Secret Dairy - Jogi ( Girish Rao )
ಪುಸ್ತಕದ ಮುನ್ನುಡಿಯಿಂದ
ನಾವು ಹೇಳಲಾರದ ತಾಳಲಾರದ ಕತೆಗಳನ್ನು ಜೋಗಿ ಹೇಳತೊಡಗಿ...
ಈ ಮಹಾನಗರದ ಮಹಾಸಾಗರದ ಮಧ್ಯೆ ಅವರಿಬ್ಬರೂ ಭೇಟಿಯಾಗುತ್ತಾರೆ.
ಬಹುಶಃ ಹೆಣ್ಣು ಮತ್ತು ಗಂಡು.
ಅವರಿಬ್ಬರೂ ಅಚಾನಕ್ ಸಂಧಿಸಿ, ಪ್ರೇಮದಲಿ ಕನವರಿಸಿ ಇಬ್ಬರೂ ಒಂದು ಸೂರಿನಡಿ ಸೇರುವ ತೀರ್ಮಾನಕ್ಕೆ ಬರುತ್ತಾರೆ. ಯಾವುದೋ ವಾಹನವನ್ನೇರಿ, ಅವಳಿರುವ ಅಪಾರ್ಟ್‌ಮೆಂಟ್‌ಗೆ ಇಬ್ಬರೂ ಬರುತ್ತಾರೆ.
ಸಮಾಗಮವಾಗುತ್ತದೆ.
ಎಚ್ಚರವಾದಾಗ ಕಾಫಿ ಕುಡಿಯಬೇಕೆಂದು ತುಂಬ ಅನ್ನಿಸಿ, ಅವನು ಹಾಲು ತರುತ್ತೇನೆಂದು ಹೊರಡುತ್ತಾನೆ.
ಕೆಳಗೆ ಬಂದು ಹಾಲು ತೆಗೆದುಕೊಂಡು ವಾಪಾಸ್ ಹೊರಡಬೇಕು ಅಂದಾಗ ಅವನು ಒಂದು ಕ್ಷಣ ಬೆಚ್ಚಿ ನಿಲ್ಲುತ್ತಾನೆ.
ಅವನು ಅವಳ ಹೆಸರು ಕೇಳಲಿಲ್ಲ, ಅವರಿರುವ ಅಪಾರ್ಟ್‌ಮೆಂಟ್ ಹೆಸರು ಗೊತ್ತಿರಬಹುದಾದರೂ ಯಾವ ಫ್ಲೋರ್ ಅಂತ ಗೊತ್ತಿಲ್ಲ, ವಿಚಾರಿಸುವುದಕ್ಕೆ ವಿಳಾಸವಿಲ್ಲ, ಸಂಪರ್ಕಿಸುವುದಕ್ಕೆ ನಂಬರ್ ಇಲ್ಲ.
ಹೀಗೆ ಈ ಕಡೆ ಹಾಲು ಹಿಡಿದುಕೊಂಡು ನಿಂತ ಅವನು, ಆ ಕಡೆ ಕಾಫಿಗಾಗಿ ಹಾಲು ತರಲಿರುವ ಇವನಿಗಾಗಿ ಕಾದು ಕುಳಿತ ಅವಳು..
-ಮಹಾನಗರದ ಕತೆಗಳು ಅಂತೇನೋ ಕಥಾಮಾಲಿಕೆ ಬರೆಯಲು ಹೊರಟಿದ್ದ ಜೋಗಿ, ಅದರಲ್ಲೊಂದು ಕತೆ ಅಂತ ಇದನ್ನು ಒಮ್ಮೆ ಹೇಳಿದ್ದರು. ನಮ್ಮ ಮಹಾನಗರದ ಬದುಕಿನ ವಿಚಿತ್ರ ಅಪರಿಚಿತತೆಯನ್ನು ಸಣ್ಣಗೆ, ತಣ್ಣಗೆ, ಶಾಕ್ ಆಗುವಂತೆ ಕಟ್ಟಿಕೊಟ್ಟ ಕತೆ ಅದು. ಅವರ ಒಡನಾಟದಲ್ಲಿ ಕೇಳಿದ ಅದೆಷ್ಟೋ ಕತೆಗಳಲ್ಲಿ ಇದೂ ಒಂದಷ್ಟೇ. ಅವರ ಅಂಕಣ ಬರಹಗಳೂ ಇಂಥದೇ ಬರೆಯದ, ಬರೆದುಬಿಟ್ಟರೆ ಬಹುಶಃ ಅದು ಕತೆ ಅಂತಲೇ ಅನಿಸದ ಆದರೆ ಕಥನಕ್ಕಿರುವ ತೀವ್ರತೆಯ ಗುಣವನ್ನೊಳಗೊಂಡ ಬರಹಗಳ ಸಂಕಲನ, ಸಂಕಥನ.
