Friday, January 23, 2015

ಇಪ್ಪತ್ತೈದು ಆಯ್ದ ಕಾದಂಬರಿಗಳ ವಿಮರ್ಶೆ - ಮಾಧವ ಕುಲಕರ್ಣಿ

Ippataidu Aaida Kadambarigala Vimarshe - Madhava Kulkarni






ಇಂದ : ಕನ್ನಡ ಪ್ರಭ ದಿನಪತ್ರಿಕೆ 

ವಿಮರ್ಶೆ - ವಾಸುದೇವ ಶೆಟ್ಟಿ 


ಸೃಜನಕ್ರಿಯೆ ಮತ್ತು ವಿಮರ್ಶನ ಕ್ರಿಯೆ ಎರಡರಲ್ಲೂ ತಮ್ಮನ್ನು ಸಮನಾಗಿ ತೊಡಗಿಸಿಕೊಂಡಿರುವ ಮಾಧವ ಕುಲಕರ್ಣಿಯವರು ಕನ್ನಡದ ‘ಇಪ್ಪತ್ತೈದು ಆಯ್ದ ಕಾದಂಬರಿಗಳ ವಿಮರ್ಶೆ’ಗಳ ಸಂಕಲನ ಹಲವು ದೃಷ್ಟಿಯಿಂದ ಮಹತ್ವದ್ದಾಗಿದೆ. ಆಧುನಿಕ ಕನ್ನಡ ಸಾಹಿತ್ಯ ವಿಮರ್ಶೆಗೆ ಇದು ಕೆಲವು ಸೂತ್ರಗಳನ್ನು ಹೊಸದಾಗಿ ಸೇರಿಸುವುದರಿಂದ ವಿಮರ್ಶೆಯ ಅಭ್ಯಾಸಿಗಳು ಇದರ ಓದಿನಿಂದ ಲಾಭ ಪಡೆಯಬಹುದಾಗಿದೆ. ಅವರ ವಿಮರ್ಶೆಯ ಮೀಮಾಂಸೆಯನ್ನು ಗುರುತಿಸುವ ಚಿಕ್ಕ ಪ್ರಯತ್ನ ಇಲ್ಲಿದೆ. 

ಗೋಕಾಕರ ಸಮರಸವೇ ಜೀವನ ಕಾದಂಬರಿಯ ಬಗ್ಗೆ ಇರುವ ಮೊದಲ ಲೇಖನದಲ್ಲಿ ಪಾತ್ರ ಸೃಷ್ಟಿ ಮತ್ತು ಮೌಲ್ಯವ್ಯವಸ್ಥೆಯ ಸೃಷ್ಟಿ ಹಾಗೂ ದ್ವಂದ್ವಗಳಿಂದಲೇ ಪಾತ್ರಗಳು ಹೇಗೆ ಪುಷ್ಟಿಯನ್ನು ಪಡೆಯುತ್ತವೆ ಎಂಬ ಮಾತನ್ನು ಹೇಳಿದ್ದಾರೆ. ‘ಕುಸುಮಾ- ನರಹರಿ, ಶೀನು- ಸುಶೀಲೆ- ಸಿಮನ್, ವಿಷ್ಣು, ಪ್ರಮೀಳೆ ಹೀಗೆ ಮೂರು ಜೋಡಿಗಳನ್ನು ಲೇಖಕರು ಜೀವನದ ಮಹಾಸಮುದ್ರದ ಮೇಲೆ ತೇಲಿಬಿಟ್ಟಿದ್ದಾರೆ. ಈ ಜೋಡಿಗಳ ತಾಕಲಾಟ ಮತ್ತು ಸಮಾನಾಂತರ ಬೆಳವಣಿಗೆಯನ್ನು ನೋಡಿದಾಗ ಪಾತ್ರಪ್ರಧಾನ ಕಾದಂಬರಿಯ ಒಂದು ಅಂಶ ಸ್ಪಷ್ಟವಾಗುತ್ತದೆ. ಸಮಾನಾಂತರ ಪಾತ್ರ ಸೃಷ್ಟಿಯ ಮೂಲಕ ಒಂದು ಮೌಲ್ಯ ವ್ಯವಸ್ಥೆಯನ್ನು ಸೃಷ್ಟಿಸುವುದು ಮತ್ತು ಈ ಮೌಲ್ಯ ವ್ಯವಸ್ಥೆಯ ಪರೀಕ್ಷೆಗಾಗಿ ಒಂದು ತಾತ್ವಿಕ ಕೇಂದ್ರವನ್ನು ನಿರ್ಮಿಸುವುದು. ಸಮರಸವೇ ಜೀವನ ಕಾದಂಬರಿ ಕೂಡ ಈ ಸ್ವೀಕೃತ ಸೂತ್ರಕ್ಕೆ ಹೊರತಾಗಿಲ್ಲ’ (ಪುಟ ೨). ಸುಬ್ಬಣ್ಣಾಚಾರ್ಯರ ಪಾತ್ರದ ಮೇಲೆ ಟಿಪ್ಪಣಿ ಮಾಡುತ್ತ, ‘ಇಂಥ ದ್ವಂದ್ವಗಳ ನಡುವೆ ಬೆಳೆಯುವ ಈ ಪಾತ್ರವು ಲೇಖಕರ ಪಾತ್ರ ರಚನೆಯ ಕೌಶಲಕ್ಕೆ ಸಾಕ್ಷಿಯಾಗಿದೆ. ಕೆಟ್ಟ, ಒಳ್ಳೆ, ದುಷ್ಟ ಮತ್ತು ಸಜ್ಜನ ಪಾತ್ರಗಳಿಂದಲೇ ತುಂಬಿದ ಸಮರಸವೇ ಜೀವನ ಕಾದಂಬರಿಯಲ್ಲಿ ಇಂಥ ಕೆಲವು ಪಾತ್ರಗಳು ಅಲ್ಲಲ್ಲಿ ಒಡಮೂಡಿರುವುದರಿಂದ ಕಾದಂಬರಿಯ ಹಂದರವು ತೂಕತಪ್ಪದಂತೆಯೂ ಮಾಡಿದೆ.’ (ಪುಟ ೪-೫). ‘ಇನ್ನು ಆದರ್ಶದ ಪಾತಳಿಯೊಂದು ಕಾದಂಬರಿಯಲ್ಲಿ ಹರಿಯುತ್ತದೆ. ಅದರ ಸ್ವರೂಪವೇನು ಮತ್ತು ಅದರಿಂದ ನಿರ್ಮಾಣವಾಗುವ ಮೌಲ್ಯದ ಅಟ್ಟಣಿಗೆಯ ಬೆಳಕಿನಲ್ಲಿ ನಾನು ಈ ವರೆಗೆ ಚರ್ಚಿಸಿದ ದ್ವಂದ್ವದ ಸ್ಥಾನವೇನೆಂಬುದನ್ನು ನೋಡೋಣ. ಏಕೆಂದರೆ ಪಾತ್ರಪ್ರಧಾನವಾದ ಕಾದಂಬರಿಯಲ್ಲಿ ಇಂಥ ಒಂದು ಶೋಧನೆ ಅವಶ್ಯವೆಂದು ನನ್ನ ಭಾವನೆಯಾಗಿದೆ.’ (ಪುಟ ೬) ಕಾದಂಬರಿ ಎನ್ನುವುದು ಲೇಖಕನ ಲೋಕ. ಆ ಸೃಷ್ಟಿಗೆ ಅವನೇ ಬ್ರಹ್ಮ. ಅಲ್ಲಿ ಅದಿರಬೇಕಿತ್ತು, ಅದು ಹಾಗೆ ತಿರುವುಪಡೆಯಬೇಕಿತ್ತು, ಅದು ಹಾಗಾಗಿದ್ದರೆ ಪರಿಣಾಮ ಬೇರೆಯಾಗುತ್ತಿತ್ತು ಎಂದೆಲ್ಲ ಚರ್ಚಿಸುವುದು ಸರಿಯಾಗಲಾರದು. ಅದಕ್ಕಾಗಿಯೇ ಮಾಧವ ಕುಲಕರ್ಣಿಯವರು, ‘ಊಹಾಧಾರಿತ ಚರ್ಚೆಯು ಸಾಹಿತ್ಯ ವಿಮರ್ಶೆಗೆ ಗೌರವ ತರಲಾರದು. ಅಂಥ ಒಂದು ಒಳ ನೋಟವು ಸಾಹಿತ್ಯ ವಿಮರ್ಶೆಯ ಒಂದು ಆಯಾಮವಾಗಬಹುದೇ ಹೊರತು ಅದೇ ಕೇಂದ್ರದಲ್ಲಿರುವ ವಿಮರ್ಶೆಯು ಸಾಹಿತ್ಯದ ಸೂಕ್ಷ್ಮತೆಯನ್ನು ನಿರ್ಲಕ್ಷಿಸಬಹುದು’ (ಪುಟ ೧೨) ಎಂಬ ಮಾತನ್ನು ಹೇಳಿದ್ದಾರೆ. 

