Sunday, May 1, 2016

ಹಲವು ಮಕ್ಕಳ ತಾಯಿ - ರಾಜಗೋಪಾಲ್ ಎಚ್ ವೈ

A Mother To Many -  Rajagopal H Y






ವಿಶ್ವವಾಣಿ ದಿನ ಪತ್ರಿಕೆಯಿಂದ (17-04-2016)

 

ಬೆಂಗಳೂರಿನ ಮಕ್ಕಳ ಕೂಟದ ಸಂಸ್ಥಾಪಕರಲ್ಲೊಬ್ಬರಾದ ಎಚ್ ವೈ ಸರಸ್ವತಿಯವರು ಹಿರಿಯ ಚಿಂತಕ ಎಚ್.ವೈ. ಶಾರದಾಪ್ರಸಾದರತಾಯಿ. ಬಹುಮುಖ ಪ್ರತಿಭೆಗಳ ಸಂಗಮವಾಗಿದ್ದ ಸರಸ್ವತಿ ಅವರ ಬಗ್ಗೆ ಅವರ ಇನ್ನೊಬ್ಬ ಪುತ್ರ ಎಚ್.ವೈ.ರಾಜಗೋಪಾಲ್  ಪುಸ್ತಕವೊಂದನ್ನು ಸಂಪಾದಿಸಿದ್ದಾರೆ. ಅಭಿನವ ಪ್ರಕಾಶನ ಪ್ರಕಟಿಸಿರುವ ‘ಹಲವು ಮಕ್ಕಳ ತಾಯಿ’ ಎಂಬ ಹೆಸರಿನ ಈ ಕೃತಿಯಲ್ಲಿರುವ ರಾಜಗೋಪಾಲರ ಲೇಖನದ ಆಯ್ದ ಭಾಗ ಇಲ್ಲಿದೆ.
 
ಹೊರಗಡೆ ಮನಸ್ಸನ್ನು ಸೂರೆಗೊಳ್ಳುವಂತೆ ಚೆಲ್ಲಿದ ಬೆಳದಿಂಗಳು. ಜೊತೆಗೆ ಎಲ್ಲಾ ಉಪಮೆಗಳನ್ನೂ  ಮೀರಿ  ನಿಂತ  ಪ್ರಶಾಂತತೆ.  ನಾನು  ಎಂದೂ  ಇಲ್ಲದಂತೆ ಅವತ್ತು ಸ್ವಲ್ಪ ಬೇಗನೆಯೇ ಮನೆ ತಲುಪಿದ್ದೆ. ಇತ್ತೀಚೆಗಂತೂ ಅರ್ಧದಷ್ಟು ಶಹರ ನಿದ್ದೆಗೆ ಜಾರಿದ  ಮೇಲಷ್ಟೇ  ಮನೆ  ಸೇರುವುದು  ನನಗೆ  ವಾಡಿಕೆಯಾಗಿಬಿಟ್ಟಿದೆ.  ಮನೆ  ತಲುಪಿದ ನಾನು,  ಹೊರಗಿನ  ಎಲ್ಲಾ  ಒತ್ತಡಗಳನ್ನೂ  ಮರೆತು  ಹಾಯಾಗಿ  ಮೇಜಿನ  ಎದುರಿನ ಕುರ್ಚಿಯಲ್ಲಿ  ಕುಳಿತುಕೊಂಡೆ.  ಒಂದೆರಡು  ವರ್ಷಗಳ  ಹಿಂದೆ  ಒಬ್ಬ  ಗಂಭೀರ ವಿದ್ಯಾರ್ಥಿಯಾಗಿ  ಅಭ್ಯಾಸದಲ್ಲಿ  ತೊಡಗಿಕೊಂಡು,  ಹೆಚ್ಚಿನ  ಪಾಂಡಿತ್ಯ  ಸಾಧನೆಗೆ ತವಕಿಸುತ್ತಿದ್ದ ನನ್ನ ಹಿಂದಿನ ದಿನಗಳನ್ನು ಮನಸ್ಸು ಮೆಲುಕು ಹಾಕುತ್ತಿತ್ತು...ತಾಯಿ ಬಂದು ನನ್ನ ಪಕ್ಕದಲ್ಲಿ ನಿಂತಳು.