ನಿಕಟ ಎಂದು ಧೈರ್ಯವಾಗಿ ಕರೆಯಬಹುದಾದ ಅವರ ಒಂದು ಒಡನಾಟ ಈಚೆಗೆ ಮೂರು ವರ್ಷಗಳಿಂದ ನನಗೆ ಸಿಕ್ಕಿದೆ. ಆವರೆಗೆ ಅವರನ್ನು ಅeತ ಓದುಗನಾಗಿ ನೋಡಿನೋಡಿ, ಅವರನ್ನು ಭೇಟಿಯಾದಾಗ ಕೊಂಚ ಭಯಭಕ್ತಿ, ಮುಕ್ತವಾಗಿ ಮಾತಾಡುವುದಕ್ಕೆ ಹಿಂಜರಿಕೆಗಳೆಲ್ಲಾ ಇದ್ದವಾದರೂ ನಿಧಾನವಾಗಿ ಅದನ್ನೆಲ್ಲಾ ಕಳೆಯುತ್ತಾ ಹೋಗಿದ್ದು ಜೋಗಿ ಅವರೊಳಗೆ ಇರುವ ಒಬ್ಬ ಅಪ್ರತಿಮ ಕತೆಗಾರನಿಂದಾಗಿ. 'ಇವರಿಗೇ ಸಿಗೋದು ಹೇಳಿ', 'ಕತೆ ಕಟ್ಟಿ ಹೇಳುತ್ತಿರಬಹುದಾ' ಅಂತೆಲ್ಲಾ ಅಂದುಕೊಳ್ಳುತ್ತಾ, ಅವರು ಭೇಟಿಯಾಗುವ ಸ್ವಾರಸ್ಯಗಳಲ್ಲಿ ಕೆಲವನ್ನು ನಾವೇ ಕಣ್ಣಾರೆ ಕಂಡಮೇಲೆ ಒಪ್ಪಿಕೊಳ್ಳಲೇಬೇಕಾಯಿತು. ಆ ಘಟನೆಗಳನ್ನು ಅವರು ಸ್ವಾರಸ್ಯಕರವಾಗಿ ನಿರೂಪಿಸುವ ರೀತಿ, ಅವರ ಜೀವನಪ್ರೀತಿಗಳಂತೆ ಜೋಗಿ ಅವರ ಸಂಕಲನಗಳೂ ಪುಟಪುಟಕ್ಕೂ ನವನವೀನ, ಹೆಚ್ಚು ಹಾರ್ದಿಕ.
ಅಷ್ಟಕ್ಕೂ ಅಂಕಣಬರಹ ಎಂದರೇನು? ಚಿಕ್ಕಂದಿನಿಂದ ನಾವು ನೋಡುತ್ತಾ , ಓದುತ್ತಾ ಬಂದ ಅಂಕಣಗಳೆಲ್ಲಾ ಕತೆಯಾಗದ, ಕವಿತೆಯಾಗದ, ಲೇಖನವಾಗದ, ನುಡಿಚಿತ್ರವಾಗದ, ಆತ್ಮಚರಿತೆಯಾಗದ ಒಂದು ವಿಚಿತ್ರ ಬರಹ ಪ್ರಕಾರ. ನಮ್ಮ ಓದಿನ ಪ್ರಾರಂಭದ ದಿನಗಳಲ್ಲಂತೂ ಇಂಥ ಅಂಕಣಗಳೆಲ್ಲಾ ನಿರ್ಗುಣ, ನಿರಾಕಾರವಾಗಿ ಕಾಣುತ್ತಿದ್ದಾಗ ಅದಕ್ಕೊಂದು ಶಬ್ದ, ರುಚಿ, ವಾಸನೆಗಳನ್ನು ಕೊಡಲಾರಂಭಿಸಿದ್ದೇ ಆಮೇಲಾಮೇಲೆ ಬರೆಯತೊಡಗಿದ ಜಯಂತ್ ಕಾಯ್ಕಿಣಿ ಮೊದಲಾದವರು. ಆ ಮಧ್ಯೆ 'ಜಾನಕಿ' ಎಂಬ ಗುಪ್ತನಾಮದಲ್ಲಿ ಜೋಗಿ ಬರೆದ ಅಂಕಣಗಳೆಲ್ಲಾ ಅಂಕಣದ ವ್ಯಾಖ್ಯೆ, ವ್ಯಾಪ್ತಿಗಳನ್ನು ಹಿಗ್ಗಿಸಿದವು. ಯಾವುದೋ ಫಿನಾಯಿಲ್ ವಾಸನೆಯ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ ಹುಡುಗಿಗೆ ಮಲ್ಲಿಗೆ ತಂದುಕೊಡುವವನೊಬ್ಬನ ಕತೆಯನ್ನು ಅದೇ ಜಾನಕಿಯಾಗಿ ಜೋಗಿ ಬರೆದಿದ್ದ ಶೀರ್ಷಿಕೆ ನೆನಪಿಲ್ಲದ ಅಂಕಣ ಇವತ್ತಿಗೂ ಶತಮಾನದ ಅತ್ಯುತ್ತಮ ಸಣ್ಣಕತೆಯಂತೆ ನೆನಪಲ್ಲುಳಿದಿದೆ. ಅಡೂರರ 'ನಿಳಲ್‌ಕುತ್ತು' ಸಿನಿಮಾ ಇವತ್ತಿಗೂ ನೋಡಿಲ್ಲವಾದರೂ ಜೋಗಿಯದೇ ಕತೆಯೇನೋ ಅನ್ನುವಷ್ಟು ಆ ಸಿನಿಮಾವನ್ನಿಟ್ಟುಕೊಂಡು ಬರೆದ ಅಂಕಣ ನಮ್ಮೊಳಗೆ ಅಜರಾಮರವಾಗಿದೆ. ಕಿರಿಯ ರಾಣಿಯಾಗಿ ಅಂತಃಪುರಕ್ಕೆ ಅಡಿಯಿಟ್ಟವಳಿಗಿದ್ದ ಆಸ್ಥಾನದ ಕಾವಲುಗಾರನೊಡನೆಯ ಪ್ರೇಮಸಲ್ಲಾಪದ ಕತೆ ಹಾಗೇ ಉಳಿದಿದೆ. ಅವರ ಆ ಅಂಕಣ ಬರಹಗಳೆಲ್ಲಾ ಕತೆಯ ರೂಪದಲ್ಲಿ ನಮ್ಮೊಳಗೆ ಇಳಿದದ್ದಕ್ಕೇ ಏನೋ, ಅದು ನಮ್ಮೊಳಗೇ ಶಾಶ್ವತ ಉಳಿದಿರುವುದು. ಆ ಮಟ್ಟಿಗೆ ಅವರ ಅಂಕಣಗಳೆಲ್ಲಾ ಒಂದೊಂದೂ ಕತೆಗಳೇ, ಅಂಕಣ ಬರಹ ಸಂಕಲನಗಳೂ ಕಥಾ ಸಂಕಲನಗಳೇ.
ಇಂಥ ಹೊತ್ತಿಗೆ ಅವರು ಉದಯವಾಣಿಗಾಗಿ ವಾರವಾರ ಬರೆದ ಎರಡು ಥರದ ಅಂಕಣಗಳ ಸಂಕಲನ ಇಲ್ಲಿದೆ. ಒಂದು, ನಮಗೆಲ್ಲಾ ಸದಾ ಅಚ್ಚರಿ, ಕುತೂಹಲ, ಬೆರಗನ್ನು ಜೀವಂತವಾಗಿಟ್ಟ ಗೂಢಚಾರ ವೃತ್ತಿಯ ಬಗೆಗಿನದ್ದು. ಇನ್ನೊಂದು ನಿತ್ಯ ಬದುಕಿನ ಸಂಭ್ರಮ, ಸಂಕಟಗಳ ಬಗೆಯದು. ಅವರೂರಿನ ಕಡೆ ಗೂಢಚರ ವೃತ್ತಿ ಮಾಡುತ್ತಿದ್ದವರ ಸಂಪಾದನೆ, ಆ ವೃತ್ತಿ ಕ್ರಮೇಣ ಮಾಸುತ್ತಿದ್ದ ಹಾಗೇ ಆ ವೃತ್ತಿಯೊಂದಿಗರು ನಿರುದ್ಯೋಗ ಮತ್ತು ನಿರುಪಾಯತೆಗೆ ಸಂದದ್ದನ್ನು ಇತಿಹಾಸ, ಜಾಗತಿಕ ಯುದ್ಧ, ಸಿನಿಮಾಗಳ ವಿವರಗಳೊಂದಿಗೆ ಕಟ್ಟಿಕೊಟ್ಟ ವಿಶಿಷ್ಟ ವಿಭಾಗ-ಸೀಕ್ರೆಟ್ ಡೈರೀಸ್.