 ಒಮ್ಮೊಮ್ಮೆ ತತ್ವಪ್ರತಿಪಾದನೆಯ ಸಾಹಿತ್ಯ ಪರಂಪರೆಯ ದೃಷ್ಟಿಕೋನದಿಂದ ಯಥಾರ್ಥ ಸ್ಥಿತಿ ಅಭಿವ್ಯಕ್ತಿಯ ಸಂಪ್ರದಾಯದ ಕಾದಂಬರಿಗಳನ್ನು ನೋಡತೊಡಗಿದಾಗ ಕೆಲವೊಂದು ಆಭಾಸಗಳು ಸಾಹಿತ್ಯ ವಿಮರ್ಶೆಯಲ್ಲಿ ನುಸುಳಬಹುದು. ಯಥಾರ್ಥ ಚಿತ್ರಣ ಮತ್ತು ತತ್ವ ಪ್ರತಿಪಾದನೆಗಳಲ್ಲಿ ಯಾವುದು ಮೇಲು ಎಂಬುದು ವಿಮರ್ಶೆಯ ಕೊನೆಯ ಮಜಲಿನಲ್ಲಿ ಎತ್ತುವ ಪ್ರಶ್ನೆಯಾಗಬಹುದು. ಆದರೆ ಕಾದಂಬರಿ ಅಥವಾ ಸಾಹಿತ್ಯ ಗ್ರಹಿಕೆಯ ಪರಿಗಳನ್ನು ವಿವರಿಸದೆ ಕೇವಲ ಕೊನೆಯ ಮಜಲಿನಲ್ಲಿ ನಿಂತು ಮಾತನಾಡತೊಡಗುವುದು ಕೇವಲ ಅಭಿಪ್ರಾಯಗಳನ್ನು ಮಂಡಿಸಿ ಕೈ ತೊಳೆದುಕೊಳ್ಳುವ ಅಪಾಯಕಾರಿ ವಿಮರ್ಶೆಯಾಗಬಹುದು (ಪುಟ ೧೨-೧೩) ಎಂದಿರುವುದು ವಿಮರ್ಶೆಕರಿಗೆ ಪಾಠವಾಗಿದೆ. 

ಒಂದು ಕೃತಿಯನ್ನು ಗ್ರಹಿಸಿದ ರೀತಿಯನ್ನು ವಿಮರ್ಶಕನಾದವನು ವಿಮರ್ಶೆಯನ್ನು ಬರೆಯುತ್ತಿರುವಾಗಲೇ ತನಗೆ ಖಚಿತಪಡಿಸಿಕೊಳ್ಳುತ್ತಾನೆ. ಈ ರೀತಿಯಾಗಿ ನಡೆಯುವ ಕ್ರಿಯೆಯೂ ಸೃಷ್ಟ್ಯಾತ್ಮಕ ಕ್ರಿಯೆಯೇ ಆಗಿರುತ್ತದೆ. ಈ ಗ್ರಹಿಸಿದ ರೀತಿಯನ್ನು ಬದಿಗಿಟ್ಟು ಬರೆದ ವಿಮರ್ಶೆ ಕೇವಲ ವ್ಯಕ್ತಿಗತ ಅಭಿಪ್ರಾಯಜನ್ಯ ವಿಮರ್ಶೆಯಾಗಿಬಿಡುತ್ತದೆ. ಇಂಥ ವಿಮರ್ಶೆಯು ಈಗ ಖ್ಯಾತನಾಮರಾದ ವಿಮರ್ಶಕರಿಂದ ಕೂಡ ಬರುತ್ತಿರುವುದರಿಂದ ಅದನ್ನು ಕುರಿತು ಎಚ್ಚರದಿಂದಿರಬೇಕಾದ ಅವಶ್ಯಕತೆ ಉಂಟಾಗಿದೆ. ಕೃತಿಯನ್ನು ಗ್ರಹಿಸಿದ ರೀತಿಯನ್ನು ವಿಮರ್ಶಾತ್ಮಕವಾಗಿಯೇ ವಿವರಿಸಿದಾಗ ಆ ಕೃತಿಯಲ್ಲಿ ಅಡಕಗೊಂಡಿರುವ ಮೌಲ್ಯವ್ಯವಸ್ಥೆಯನ್ನು ಕುರಿತು ನಂತರದಲ್ಲಿ ವಿಮರ್ಶಕ ಹೇಳಬಹುದಾದ ಎಲ್ಲ ಮಾತುಗಳೂ ವಿಮರ್ಶೆಯನ್ನು ಓದುವ ಓದುಗನ ಮನಸ್ಸಿನಾಳಕ್ಕೆ ಇಳಿಯತೊಡಗುತ್ತವೆ. ಆಗ ಸಾಹಿತ್ಯ ವಿಮರ್ಶೆ ಮತ್ತು ವಿಮರ್ಶಕರಿಬ್ಬರೂ ಸಾಹಿತ್ಯ ಕೃತಿ ಮತ್ತು ಓದುಗನನ್ನು ಜೋಡಿಸುವ ಅರ್ಥಪೂರ್ಣ ಕೊಂಡಿಯಾಗುತ್ತಾರೆ. (ಪುಟ ೧೬) 

ಒಂದು ಸಾಹಿತ್ಯ ಪ್ರಕಾರ ಯಾವ ಹಂತದ ವರೆಗೆ ಬೆಳೆದು ನಿಂತಿರುತ್ತದೋ ಅಲ್ಲಿಯ ವರೆಗೆ ಒಬ್ಬ ಸಾಹಿತಿ, ಆ ಸಾಹಿತ್ಯ ಪ್ರಕಾರದಲ್ಲಿ ಅರಳಿದ ರೀತಿಯನ್ನು ನೋಡಬೇಕೆ ಹೊರತು, ಇಂದು ಆ ಪ್ರಕಾರ ಬೆಳೆದುನಿಂತ ರೀತಿಯಲ್ಲಿ ಅದೂ ಮುಖ್ಯವಾಗಿ ಕಾದಂಬರಿ ಲೋಕದ ತಾಂತ್ರಿಕ ಬೆಳವಣಿಗೆಯ ಬೆಳಕಿನಲ್ಲಿ ಹಿಂದಿನ ಸಾಹಿತ್ಯ ಕೃತಿಗಳನ್ನು ಪರೀಕ್ಷಿಸುವುದು ಒಮ್ಮೊಮ್ಮೆ ಅಪಾಯಕಾರಿ ನಿರ್ಧಾರಗಳತ್ತ ನಮ್ಮನ್ನು ಕರೆದೊಯ್ಯಬಹುದು. ಈ ಕಾರಣಕ್ಕಾಗಿಯೇ ಮೌಲ್ಯಗಳು ವ್ಯಕ್ತವಾದ ರೀತಿಗಿಂತ ಮೌಲ್ಯಗಳ ಪುನರ್‌ಮೌಲ್ಯೀಕರಣಕ್ಕೆ ಹೆಚ್ಚು ಒತ್ತು ಕೊಡಬೇಕಾಗುತ್ತದೆ (ಪುಟ೪೪) ಎಂಬಲ್ಲಿ ಕುಲಕರ್ಣಿಯವರ ವಿಮರ್ಶೆಯ ‘ಧೋರಣೆ’ಗಳನ್ನು ನಾವು ಗುರುತಿಸಬಹುದು. ಕಾರಂತರ ಐದು ಕಾದಂಬರಿಗಳ ವಿಮರ್ಶೆ ಇಲ್ಲಿದೆ. 

