Tuesday, August 27, 2013

ಚೋಮನ ದುಡಿ - ಶಿವರಾಮ ಕಾರಂತ

Chomana Dudi - Shivarama Karanth




ಈ ಕಾದಂಬರಿಯಲ್ಲಿ ಬಹಳವಾಗಿ ದಕ್ಷಿಣಕನ್ನಡ ಜಿಲ್ಲೆಯ ಹೊಲೆಯರ ಜೀವನಚಿತ್ರವಿದೆ. ಅಸ್ಪೃಶ್ಯರಾದ ಹೊಲೆಯರ ತಂಡದಲ್ಲಿ ಮೇರ, ಬೈರ, ಅಜಿಲ, ಮಾರಿ - ಎಂದು ನಾಲ್ಕಾರು ಬೇರೆ ಬೇರೆ ಭಾಗಗಳಿವೆ. ಅವರಲ್ಲಿ ಮೇರರು ಸಾಗುವಳಿಯನ್ನು ಮಾಡಿಕೊಂಡಿರಲು ಸಾಧ್ಯವಿದೆ. ಆದರೆ, ತೀರ ಕೆಳಗಿನವರೆಂದು ಎಣಿಸಲ್ಪಡುವ ಮಾರಿ ಹೊಲೆಯರಿಗೆ ಅಷ್ಟು ಅವಕಾಶವನ್ನು ಸಮಾಜ ಕೊಡುತ್ತಲಿಲ್ಲ. ದಕ್ಷಿಣಕನ್ನಡ ಜಿಲ್ಲೆಯ ಉತ್ತರ ಭಾಗದಲ್ಲಿ ಈ ಜನರನ್ನು ಇಂದಿಗೂ ಕೂಲಿಗೆ ಕರೆಯುವುದಿಲ್ಲ. ಆದರೆ ದಕ್ಷಿಣ ಭಾಗದಲ್ಲಿ ಹೊಲಗೆಲಸಗಳಿಗೇನೋ ಕರೆಯುತ್ತಾರೆ. ಅಂಥ ಬಳಗದ ಜೀವಿಯು ಚೋಮ. ಈತನೇ ಈ ಕಾದಂಬರಿಯ ಕಥಾನಾಯಕ.

ಚೋಮನದುಡಿ’ಯು ಕಾರಂತರ ಸಾಮಾಜಿಕ ದರ್ಶನಕ್ಕೆ ಹಿಡಿದ ಕನ್ನಡಿಯಂಥ ಕಾದಂಬರಿಯಾಗಿದೆ. ಈ ದೇಶದ ವಿದ್ಯಾವಂತರೆಲ್ಲ ಬ್ರಿಟಿಷರನ್ನು ಭಾರತದಿಂದ ಹೊರ ಹಾಕಿದರೆ, ನಮ್ಮ ಬಹುತೇಕ ಸಮಸ್ಯೆಗಳೆಲ್ಲ ಪರಿಹಾರವಾಗಿ ಬಿಡುತ್ತವೆ ಎಂದು ಕನಸು ಕಾಣುವ ಕಾಲದಲ್ಲಿ ಕಾರಂತರು ಚೋಮನದುಡಿಯಂಥ ಪುಟ್ಟ ಕಾದಂಬರಿಯನ್ನು ಬರೆದರು. ಕಾರಂತರ ಪ್ರಕಾರ ಈ ನಾಡಿನ ಸಮಸ್ಯೆ ಭೂಮಿಯ ಅಸಮರ್ಪಕ ಹಂಚಿಕೆಯಲ್ಲಿದೆ. ಈ ಸಮಸ್ಯೆಯು ಅಸ್ಪೃಶ್ಯತೆಯಂಥ ಪಿಡುಗಿನೊಂದಿಗೆ ಸೇರಿಕೊಂಡು, ಪರಿಸ್ಥಿತಿ ತೀರ ಸಂಕೀರ್ಣವಾಗಿದೆ.

ಚೋಮನದುಡಿ ಕಾದಂಬರಿಯಲ್ಲಿ ಮೂರು ಭಿನ್ನಭಿನ್ನ ವರ್ಗಕ್ಕೆ ಸೇರಿದ ಜನರಿದ್ದಾರೆ. ಮೊದಲನೆಯ ವರ್ಗವು ಪಾರಂಪರಿಕ ನಂಬಿಕೆಯನ್ನು ಪ್ರಕಟಪಡಿಸುವ, ಯಾವುದೇ ಬದಲಾವಣೆಯನ್ನು ಒಪ್ಪಲು ತಯಾರಿಲ್ಲದ ಸಂಕಪ್ಪಯ್ಯ ಮತ್ತು ಅವನ ತಾಯಿಯದು. ಎರಡನೆಯದು, ಇಂಥ ನಂಬಿಕೆಗಳ ಕಾರಣವಾಗಿಯೇ ಶೋಷಣೆಗೊಳಗಾಗುವ ಚೋಮ ಮತ್ತು ಅವನ ಕುಟುಂಬ ವರ್ಗದ್ದು. ಮೂರನೆಯದು, ಮೇಲಿನೆರಡೂ ಲೋಕಕ್ಕೆ ಅಪರಿಚಿತವಾಗಿರುವ, ಆದರೆ ಆಧುನಿಕ ತಿಳುವಳಿಕೆ ಮತ್ತು ಕಾನೂನುಗಳ ಸಹಾಯದಿಂದ, ಜನಪರ ಎಂದು ತೋರಿಸಿಕೊಳ್ಳುವ, ಸಂಪ್ರದಾಯಗಳಿಗೆ ಇದಿರಾಗಿರುವ ಕ್ರಿಶ್ಚಿಯನ್ ಲೋಕ. ಈ ಮೂರು ಲೋಕಗಳ ನಡುವಣ ಸಂಘರ್ಷವೇ ಕಾದಂಬರಿಯ ಉಸಿರು. ಸಂಘರ್ಷವನ್ನು ಕಾರಂತರು ನಿರ್ವಹಿಸಿದ ರೀತಿಯೇ ಅವರನ್ನು ದಲಿತ ಬಂಡಾಯ ಬರಹಗಾರರಿಗಿಂತ ಭಿನ್ನವಾಗಿ ನೋಡುವಂತೆ ಮಾಡಿದೆ.






0 comments:

Post a Comment