Tuesday, April 14, 2015

ಹಾರಿಕೊಂಡು ಹೋದವನು - ದಿವಾಕರ್ ಎಸ್

Haarikondu Hodavanu - Divakar s



ಕಥಾ ಜಗತ್ತು (ನೊಬೆಲ್ ಪ್ರಶಸ್ತಿ ವಿಜೇತ ಲೇಖಕರು ಬರೆದ 50 ಕತೆಗಳ ಅನುವಾದ), ಜಗತ್ತಿನ ಅತಿ ಸಣ್ಣ ಕತೆಗಳು, ಉತ್ತರ ದಕ್ಷಿಣ ದಿಕ್ಕುಗಳನ್ನು ಬಲ್ಲವನು (ವಿವಿಧ ದೇಶಗಳ ಕತೆಗಳು) ನಂತರ ಇದೀಗ ಎಸ್ ದಿವಾಕರ್ 'ಹಾರಿಕೊಂಡು ಹೋದವನು'ವಿನಲ್ಲಿರುವ ಕತೆಗಳನ್ನು ಕನ್ನಡಕ್ಕೆ ತಂದಿದ್ದಾರೆ. 

ಇಷ್ಟಕ್ಕೂ ಪರದೇಶದ ಕತೆಗಳನ್ನು ನಾವೇಕೆ ಓದುತ್ತೇವೆ? ನಮ್ಮದು ಮತ್ತು ಹೊರಗಿನ ಕತೆಗಳನ್ನು ಓದುವಾಗ ನಮ್ಮ ಮನಸ್ಸು ಹೇಗೆ ಸ್ಪಂದಿಸುತ್ತದೆ? ಇಂತಹ ಕವಲು ನಿಜಕ್ಕೂ ಹಾಗೆಯೇ ಉಳಿಯುತ್ತಾ? ಮಸುಕಾಗುತ್ತಾ?ಎಲ್ಲ ಕತೆಗಳಲ್ಲೂ ಸಾಧಾರಣೀಕರಣ ಸಾಧ್ಯವಾಗುತ್ತಾ? ನಾವೇಕೆ ಇಂತಹ ಬರಹಗಳಿಗೆ ಹಾತೊರೆಯುತ್ತೇವೆ? ಮತ್ತೆ ಮತ್ತೆ ಜತೆಯಾಗುತ್ತೇವೆ? ತನ್ನ ಲಹರಿಗೆ ತಕ್ಕಂತೆ ಕತೆಯ ರಾಶಿಯಲ್ಲಿ ಹೆಕ್ಕಿ ಅದನ್ನು ನುಡಿ ಮಾರ‌್ಪುಗೊಳಿಸಿ ಕಳುಹಿಸುವ ಅನುವಾದಕ ಕತೆಗಾರನೂ ಆಗಿದ್ದಾಗ (ದಿವಾಕರ್ ಪ್ರತಿಭಾಶಾಲಿ ಕತೆಗಾರರೂ ಹೌದು) ಈ ಕತೆಗಳ ಮೂಲಕ ಹುಡುಕಾಟ ನಡೆಸುವುದು ಏನನ್ನು? ಆಯ್ಕೆ ಮಾಡಿಕೊಂಡ ಕತೆಗಳಲ್ಲಿ ಪದೇಪದೇ ಮರುಕಳಿಸುವ ಆಶಯ ಆಕಸ್ಮಿಕವಾಗಿರಲು ಸಾಧ್ಯವಿಲ್ಲವೇ? ಹೀಗೆಂದಾಗ ನಾವು ಬಿಡಿ ಬಿಡಿ ಕತೆಗಳನ್ನು ಓದುತ್ತಿರುತ್ತೇವೆಯೋ, ಅದನ್ನು ನಮ್ಮದೇ ಆದ ರೀತಿಯಲ್ಲಿ ಕಾದಂಬರಿ ಅಧ್ಯಾಯಗಳಂತೆ ಜೋಡಿಸಿಕೊಳ್ಳುತ್ತಿರುತ್ತೇವೆಯೋ? ಎನ್ನುವ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಜಾಣ್ಮೆ, ವರದಿ, ಸುಭಾಷಿತ, ಅಸಾಮಾನ್ಯ ಎಂಬ ಭ್ರಮೆ ಹುಟ್ಟಿಸಿ ಒಳಗನ್ನು ಕೊಂಚವೂ ತಟ್ಟದ ಹೇಳಿಕೆಗಳು, ಗುಟ್ಟುಗಳು, ಸಿಕ್ಕುಗಳು; ತಿಜೋರಿ ಒಳಗೆ ಏನೋ ಇದೆ ಎಂದೆನ್ನಿಸಿ ಅದರ ಕೀಲಿ ಕೊಡಲು ಸತಾಯಿಸುವ ಕತೆಗಳು, ಚಮತ್ಕಾರಗಳು, ತಾತ್ತ್ವಿಕ ಜಿಜ್ಞಾಸೆಗಳು, ಕಲಾ ವಿದ್ಯಾರ್ಥಿ ಪಾಲಿನ ಗಣಿತದ ಲೆಕ್ಕಗಳು, ಕಣ್ಕಟ್ಟುಗಳು, ಅಟಮಟಗಳು, ದಿಗ್ಭ್ರಮೆಗಳು, ಹೊಸ ಕಾಣ್ಕೆಗಳು, ನಿಟ್ಟುಸಿರು, ಮೌನ, ದಣಿವು- ಹೀಗೆ ಈ ಕತೆಗಳ ಕಟ್ಟು ನಮ್ಮನ್ನು ಕಾಡಿ ಕಂಗೆಡಿಸುತ್ತವೆ.