ಇದು ಹಲವು ತಿಂಗಳುಗಳ ನಂತರ ನನಗೆ ಸಿಕ್ಕಿದ ಸೌಭಾಗ್ಯ ಮತ್ತು ಅವಳಿಗೆ ಸಿಕ್ಕಿದ ಅವಕಾಶ. ನನ್ನ ಸುತ್ತ ಹರಡಿದ ಮಾತೃತ್ವದ ಕಂಪನ್ನು ಆಸ್ವಾದಿಸುತ್ತಾ  ಅದರಲ್ಲೇ  ಮುಳುಗಿ  ಆನಂದವಾಗಿ  ಕನಸಿನಲ್ಲಿ  ವಿಹರಿಸಿದೆ.  ನಾನು ನಿನ್ನೆಯಷ್ಟೇ ಮಾಡಿದ್ದ ಭಾಷಣ, ಮನಸ್ಸಿನ ಒಳಗಿನ ಉದ್ವೇಗ, ಬಿಸಿ, ರಾಜಕೀಯ ಪರಿಸ್ಥಿತಿ, ಗಾಂಧಿಜೀಯ ಉಪವಾಸ - ಎಲ್ಲವೂ ತುಂಬಾ ತುಂಬಾ ದೂರ ಇದ್ದಂತೆ ಅನಿಸಿತು. ಪಾಪು, ರಾಜು, ಮೋಹನ, ಮಿಣಿ ಎಲ್ಲರೂ ಶನಿವಾರದ ಭಜನೆಯನ್ನು ರಾಗವಾಗಿ ಹಾಡುತ್ತಿದ್ದರು. ಬೀದಿಯಲ್ಲಿ  ಸೈಕಲ್  ಮೇಲೆ  ಯಾರೋ  ಹೋದಂತೆ  ಅನಿಸಿತು.  ಬೆಳದಿಂಗಳ ಛಾಯೆಯಲ್ಲಿ ಮುಖ ಕಾಣಿಸಲಿಲ್ಲ. ಆ ಮನುಷ್ಯನ ಕಣ್ಣುಗಳು ನನ್ನನ್ನೇ ಹುಡುಕುತ್ತಿರುವಂತೆ ಅನ್ನಿಸಿತು. ತಾಯಿಗೂ ಹಾಗೆಯೇ ಅನ್ನಿಸಿರಬೇಕು.
ಅವಳು  ಕೂಗಿ  ಹೇಳಿದಳು:  ‘ಅದು  ಶ್ರೀಕಂಠಶಾಸಿ  ಇರಬೇಕು.  ನಾನು ಬರುತ್ತಿರುವಾಗ ಆ ವ್ಯಾನ್ ಅವನ ಮನೆಯ ಹೊರಗೆ ನಿಂತಿದ್ದುದನ್ನು ನೋಡಿದ್ದೇನೆ’ ಹೌದು. ಅವನು ನಿನ್ನೆಯೂ ನನಗಾಗಿ ಹುಡುಕುತ್ತಿದ್ದ. ನನ್ನನ್ನು  ಬಂಧಿಸಬೇಕೆಂದಿದ್ದರೆ  ಅವನು  ನಿನ್ನೆ  ಬೆಳಿಗ್ಗೆಯೇ  ಯಾಕೆ ಬರಲಿಲ್ಲ? ಹೀಗಂದುಕೊಂಡ ನಾನು, ‘ನನ್ನನ್ನು ಬಂಧಿಸುವುದಕ್ಕಿಂತ ಯಾವುದೇ  ಸಾರ್ವಜನಿಕ  ಚಟುವಟಿಕೆಯಲ್ಲಿ  ಭಾಗವಹಿಸದಂತೆ ನಿರ್ಬಂಧನೆಯ  ಆದೇಶ  ನೀಡುವ  ಸಾಧ್ಯತೆಯೇ  ಹೆಚ್ಚು’  ಎಂದು ತಾಯಿಗೆ  ಹೇಳಿದೆ.  ಆದರೆ  ಅವಳು  ಅದನ್ನು  ನಂಬಲು  ಸಿದ್ಧವಿರಲಿಲ್ಲ. ಭವಿಷ್ಯದಲ್ಲಿ ಇನ್ನೇನು ಕಾದಿದೆಯೋ ಎಂದು ಭಾರವಾದ ಹೃದಯದಿಂದ ಅವಳು  ಅಡುಗೆಮನೆ  ಕಡೆ  ನಡೆದಳು.  ತುಂಬಾ  ಧೈರ್ಯಶಾಲಿ  ದೇಶಾಭಿಮಾನಿ ಒಂದೆಡೆಯಾದರೆ,  ಇನ್ನೊಂದೆಡೆ  ಚಡಪಡಿಸುವ  ಮಾತೃ  ಹೃದಯ.  ನನ್ನ ತಂದೆ-ತಾಯಿಯರ ಮಧುರ ಧ್ವನಿ ನನ್ನಲ್ಲಿ ಸಂಚಲನ ಉಂಟುಮಾಡುತ್ತದೆ.

