Aadu Kala - Sridhar Balagaara
ಇಂದ : ಕನ್ನಡ ಪ್ರಭ ದಿನಪತ್ರಿಕೆ
ವಿಮರ್ಶೆ - ವಾಸುದೇವ ಶೆಟ್ಟಿ
ಸ್ವಾರ್ಥವು ಮನುಷ್ಯನ ಕ್ರಿಯಾಶಕ್ತಿಯನ್ನು, ಮನುಷ್ಯತ್ವವನ್ನು ಹೇಗೆ ಕಳೆದುಬಿಡುತ್ತದೆ, ವ್ಯಕ್ತಿಯ ಸ್ವಾತಂತ್ರ್ಯ ಹೇಗೆ ಹರಣವಾಗುತ್ತ ಹೋಗುತ್ತದೆ ಎಂಬುದನ್ನು ಶ್ರೀಧರ ಬಳಗಾರ ಅವರು ತಮ್ಮ ‘ಆಡುಕಳ’ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಯಲ್ಲಾಪುರ ತಾಲೂಕಿನ ಬಿದ್ರಳ್ಳಿಯ ಮಣ್ಮನೆಯ ಕೃಷ್ಣಪ್ಪ ಮತ್ತು ದಶರಥ ಅಣ್ಣ ತಮ್ಮಂದಿರು. ದಶರಥ ತನ್ನ ಪಿತ್ರಾರ್ಜಿತ ಸ್ವತ್ತನ್ನು ಹಿಸ್ಸೆ ಮಾಡಿಕೊಂಂಡು, ಬಿದ್ರಳ್ಳಿಯ ಸಂಪರ್ಕಹೀನ ದ್ವೀಪದಂತೆ ಇದ್ದ ಆಡುಕಳದ ಆಸ್ತಿಯನ್ನು ಪಡೆದುಕೊಂಡ. ಹವ್ಯಕರಾದ ಇವರಿಗೆ ಕೃಷಿಯಲ್ಲಿ ಪ್ರೀತಿ ಇತ್ತು. ಆಡುಕಳದ ಪ್ರಶಾಂತ ಪರಿಸರ ಸ್ವಭಾವತಃ ನಿಸ್ಸಂಗಿಯಾಗಿದ್ದ ದಶರಥನಿಗೆ ಖುಷಿ ತಂದಿತ್ತು. ಆತನ ಕೃಷಿಗೆ ನೆರವಾಗಲೆಂದು ಅವರ್ಸಾ ಕಡೆಯ ಗಟ್ಟಿಮುಟ್ಟಾದ ಹೆಂಗಸು ಸಾವಿತ್ರಿಯನ್ನು ತಂದು ಮದುವೆ ಮಾಡಲಾಗಿತ್ತು. ಕೆಲವು ವರ್ಷದ ಸಂಸಾರದ ಬಳಿಕ ಸಾವಿತ್ರಿಗೆ ಮುಖದಲ್ಲಿ ಮೀಸೆ, ಗಡ್ಡ ಮೂಡಿ ಮನೆಯಿಂದ ಹೊರಬೀಳದಂತೆ ಆದಳು ಅವಳು. ಜನರ ಕುತೂಹಲದ ಪತ್ತೇದಾರಿತನ ಸಹಿಸದೆ ಅವಳು ಒಂದು ದಿನ ಮನೆ ಬಿಟ್ಟು ಯಾರಿಗೂ ಸಿಗದಂತೆ ಮಾಯವಾಗಿಬಿಡುತ್ತಾಳೆ. ಹೀಗೆ ಮಕ್ಕಳಿಲ್ಲದೆ ಒಂಟಿ ಜೀವನ ಸಾಗಿಸುತ್ತಿದ್ದ ದಶರಥನ ಫಲವತ್ತಾದ ಆಸ್ತಿಯ ಮೇಲೆ ಕೆಲವರ ಕಣ್ಣು ಬೀಳುತ್ತದೆ.