ಶ್ರೇಷ್ಠ ಬರಹ ಅನುಭವವನ್ನು ಹಲವು ಮಟ್ಟದಲ್ಲಿ ಆಗುವ ಕ್ರಿಯೆಯಾಗಿಸುತ್ತದೆ. ನಿಮ್ಮನ್ನು ನಂಬಿಸುತ್ತದೆ; ಒಪ್ಪಿಸುತ್ತದೆ. ಇದರಲ್ಲಿ ಕೊಂಚವೂ ಬಿರುಕು, ಬಿಂಕಗಳಿರುವುದಿಲ್ಲ. ಪರದೇಶದ ಕತೆಗಳು ಸಾಧಾರಣೀಕರಣವಾಗುವುದಕ್ಕೆ ಒಂದು ಉದಾಹರಣೆ ಗಮನಿಸೋಣ. ಜರ್ಮನಿಯ ಯೊಹಾನ್ ಪೀಟರ್ ಹೆಬೆಲ್ ಬರೆದ 'ವಿಚಿತ್ರ ಮನುಷ್ಯ' ಕತೆಯ ಮನುಷ್ಯ 75 ವರ್ಷ ಪ್ಯಾರಿಸ್ ಬಿಟ್ಟು ಎಲ್ಲೂ ಹೋಗಿರುವುದಿಲ್ಲ. ಹುಚ್ಚನೂ ಅಲ್ಲ ಬೆಪ್ಪನೂ ಅಲ್ಲ, ಕಾಲಿಲ್ಲದವನೂ ಅಲ್ಲ , ಹೊರಗಡೆ ಹೋಗಲು ದುಡ್ಡು ಕಾಸು, ಅವಕಾಶ ಇಲ್ಲದವನೂ ಅಲ್ಲ. ಸಂತೋಷ ಕಳೆದುಕೊಂಡವನೂ ಅಲ್ಲ. ಆ ವಿಚಿತ್ರ ವ್ಯಕ್ತಿಯನ್ನು ಕರೆಸಿಕೊಂಡ ರಾಜ, ಇನ್ನು ಮೇಲೆ ಅನುಮತಿ ಇಲ್ಲದೆ ಈ ಊರಿಂದಾಚೆ ಕಾಲಿಡಬೇಡ ಎಂದು ಆಜ್ಞೆ ಮಾಡುತ್ತಾನೆ. ನಾನೀರೋದೇ ಹೀಗೆ. ಹೀಗಾಗಿ ಕಾನೂನು ಬಂದೋಬಸ್ತ್ ಏನೂ ಮಾಡದು ಎಂಬ ನಮ್ಮ ನಿರೀಕ್ಷೆ ಬುಡಮೇಲಾಗುತ್ತದೆ. ಆಜ್ಞೆಯಾಗಿದ್ದೇ ತಡ 75 ವರ್ಷದ ವ್ಯಕ್ತಿಗೆ ಯಾತನೆ ಮೊದಲಾಗುತ್ತದೆ. ಊರಿಂದ ಹೊರಗೆ ಹೋಗುವವರೆಲ್ಲ ಭಾಗ್ಯವಂತರಂತೆ ಕಾಣುತ್ತಾರೆ. ಯಾವಾಗಲೂ ಖುಷಿಯಾಗಿದ್ದವನು ಅದನ್ನು ಕಳೆದುಕೊಳ್ಳುತ್ತಾನೆ. ರುಚಿಯಾಗಿರುವುದೆಲ್ಲ ರುಚಿ ಕಳೆದುಕೊಂಡಿದೆ ಎಂದೆನಿಸುತ್ತದೆ. 8-10 ತಿಂಗಳು ಕಳೆದ ಮೇಲೆ ಹೊರಗೆ ಹೋಗಲು ಅಂಗಲಾಚುತ್ತಾನೆ. ಎಲ್ಲರಿಗೂ ದಮ್ಮಯ್ಯಗುಡ್ಡೆ ಹಾಕುತ್ತಾನೆ. ವರ್ಷ ಕಳೆದ ಮೇಲೆ ಮನೆ ಮುಂದೆ ಸಾರೋಟು ಬಂದು ನಿಲ್ಲುತ್ತದೆ. 'ದೊರೆಯೇ ಅದನ್ನು ಕಳುಹಿಸಿ ಎಲ್ಲಿಗಾದರೂ ಹೋಗಿಬನ್ನಿ ಎಂದು ಹೇಳಿದ್ದಾರೆ' ಎಂದು ಹೆಂಡತಿ, ಹಳ್ಳಿಗಾಡಿಗೆ ಹೋಗೋಣ ಎನ್ನುತ್ತಾಳೆ. ಹೊರಗೆ ಹೋಗಲು ತಹತಹಿಸುತ್ತಿದ್ದ ಆ ಮನುಷ್ಯ ತಣ್ಣಗೆ 'ನಾಳೆಯಲ್ಲದಿದ್ದರೆ ನಾಡಿದ್ದು ಹೋದರಾಯಿತು. ಇಷ್ಟಕ್ಕೂ ಹಳ್ಳಿಗಾಡಿಗೆ ಹೋಗಿ ನಾವೇನು ಮಾಡಬೇಕಾಗಿದೆ? ನಮ್ಮ ಪ್ಯಾರೀಸೇ ಸೊಗಸಾಗಿದೆಯಲ್ಲ?' ಎಂದುಬಿಡುತ್ತಾನೆ.

