು. ಯಾವುದೋ ಫಿನಾಯಿಲ್ ವಾಸನೆಯ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ ಹುಡುಗಿಗೆ ಮಲ್ಲಿಗೆ ತಂದುಕೊಡುವವನೊಬ್ಬನ ಕತೆಯನ್ನು ಅದೇ ಜಾನಕಿಯಾಗಿ ಜೋಗಿ ಬರೆದಿದ್ದ ಶೀರ್ಷಿಕೆ ನೆನಪಿಲ್ಲದ ಅಂಕಣ ಇವತ್ತಿಗೂ ಶತಮಾನದ ಅತ್ಯುತ್ತಮ ಸಣ್ಣಕತೆಯಂತೆ ನೆನಪಲ್ಲುಳಿದಿದೆ. ಅಡೂರರ 'ನಿಳಲ್‌ಕುತ್ತು' ಸಿನಿಮಾ ಇವತ್ತಿಗೂ ನೋಡಿಲ್ಲವಾದರೂ ಜೋಗಿಯದೇ ಕತೆಯೇನೋ ಅನ್ನುವಷ್ಟು ಆ ಸಿನಿಮಾವನ್ನಿಟ್ಟುಕೊಂಡು ಬರೆದ ಅಂಕಣ ನಮ್ಮೊಳಗೆ ಅಜರಾಮರವಾಗಿದೆ. ಕಿರಿಯ ರಾಣಿಯಾಗಿ ಅಂತಃಪುರಕ್ಕೆ ಅಡಿಯಿಟ್ಟವಳಿಗಿದ್ದ ಆಸ್ಥಾನದ ಕಾವಲುಗಾರನೊಡನೆಯ ಪ್ರೇಮಸಲ್ಲಾಪದ ಕತೆ ಹಾಗೇ ಉಳಿದಿದೆ. ಅವರ ಆ ಅಂಕಣ ಬರಹಗಳೆಲ್ಲಾ ಕತೆಯ ರೂಪದಲ್ಲಿ ನಮ್ಮೊಳಗೆ ಇಳಿದದ್ದಕ್ಕೇ ಏನೋ, ಅದು ನಮ್ಮೊಳಗೇ ಶಾಶ್ವತ ಉಳಿದಿರುವುದು. ಆ ಮಟ್ಟಿಗೆ ಅವರ ಅಂಕಣಗಳೆಲ್ಲಾ ಒಂದೊಂದೂ ಕತೆಗಳೇ, ಅಂಕಣ ಬರಹ ಸಂಕಲನಗಳೂ ಕಥಾ ಸಂಕಲನಗಳೇ.

ಇಂಥ ಹೊತ್ತಿಗೆ ಅವರು ಉದಯವಾಣಿಗಾಗಿ ವಾರವಾರ ಬರೆದ ಎರಡು ಥರದ ಅಂಕಣಗಳ ಸಂಕಲನ ಇಲ್ಲಿದೆ. ಒಂದು, ನಮಗೆಲ್ಲಾ ಸದಾ ಅಚ್ಚರಿ, ಕುತೂಹಲ, ಬೆರಗನ್ನು ಜೀವಂತವಾಗಿಟ್ಟ ಗೂಢಚಾರ ವೃತ್ತಿಯ ಬಗೆಗಿನದ್ದು. ಇನ್ನೊಂದು ನಿತ್ಯ ಬದುಕಿನ ಸಂಭ್ರಮ, ಸಂಕಟಗಳ ಬಗೆಯದು. ಅವರೂರಿನ ಕಡೆ ಗೂಢಚರ ವೃತ್ತಿ ಮಾಡುತ್ತಿದ್ದವರ ಸಂಪಾದನೆ, ಆ ವೃತ್ತಿ ಕ್ರಮೇಣ ಮಾಸುತ್ತಿದ್ದ ಹಾಗೇ ಆ ವೃತ್ತಿಯೊಂದಿಗರು ನಿರುದ್ಯೋಗ ಮತ್ತು ನಿರುಪಾಯತೆಗೆ ಸಂದದ್ದನ್ನು ಇತಿಹಾಸ, ಜಾಗತಿಕ ಯುದ್ಧ, ಸಿನಿಮಾಗಳ ವಿವರಗಳೊಂದಿಗೆ ಕಟ್ಟಿಕೊಟ್ಟ ವಿಶಿಷ್ಟ ವಿಭಾಗ-ಸೀಕ್ರೆಟ್ ಡೈರೀಸ್.