ಅವರಲ್ಲಿ ಅವನ ಅಣ್ಣ ಕೃಷ್ಣಪ್ಪ ಮತ್ತು ಅವನ ಹಿರಿಯ ಮಗ ಸೂರಣ್ಣ, ಖಾನಾವಳಿಯ ಗಂಗಣ್ಣ, ಮದ್ಗುಣಿ ಡಾಕ್ಟರು ಹೀಗೆ ಹಲವರು. ಆಡುಕಳದ ಒಂಟಿ ಮನೆಯಲ್ಲಿ ಏಕಾಂಗಿಯಾಗಿಯೇ ಉಳಿದ ದಶರಥನ ಮನೆಯನ್ನು ಕಳವು ಮಾಡಲು ಬಂದವರು ಏನೂ ಸಿಗದೆ ಸಿಟ್ಟಿನಿಂದ ಅವನನ್ನು ಬೆತ್ತಲುಗೊಳಿಸಿ ಒಂದು ಕಂಬಕ್ಕೆ ಕಟ್ಟುತ್ತಾರೆ. ಆತನ ಎಮ್ಮೆಯನ್ನು ಹೊಡೆದುಕೊಂಡು ಹೋಗುವ ಮೊದಲು ಅದರ ಕರುವನ್ನು ಅದೇ ಕಂಬಕ್ಕೆ ಕಟ್ಟಿ ಹೋಗುತ್ತಾರೆ. ಆ ಎಮ್ಮೆಯ ಕರುವು ತಾಯಿಯ ಮೊಲೆಯೆಂದು ದಶರಥನ ಶಿಶ್ನವನ್ನು ಸೀಬಿದ್ದಲ್ಲದೆ ಹಾಲು ಸಿಗದ್ದಕ್ಕೆ ತಲೆಯಿಂದ ಗುದ್ದಿ ಅವನ ಮರ್ಮಾಂಗವನ್ನು ಘಾಸಿಗೊಳಿಸುತ್ತದೆ. ಹೆಂಡತಿಯಿಲ್ಲದ ದಶರಥ ನಪುಂಸಕನೂ ಆಗಿಬಿಡುತ್ತಾನೆ.
ಅವನನ್ನು ಆಸ್ಪತ್ರೆಗೆ ಸೇರಿಸಿ ಉಪಚರಿಸಿದವನು ಖಾನಾವಳಿಯ ಗಂಗಣ್ಣ. ದಶರಥ ಮತ್ತೆ ಆಡುಕಳಕ್ಕೆ ಹೋಗದಂತೆ ತನ್ನ ಹೊಟೇಲಿನಲ್ಲಿಯೇ ಒಂದು ರೂಮನ್ನು ಆತನಿಗೆ ಕೊಡುತ್ತಾನೆ. ಆತನ ಈ ಸೇವೆಯ ಹಿಂದೆ ಆಡುಕಳದ ಜಮೀನನ್ನು ಪಡೆದುಕೊಳ್ಳಬೇಕೆಂಬ ಉದ್ದೇಶವಿರುತ್ತದೆ. ಗಂಗಣ್ಣನು ದಶರಥನನ್ನು ಪುಸಲಾಯಿಸಿ ಆಡುಕಳದ ಜಮೀನು ಹೊಡೆದುಕೊಳ್ಳುತ್ತಾನೆ ಎಂಬ ಗುಮಾನಿ ಅಣ್ಣ ಗಂಗಣ್ಣನಿಗೆ ಮತ್ತು ಆತನ ಮಗ ಸೂರಣ್ಣನಿಗೆ ಬಡಿಯುತ್ತದೆ. ದಶರಥನಿಗೆ ತಮ್ಮಲ್ಲಿಯೇ ಬಂದು ಉಳಿಯುವಂತೆ ಅವರು ಸಲಹೆ ನೀಡುತ್ತಾರೆ. ಈ ನಡುವೆ ಆಡುಕಳದಲ್ಲಿ ವಿಲಕ್ಷಣಗಳು ಸಂಭವಿಸುತ್ತವೆ. ಜೇನುಕೊಯ್ಯಲು ಬಂದ ಬಕಾಲ ನಾಪತ್ತೆಯಾಗುತ್ತಾನೆ. ಹಳ್ಳ ಒಡೆದು ಮೀನು ರಾಶಿರಾಶಿಯಾಗಿ ಸಾಯುತ್ತವೆ, ಕಬ್ಬಿನ ಗಾಣ ಮಾಡಿದಾಗ ನೊಣಗಳು ಕಾಡುತ್ತವೆ. ತೋಟದ ಕೆಲಸಕ್ಕಿದ್ದ ಹುಮಾಟಿ ಇದೆಲ್ಲ ಯಕ್ಷಿಣಿಯ ಕಾಟ ಎಂದು ಸುದ್ದಿ ಹಬ್ಬಿಸಿದ. ಈ ನಡುವೆ ಹುಮಾಟಿಯ ಹೆಂಡತಿ ಕಾಮಾಕ್ಷಿಗೆ ಮೈಮೇಲೆ ದೇವಿ ಬರುವುದು ಶುರು ಆಗುತ್ತದೆ. ದಶರಥ ಜಮೀನು ಮಾರದಂತೆ ಸೂರಣ್ಣ ತನ್ನ ಅಕ್ಕ ಶಾರದೆಯಿಂದ ತಕರಾರು ಅರ್ಜಿ ಸಲ್ಲಿಸುತ್ತಾನೆ. ಈ ನಡುವೆ ಕೃಷ್ಣಪ್ಪ ಸಾಯುವ ಮೊದಲು ದಶರಥನನ್ನು ಮನೆಗೆ ಕರೆಯಿಸಿ ಪಿತ್ರಾರ್ಜಿತ ಆಸ್ತಿಯನ್ನು ಬೇರೆಯವರಿಗೆ ಕೊಡಬೇಡ ಎಂದು ತಮ್ಮನಿಗೆ ಹೇಳುತ್ತಾನೆ. ಜೊತೆಗೆ ತನ್ನ ಮನೆಯಲ್ಲಿ ಪೆಟ್ಟಿಗೆಯಲ್ಲಿದ್ದ ಯಕ್ಷಿಣಿಯ ಮೂರ್ತಿಯನ್ನು ನೀಡಿ ಇದರ ಕಾಟದಿಂದಲೇ ನಿನಗೆ ಸುಖ ಇಲ್ಲ. ಅದನ್ನು ಆಡುಕಳದಲ್ಲಿ ಸ್ಥಾಪಿಸು ಎಂದು ಹೇಳುತ್ತಾನೆ. ಕಾಮಾಕ್ಷಿ ಕೂಡ ಮೈಮೇಲೆ ದೇವಿ ಬಂದಾಗ ದಶರಥನಿಗೆ ಭೂಮಿ ಮಾರದಂತೆ ತಾಕೀತು ಮಾಡುತ್ತಾಳೆ. ಅಪ್ಪ ಸತ್ತ ಬಳಿಕ ಸೂರಣ್ಣ ಚಿಕ್ಕಪ್ಪ ದಶರಥನನ್ನು ಪುಸಲಾಯಿಸಲು ನೋಡುತ್ತಾನೆ. ತಮ್ಮ ವಾಸುದೇವನಿಗೆ ಲಿಂಗಾಯತ ಹುಡುಗಿಯನ್ನು ತಂದು ಮದುವೆ ಮಾಡುತ್ತಾನೆ. ಇನ್ನೊಬ್ಬ ತಮ್ಮ ಪರಮೇಶ್ವರ ಪೇಟೆಯಲ್ಲಿ ಅಂಗಡಿ ಮಾಡುವ ತೆವಲಿಗೆ ಬಿದ್ದು ಮನೆಯಿಂದ ಹಣ ಕೇಳುತ್ತಾನೆ. ತನ್ನ ತಮ್ಮಂದಿರನ್ನು ಮನೆಯಿಂದ ಪ್ರತ್ಯೇಕ ಕಳುಹಿಸಬೇಕೆಂದು ಸಂಚು ಮಾಡುವ ಸೂರಣ್ಣ ಹಳೆಯ ಮನೆಯನ್ನು ಬೀಳಿಸುತ್ತಾನೆ. ಹೊಸ ಮನೆಯನ್ನು ಕಟ್ಟಿಸುವುದನ್ನು ಉದ್ದೇಶಪೂರ್ವಕವಾಗಿ ವಿಳಂಬಮಾಡುತ್ತಾನೆ. ಇದರಿಂದ ವಾಸುವೇವ ಮತ್ತು ಆತನ ಪತ್ನಿ ಕಿರಿಕಿರಿಯಾಗಿ ಕಲಘಟಗಿಗೆ ಹೋಗುತ್ತಾರೆ. ಸೂರಣ್ಣನ ಹೆಂಡತಿ ಭವಾನಿ ಎಲ್ಲ ಕುತಂತ್ರಗಳ ಹಿಂದಿನ ಮಿದುಳಾಗಿರುತ್ತಾಳೆ.