ತನಗೆ ತಾನೇ ವಿಧಿಸಿಕೊಂಡ ನಿರ್ಬಂಧ ಸ್ವಾತಂತ್ರ್ಯದಂತೆ ಕಂಡರೆ ಬೇರೆಯವರು ವಿಧಿಸುವ ಕಟ್ಟುಪಾಡು ಸೆರೆಮನೆಯಂತೆ ಕಾಡತೊಡಗುತ್ತದೆ. ಕಾಲ-ದೇಶ ಬದ್ಧತೆಗಳನ್ನು ಮೀರಿ ಯಾರಿಗೇ ಆದರೂ ಆಗುವ ಅನುಭವವಿದು. ತನಗೆ ಬೇಕಾದಂತೆ ಇರುವ ಮನುಷ್ಯನ ಮೂಲಭೂತ ಪ್ರವೃತ್ತಿಯನ್ನು ಈ ಕತೆ ಅದ್ಭುತವಾಗಿ ಬಿಡಿಸಿಡುತ್ತದೆ. ಆಜ್ಞೆ-ಅಪ್ಪಣೆಗಳ ಪರಿಸರದಲ್ಲಿ ಉಂಟಾಗುವ ಮನಸ್ಸಿನ ಬಿಗಿತಗಳನ್ನು ಅನುಭವಿಸಿದವರಿಗೆ ಅಜ್ಜನ ಇಕ್ಕಟ್ಟು ಮತ್ತು ನಿರಾಳತೆಗಳು ತಮ್ಮನ್ನೇ ಕುರಿತು ಹೇಳಿದಂತೆ ಅನ್ನಿಸುತ್ತದೆ. ಇದೇಕೆ ಹೀಗೆ ಎಂಬ ಪ್ರಶ್ನೆ ಆಲೋಚನೆಯಅಲೆಗಳನ್ನು ಎಬ್ಬಿಸುತ್ತದೆ. ಮನುಷ್ಯ ತನಗೆ ತಾನೇ ಕಟ್ಟುಪಾಡುಗಳನ್ನು ಹಾಕಿಕೊಳ್ಳಬಹುದು. ಆದರೆ ಅದನ್ನು ಯಾವಾಗ ಬೇಕಾದರೂ ಮುರಿಯಬಹುದು ಎನ್ನುವ ಅವಕಾಶವೇ ಅಪರಿಮಿತ ಸ್ವಾತಂತ್ರ್ಯವನ್ನು ಆತನಿಗೆ ಕೊಟ್ಟಿರುತ್ತದೆ. ಸ್ವಾತಂತ್ರ್ಯ ಮತ್ತು ನಿರ್ಬಂಧದ ಅಧಿಕಾರ ಎಂಬುದು ಬೇರೆ ಬೇರೆಯವರಲ್ಲಿ ಹಂಚಿಹೋದಾಗ ಸಮಸ್ಯೆಗಳುಂಟಾಗುತ್ತದೆ. ಹೀಗೆ ಆಲೋಚನೆಗಳ ದಾರಿಗಳನ್ನು ಈ ಕತೆ ತೆರೆಸುತ್ತದೆ.