ಅಂತಹ ನನ್ನ ತಂದೆ-ತಾಯಿಗೆ  ನಾನು  ಒಂದು  ಸಂತೋಷದ  ಕಾರಣ  ಆಗುವ  ಬದಲು  ಚಿಂತೆಗೆ ಕಾರಣವಾಗುತ್ತಿದ್ದೇನಲ್ಲ ಎಂದು ಬೇಸರಪಟ್ಟೆ...‘ಬಂದದ್ದು ಶ್ರೀಕಂಠ ಶಾಸಿಯೇ. ನನ್ನ ಮೇಜಿನ ಮೇಲಿದ್ದ ವಿದ್ಯುದ್ದೀಪದ ಬೆಳಕಿನಲ್ಲಿ ಅವನ  ಸೂಕ್ಷ್ಮ  ಕಣ್ಣುಗಳಿಗೆ  ನಾನು  ಕಂಡಿದ್ದೆ.  ನನ್ನ  ಕಿಟಕಿಯ  ಹತ್ತಿರ  ಬಂದ ಅವನು...‘ದಯವಿಟ್ಟು ನನ್ನನ್ನು ಕ್ಷಮಿಸು. ನನಗೆ ಇಷ್ಟವಿಲ್ಲದ ಈ ಕೆಲಸವನ್ನು ಮತ್ತೊಮ್ಮೆ ಮಾಡಬೇಕಾಗಿದೆ’ ಎಂದು...ಹೇಳಿದ. ತಾಯಿಗೆ ಮತ್ತು ಇತರರಿಗೆ ಈ ವಿಷಯ ತಿಳಿಸಿದೆ. ಹಠಾತ್ತಾಗಿ  ಕವಿದ  ಮೌನದಲ್ಲಿ  ಹಾಡಿನ  ಕೊನೆಯ  ಸ್ವರಗಳು  ಅನುರಣಿಸಿದವು.  ಅಸಹಜ ಮೌನ ಆವರಿಸಿತು...ತಾಯಿ ತುಂಬಾ ಅನ್ಯಮನಸ್ಕಳಾಗಿದ್ದಳು.

ಆದರೆ ಅವಳ ಕಣ್ಣುಗಳು ಛಲದ ಕಣ್ಣೀರಲ್ಲಿ ಹೊಳೆಯುತ್ತಿದ್ದವು. ಈ ಇಷ್ಟು ಸಂಕಟದ ನಡುವೆಯೂ ಅವಳಿಗೆ ನನ್ನ ಬಗ್ಗೆ ಹೆಮ್ಮೆ ಇದ್ದಿರಬೇಕು. ಅಷ್ಟೇ ನನಗೆ ಬೇಕಾಗಿರುವುದು ಕೂಡ. ತಂದೆ ಮಾತ್ರ ಸಾಕಷ್ಟು ವಿಚಲಿತರಾದಂತೆ ಕಂಡರು. ನನಗೂ ಶಂಕರಪ್ಪನಿಗೆ ಆದ ಹಾಗೆಯೇ ಆಗಬಹುದು ಎಂಬ ಭಯ  ಅವರಿಗೆ  ಇದ್ದಿರಬೇಕು...ಜೈಲಿನಲ್ಲಿ  ಯಾವುದೇ  ವಿಷಯವನ್ನು  ಅತಿರೇಕಕ್ಕೆ ತೆಗೆದುಕೊಂಡು ಹೋಗದಂತೆ ಮತ್ತೆ ಮತ್ತೆ ಅವರು ನನ್ನನ್ನು ಕೇಳಿಕೊಂಡರು...’ ಅಣ್ಣನನ್ನು ಪೊಲೀಸರು ಅದೇ ರಾತ್ರಿ ಬಂಧಿಸಿದರು. ಕೆಲವು ಕಾಲ ಮೈಸೂರು ಜೈಲಿನಲ್ಲಿ, ಆಮೇಲೆ ಬೆಂಗಳೂರು ಜೈಲಿನಲ್ಲಿದ್ದು ಒಟ್ಟು ಹತ್ತು ತಿಂಗಳ ಮೇಲೆ ಬಿಡುಗಡೆ ಹೊಂದಿದ.