ಕಾರಂತರ ಒಟ್ಟೂ ಸಾಹಿತ್ಯದ ಬಗ್ಗೆ ಅವರು ಒಂದು ಸಾಮಾನ್ಯವಾದ ಅಂಶವನ್ನು ಇಲ್ಲಿ ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಸಾಮಾನ್ಯರಲ್ಲಿ ಹುದುಗಿರುವ ಅಸಾಮಾನ್ಯ ಮತ್ತು ಅಂತರಂಗದ ವ್ಯಾಪಾರದಲ್ಲಿ ದಕ್ಕುವ ಮಾನವನ ನಿಜಸ್ವರೂಪ ಇವು ಕಾರಂತರ ಕುತೂಹಲವನ್ನು ಕೆರಳಿಸಿದ ಸಾಹಿತ್ಯಿಕ ವಸ್ತುಗಳು. ಮಂಜುಳೆ (ಮೈಮನಗಳ ಸುಳಿಯಲ್ಲಿ) ಅಂಥ ಒಂದು ಕುತೂಹಲದ ಪ್ರತಿಫಲವಾಗಿ ಮೂಡಿಬಂದ ಪಾತ್ರವಾಗಿದ್ದಾಳೆ (ಪುಟ ೭೭) ಎಂಬ ಮಾತನ್ನು ಹೇಳಿದ್ದಾರೆ. 

ಅನಂತ ಮೂರ್ತಿಯವರ ‘ಭವ’ದ ಬಗ್ಗೆ ಚರ್ಚಿಸುತ್ತ, ಪಾತ್ರಗಳು ಸ್ಥಾಪಿತಗೊಳ್ಳುತ್ತಿಲ್ಲವಲ್ಲ ಎಂಬುದೇ ನನ್ನ ಆಕ್ಷೇಪ ಎಂದಿದ್ದಾರೆ. ಟೀವಿ ಎಪಿಸೋಡುಗಳ ಉದಾಹರಣೆ ನೀಡುವ ಅವರು, ಅವು ಒಟ್ಟಂದದಲ್ಲಿ ಪರಿಣಾಮ ಬೀರುವುದಕ್ಕಿಂತ ಆಯಾ ಆಖ್ಯಾನಗಳನ್ನು ಹೇಗೆ ಆಕರ್ಷಕ ಮಾಡಬೇಕೆನ್ನುವುದೇ ಮಹತ್ವದ್ದಾಗಿ ಬಿಟ್ಟಿರುತ್ತದೆ. ಈ ರೀತಿಯು ಅನಂತಮೂರ್ತಿಯವರ ಬರವಣಿಗೆಯಲ್ಲಿ ಕಂಡಾಗ ಸ್ವಲ್ಪ ಗಲಿಬಿಲಿಗೊಳ್ಳುವಂತಾಗುತ್ತದೆ. ಇದರ ಸಾಧಕ ಬಾಧಕಗಳು ನಮ್ಮ ಒಟ್ಟು ಬರವಣಿಗೆಯ ಧೋರಣೆಯ ಮೇಲೆ ಬಲವಾದ ಪ್ರಭಾವ ಬೀರಬಹುದಾದ್ದರಿಂದ ಈ ಕುರಿತು ತಲೆಕೆಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. 

ಗದ್ಯ ಬರೆವಣಿಗೆಯ ವಿಷಯದಲ್ಲಿ ಕುಲಕರ್ಣಿಯವರು ಇದರಲ್ಲಿಯೇ ಒಂದು ಮಹತ್ವದ ಮಾತನ್ನು ಹೇಳಿದ್ದಾರೆ. ‘‘ನಾವು ಗದ್ಯ ಬರವಣಿಗೆಯ ಸಂಧಿಕಾಲದಲ್ಲಿ ನಿಂತಿದ್ದೇವೆ. ವಿವರಗಳಿಗೆ ಉಪಯೋಗಿಸುವ ಭಾಷೆಯು ‘ಗದ್ಯದ ರೂಪಕ’ವಾಗಬೇಕಾದರೆ ವಿಷಯ ವಸ್ತು ಸೂಚಿಸುವ ಸನ್ನಿವೇಶದಿಂದ ಆಯ್ದ ಪದಗಳಿಂದಲೇ ಅಲಂಕರಿಸಲ್ಪಡಬೇಕಾಗುತ್ತದೆ. ಇದೊಂದು ವಿಷಯದಲ್ಲಿ ಮಾತ್ರ ಕಾದಂಬರಿಯ ಭಾಷೆಯು ಸೃಜನಶೀಲವಾಗಬೇಕಾದರೆ ಸನ್ನಿವೇಶದ ಸಂಪೂರ್ಣ ಅರಿವಿನಿಂದ ಬಂದ ‘ರಕ್ತಗತವಾದ’ ಒಂದು ಭಾಷೆ ಉದ್ಭವವಾಗಬೇಕಾಗುತ್ತದೆ. ಇಲ್ಲದಿದ್ದರೆ ಮಿದುಳಿನಿಂದ ಸೃಜಿಸುವ ಭಾಷೆಯು ಎಷ್ಟೇ ಶಕ್ತಿಯುತವಾಗಿದ್ದರೂ ಕೂಡ ಅದಕ್ಕೆ ಈ ಅರ್ಥದಲ್ಲಿ ಸೃಜನಶೀಲತೆಯು ದಕ್ಕುವುದಿಲ್ಲ.... ಜೀವನಕ್ಕೆ ಚಿಂತನೆಯನ್ನು ತೊಡಿಸಬೇಕೋ ಅಥವಾ ಜೀವನದಿಂದ ಉದ್ಭವವಾದ ಚಿಂತನೆಯೇ ಮೂರ್ತರೂಪವನ್ನು ಕಾದಂಬರಿಯಲ್ಲಿ ದಕ್ಕಿಸಿಕೊಳ್ಳಬೇಕೋ ಎಂಬುದೇ ಮೂಲ ಸಮಸ್ಯೆಯಾಗಿದೆ. ಇದಕ್ಕೆ ಸ್ಪಷ್ಟವಾದ ಉತ್ತರವನ್ನು ಕಂಡುಕೊಳ್ಳದೆ ನಮ್ಮ ಗದ್ಯ ಬರವಣಿಗೆಯು ಹೆಚ್ಚು ಸ್ವೀಕಾರಾರ್ಹವಾಗಲಾರದು....(ಪುಟ ೮೭-೮೮)’’ ಎಂಬ ಮಾತು ಕನ್ನಡ ಗದ್ಯಕಾರರಿಗೆಲ್ಲ ಮಾರ್ಗದರ್ಶನದಂತಿದೆ. 

ಭೈರಪ್ಪನವರ ಏಳು ಕಾದಂಬರಿಗಳ ವಿಮರ್ಶೆ ಇದರಲ್ಲಿದೆ. ಭೈರಪ್ಪನವರು ಕಾದಂಬರಿಗಳ ವಸ್ತು ರಮ್ಯಕಲ್ಪನೆಗಳಿಂದ ಹೇಗೆ ಮುಕ್ತವಾಗಿಲ್ಲ ಎಂಬುದನ್ನು ಉದಾಹರಣೆಗಳ ಮೂಲಕ ಹೇಳುತ್ತಾರೆ. ಎಂಥ ಬರೆವಣಿಗೆ ಸೃಜನಶೀಲತೆಗೆ ಮಾರಕವಾಗುತ್ತದೆ? ಅವಧೇಶ್ವರಿಯ ವಿಮರ್ಶೆ ಮಾಡುವ ಕುಲಕರ್ಣಿಯವರು, ‘ವೇದಕಾಲೀನ ಕಾದಂಬರಿ’ ಎಂಬ ಉಪಶಿರೋನಾಮೆಯನ್ನಿಟ್ಟುಕೊಂಡು ಬಂದ ‘ಅವಧೇಶ್ವರಿ’ ಕಾದಂಬರಿಯು ಯಾವುದೋ ಒಂದು ವರ್ಗವನ್ನು ಮತ್ತು ಒಂದು ರೀತಿಯ ಚಿಂತನೆಯನ್ನು ತೃಪ್ತಿಗೊಳಿಸಲು ಬರೆದ ಕಾದಂಬರಿಯಾಗಿ ತೋರುತ್ತದೆ. ಇಂಥ ಪ್ರಯತ್ನಗಳು ಸೃಜಶೀಲತೆಗೆ ಒಂದು ಮಾರಕವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 

ಇವಲ್ಲದೆ ಕಂಬಾರ, ಶಾಂತಿನಾಥ ದೇಸಾಯಿ, ಶ್ರೀನಿವಾಸ ವೈದ್ಯ, ನಾ.ಮೊಗಸಾಲೆ, ರಾಘವೇಂದ್ರ ಪಾಟೀಲ, ಮಲ್ಲಿಕಾರ್ಜುನ ಹಿರೇಮಠರ ಕಾದಂಬರಿಗಳ ಕುರಿತೂ ವಿಮರ್ಶೆಗಳಿವೆ. ಹೇಳುವುದನ್ನು ದ್ವಂದ್ವಕ್ಕೆ ಎಡೆಯಿಲ್ಲದೆ, ಯಾರನ್ನೋ ಮೆಚ್ಚಿಸಬೇಕೆಂಬ ಉದ್ದೇಶವಿಲ್ಲದೆ, ಖಚಿತವಾಗಿ ಹೇಳುವ ಮಾಧವ ಕುಲಕರ್ಣಿಯವರು ಕನ್ನಡ ವಿಮರ್ಶೆಯನ್ನು ಮತ್ತೊಂದು ಎತ್ತರಕ್ಕೆ ಒಯ್ದಿದ್ದಾರೆ


Friday, January 9, 2015

ಜೀವನ ಸಂಗ್ರಾಮ - ಮಿಲನಿಯಮ್ - ೨ - ಪೂರ್ಣಚಂದ್ರ ತೇಜಸ್ವಿ

Jeevana Sangrama - Millenium 2 - Poornachandra Tejasvi



ಮುನ್ನುಡಿಯಿಂದ

ರಾಮನನೋಹಾರ ಲೋಹಿಯಾ 'ಮೂರ್ತ ಮತ್ತು ಅಮೂರ್ತ'ದ ಬಗ್ಗೆ ವಿಶ್ಲೇಷಿಸುತ್ತಾ 'ಹೆಚ್ಚು ತಿಳಿದ ಹಾಗು ನಾವು ತಿಲಿದಿಲ್ಲದಿರುವುದರ ಅರಿವು ಮತ್ತು ಮೊತ್ತವೂ' ಎಂದು ಹೇಳುತ್ತಾರೆ. ಆದ್ದರಿಂದ ನಮ್ಮ ಜ್ಞಾನ ಎನ್ನುವುದು ನಮ್ಮ ಅಜ್ಞಾನದ ಅರಿವಷ್ಟೇ' ಎಂದು ಹೇಳುತ್ತಾರೆ. ಅದ್ದರಿಂದ ನಮ್ಮ ಜ್ಞಾನ ದಿಗಂತವನ್ನು ವಿಸ್ತರಿಸುತ್ತಾ ಒಂದು ದಿನ ಪರಿಪೂರ್ಣತೆಯ ಹಂತವನ್ನು ಮುಟ್ಟುತ್ತೇವೆ ಎನ್ನುವುದು ಸುಳ್ಳು. ಅಪರಿಪೂರ್ಣತೆ ಜ್ಞಾನದ ಅನುಷಂಗಿಕ ಗುಣ. ಮನಸ್ಸು ಅರಿವಿನ ಹಾದಿಯಲ್ಲಿ ಮುಂದೂತ್ತುತ್ತಲೇ ಹೋಗುತ್ತದೆ. ಪರಿಪೂರ್ಣತೆಯ ಮಾರ್ಗ ಯಾವುದೆಂದು ತಿಳಿಯುವವರೆಗೂ ತಿಳಿಯುವ ಖುಷಿ, ಆನಂದ, ರೊಮಾಂಚನಕ್ಕಾದರೂ ಮನಸ್ಸು ಮುಂದುವರಿಯುತ್ತದೆ. ಇಲ್ಲಿರುವ ವಿಚಾರಗಳೆಲ್ಲವೂ ಈ ಕಾರಣಕ್ಕಾಗೇ ನಾನು ತಿಳಿದವು. ಈ ಕಾರಣಕ್ಕಾಗೇ ನಾನು ನಿಮಗೆ ತಿಳಿಸುತ್ತಿರುವುದು.

ಚರಿತ್ರೆಯ ವಿಸ್ತಾರದಲ್ಲಿ ಆಸ್ಪೋಟಿಸಿ ಬಿದ್ದಂತೆ ಬಿದ್ದಿರುವ ನೂರಾರು ಸಂಗತಿಗಳನ್ನು ಅವುಗಳಿಂದ ಹೊಮ್ಮುವ ಅನೇಕ ಸೂಕ್ಷ್ಮ ಎಳೆಗಳ ಸಹಾಯದಿಂದ ನಿರಂತರ ಸರಣಿಯನ್ನಾಗಿ ಪರಿವರ್ತಿಸಿ ಕಥೆಯ ಚೌಕಟ್ಟಿಗೆ ಅಳವಡಿಸಲು ಇಲ್ಲಿ ಪ್ರಯತ್ನಿದ್ದೇನೆ. ಬಹುಶ: ಇವನ್ನೆಲ್ಲಾ ಅಭ್ಯಾಸ ಮಾಡುವಾಗಲೇ ನೂರಾರು ವಿಷಯಗಳಿಗೆ ಮನಸ್ಸು ಸೂಕ್ಷ್ಮವಾಗಿ ಕಾರ್ಯಕಾರಣ ಸಂಬಂಧವನ್ನು ಆರೋಪಿಸುತ್ತಲೇ ಅರ್ಥಮಾಡಿಕೊಳ್ಳುತ್ತಾ ಹೋಗುತ್ತದೆ ಎಂದು ಕಾಣುತ್ತದೆ. ತಿಳುವಳಿಕೆ, ಅರಿವು ಎಂದರೆ ಅವ್ಯವಸ್ಥೆಯಲ್ಲಿ ವ್ಯವಸ್ಥೆಯನ್ನು ಗುರುತಿಸುವುದೇ ಇರಬಹುದು. ಹೊಸ ವಿಚಾರಗಳ ಮೇಲೆದ್ದಂತೆಯೂ ನಮ್ಮ ವ್ಯವಸ್ಥೆಯ ಸೂತ್ರ ಬದಲಾಗುತ್ತಾ ಹೋಗಬಹುದು. ಬಹಳ ಸೂಕ್ಷ್ಮವಾಗುತ್ತಾ ಅವ್ಯಕ್ತವಾಗುತ್ತಾ ಹೋಗಬಹುದು. ಆದರೂ ಮನಸ್ಸು ಅವುಗಳಲ್ಲೊಂದು ಅಂತರ್ಗಾಮಿಯಾದ ಸಂಬಂಧ ಎಳೆಯನ್ನು ಸ್ಥಾಪಿಸುತ್ತಾಲೇ ಹೋಗುತ್ತದೆ. ಒಂದು ಪುಸ್ತಕಕ್ಕೆ ಹೆಸರು ಕೊಡುವಾಗ ಇವಿಷ್ಟೂ ಸಂಗತಿಗಳು ಏಕೆ ಇಲ್ಲಿ ಒಟ್ಟಾದುವು ಎಂದು ಯೋಚಿಸುತ್ತೇನೆ.