ಜೋಗಿ ಅವರ ಕತೆಗಾರಿಕೆ, ಒಂದು ಕತೆಯನ್ನು ನಮ್ಮ ಬದುಕಿನ ಸಂದಿಗ್ಧಗಳ ಜೊತೆ ಸಂತುಲಿತಗೊಳಿಸುವ ಕಲೆಗಾರಿಕೆಯೇ ಅವರ್ಣನೀಯ. ಮಾಯಾಕನ್ನಡಿ ಅನ್ನುವ ಅಂಕಣ ಬರಹ ವಿಭಾಗದಲ್ಲಿ ಅಂಥ ಸಾಕಷ್ಟು ಕತೆಗಳು ಎದುರಾಗುತ್ತವೆ. ಅದರಲ್ಲೊಂದು ಬಂಗಾರಬಣ್ಣದ ಹೂವನ್ನು ತಂದುಕೊಡು ಅಂತ ಪ್ರಿಯತಮೆ ಪ್ರಿಯಕರನನ್ನು ಕೇಳುತ್ತಾಳೆ. ಅವನು ಇದೋ ತಂದೆ ಅಂತ ನೀರಿಗೆ ಜಿಗಿಯುತ್ತಾನೆ. ವರ್ಷಾನುಗಟ್ಟಲೆ ಆ ಹೂವಿಗಾಗಿ ಅಲೆದು, ಅದು ಸಿಕ್ಕಿ, ಮತ್ತೆ ಮರುಪಯಣ ಬೆಳೆಸಿ ನೀರಿಂದೆದ್ದು ಅವಳ ಮುಂದೆ ಅವನು ಹೂ ಹಿಡಿದರೆ ಅವಳು ಮುದುಕಿ. ಬೆಚ್ಚಿ ತನ್ನ ಮೈ ನೋಡಿಕೊಂಡರೆ ತೋಳಲ್ಲಿ ನಿರಿಗೆ, ಮೈಯೆಲ್ಲಾ ಸುಕ್ಕು. ಹೂ ಕೇಳಿದವಳು ಅವಳಲ್ಲ ಅಂತ ಇವನಿಗೂ, ಹೂ ತರಹೋದವನು ಇವನಲ್ಲ ಅಂತ ಅವಳಿಗೂ ಅನಿಸಿ ಮತ್ತೆ ಹೂ ಕೊಯ್ಯುವ ಆಟ ಪ್ರಾರಂಭಿಸುತ್ತಾರೆ ಅವರು. ನಮ್ಮ ದಾಂಪತ್ಯವೆಂಬ ಪಠ್ಯದ ಅನುಪಮ ಅಸಮಾಧಾನಕ್ಕೆ ಇದಕ್ಕಿಂತ ಸೊಗಸಾದ ರೂಪಕ ಇನ್ನೊಂದಿರಲಾರದೇನೋ?