ಇಲ್ಲಿನ ಬಹುತೇಕ ಕತೆಗಳು ನಿರೂಪಣೆಯಲ್ಲಿ ಪ್ರಜ್ಞಾಪ್ರವಾಹ ತಂತ್ರವನ್ನು ಅನುಸರಿಸುತ್ತವೆ. ಒಂದು ಕ್ಷಣದ ಬೀಸಿನಲ್ಲಿ ಸಂಭವಿಸುತ್ತವೆ. ರಷ್ಯಾದ ಅರ್ಕಾದಿ ಅವೆರ್‌ಚೆಂಕೋ ಬರೆದ 'ಹಾರಿಕೊಂಡು ಹೋದವನು' ಕತೆಯನ್ನು ತಿಳಿಯೋಣ: ಒಂದು ದೊಡ್ಡ ಅಪಾರ್ಟ್‌ಮೆಂಟ್‌ನ ಆರನೇ ಮಹಡಿಯಲ್ಲಿ ಲಂಪಟತನದ ಆರೋಪ ಹೊರಿಸಿ ಯುವಕನೊಬ್ಬನನ್ನು ಓವರ್ ಕೋಟು ತೊಟ್ಟುಕೊಂಡು ಬಲಿಷ್ಠವಾಗಿದ್ದ ವ್ಯಕ್ತಿ, 'ಏನೂ ಮಾಡಿಲ್ಲವಾ? ಒಂದು ಕೊಡ್ತೀನಿ, ತಕ್ಕೋ ಖದೀಮ' ಎಂದು ಯುವಕನನ್ನು ಮೇಲಕ್ಕೆತ್ತಿ ಎಸೆಯುತ್ತಾನೆ. ಆರನೇ ಮಹಡಿಯಿಂದ ಕೆಳಹಂತಸ್ತಿನವರೆಗೆ ಹಾರಿಕೊಂಡು ಬರುವಾತನೊಳಗೆ ಏನೆಲ್ಲಾ ಆಗುತ್ತದೆ ಎಂಬುದನ್ನು ಈ ಕತೆ ನಿರೂಪಿಸುತ್ತದೆ. ಕಣ್ಣಿಗೆ ಬೀಳುವ ಕಿಟಕಿಯೊಳಗಿನ ಬೇರೆಬೇರೆಯವರ ಬದುಕುಗಳಿಗೆ ಇವನು ಪ್ರತಿಸ್ಪಂದಿಸುತ್ತಾನೆ. ಪುಸ್ತಕ ಓದುತ್ತಿರುವ ವಿದ್ಯಾರ್ಥಿ, ಹೊಲಿಗೆ ಯಂತ್ರದ ಮುಂದೆ ಕುಳಿತ ಯುವತಿ, ಮಗು ಆಡಿಸುತ್ತಿರುವ ಹೆಂಗಸು, ಆತ್ಮಹತ್ಯೆಗೆ ರೆಡಿಯಾಗುತ್ತಿರುವ ಯುವಕ, ಪ್ರೇಮಿಗಳಿಬ್ಬರ ಸಲ್ಲಾಪ- ಕಣ್ಣಿಗೆ ಬೀಳುತ್ತದೆ.