ಈ ಪುಸ್ತಕವನ್ನು 'ಜೀವನದ ಸಂಗ್ರಾಮ' ಎಂದು ಕರೆದರೆ ಇಲ್ಲಿರುವ ನೂರಾರು ವಿಚಾರ ಮತ್ತು ಘಟನೆಗಳ ಅಂತರ್ಗತ ಸಂಬಂಧ ನಿಮಗೆ ಹೊಳೆಯಬಹುದು ಎಂದು ತಿಳಿದ್ಡಿದ್ದೇನೆ





ಹುಡುಕಾಟ - ಮಿಲನಿಯಮ್ - ೧ - ಪೂರ್ಣಚಂದ್ರ ತೇಜಸ್ವಿ

Hudukata - Millenium 1 - Poornachandra Tejasvi



"ಮಿಲನಿಯಮ್ ಸೀರೀಸ್" ತೇಜಸ್ವಿ ಯವರು ಇಪ್ಪತ್ತನೆಯ ಶತಮಾನದ ಕೊನೆಯಲ್ಲಿ ಆ ಶತಮಾನದ ಅಪರೂಪದ ಕತೆಗಳನ್ನು ಆಯ್ದು ಬರೆದ ಪುಸ್ತಕಗಳು. ಈ ಕತಾ ಮಾಲಿಕೆಯಲ್ಲಿ ೧೬ ಪುಸ್ತಕಗಳಿವೆ. ಒಂದೊಂದು ಪುಸ್ತಕ ಒಂದು ಅಂಶವನ್ನು ಒಳಗೊಂಡ ಕಥೆಗಳನ್ನು ಸೇರಿಸಿ ಬರೆದಿದ್ದಾರೆ.

ಈ ಮಾಲಿಕೆಯ ಮೊದಲ ಪುಸ್ತಕ

ಹುಡುಕಾಟ

ಈ ಪುಸ್ತಕದಲ್ಲಿ ತೇಜಸ್ವಿಯವರು ೧೬ನೇ ಶತಮಾನದಲ್ಲಿ ಎಲ್ನ ಡರೋಡೋ ದಲ್ಲಿ ನಡೆದ ಚಿನ್ನದ ಗಣಿಯ ಹುಡುಕಾಟ ಮತ್ತು ಅದರಿಂದ ಆದ ತಕತ ಪಾತದ ಬಗ್ಗೆ ಬರೆದಿದ್ದಾರೆ.

ಮುನ್ನುಡಿಯಿಂದ:

ಜ್ಞಾನಕ್ಕೆ ನೀರಿನ ಗುಣ ಇದೆ. ನೀರನ್ನು ಕೊಡದಲ್ಲಿ ತುಂಬಿ ಮುಚ್ಚಿಡದೆ ಹೋದರೆ ಅದು ನಿರಂತರವಾಗಿ ತಗ್ಗಿನ ಕರೆದೆ ಹರಿಯುತ್ತಾ ಹೋಗುತ್ತದೆ. ಸಮುದ್ರ ಸೇರುವವರೆಗೂ ಹರಿಯುತ್ತಲೇ ಇರುತ್ತದೆ. ಪ್ರಪಂಚದಲ್ಲಿ ನಾವು ಕಂಡುಕೆಳರಿಯದಂಥ ಮಾಹಿತಿ ಕ್ರಾಂತಿ ಇಂಟರ್ನೆಟ್ ಜಾಲದೊಂದಿಗೆ ಆರಂಭವಾಗಿದೆ. ಹಿಂದೆಲ್ಲಾ ತಮಗೆ ಗೊತ್ತಿದ್ದನ್ನು ಇತರರಿಗೆ ತಿಳಿಸದೆ ತಮ್ಮಲ್ಲೇ ಮುಚ್ಚಿಟ್ಟಿಕೊಂಡು ಅದನ್ನೇ ಬಂಡವಾಳ ಮಾಡಿ ಇತರರನ್ನು ಶೋಷಿಸುತ್ತಿದ್ದರು. ಈಗಲೂ ಅದು ಸಂಪೂರ್ಣ ಅಳಿದಿದೆ ಎನ್ನುವಂತಿಲ್ಲ. ಆದರೆ ಈ ಶತಮಾನದ ಅಂತ್ಯದೊಂದಿಗೆ ಅದರ ಕಾಲವೂ ಕೊನೆಯಾಗುತ್ತದೆ. ಇಂಟರ್ ನೆಟ್ ಈ ಜ್ಞಾನದ ನೀರಿಗೆ ಕಟ್ಟಿದ್ದ ಕತ್ತೆಗಳನ್ನೆಲ್ಲಾ ಒಂದು ಕಡೆಯಿಂದ ದ್ವಂಸ ಮಾಡುತ್ತಿರುವುದನ್ನು ನೋಡಬಹುದು.

ಈ ಶತಮಾನದ ಅನೇಕರೊಂದಿಗೆ ಹೋಲಿಸಿದಾಗ ನಾನು ಹೆಚ್ಚು ಅದೃಷ್ಟವಂತನೆಂದು ಹೇಳಬಹುದು. ಬೆಲೆ ಕಟ್ಟಲಾಗದ ಅಕ್ಷಯ ನಿಧಿ ನನಗೆ ಅನುಭವಗಳ ಮೂಖಾಂತರ, ಅದಕ್ಕಿಂತ ನೂರುಮಡಿಯಾಗಿ ಪುಸ್ತಕಗಳ ಮೂಖಾಂತರ ದೊರಕಿತು. ದೂರದೇಶಗಳ ಬಗ್ಗೆ ಅಗಾಧ ವಿಶ್ವದ ಬಗ್ಗೆ, ಚಿತ್ರ ವಿಚಿತ್ರ ಸಂಸ್ಕೃತಿಗಳ ಮತ್ತು ಜನಗಳ ಬಗ್ಗೆ, ಅಸದೃಶ ಸಾಹಸಗಳ ಬಗ್ಗೆ, ಮಹಾ ಸಂಶೋದನೆಗಳ ಬಗ್ಗೆ ನಾವಾಗೇ ಅದರಲ್ಲಿ ತೊಡಗುವುದಕ್ಕಿಂತ ಆರಾಮಾಗಿ ಕುಳಿತು ಓದುವುದು ಬಹಳ ಕಡಿಮೆ ಖರ್ಚಿನಲ್ಲಿ ನಿರಾಯಾಸವಾದ ಕೆಲಸ. ಆದರೆ ನಮ್ಮ ದೇಶದ ಬಡತನದಿಂದಾಗಿ ಅದೂ ಸಹ ಅನೇಕರಿಗೆ ದುಬಾರಿಯಾಗಿದೆ ಕೈಗೆಟುಕದಂತಾಗಿದೆ. ಅದಕ್ಕೇ ನಾನು ಓದಿದ್ದನ್ನೆಲ್ಲ ನೆನೆಸಿಕೊಂಡು ನಾನು ಅದೃಷ್ಟವಂತ ಎಂದಿದ್ದು. ಈ ಪುಸ್ತಕದಲ್ಲಿ ನಾನು ಸಾದರಪಡಿಸಿರುವ ಒಂದೊಂದು ಲೇಖನದ ವಿಷಯ ವಿಚಾರಗಳನ್ನೂ ನೀವೇ ಸಂಗ್ರಹಿಸಬೇಕೆಂದಾದರೆ, ಅದು ಪುಸ್ತಕಗಳಿಂದಲೇ ಆದರೂ, ನಿಮಗೆ ಅನೇಕ ಸಾವಿರ ರುಪಾಯಿ ಮತ್ತು ಹಲವು ತಿಂಗಳುಗಳ ಕಾಲ ವ್ಯಹಿಸಬೇಕಾಗುತ್ತದೆ. ನಾನು ಪಟ್ಟ ಪಾಡು, ವ್ಯಹಿಸಿದ ಹಣ, ಕಳೆದಕಾಲ ನಿಮಗೂ ಬರದಿರಲಿ ಎಂದೇ 'ಮಿಲನಿಯಮ್' ಸರಣಿ ತರುತ್ತಿರುವುದು. ಪುಸ್ತಕ ತೆರೆಯುತ್ತಿದ್ದಂತೆಯೇ ಯಾವ್ಯಾವುದೋ ಕಾಲ ದೇಶಗಳ ಚಿತ್ರ ವಿಚಿತ್ರ ಘಟನಾವಳಿಗಳ ಪರಿಸರದಲ್ಲಿ ಯಾತ್ರಿಯಾಗಬಹುದು.