ಅವನು  ಜೈಲಿನಲ್ಲಿದ್ದಾಗ  ಅಲ್ಲಿ  ನಡೆದ  ಸಂಗತಿಗಳು,  ಅಲ್ಲಿ  ತನಗಾದ  ಅನುಭವಗಳು, ತಂದೆ-ತಾಯಿಯರನ್ನು  ಅವನು  ನೆನಸಿಕೊಳ್ಳುತ್ತಿದ್ದುದು,  ಅವರು  ಕಷ್ಟಪಟ್ಟು  ಜೈಲಿನ ಬಾಗಿಲಿಗೆ  ಹೋಗಿ  ಜೈಲರನ  ಅನುಮತಿ  ಪಡೆದು  ಕೆಲವೇ  ನಿಮಿಷ  ಅವನನ್ನು ನೋಡಿಬರುತ್ತಿದ್ದುದು  -  ಇವೆಲ್ಲ  ನಮ್ಮ  ಮನೆಯ  ಚರಿತ್ರೆಯ  ಒಂದು  ವಿಶಿಷ್ಟ  ನೆನಪಿನ ಸಂಪುಟವಾಗಿವೆ. ತಂದೆ ತಾಯಿ ಆ ದಿನಗಳಲ್ಲಿ ತುಂಬಾ ಮಾನಸಿಕ ಕಷ್ಟಗಳನ್ನು ಹೊತ್ತರು.ಜೊತೆಗೆ ಆರ್ಥಿಕ ಕಷ್ಟವೂ ಇತ್ತೆಂದು ಅಣ್ಣ ಬರೆಯುತ್ತಾನೆ, ಅದು ಹುಡುಗರಾದ ನಮ್ಮ ಕಣ್ಣಿಗೆ ಗೋಚರವಾಗುತ್ತಿರಲಿಲ್ಲವಾದರೂ. ಆದರೆ ಎಂಥ ಪರೀಕ್ಷೆಯಲ್ಲೂ ಅಧಿರಳಾಗದೆ, ಕುಸಿಯದೆ ನಿಂತಳು ಅಮ್ಮ. ಅವಳಿಗೆ ಆಗ 36 ವಯಸ್ಸು, ನನ್ನ ಪುಟ್ಟ ತಂಗಿ ನೀರಜಾಳಿಗೆ ಎರಡು ವರ್ಷವಷ್ಟೆ.
ಜೈಲಿನಿಂದ ಬಿಡುಗಡೆಯಾದ ಮಾರನೆಯ ವರ್ಷ ಅಣ್ಣ ಮತ್ತೆ ಕಾಲೇಜು ಸೇರಿ ತನ್ನ ಎರಡನೆಯ  ವರ್ಷದ  ಇಂಗ್ಲಿಷ್  ಆನರ್ಸ್  ವಿದ್ಯಾಭ್ಯಾಸ  ಮುಂದುವರೆಸಿದ.  ಅದರ ಮುಂದಿನ ವರ್ಷ ಬಹಳ ಮುತುವರ್ಜಿಯಿಂದ ಓದಿ ಮೂರನೆಯ ವರ್ಷದ ಪರೀಕ್ಷೆಯಲ್ಲಿ ಪ್ರಥಮ  ದರ್ಜೆಯಲ್ಲಿ  ಪ್ರಥಮ  ಸ್ಥಾನದೊಂದಿಗೆ  ತೇರ್ಗಡೆಯಾದ.  ಪರೀಕ್ಷೆ  ಮುಗಿಸಿ -ಲಿತಾಂಶಕ್ಕೆ ಕಾಯುತ್ತಿದ್ದ ಸಮಯದಲ್ಲಿ ಅಣ್ಣ ನನ್ನ ಅಕ್ಕ ಕಸ್ತೂರಿಗೂ, ನನಗೂ ಆರ್. ಕೆ. ನಾರಾಯಣ್ ಬರೆದ    Swami and Friends     ಓದಿ ಹೇಳುತ್ತ, ಅದನ್ನು ಹಾಗೇ ಕನ್ನಡಕ್ಕೆ ಭಾಷಾಂತರ ಮಾಡಿ ‘ಸ್ವಾಮಿ ಮತ್ತು ಅವನ ಸ್ನೇಹಿತರು’ ಎಂಬ ಹೆಸರಿನಲ್ಲಿ ಪ್ರಕಟಿಸಿದ. ಆರ್.  ಕೆ.  ಲಕ್ಷ್ಮಣ್  ಚಿತ್ರಗಳಿಂದ  ಕೂಡಿದ  ಆ  ಪುಸ್ತಕ  ಪ್ರಕಟವಾದೊಡನೆ  ಅತ್ಯಂತ ಜನಪ್ರಿಯವಾಯಿತು. (ನಾರಾಯಣ್ ಆಗ ನಮ್ಮ ಪಕ್ಕದ ಮನೆಯಲ್ಲೇ ಇದ್ದರು.)-ಲಿತಾಂಶ  ತಿಳಿದ  ಮೇಲೆ  ಅಣ್ಣ  ಮದರಾಸಿನ   Indian  Express   ಪತ್ರಿಕೆಯಲ್ಲಿ ಉಪಸಂಪಾದಕನಾಗಿ  ಕೆಲಸಕ್ಕೆ  ಸೇರಿದ.