ಕಾಮಾಕ್ಷಿಯ ಪೂರ್ವಾಪರ ಗೊತ್ತಿರುವ ಯಜ್ಞೇಶ್ವರರು ಅದನ್ನು ಬಹಿರಂಗ ಮಾಡುವುದಿಲ್ಲ. ಅವಳಿಗೆ ದೇವಿ ಬರುವುದು ಸುಳ್ಳೆನ್ನುವುದು ಅವರಿಗೆ ಗೊತ್ತಾಗುತ್ತದೆ. ಸಿನಿಮಾ ನಟ ಕಾಂತರಾಜನಿಂದ ಆಡುಕಳದಲ್ಲಿ ದೇವಾಲಯ ನಿರ್ಮಾಣವಾದರೆ ತನ್ನ ಅಸ್ಮಿತೆ ಹೋಗುವುದೆಂಬ ಭಯದಲ್ಲಿ ಅದನ್ನು ಮಂದಿರ ಮಾಡದೆ ಗುರು ಮನೆ ಮಾಡಿ ಎಂದು ಕಾಮಾಕ್ಷಿ ಮೈಮೇಲೆ ದೇವಿ ಬಂದಾಗ ಹೇಳುತ್ತಾಳೆ. ಸೂರಣ್ಣ ಆ ಗುರುಪೀಠದಲ್ಲಿ ತನ್ನ ಚಿಕ್ಕಪ್ಪ ದಶರಥನನ್ನು ಪ್ರತಿಷ್ಠಾಪಿಸಿ ಆತನ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಾನೆ. ದುರಾಶೆಯ ಫಲ ಎನ್ನುವಂತೆ ಭವಾನಿ ತನ್ನ ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುತ್ತಾಳೆ. ಎಲ್ಲದರಲ್ಲಿಯೂ ಲಾಭವನ್ನೇ ನೋಡುವ, ಆಡುಕಳದಂಥ ಬಂಗಾರದ ಜಮೀನಿಗಾಗಿ ಎಲ್ಲರಿಗೂ ಮೋಸಮಾಡಲು ಸಿದ್ಧನಾಗಿದ್ದ ಸೂರಣ್ಣ ಆ ಜಮೀನನ್ನೇ ನಿರ್ಲಕ್ಷಿಸಿಬಿಡುತ್ತಾನೆ. ಇವೆಲ್ಲದರಿಂದ ಬೇಸತ್ತ ದಶರಥ ಗುರುಪೀಠದಿಂದ ಮಾಯವಾಗಿಬಿಡುತ್ತಾನೆ. ಸೂರಣ್ಣ ಮಾತ್ರ, ಗುರುಗಳು ಉತ್ತರಕ್ಕೆ ಹೋಗಿದ್ದಾರೆ ಎಂದು ಹೇಳುತ್ತ ವಂಚನೆಯ ಪರದೆಯ ಮುಂದೆಯೇ ಬದುಕಲು ನಿರ್ಧರಿಸುತ್ತಾನೆ. ಬೆವರು ಹರಿಸಿ ಬರುವ ಹಣಕ್ಕಿಂತ ಅನಾಯಾಸವಾಗಿ ಬರುವ ಹಣವೇ ಆತನಿಗೆ ಆಕರ್ಷಣೆಯಾಗುತ್ತದೆ. ಉತ್ತರಕನ್ನಡದ ಹವ್ಯಕರ ಆಡುಭಾಷೆ ಮತ್ತು ಸ್ಥಳೀಯರ ಆಡುಭಾಷೆಯಲ್ಲಿ ಸಂಭಾಷಣೆಗಳು ಇಲ್ಲಿ ನಡೆಯುತ್ತವೆ. ಕನ್ನಡ ನಿಘಂಟುವಿಗೆ ಸೇರಬೇಕಾದ ಅದೆಷ್ಟೋ ಪದಗಳು