Bengaluru - Jogi ( Girish Rao )
ವಿಶ್ವವಾಣಿ ದಿನ ಪತ್ರಿಕೆಯಿಂದ (01-05-2016)
ಜೋಗಿಯವರ ಹೊಸ ಕಾದಂಬರಿಯ ಹೆಸರು ‘ಬೆಂಗಳೂರು’. ಬೆಂಗ ಳೂರೆಂಬ ಊರಿಗಿರುವ ಗುಣಗಳು ಈ ಕೃತಿಗೂ ಇವೆ. ‘ಗ್ರೀಷ್ಮ- ಹುಚ್ಚು ಬಿಸಿಲು, ಹುಚ್ಚು ಧಗೆ, ಹುಚ್ಚೆದ್ದಿದೆ ಕ್ರೌರ್ಯನ’ ಎಂಬ ಟ್ಯಾಗ್ಲೈನ್ ಕೃತಿಯ ಅಂತರಂಗ ವನ್ನು ತೆರೆಯುವ ಪ್ರವೇಶಿಕೆಯಂತಿದೆ. ಇಲ್ಲಿ ನಾಯಕರಿಲ್ಲ; ಪ್ರತಿನಾಯಕರಿದ್ದಾರೆ. ಸ್ವತಃ ಇದರ ಕರ್ಮ ಭೂಮಿಯೇ ಖಳ ನಾಯಕಿ. ಬೆಂಗಳೂರಿಗೆ ತಾಯಿಯ ವಾತ್ಸಲ್ಯವಿಲ್ಲ, ಅಕ್ಕನ ಮಮತೆ ಯಿಲ್ಲ. ಅದಕ್ಕಿರುವುದು ಸುಖದ ಭ್ರಮೆ ನೀಡುವ ವೇಶ್ಯೆಯ ಗುಣ ಮಾತ್ರ ಎಂದು ಪ್ರತಿಪಾದಿಸುವ ಈ ಕೃತಿಯನ್ನು ಓದಿದಾಗ, ದೆಹಲಿಯನ್ನು ‘ಭಾಗಮತಿ’ ಎಂಬ ಒಬ್ಬ ವೇಶ್ಯೆ ಯಂತೆ ಕಲ್ಪಿಸುವ ಖುಷ್ವಂತ್ ಸಿಂಗರ ಕಾದಂಬರಿಯ ನೆನಪಾಗುವುದು ಆಕಸ್ಮಿಕ ಆಗಿರಲಿಕ್ಕಿಲ್ಲ.
ಹುಟ್ಟಿ ಬೆಳೆದ ಊರು ಸಿದ್ದಕಟ್ಟೆ ಮತ್ತು ನೆಲೆಯೂರಿದ ಕರ್ಮಭೂಮಿ ಬೆಂಗಳೂರು ಗಳನ್ನು
ಏಕಸೂತ್ರದಲ್ಲಿ ಹೆಣೆಯುವ ನರಸಿಂಹ ಭಿಡೆ ಎಂಬಾತನ ಕಥಾನಕದ ಮೂಲಕ, ಮನುಷ್ಯ ನನ್ನು ನಿರಂತರ
ಕೆಡವಿಹಾಕುವ ಕ್ರೌರ್ಯಿದ ನೆಲೆಗಳನ್ನು ಶೋಧಿಸು ತ್ತಾರೆ ಜೋಗಿ. ಹುಟ್ಟಿಸಿದ ಅಪ್ಪ ಭಿಡೆ
ಯಂತೆ ಹುಚ್ಚನಾಗ ಬಾರದು ಎಂದುಕೊಳ್ಳುವ ನರಸಿಂಹ, ಅಪ್ಪನನ್ನು ಮೀರುವ ಯತ್ನದಲ್ಲಿ
ವಿಲಕ್ಷಣ ವ್ಯಕ್ತಿಯಾಗುತ್ತ ಹೋಗು ತ್ತಾನೆ. ಹುಚ್ಚನಾಗುವುದರಿಂದ ಸಮಾಜದಲ್ಲಿ ದೊರೆಯುವ
ಮಾನ್ಯತೆ ಆತನನ್ನು ಅಪರಾಧ ವರದಿಗಾರಿಕೆಯ ಹಾದಿಯಲ್ಲಿ ಬಲು ದೂರ ಕೊಂಡೊಯ್ಯುತ್ತವೆ.
ಪ್ರೀತಿಯನ್ನು ಸೃಷ್ಟಿಸ ಲಾಗದ, ಅದನ್ನು ಹಂಚಲಾಗದ ಪೊಳ್ಳು ವ್ಯಕ್ತಿತ್ವದ ನರಸಿಂಹ,
ಅಪ್ಪ- ಅಮ್ಮ- ಅಕ್ಕ- ಹೆಂಡತಿ ಹೀಗೆ ಎಲ್ಲರ ಮೇಲೂ ಸೇಡು ತೀರಿಸಿಕೊಳ್ಳಲು
ಮುಂದಾಗುತ್ತಾನೆ. ಬೆಂಗಳೂರನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದು ಭಾವಿಸುತ್ತಾನೆ.