ಇಷ್ಟೆಲ್ಲ ಸಂಪರ್ಕ ಸಾಧನಗಳಲ್ಲಿ ಕ್ರಾಂತಿಯಾಗಿದ್ದರೂ, ಅನುಭವ, ಆಲೋಚನೆ, ವಿಚಾರ, ವಿಷಯಗಳ ಸಂವಹನ ಮತ್ತು ಹಸ್ತಾಂತರಕ್ಕೆ ಅತ್ಯಂತ ಅಗ್ಗದ ಮತ್ತು ಕ್ಷಿಪ್ರ ವಾಹಕಗಳೆಂದರೆ ಇಂದಿಗೂ ಪುಸ್ತಕಗಳೆ. ಕಾಲದ ಅಗ್ನಿಪರೇಕ್ಷೆಯನ್ನು ನಿರಾಯಾಸವಾಗಿ ಗೆದ್ದಿರುವ ಪುಸ್ತಕಗಳು ಜ್ಞಾನದ ನೀರನ್ನು ಕಡಿಮೆ ಅದೃಷ್ಟವಂತರತ್ತ ಸರ್ವದಾ ಹರಿಸುತ್ತ  ಬಂದಿರುವ ಗಂಗಾ ನದಿಗಲೆಂದೇ ಹೇಳಬಹುದು.







Thursday, January 8, 2015

ಧರ್ಮಶ್ರೀ - ಎಸ್ ಎಲ್ ಭೈರಪ್ಪ

Dharmashree - S L Bhyrappa



ಭೈರಪ್ಪನವರ 'ಧರ್ಮಶ್ರೀ' ಓದೋದಕ್ಕೆ ಶುರು ಮಾಡಿ ಮುಗಿಸೋದಕ್ಕೆ ತುಂಬಾನೇ ಸಮಯ ಹಿಡಿಯಿತು, ಓದುವ ಮಧ್ಯೆ ಬೇರೆ ಊರಿಗೆ ಹೋಗಬೇಕಾಯಿತು ಈ ಪುಸ್ತಕವನ್ನು ಮರೆತುಬಿಟ್ಟೆ, ಅದಕ್ಕೆ ಈ ಒಂದು ತಿಂಗಳಲ್ಲಿ ಯಾವುದೇ ಪುಸ್ತಕದ ಬಗ್ಗೆ ಮಾಹಿತಿ ಕೊಡಲಾಗಲ್ಲಿಲ್ಲ. ಪುಸ್ತಕ ಓದಿ ಮುಗಿಸಿದ ಮೇಲೆ ಮತ್ತು ಈಗ ಭಾರತದಲ್ಲಿ ನಡೆಯುತ್ತಿರುವ ಘಟನೆಗಳಿಗೂ ಇರುವ ಸಾಮ್ಯತೆ ನೋಡಿ ನನಗೆ ಆಶ್ಚರ್ಯವಾದ ಇರಲಿಲ್ಲ. ಭೈರಪ್ಪನವರು ಈ ಕಾದಂಬರಿ ಬರೆದುದು ೧೯೬೧ರಲ್ಲಿ.

'ಧರ್ಮಶ್ರೀ' ಭಾರತದಲ್ಲಿ ನಡೆಯುತ್ತಿರುವ ಮಾತಾಂತರ ಅದರಿಂದ ಸಮಜಾದಲ್ಲಿ ಆಗುತ್ತಿರುವ ಪರಿಣಾಮಗಳು ಮತ್ತು ಭಾರತೀಯ ಸಂಸ್ಕೃತಿ ಅವನತಿ ಬಗ್ಗೆ ತುಂಬ ಆಳವಾಗಿ ಅಧ್ಯಾಯನ ಮಾಡಿ ಒಂದು ಕಾದಂಬರಿಯ ಚೌಕಟ್ಟಿನಲ್ಲಿ ನೈಜ ಘಟನೆ ಘಟಿಸಿದಂತೆ  ಬರೆದಿದ್ದಾರೆ. ಮತಾಂತರದ ಬಗ್ಗೆ ನಾನು ಕೆಲವು ಪುಸ್ತಕಗಳನ್ನು ಓದಿದಾಗ ಸಾಮಾನ್ಯವಾಗಿ ಬರುವುದು ಒಂದು ಜಾತಿಯ ತೆಗಳಿಕೆ ಮತ್ತು ಅವರ ಜಾತಿಯನ್ನು ಹೊಗಳಿ ಅಟ್ಟಕ್ಕೇರಿಸಿ, ಅವರ ಜಾತಿಯೇ ಸರ್ವ ವಿದದಲ್ಲೂ ಶುದ್ದ ಎಂದು ಸಾಬೀತು ಮಾಡಲು ನಿಂತಿರುತ್ತಾರೆ, ಆದರೆ ಈ ಕಾದಂಬರಿಯಲ್ಲಿ ಹಿಂದೂ ಸಂಸ್ಕೃತಿಯ ಮಿತಿಯನ್ನು ಮತ್ತು ಅದನ್ನು ಬೇರೆ ಜಾತಿಯವರು ಹೇಗೆ ತಮ್ಮ ಸ್ವರ್ತಕ್ಕೆ ಉಪಯೋಗಿಸಿಕೊಳ್ಳುತ್ತಾರೆ ಎಂದು ವಿವರಿಸಿದ್ದಾರೆ. ಇಲ್ಲಿ ಬರಿ ಜಾತಿಯ ಮತ್ತು ಮತಾಂತರದ ಬಗ್ಗೆ ಅಲ್ಲದೆ ತಂಗಿ, ಸ್ನೇಹಿತರು, ತಂದೆ ತಾಯಿಗಳ ಜೊತೆ ಮತ್ತು ಸಮಾಜದ ಜೊತೆಗಿನ ಸಂಬಂಧಗಳ ಬಗ್ಗೆ ಒಂದು ಒಳನೋಟವನ್ನು ತೋರಿಸಿದ್ದಾರೆ.