ಅದೇ ಥರ ಇನ್ನೊಂದು ಕತೆ. ಒಂದು ರೈಲ್ವೇ ಸ್ಟೇಷನ್‌ನಲ್ಲಿ ಕಾಯುತ್ತಾ ಕುಳಿತಿದ್ದಾಗ ರೈಲಿನಲ್ಲಿರುವ ಒಬ್ಬ ವಯಸ್ಸಾದ ಹೆಂಗಸು ಅವನಿಗೆ ಕಾಣಿಸುತ್ತಾಳೆ. ಅವಳ ಮುಖದ ಮೇಲೆ ಬಿಸಿಲು ಬಿದ್ದು ಅವಳು ತನ್ನ ತಾಯಿಯಂತೆ ಅವನಿಗೆ ತೋರಿಬಿಡುತ್ತಾಳೆ. ಅವನು ಸಂಭ್ರಮಗೊಂಡು ರೈಲು ಏರುತ್ತಾನೆ. ಅಲ್ಲಿರುವ ನೂರಾರು ಮಂದಿಯ ಮಧ್ಯೆ ಆ ತಾಯಿಯಂತೆ ಕಂಡವಳಿಗಾಗಿ ಹುಡುಕಾಡುತ್ತಾನೆ, ಆದರೆ ಸಿಗುವುದೇ ಇಲ್ಲ. ಯಾವ ಮುಖದ ಮೇಲೆ ಯಾವಾಗ ಅದೇ ಪ್ರಮಾಣದ ಬಿಸಿಲು ಬೀಳುತ್ತದೋ, ಅವನು ನೋಡಿದಾಗ ಸುರಿಸಿದ ಮುಖಭಾವವೇ ಅವಳಲ್ಯಾವಾಗ ಪುಟಿಯುತ್ತದೋ ಆಗಷ್ಟೇ ಅವನಿಗೆ ಆ ತಾಯಿ ಸಿಗುವುದಕ್ಕೆ ಸಾಧ್ಯ. ನಾವು ಕಲ್ಪಿಸಿಕೊಂಡದ್ದೇನು, ಕಾಡಿದ್ದೇನು, ಬೇಡಿದ್ದೇನು, ಕಟ್ಟಕಡೆಗೆ ಪಡೆದಿದ್ದೇನು ಎನ್ನುವುದನ್ನ ಈ ಬಯಸಿದ ಕತೆ ಮತ್ತು ದೊರೆಯದ ಕತೆ ಹೇಳುತ್ತದೆ.
ಜೋಗಿ ಅವರ ಅಂಕಣ ಸಂಕಲನಗಳ ಇನ್ನೊಂದು ವಿಶೇಷತೆ, ಅವರ ಭಾಷೆ. ಏನೂ ವಿಶೇಷದ್ದಲ್ಲ ಎನ್ನುವಂಥ ಘಟನೆಯನ್ನೋ, ಹೇಳಿಕೆಯನ್ನೋ, ಕತೆಯನ್ನೋ ಹೇಳುತ್ತಾ ಅಕ್ಷರಪಯಣ ಶುರುಮಾಡುವ ಅವರು ಅದನ್ನು ಮುಗಿಸುವಾಗ ಇನ್ನೇನೋ ಆದ ಮಹತ್ವದ ಬದಲಾವಣೆ ಅವರ ಬರಹದೊಳಗೂ, ಓದುಗರಾದ ನಮ್ಮೊಳಗೂ ಆಗಿರುತ್ತದೆ. ಅದು ಬರೆಯುತ್ತಾ ಅವರಿಗೂ, ಓದುತ್ತಾ ನಮಗೂ ಏಕಕಾಲಕ್ಕೆ ಜ್ಞಾನೋದಯ, ದರ್ಶನ.
ಇಲ್ಲಿರುವ ಎಲ್ಲ ಅಂಕಣಗಳ ಮೊತ್ತಮೊದಲ ಓದುಗ ನಾನೆಂಬ ಹೆಮ್ಮೆಯೊಂದಿಗೆ, ಇಷ್ಟದ ಲೇಖಕನನ್ನು ನೀವು ಸಮೀಪಿಸಿದಷ್ಟೂ ಬಹಳ ಪ್ರಿಡಿಕ್ಟಿಬಲ್ ಹಾಗೂ ಬೋರಿಂಗ್ ಅನಿಸುತ್ತಾನೆಂದು ಕೇಳಿ ನಂಬಿ, ಅನುಭವಿಸಿ ನೊಂದಮೇಲೆ ಜೋಗಿ ಹಾಗಲ್ಲ ಎಂಬ ಅರಿವು ಮೂಡಿದ ಸಮಾಧಾನದೊಂದಿಗೆ, ಅವರು ಎದುರಾಗುವಾಗ ಹೊತ್ತು ತರುವ ನಗು ಮತ್ತು ಜೀವಪ್ರೀತಿಯನ್ನು ನಮಗೂ ಹಂಚಿದರಲ್ಲಾ ಅನ್ನುವ ಸಾರ್ಥಕತೆಯೊಂದಿಗೆ ಈ ಮಾತುಗಳು.
ಅವರ ಈ ಎಲ್ಲಾ ಕತೆಗಳು ಇದೀಗ ನಿಮ್ಮದು.
-ವಿಕಾಸ ನೇಗಿಲೋಣಿ