‘ಇಲ್ಲಿ ಬೇರು ಬಿಡುತ್ತೇನೆ ಅನ್ನುವುದು ಭ್ರಮೆ. ಬೆಂಗಳೂರು ನೆಲೆಯಲ್ಲ,
ಪ್ಲಾಟ್-ಫಾರ್ಮು. ನೆಲವಲ್ಲ, ರಿಯಲ್ ಎಸ್ಟೇಟು. ಈ ಊರಿಗೆ ನೆನಪುಗಳನ್ನು ಸೃಷ್ಟಿಸುವ
ಶಕ್ತಿಯೂ ಇಲ್ಲ. ಇದೊಂದು ಕರ್ಮಭೂಮಿ. ಇಲ್ಲಿಗೆ ಮಂದಿ ದುಡಿಯುವು ದಕ್ಕೆ ಬರುತ್ತಾರೆ.
ಕೈದಿಗಳಂತೆ ದುಡಿಯುತ್ತಾರೆ.
ಮತ್ತೆ ತಮ್ಮೂರಿಗೆ ಮರಳಬೇಕು ಎಂದು ಹಂಬಲಿಸು ತ್ತಾರೆ. ಆದರೆ ಬೆಂಗಳೂರು ಅವರನ್ನು
ಮರಳಲು ಬಿಡುವುದಿಲ್ಲ. ಅಭಿಮನ್ಯುವಿನ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಈ ಚಕ್ರ ವ್ಯೂಹದ
ಒಳಹೊಕ್ಕ ವರು ಹೋರಾಡಿಯೇ ಮಡಿಯಬೇಕು’ ಎಂಬ ನರಸಿಂಹನ ಮಾತು ಗಳು, ಮುನ್ನುಡಿಯಲ್ಲಿ
ಕೃತಿಕಾರ ಆಡುವ ಮಾತುಗಳನ್ನು ಹೋಲುತ್ತವೆ. ಈ ಕೃತಿಯಲ್ಲಿ ಬೆಂಗಳೂರಿನ ಲ್ಯಾಂಡ್ ಮಾರ್ಕ್
ಅನ್ನಿಸುವ ಒಂದೇ ಒಂದು ಸ್ಥಳ ಕಾಣಿಸಿಕೊಳ್ಳುವುದಿಲ್ಲ. ಅಂದರೆ, ಇದು ಬೆಂಗಳೂರು ಎಂಬ
ಊರಿನ ಕುರಿತಾದ ದ್ದಲ್ಲ; ಬೆಂಗಳೂರು ಎಂಬ ಮನಸ್ಥಿತಿಯ ಕುರಿತಾದದ್ದು ಎಂದು ಭಾವಿಸಲು ಈ
ಕೃತಿಯ ಒಳಗೆ ಕಾರಣಗಳು ಸಿಗುತ್ತವೆ.
ಕ್ರೌರ್ಯಿದ ವಿಜೃಂಭಣೆ ಕೊಂಚ ಹೆಚ್ಚಾಯಿತೇ, ಇದರಿಂದ ಓದುಗ ಕ್ರೌರ್ಯೆದ ಪರಿಣಾಮಕ್ಕೆ
ಜಡವಾಗುವುದಿಲ್ಲವೆ, ಬೆಂಗಳೂರಿಗೆ ಅದೊಂದೇ ಮುಖ ಇರುವುದೇ ಎಂಬಿತ್ಯಾದಿ ಪ್ರಶ್ನೆಗಳನ್ನು
ನಾವು ಕೇಳಬಹುದು. ಮುನ್ನುಡಿಯಲ್ಲಿ ನರಸಿಂಹನ ಪಾತ್ರಕ್ಕೆ ಸಮೀಪವಾದ ಮಾತುಗಳನ್ನು ಜೋಗಿ
ಆಡಿರುವುದರಿಂದ, ಈ ಪ್ರಶ್ನೆಗಳನ್ನು ತಪ್ಪಿಸಿಕೊಳ್ಳಲು ಅವರಿಗೆ ಅವಕಾಶವಿಲ್ಲ. ಕೃತಿಗೆ
ಅಂದದ ಮುಖಪುಟ ರಚಿಸಿದವರು ಬಂಗಾಲಿ ಮೂಲದ ಕಲಾವಿದೆ. ಬೆಂಗಳೂರಿನ ಜನಸಂಖ್ಯೆಯಲ್ಲಿ
ಅತ್ಯಧಿಕ ಮಂದಿ, ಇಲ್ಲಿನ ಸಂಪತ್ತನ್ನು ಸೃಷ್ಟಿಸಿದವರು ಹೊರಗಿನವರು ಎಂಬುದಕ್ಕೂ ಇದಕ್ಕೂ
ಸಂಬಂಧ ಇರಬಹುದೆ? ಕೃತಿಯನ್ನು ಅಂಕಿತ ಪ್ರಕಾಶನ ಪ್ರಕಟಿಸಿದೆ.
0 comments:
Post a Comment