ಇಲ್ಲಿ ಬರುವ ಸತ್ಯ ನಾರಾಯಣ ಹಿಂದೂ ಸಂಕೃತಿಯಲ್ಲಿ ಕಲಿತು ಅದರ ಬಗ್ಗೆ ಉಚ್ಚ ಭಾವನೆ ಇಟ್ಟುಕೊಂಡು, ಕ್ರೈಸ್ತ ಮತಾಂತರ ವಿರುದ್ದ ಹೋರಾಡಿ ಕೊನೆಗೆ ಅದೇ ಮತಕ್ಕೆ ಸೇರಿಕೊಳ್ಳುವ ಪರಿಸ್ಥಿತಿಯನ್ನು ಈ ಕಾದಂಬರಿಯಲ್ಲಿ ಭೈರಪ್ಪನವರು ಬರೆದ್ದಿದ್ದಾರೆ. ಸತ್ಯನಾರಾಯಣ ಹುಟ್ಟುವಾಗಲೇ ಅಪ್ಪ ಸಂಸಾರದ ಬಗ್ಗೆ ಆಸಕ್ತಿ ತೋರುತ್ತಿರಲಿಲ್ಲ. ಎಲ್ಲಿ ಮಗನ ಓದಿಗೆ ಪೆಟ್ಟು ಬೀಳುತ್ತೆಂದು ಮಗನನ್ನು ಅವಳ ಅಣ್ಣನ ಮನೆಗೆ ಕಳಿಸುತ್ತಾಳೆ. ಅಣ್ಣನ ಮನೆಯಲ್ಲಿ ನರಕಯಾತನೆ ಅನುಭವಿಸುವಾಗ ತಾಯಿ ಪ್ಲೇಗಿನಿಂದ ಸಾಯುತ್ತಾಳೆ. ಅಣ್ಣನ ಮನೆಯಲ್ಲಿ ಇದ್ದು ನರಕಯಾತನೆ ಅನುಭವಿಸುವುದಕ್ಕಿಂತ ಬೇರೆ ಊರ್ಗಿಗೆ ಹೋಗಿ ಭಿಕ್ಷೆ ಬೇಡಿ ಓದುವುದು ಮೇಲು ಆ ಊರಿನ ಮೇಸ್ಟ್ರಿನ ಸಹಾಯದಿಂದ ನರಸಪುರಕ್ಕೆ ಹೊಗುತ್ತಾನೆ. ಓದುನಲ್ಲಿ ಬುದ್ದಿವಂತನಾದ್ದರಿಂದ ಅವನಿಗೆ ಹೊಸ ಊರಿಗೆ ಹೊಂದಿ ಕೊಳ್ಳಲು ಜಾಸ್ತಿ ಸಮಯ ಹಿಡಿಯಲ್ಲಿಲ್ಲ. ಈ ಮಧ್ಯೆ ಅವನ ಬೇಟಿ ರಾಚಮ್ಮನ ಜೊತೆ ಆಗುತ್ತದೆ. ರಾಚಮ್ಮ ಪಕ್ಕದುರಿನವಳು, ಕ್ರಿಸ್ತ ಜಾತಿಗೆ ಸೇರಿದವಳು. ಮೊದಮೊದಲು ಹೊಂದಿಕೆ ಯಾಗದಿದ್ದರು ಮುಂದೆ ಅವರ ಸ್ನೇಹ ತುಂಬ ಗಟ್ಟಿ ಯಾಗುತ್ತದೆ.

ಮುಂದೆ ಸತ್ಯನಾರಾಯಣ ಮೈಸೂರಿಗೆ ಬಂದು ಓದೋದುಕ್ಕೆ ಶುರು ಮಾಡಿದಮೇಲೆ ಶಂಕರನ ಪರಿಚಯ ವಾಗುತ್ತದೆ. ಶಕಾರನ ಜೊತೆ ಭಾರತೀಯ ಸಂಸ್ಕೃತಿಯ ಬಗ್ಗೆ ಚರ್ಚಿಸಿ,  ಅವನಲ್ಲಿ ಸಂಸ್ಕೃತಿಯ ಬಗ್ಗೆ ಇರುವ ಪುಸ್ತಕಗಳ ಬಗ್ಗೆ ತಿಳಿದು ಅದರಲ್ಲಿ ಅರ್ಥವಾಗದ ವಿಷಯದ ಬಗ್ಗೆ ಕೇಳಿ ತಿಳಿದುಕೊಂಡು ಭಾರತೀಯ ಸಂಸ್ಕೃತಿ ಮತ್ತು ಅದರ ಆಳದ ಬಗ್ಗೆ ಹೆಮ್ಮೆ ಮತ್ತು ಗೌರವ ಹೆಚ್ಚುವಂತೆ ಮಾಡುತ್ತದೆ. ಮೈಸೂರಿನಲ್ಲಿ ನಡೆಯುತ್ತಿರುವ ಮತಾಂತರದ ವಿರುದ್ಧ ಶಂಕರನ ಜೊತೆ ಸೇರಿ ಹೋರಾದುತ್ತಾನೆ. ಶಂಕರ ಓದು ಮುಗಿಸಿ ಅರ್ ಎಸ್ಎಸ್ ನ ಒಂದು ವಿಭಾವನ್ನು ನೋಡಿಕೊಳ್ಳಲು ಬೇರೆ ಊರಿಗೆ ಆಗುತ್ತಾನೆ. ಇಲ್ಲಿ ಸತ್ಯನಾರಾಯಣ ಮತ್ತೆ ರಾಚಮ್ಮನನ್ನು ಬೇಟಿಯಾಗುತ್ತಾನೆ. ಅವಳ ಗಂಡ ದೇವಿ ಪ್ರಸಾದರು ಇನ್ವನ ಲೆಕ್ಚರರ್. ಅವರ ಸ್ನೇಹ ಇಲ್ಲಿ ಮುಂದುವರೆಯುತ್ತದೆ.

ಸತ್ಯ ನಾರಾಯಣನ ತಂಗಿ ತನ್ನ ಕಷ್ಟಗಳನ್ನು ಒಂದು ಅಂಚೆಯ ಮೂಲಕ ಇವನಿಗೆ ತಿಳಿಸುತ್ತಾಳೆ. ಈವರಗೆ ತಲೆಕೆಡಿಸಿಕೊಳ್ಳದ ಒಂದು ಜವಾಬ್ದಾರಿ ಅವನ ಹೆಗಲ ಮೇಲೆ ಬೀಳುತ್ತದೆ. ಅವನಿಗೆ ಅವನ ಸೋದರ ಮಾವನ ಹಿಂಸೆ ತಿಳಿದು ಅವನು ಆ ಕ್ಷಣ ಊರಿಗೆ ಒರದುತ್ತನೆ. ಅಲ್ಲಿ ಎಲ್ಲವನ್ನು ಸರಿಮಾಡಿ ಅವನು ತಂಗಿ ಶಕುಂತಲ ನನ್ನು ತನ್ನ ಸ್ನೇಹಿತ ನಜುವಿನ ಮನೆಯಲ್ಲಿ ಬೆಳೆಯಲು ಬಿಡುತ್ತಾನೆ. ಸತ್ಯನಾರಯಣನಿಗೆ ದೇವಿ ಪ್ರಸಾದರ ತಂಗಿ ಲಿಲ್ಲಿಯ ಪರಿಚಯ ವಾಗುತ್ತದೆ. ಅವಳು ನೋಡಲು ಮತ್ತ್ತು ಹಾವ ಭಾವದಲ್ಲೂ ಇವನ ತದ್ದವಿರುದ್ಧ. ಅವಳೊಂದಿಗೆ ಭಾರತೀಯ ಸಂಸ್ಕೃತಿ ಬಗ್ಗೆ ಚರ್ಚಿಸಿ, ಹಿಂದೂ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಕೆಲವು ಪುಸ್ತಕಗಳನ್ನು ಓದಲು ಹೇಳುತ್ತಾನೆ.