ಅಪ್ಪ  ಆ  ದಿನಗಳಲ್ಲಿ  ನಾಗಮಂಗಲದಲ್ಲಿ ಕೆಲಸದಲ್ಲಿದ್ದರು. ಅಣ್ಣ ಅವರನ್ನು ಹೋಗಿ ನೋಡಿ ಹಾಗೆಯೇ ಅಲ್ಲಿಂದ ಮುಂದಕ್ಕೆ ಮದರಾಸಿಗೆ ಹೋದ. ಒಂದು ಸಣ್ಣ ಹಾಸಿಗೆ ಸುರುಳಿ ಮಾತ್ರ ಹೊತ್ತು ಹೊರಟ ಅಣ್ಣ. ಅವನು ಅಪ್ಪನನ್ನು ನೋಡಿ ಮತ್ತೆ ಮೈಸೂರಿಗೆ ಬಂದು  ಆಮೇಲೆ  ಮದರಾಸಿಗೆ  ಹೋಗುತ್ತಾನೆ  ಎಂದು  ಎಣಿಸಿದ್ದೆ. ಹಾಗಾಗದೆ  ಅವನು  ನಾಗಮಂಗಲದಿಂದ  ಸೀದ  ಮದರಾಸಿಗೆ ಹೋದದ್ದು  ನನ್ನ  ಮನಸ್ಸಿಗೆ  ಕಷ್ಟವಾಯಿತು.  ಅಣ್ಣ  ನಮ್ಮೆಲ್ಲರಿಗೂ ಅಷ್ಟು ಮೆಚ್ಚಾಗಿದ್ದ. 1947ರಲ್ಲಿ  ದೇಶಕ್ಕೆ  ಸ್ವಾತಂತ್ರ್ಯ  ಬಂದಾಗ  ಮನೆಯಲ್ಲಿ  ಅಮ್ಮ ಸಂಭ್ರಮದಿಂದ  ಹಬ್ಬ  ಮಾಡಿದ್ದಳು.  ನಮಗೆಲ್ಲ  ಹೊಸ  ಬಟ್ಟೆ ಹೊಲಿಸಿದ್ದಳು.