ಜೋಗಿ ಅವರ ಕತೆಗಾರಿಕೆ, ಒಂದು ಕತೆಯನ್ನು ನಮ್ಮ ಬದುಕಿನ ಸಂದಿಗ್ಧಗಳ ಜೊತೆ ಸಂತುಲಿತಗೊಳಿಸುವ ಕಲೆಗಾರಿಕೆಯೇ ಅವರ್ಣನೀಯ. ಮಾಯಾಕನ್ನಡಿ ಅನ್ನುವ ಅಂಕಣ ಬರಹ ವಿಭಾಗದಲ್ಲಿ ಅಂಥ ಸಾಕಷ್ಟು ಕತೆಗಳು ಎದುರಾಗುತ್ತವೆ. ಅದರಲ್ಲೊಂದು ಬಂಗಾರಬಣ್ಣದ ಹೂವನ್ನು ತಂದುಕೊಡು ಅಂತ ಪ್ರಿಯತಮೆ ಪ್ರಿಯಕರನನ್ನು ಕೇಳುತ್ತಾಳೆ. ಅವನು ಇದೋ ತಂದೆ ಅಂತ ನೀರಿಗೆ ಜಿಗಿಯುತ್ತಾನೆ. ವರ್ಷಾನುಗಟ್ಟಲೆ ಆ ಹೂವಿಗಾಗಿ ಅಲೆದು, ಅದು ಸಿಕ್ಕಿ, ಮತ್ತೆ ಮರುಪಯಣ ಬೆಳೆಸಿ ನೀರಿಂದೆದ್ದು ಅವಳ ಮುಂದೆ ಅವನು ಹೂ ಹಿಡಿದರೆ ಅವಳು ಮುದುಕಿ. ಬೆಚ್ಚಿ ತನ್ನ ಮೈ ನೋಡಿಕೊಂಡರೆ ತೋಳಲ್ಲಿ ನಿರಿಗೆ, ಮೈಯೆಲ್ಲಾ ಸುಕ್ಕು. ಹೂ ಕೇಳಿದವಳು ಅವಳಲ್ಲ ಅಂತ ಇವನಿಗೂ, ಹೂ ತರಹೋದವನು ಇವನಲ್ಲ ಅಂತ ಅವಳಿಗೂ ಅನಿಸಿ ಮತ್ತೆ ಹೂ ಕೊಯ್ಯುವ ಆಟ ಪ್ರಾರಂಭಿಸುತ್ತಾರೆ ಅವರು. ನಮ್ಮ ದಾಂಪತ್ಯವೆಂಬ ಪಠ್ಯದ ಅನುಪಮ ಅಸಮಾಧಾನಕ್ಕೆ ಇದಕ್ಕಿಂತ ಸೊಗಸಾದ ರೂಪಕ ಇನ್ನೊಂದಿರಲಾರದೇನೋ?

ಅದೇ ಥರ ಇನ್ನೊಂದು ಕತೆ. ಒಂದು ರೈಲ್ವೇ ಸ್ಟೇಷನ್‌ನಲ್ಲಿ ಕಾಯುತ್ತಾ ಕುಳಿತಿದ್ದಾಗ ರೈಲಿನಲ್ಲಿರುವ ಒಬ್ಬ ವಯಸ್ಸಾದ ಹೆಂಗಸು ಅವನಿಗೆ ಕಾಣಿಸುತ್ತಾಳೆ. ಅವಳ ಮುಖದ ಮೇಲೆ ಬಿಸಿಲು ಬಿದ್ದು ಅವಳು ತನ್ನ ತಾಯಿಯಂತೆ ಅವನಿಗೆ ತೋರಿಬಿಡುತ್ತಾಳೆ. ಅವನು ಸಂಭ್ರಮಗೊಂಡು ರೈಲು ಏರುತ್ತಾನೆ. ಅಲ್ಲಿರುವ ನೂರಾರು ಮಂದಿಯ ಮಧ್ಯೆ ಆ ತಾಯಿಯಂತೆ ಕಂಡವಳಿಗಾಗಿ ಹುಡುಕಾಡುತ್ತಾನೆ, ಆದರೆ ಸಿಗುವುದೇ ಇಲ್ಲ. ಯಾವ ಮುಖದ ಮೇಲೆ ಯಾವಾಗ ಅದೇ ಪ್ರಮಾಣದ ಬಿಸಿಲು ಬೀಳುತ್ತದೋ, ಅವನು ನೋಡಿದಾಗ ಸುರಿಸಿದ ಮುಖಭಾವವೇ ಅವಳಲ್ಯಾವಾಗ ಪುಟಿಯುತ್ತದೋ ಆಗಷ್ಟೇ ಅವನಿಗೆ ಆ ತಾಯಿ ಸಿಗುವುದಕ್ಕೆ ಸಾಧ್ಯ. ನಾವು ಕಲ್ಪಿಸಿಕೊಂಡದ್ದೇನು, ಕಾಡಿದ್ದೇನು, ಬೇಡಿದ್ದೇನು, ಕಟ್ಟಕಡೆಗೆ ಪಡೆದಿದ್ದೇನು ಎನ್ನುವುದನ್ನ ಈ ಬಯಸಿದ ಕತೆ ಮತ್ತು ದೊರೆಯದ ಕತೆ ಹೇಳುತ್ತದೆ.