ಈ ಯುವಕನಿಗೆ ವಿದ್ಯಾರ್ಥಿಯ ಹಾಗೆ ತಾನು ಕಲಿಯಬೇಕೆಂಬ ಹಂಬಲವಾಗುತ್ತದೆ. ನಾಲ್ಕನೇ ಮಜಲೆಯಲ್ಲಿರುವ ಹುಡುಗಿಯನ್ನು ಮದುವೆಯಾಗುವ, ಮೂರನೇ ಮಜಲೆಯಲ್ಲಿ ಕಂಡಂತೆ ಸುಖಶಾಂತಿಯಿಂದ ಸಂಸಾರ ಮಾಡುವಂತೆ ಅನ್ನಿಸುತ್ತದೆ. ಆತ್ಮಹತ್ಯೆಗೆ ಸಿದ್ಧವಾಗಿರುವ ಯುವಕನನ್ನು ನೆನೆದು ಬದುಕಿರುವುದರಿಂದ ಏನೂ ಪ್ರಯೋಜನವಿಲ್ಲವೆಂಬುದನ್ನು ಕಣ್ಣಾರೆ ಕಂಡದ್ದಾಯಿತು ಎಂದು ಯೋಚಿಸಿದ. ತನ್ನ ಉಡ್ಡಯನ ಮುಗಿಸಿಬಿಟ್ಟ- ಫುಟ್‌ಪಾತಿನ ಮೇಲೆ. ಚಪ್ಪಡಿ ಕಲ್ಲೊಂದಕ್ಕೆ ಆತನ ತಲೆ ಬಡಿಯಿತು. ಆತನ ತಲೆಯಲ್ಲಿ ಎಂತಹ ಸಂಕೀರ್ಣ ನಾಟಕ ನಡೆಯಿತು ಎಂಬುದು ಯಾರಿಗೂ ಹೊಳೆಯಲೇ ಇಲ್ಲ ಎಂದು ಕತೆ ಕೊನೆಗೊಳ್ಳುತ್ತದೆ. ಆದರೆ ಓದು ಮುಗಿಸದ ಮೇಲೂ ಈ ಕತೆ ಓದುಗನಲ್ಲಿ ಮುಂದುವರಿಯುತ್ತದೆ. ಸಾವಿನತ್ತ ವೇಗವಾಗಿ ದೂಡಲ್ಪಟ್ಟವನ ಆತ್ಮಜ್ಞಾನ ಕ್ಷಣಕ್ಷಣಕ್ಕೂ ಬದಲಾಗುತ್ತದೆ. ಸಾವೆಂಬ ನಿಲ್ದಾಣದಲ್ಲಿ ಆತನ ನಿರ್ಧಾರಗಳೂ ಒಂದು ನಿಲುಗಡೆಗೆ ಬರುತ್ತವೆ.