ಲಿಲ್ಲಿ ಭಾರತಿಯ ಸಂಸ್ಕೃತಿಯ ಅಧ್ಯನ ಮಾಡಿ ಅದರ ಗುಣಗಳನ್ನು ಅರಿತು ತನ್ನ ಉಡುಗೆ ತೊಡುಗೆಗಳನ್ನೂ ಬದಲಿಸುತ್ತಾಳೆ. ಇವರಿಬ್ಬರ ಮಧ್ಯೆ ಇದ್ದ ಸ್ನೇಹ ಪ್ರೀತಿಯಾಗುತ್ತದೆ. ಒಬ್ಬರನೊಬ್ಬರು ಬಿಟ್ಟಿರಲು ಸಾಧ್ಯವಾದ ರೀತಿಯಲ್ಲಿ ಪ್ರೀತಿ ಬೆಳೆಯುತ್ತದೆ. ಲೀಲಿ ಹಿಂದುವಾಗಲು ಯಾವುದೇ ಮಾರ್ಗ ಇಲ್ಲ ಎಂದು ಯೋಚಿಸಿ ದುಃಖ ಪಡುತ್ತಾಳೆ. ಲಿಲ್ಲಿಯನ್ನು ಬಿಟ್ಟು ಜೀವನ ಮಾಡಲಾಗುವುದಿಲ್ಲವಲ್ಲ ಎಂದು ತಿಳಿದು ಅವನು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದುತ್ತಾನೆ. ಮಾಡುವೆ ಯಲ್ಲ ಆಗಿ ಜೀವನ ಸಂತೋಷದ ಊಯ್ಯಲೇ ಯಲ್ಲಿ ತೇಲುತ್ತಿರುವಾಗ ಕೆಲವು ಕಹಿ ಘಟನೆಗಳು ನಡೆಯುತ್ತವೆ. ಅವನು ತನ್ನ ಮತ ಬಿಟ್ಟು ಬೇರೆ ಮಠಕ್ಕೆ ಬಂದು ತಪ್ಪು ಮಾಡಿದೆ ಎಂದನಿಸುತ್ತದೆ. ಅವನಿಗೆ ಮತ್ತು ಲಿಲ್ಲಿಗೆ ಮತ್ತೆ ಹಿಂದುವಾಗಲು ಆಸೆ ಇದ್ದರು ಮಾರ್ಗ ಯಾವುದು ಇಲ್ಲ ಎನಿಸುತ್ತದೆ. ಇದರಿಂದ ಅವನ ಅರೋಗ್ಯ ಕೆಡುತ್ತದೆ. ಲಿಲ್ಲಿ ಅವನ ಸ್ಥಿತಿ ನೋಡಲಾಗದೆ ಶಂಕರನಿಗೆ ಪತ್ರ ಬರೆಯುತ್ತಾಳೆ. ಶಂಕರ ಆರ್ಯ ಸಮಾಜದ ಬಗ್ಗೆ ಮತ್ತು ಅವರು ಮಾಡುವ ಶುದ್ದಿ ಬಗ್ಗೆ ವಿವರಿಸಿ ಹೇಳುತ್ತಾನೆ. ಶಂಕರ ಮತ್ತೆ ಹಿಂದುವಾಗುತ್ತಾನೆ, ಲಿಲ್ಲಿ ಧರ್ಮಶ್ರೀ ಯಾಗುತ್ತಾಳೆ.

ಇಲ್ಲಿ ನಾವು ನೋಡಬೇಕಾದುದ್ದು  ಮತ್ತು ತಿಳಿದುಕೊಳ್ಳ ಬೇಕಾದುದು ಹಿಂದೂ ಧರ್ಮದಿಂದ ಹೋಗಲು ಮತ್ತು ಅವರನ್ನು ಸ್ವಾಗತಿಸಲು ನೂರಾರು ಜನರು ಮತ್ತು ಮಾರ್ಗಗಳಿವೆ ಆದರೆ ಬೇರೆ ಮತದವರನ್ನು ಬರಮಾಡಿಕೊಳ್ಳಲು ಯಾವುದೇ ದಾರಿಗಳಿಲ್ಲ. ಬೇರೆ ದೇಶದ ಜನರು ಹಿಂದೂ ಸಂಸ್ಕೃತಿಯ ಬಗ್ಗೆ ತಿಳಿದುಕೊಂಡು ಹಿಂದೂ ಸಮಾಜದ ಜೀವನ  ಮಾರ್ಗದಲ್ಲಿ ನೆದೆಬೇಕಾದರೆ ನಮ್ಮ ದೇಶದ ಜನ ಮಾತ್ರ ಅದರ ಬಗ್ಗೆ ಅಸಡ್ಡೆ ತೋರುತ್ತಾರೆ. ನಮಗೆ ನಮ್ಮ ಸಂಸ್ಕೃತಿಯಲ್ಲಿ ಆಸಕ್ತಿ ಕಳೆದುಕೊಳ್ಳಲು ಮೂಲ ಕಾರಣ ನಮ್ಮ ವಿಧ್ಯಾಭ್ಯಾಸ ಮತ್ತು ಶಿಕ್ಷಣ ಪದ್ಧತಿ. ಕಾನ್ವೆಂಟ್ ನಲ್ಲಿ ಓದಿ US ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಈ ವಿಶಾಲವಾದ ಸಂಸ್ಕೃತಿಯ ಬಗ್ಗೆ ಆಸಕ್ತಿ ಎಲ್ಲಿನದ ಬರಬೇಕು.

ನಾವು ಹುಟ್ಟಿನಿಂದ ಕೆಲಸ ಮಾಡಲು ಶಿಕ್ಷಣ ಮಾದುತ್ತೆಯೋ ಹೊರತು ನಮ್ಮ ಸಂಕೃತಿ, ನಮ್ಮ ರೀತಿ ನೀತಿ ಮತ್ತು ಜೀವನ ಕ್ರಮವನ್ನು ತಿಳಿದುಕೊಳ್ಳಲು ಅಲ್ಲ. ನಮ್ಮ ಓದುವ ಪಠ್ಯದಲ್ಲಿ ನಮ್ಮ ಸಂಸ್ಕೃತಿಯಯನ್ನು ತೆಗುಳುತ್ತಾರೆಯೋ ಹೊರತು ಯಾರು ಇದರ ವಿಶಾಲ ಪರಂಪರೆಯನ್ನು ವಿವರಿಸುವುದಿಲ್ಲ. ಇದೆಲ್ಲದರ ನಡುವೆ ಹಿಂದೂ ಮತದ ಮೇಲೆ ಮೇಲಿಂದ ಮೇಲೆ ನಡೆಯುತ್ತಿರುವ ಕೆಟ್ಟ ಪ್ರಚಾರ ನಮ್ಮ ಯುವ ಪೀಳಿಗೆ ಹಿಂದೂ ಸಂಸ್ಕೃತಿಯ ಬಗ್ಗೆ ಆಸಕ್ತಿ  ತೆಗೆದು ಕೊಳ್ಳದಿರಲು ಕಾರಣ. ನಮ್ಮ ಸಂಸ್ಕೃತಿ ಇನ್ನು ಸಾವಿರ ವರ್ಷ ಬಾಳಬೇಕಾದರೆ ನಾವು ನಮ್ಮ ಸಂಸ್ಕೃತಿಯ ಬಗ್ಗೆ ಜನರಿಗೆ ಅರ್ಥವಾಗುವಂತೆ ಸರಳ ರೀತಿಯಲ್ಲಿ ವಿವರಿಸಬೇಕು.

ಇನ್ನೊಂದು ಅನಿಸಿಕೆ :- http://goo.gl/r6oIjV