ಜೋಗಿ ಅವರ ಅಂಕಣ ಸಂಕಲನಗಳ ಇನ್ನೊಂದು ವಿಶೇಷತೆ, ಅವರ ಭಾಷೆ. ಏನೂ ವಿಶೇಷದ್ದಲ್ಲ ಎನ್ನುವಂಥ ಘಟನೆಯನ್ನೋ, ಹೇಳಿಕೆಯನ್ನೋ, ಕತೆಯನ್ನೋ ಹೇಳುತ್ತಾ ಅಕ್ಷರಪಯಣ ಶುರುಮಾಡುವ ಅವರು ಅದನ್ನು ಮುಗಿಸುವಾಗ ಇನ್ನೇನೋ ಆದ ಮಹತ್ವದ ಬದಲಾವಣೆ ಅವರ ಬರಹದೊಳಗೂ, ಓದುಗರಾದ ನಮ್ಮೊಳಗೂ ಆಗಿರುತ್ತದೆ. ಅದು ಬರೆಯುತ್ತಾ ಅವರಿಗೂ, ಓದುತ್ತಾ ನಮಗೂ ಏಕಕಾಲಕ್ಕೆ ಜ್ಞಾನೋದಯ, ದರ್ಶನ.

ಇಲ್ಲಿರುವ ಎಲ್ಲ ಅಂಕಣಗಳ ಮೊತ್ತಮೊದಲ ಓದುಗ ನಾನೆಂಬ ಹೆಮ್ಮೆಯೊಂದಿಗೆ, ಇಷ್ಟದ ಲೇಖಕನನ್ನು ನೀವು ಸಮೀಪಿಸಿದಷ್ಟೂ ಬಹಳ ಪ್ರಿಡಿಕ್ಟಿಬಲ್ ಹಾಗೂ ಬೋರಿಂಗ್ ಅನಿಸುತ್ತಾನೆಂದು ಕೇಳಿ ನಂಬಿ, ಅನುಭವಿಸಿ ನೊಂದಮೇಲೆ ಜೋಗಿ ಹಾಗಲ್ಲ ಎಂಬ ಅರಿವು ಮೂಡಿದ ಸಮಾಧಾನದೊಂದಿಗೆ, ಅವರು ಎದುರಾಗುವಾಗ ಹೊತ್ತು ತರುವ ನಗು ಮತ್ತು ಜೀವಪ್ರೀತಿಯನ್ನು ನಮಗೂ ಹಂಚಿದರಲ್ಲಾ ಅನ್ನುವ ಸಾರ್ಥಕತೆಯೊಂದಿಗೆ ಈ ಮಾತುಗಳು.
ಅವರ ಈ ಎಲ್ಲಾ ಕತೆಗಳು ಇದೀಗ ನಿಮ್ಮದು.

-ವಿಕಾಸ ನೇಗಿಲೋಣಿ


Wednesday, April 8, 2015

ಮಲಯಾಳಂನ ಶ್ರೇಷ್ಠ ಕಥೆಗಳು - ಅನುವಾದಕರು: ಗಂಗಾಧರನ್ ಕೆ ಕೆ

Malayalamna Shreshta Kathegalu - K K Gangatharan 



ಸಣ್ಣ ಕಥೆಗಳೇ ಹಾಗೆ ಯಾವುದೇ ಒಂದು ವಿಷಯವನ್ನು ಬೇಸರಪದಡಿಸದೆ ನಮಗೆ ಒಳ್ಳೆ ಪಾಠವನ್ನು ಕಲಿಸುತ್ತವೆ. ಕನ್ನಡದಲ್ಲಿ ಮಾಸ್ತಿ ಬರೆದ ಸಣ್ಣ ಕಥೆಗಳು, ಚಿತ್ತಾಲರು ಕಲಿಸಿದ ವಿಷಯಗಳನ್ನು ಈಗಿನ ಯಾವ ಕಾದಂಬರಿಕಾರನು ಕಲಿಸಲಾರ. ಅದೇ ರೀತಿ ನಮ್ಮ ಬಯಲು ಸೀಮೆ ಕತೆಗಳಲ್ಲಿ ಬರುವ ಸಮಾಜ ಮತ್ತು ಜನಗಳ ಕೆಲಸ ಸಂಸ್ಕೃತಿ ಒಂದು ರೀತಿಯಲ್ಲಿ ಒಂದೇ ಆಗಿರುತ್ತಾವೆ, ಬರವಣಿಗೆ ಮತ್ತು ವಿಶ್ಲೇಷಣೆ ಬೇರೆ ಯಾದರು ಸ್ಥಳ ಮತ್ತು ಸಂಸ್ಕೃತಿ ಒಂದೇ ಆಗಿರುತ್ತವೆ. ಕನ್ನಡದ ಕತೆಗಳಲ್ಲಿ ರೊಟ್ಟಿ, ಚಟ್ನಿ, ಅನ್ನ ವಸ್ತುವಾಗಿ ಬಂದರೆ ಉತ್ತರ ಭಾರತದ ಕತೆಗಳಲ್ಲಿ ಸಮೋಸ, ಪರಾಟ ಇದ್ದರ ಕೇರಳದಲ್ಲಿ ಬಿರ್ಯಾನಿ, ಮೀನು ಕತೆಗಳ ಒಂದು ಅಗವಾಗಿ ಬಿಡುತ್ತವೆ. 