ಒಳ್ಳೆಯ ಕತೆಗಾರರಾದ ದಿವಾಕರರು ಈ ಕಥಾರಾಶಿಯಲ್ಲಿ ಏನನ್ನು ಹುಡುಕಾಟ ನಡೆಸಿದ್ದಾರೆ ಎಂಬುದಕ್ಕೆ ಆಯ್ಕೆಯ ಕಟ್ಟುಗಳನ್ನು ಗಮನಿಸಿದರೆ ಪದೇಪದೇ ಬಂದು ಹೋಗುವ ಕೆಲವಸ್ತುಗಳಿಂದ ಧೋರಣೆ, ಒಲವು-ನಿಲುವುಗಳನ್ನು ಅಂದಾಜಿಸಿಕೊಳ್ಳಬಹುದು. ಸೃಜನಶೀಲ ವ್ಯಕ್ತಿಯ ಸಾಹಿತ್ಯಕ ಪ್ರಯತ್ನಗಳು ಒಂದು ಗೊತ್ತಾದ ಹುಡುಕಾಟವೇ ಆಗಿರುತ್ತದೆ. ಈ ಕತೆಗಳ ಮೂಲಕ ವೇಗ, ಉದ್ವಿಗ್ನತೆ, ನಿದ್ರೆಗಳೇ ಇಲ್ಲದ ನಗರಗಳ ಯಾಂತ್ರಿಕೃತ ದೈನಿಕದಲ್ಲಿ ನಿರುಮ್ಮಳತೆಯನ್ನು ಅರಸುತ್ತಾರೆ. ರೈಲು ನಿಲ್ಲಿಸಿ ತಲೆ ಮೇಲಿಂದ ಹಾರಿ ಹೋದ ಹ್ಯಾಟನ್ನು ಹುಡುಕಿಕೊಂಡು ಹೋಗುವ ಚಾಲಕನ ಕತೆ ಇದಕ್ಕೆ ನಿದರ್ಶನ. ಅದೇ ರೀತಿ ಸೇಬು ಮರದ ಕೆಳಗೆ ನಿಂತು ಉಸಿರಾಟದ ಖುಷಿ ಅನುಭವಿಸುವವನ ಕತೆ ಅಭಿವೃದ್ಧಿಯ ಭರಾಟೆಯಲ್ಲಿ ನಾವು ಕಳೆದುಕೊಂಡ ಸಂತಸವನ್ನು ಹೇಳುತ್ತವೆ. ಈ ಕಥಾರಾಶಿಯಲ್ಲಿ ಹತ್ತಾರು ಕತೆಗಳು ಆಯಾ ದೇಶದ ರಾಜಕೀಯ, ಸಾಮಾಜಿಕ ಪರಿಸ್ಥಿತಿಗಳಿಗೆ ರೂಪಕಗಳಾಗುವುದು ಕಾಣುತ್ತದೆ.

ಈ ಪುಸ್ತಕದ ಹೊದಿಕೆಯಲ್ಲಿ ಅನಂತಮೂರ್ತಿ, ಅಕ್ಷರ. ನರೇಂದ್ರ ಪೈ, ಟಿ.ಪಿ. ಅಶೋಕ, ವಿವೇಕ ಶಾನಭಾಗ ಅವರ ಮೆಚ್ಚು ನುಡಿಗಳಿವೆ. ಇವೇನೂ ಓದಿಗೆ ನೆರವಾಗುವುದಿಲ್ಲ. 'ಹಾರಿಕೊಂಡು ಹೋದವನು' ಸದಾ ಜತೆಯಲ್ಲಿಟ್ಟುಕೊಳ್ಳಬಹುದು.

* ಕೆ ವೆಂಕಟೇಶ


ಮೂಲ :- http://goo.gl/7fp04A




0 comments:

Post a Comment