ಈ ಕಾದಂಬರಿಯಲ್ಲಿದೆ. ಕೆಲವು ಕಡೆ ಕಾದಂಬರಿಯು ಶೈಲಿಯಲ್ಲಿ ಪತ್ತೇದಾರಿ ಸೀಮೆಯನ್ನು ಮುಟ್ಟಿ ಮರಳಿದೆ. ಸಾವಿತ್ರಿಯ ನಾಪತ್ತೆ, ದಶರಥನ ಮೇಲೆ ಹಲ್ಲೆ, ಮಂದಿರದಲ್ಲಿ ಆತನಿಗೆ ಚಿಕಿತ್ಸೆ ನೀಡುವ ದಷ್ಟಪುಷ್ಟ ಆಸಾಮಿಗಳು, ಯಾರೂ ಜೊತೆಯಾಗಿ ನಿಂತು ಮಾತನಾಡದಂತೆ ಜಾಗ್ರತೆ ವಹಿಸುವ ಭವಾನಿ, ಕಾಮಾಕ್ಷಿಯ ಮೈಮೇಲೆ ಬರುವ ದೈವ ಇವೆಲ್ಲ ಒಗಟೊಗಟಾಗಿ ಕಾಣಿಸುತ್ತವೆ. ಆಕಾಶಕ್ಕೆ ಏಣಿ ಹಚ್ಚಿದಂತೆ ತೋರುತ್ತದೆ.
ಎಲ್ಲವನ್ನೂ ಗ್ರಹಿಸಬಲ್ಲವನಾಗಿದ್ದರೂ, ಬಂದಾಗ ನೋಡಿಕೊಳ್ಳೋಣ ಎಂಬ ಮನೋಭಾವದ ದಶರಥ, ಆತನಿಗೆ ಸಂಬಂಧಿಸಿದ ಎಲ್ಲ ದುರ್ಘಟನೆಗಳಿಗೂ ಸೂತ್ರಧಾರನಾದ ಸೂರಣ್ಣ ತಮ್ಮ ತಮ್ಮ ಮೂಲ ಶಕ್ತಿಯನ್ನು ಮರೆತದ್ದರಿಂದಲೇ ಕಾದಂಬರಿಯಲ್ಲಿ ಎಲ್ಲ ಕ್ರಿಯೆಗಳು ಜರುಗುತ್ತವೆ. ಮನುಷ್ಯನ ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಪ್ರತಿಯೊಬ್ಬನೂ ಸದಾ ಷಡ್ಯಂತ್ರವನ್ನು ಹೆಣೆಯುವುದರಲ್ಲಿ ತೊಡಗಿದಂತೆ ತೋರುವುದು. ಅದೇ ರೀತಿ ಪ್ರತಿ ವ್ಯಕ್ತಿಯೂ ತನ್ನ ಮಟ್ಟಿಗೆ ಒಬ್ಬ ಪತ್ತೇದಾರನಾಗಿರುತ್ತಾನೆ. ಇವೆಲ್ಲವೂ ಸ್ವಕೇಂದ್ರಿತವಾದಾಗ ವ್ಯಕ್ತಿತ್ವದ ಘನತೆ ಎಂಬುದು ಕುಸಿದು ಪಾತಾಳ ಸೇರುತ್ತದೆ. ಅದು ಸಾಮುದಾಯಿಕ ಉನ್ನತಿಯ ಉದ್ದೇಶವನ್ನು ಹೊಂದಿದಾಗ ಕ್ಷಮೆಗೆ ಅರ್ಹವಾಗುತ್ತದೆ. ಆದರೆ ಈ ಕಾದಂಬರಿಯಲ್ಲಿ ಕ್ಷಮೆಗೆ ಅರ್ಹರಾಗುವವರು ಯಾರೂ ಕಾಣುವುದಿಲ್ಲ. ಈ ದುರಂತವನ್ನು ಧ್ವನಿಸುವಲ್ಲಿ ಕಾದಂಬರಿ ಯಶಸ್ವಿಯಾಗಿದೆ.
ಈ ಪುಸ್ತಕ ಇಲ್ಲಿ ಕೊಳ್ಳಬಹುದು