'ಗಂಗಾಧರನ್' ರವರು ಮಲಯಾಳಂನ ಕೆಲವು ಕಥೆಗಳನ್ನು ವಿವಿಧ ಲೇಖಕರಿಂದ ಆಯ್ದು  ಅನುವಾದಿಸಿ ಪುಸ್ತಕವಾಗಿ ಪ್ರಕಟಿಸಿದ್ದಾರೆ. "ಮಲಯಾಳಂನ ಶ್ರೇಷ್ಠ ಕಥೆಗಳು" ಪುಸ್ತಕದಲ್ಲಿ ಒಟ್ಟು ೨೫ ಕಥೆಗಳಿವೆ. ಇಲ್ಲಿ ಎಲ್ಲ ೨೫ ಕಥೆಗಳು ಶ್ರೇಷ್ಠ ಅಲ್ಲದಿದ್ದರೂ ಬಹುತೇಕ ಕಥೆಗಳು ತುಂಬ ಚೆನ್ನಾಗಿವೆ. ಇಲ್ಲಿ "ಬಂಗಾರಿ" ಕತೆಯಲ್ಲಿ ಬರುವ ಪಾತ್ರಗಳನ್ನು ವಿವರಿಸುವ ರೀತಿ ಮತ್ತು ಅದರ ಸುತ್ತ ಕಥೆ ಕಟ್ಟಿರುವ ರೀತಿ ತುಂಬ ಚೆನ್ನಾಗಿದೆ. ಬಂಗಾರಿ ಕಥೆ ಶುರುವಾಗುವುದು "ಕವಿಗಳೆಲ್ಲಾ ಸುತ್ತುವರಿದು ಮುಕ್ತ ಮನಸ್ಸಿನಿಂದ ಹೊಗಳುವಂತಹ ಸೌಂದರ್ಯ ಸಂಪತ್ತು, ಅಂಗಸೌಷ್ಟವಗಳು ಸಮ್ಮಿಲನಗೊಂಡ ಆಕರ್ಷಕ ವ್ಯಕ್ತಿತ್ವ ನನ್ನ ಬಂಗಾರಿಯದು ಎಂದೇನಾದರೂ ನೀವು ನಂಬಿದರೆ ಅದೊಂದು ದೊಡ್ಡ ತಪ್ಪಾದೀತು. ಸೌಂದರ್ಯೋಪಾಸಕರಾಗಿರುವ ನಮ್ಮ ಕವಿಪುಂಗವರಾರು ಬಂಗಾರಿಯನ್ನು ಕಂಡಿರಲು ಸಾಧ್ಯವಿಲ್ಲ"

ಅದೇ ರೀತಿ "ತಪ್ಪು ಯಾರದು" ಕತೆಯಲ್ಲಿ ಅನಿರೀಕ್ಷಿತ ರಜೆ ಸಿಕ್ಕಾಗ ಮಧ್ಯನವೇ ಮನೆಗೆ ಹೋದಾಗ ಮಗುವಿನ ಅಸಾಯಕ ಮತ್ತು ಕರುಣಾಜನಕ ದೃಶ್ಯ, ಗೋಡೆ ಕತೆಯಲ್ಲಿ ಬರುವ ಅಂತಸ್ತಿನ ವಿಚಾರ ಗಾಳದಲ್ಲಿ ಸ್ನೇಹಿತನಿಗೆ ಮೋಸ ಮಾಡುವ ಚಡ್ಡಿ ದೋಸ್ತು, .......... ಹೀಗೆ ಒಂದೊಂದು ಕತೆ ಒಂದೊಂದು ರೀತಿ ನಮನ್ನು ಒಂದು ಸಂಸ್ಕೃತಿಗೆ ಮತ್ತು ಒಂದು ಜನಾಂಗಕ್ಕೆ ಬಾಗಿಲನ್ನು ತೆರೆಸುತ್ತದೆ.

ಈ ಪುಸ್ತಕ ಇಲ್ಲಿ ಕೊಳ್ಳಬಹುದು