ಮನೆಯನ್ನು  ಸ್ವಚ್ಛಗೊಳಿಸಿ  ತೋರಣ  ಕಟ್ಟಿ  ಮನೆಯ ಮೇಲೆ ಧ್ವಜ ಹಾರಿಸಿದ್ದೆವು. ಅಣ್ಣ ಆ ವೇಳೆಗೆ ಮದರಾಸಿನಿಂದ ವರ್ಗ ಹೊಂದಿ ಬೊಂಬಾಯಲ್ಲಿ National Standard  ಪತ್ರಿಕೆಯಲ್ಲಿ ವಾರ್ತಾ ಸಂಪಾದಕನಾಗಿದ್ದ. ಸ್ವಾತಂತ್ರ್ಯ  ಶುಭದಿನವನ್ನು  ಎದುರುಗೊಳ್ಳಲು  ‘ವಿಜಯೋತ್ಸಾಹದಿ  ನಲಿಯುವ  ಬನ್ನಿ’ ಎಂದು  ಅವನು  ಬರೆದು  ಕಳಿಸಿದ್ದ  ಗೀತೆಗೆ  ಅಪ್ಪ  ರಾಗ  ಸಂಯೋಜನೆ  ಮಾಡಿ  ಅದನ್ನು ನಮಗೆಲ್ಲ ಹೇಳಿಕೊಟ್ಟಿದ್ದರು. ಅದನ್ನು ಅದೇ ದಿನ ಮಧ್ಯಾಹ್ನ ಶಿವರಾಮಪೇಟೆಯಲ್ಲಿದ್ದ ರಾಜಕಮಲ್  ಥಿಯೇಟರಿನಲ್ಲಿ  ನಡೆದ  ಸಾರ್ವಜನಿಕ  ಸಭೆಯಲ್ಲಿ  ಹಾಡಿದ್ದೆವು.  ಮಕ್ಕಳ ಕೂಟದಲ್ಲಿ, ಮತ್ತಿತರ ಕಡೆ ನಡೆದ ಸ್ವಾತಂತ್ರೊ ತ್ಸವ ಸಮಾರಂಭಗಳಲ್ಲಿ ಅಮ್ಮನೂ ನಾವೂ ಭಾಗವಹಿಸಿದೆವು.ಆದರೆ ಆ ಸಂಭ್ರಮ ಮುಗಿಯುತ್ತಿದ್ದಂತೆ ಮೈಸೂರಲ್ಲಿ ಮತ್ತೆ ಚಳವಳಿ ಪ್ರಾರಂಭಿಸಿತು.

ಮೈಸೂರು  ದೇಶೀಯ  ಸಂಸ್ಥಾನವಾಗಿದ್ದು  ಅದು  ಭಾರತದಲ್ಲಿ  ವಿಲೀನವಾಗಲು  ಆ ಮೊದಲೇ ಒಪ್ಪಿಗೆ ಕೊಟ್ಟಿದ್ದರೂ ಅಲ್ಲಿ ಇನ್ನೂ ಜವಾಬ್ದಾರಿ ಸರ್ಕಾರ ( responsible government ) ಬಂದಿರಲಿಲ್ಲ. ಇನ್ನೂ ದಿವಾನರ ಸರಕಾರವೇ ನಡೆಯುತ್ತಿತ್ತು. ಸರ್ ಆರ್ಕಾಟ್ ರಾಮಸ್ವಾಮಿ  ಮೊದಲಿಯಾರರು  ಆಗ  ದಿವಾನರು.  ಅವರ  ವಿರುದ್ಧ  ಮೈಸೂರು ಸಂಸ್ಥಾನದಲ್ಲೆಲ್ಲ  ಪ್ರತಿಭಟನೆ  ಮೊದಲಾಯಿತು.  ‘ಆರ್ಕಾಟರೇ  ತೊಲಗಿ’  ‘ಆರ್ಕಾಟ್ ಬಾಯ್ಕಾಟ್’ ಎಂಬ ಘೋಷಣೆಗಳು ಊರಲ್ಲೆಲ್ಲ ಹಬ್ಬಿದ್ದವು. ನೂರಡಿ ರಸ್ತೆ ಮತ್ತು ಆಗಿನ ವೈಸ್‌ರಾಯ್  ರಸ್ತೆ  ಸೇರುವ  ಐದು  ದೀಪದ  ವೃತ್ತದಲ್ಲಿ  ಸೇರಿದ್ದ  ಜನರ  ಮೇಲೆ  ಅಂದಿನ ಮೈಸೂರು ಜಿಲ್ಲೆಯ ಡೆಪ್ಯುಟಿ ಕಮಿಷನರ್ ಜಿ. ಎನ್. ನಾಗರಾಜರಾಯರು ಗೋಲಿಬಾರು ಮಾಡಲು ಪೊಲೀಸರಿಗೆ ಆe ಇತ್ತರು.

ಅಂದಿನ ಗೋಲಿಬಾರಿನಲ್ಲಿ ರಾಮಸ್ವಾಮಿ ಎಂಬ ಹಾರ್ಡ್ವಿಕ್ ಹೈಸ್ಕೂಲು ವಿದ್ಯಾರ್ಥಿ ಸತ್ತ. (ಇತ್ತೀಚೆಗೆ ಓದಿದ ಒಂದು ಲೇಖನದ ಪ್ರಕಾರ ನಾಗರಾಜರಾಯರೇ ತಮ್ಮ ಪಿಸ್ತೂಲಿನಿಂದ ರಾಮಸ್ವಾಮಿಯ ಮೇಲೆ ಗುಂಡು ಹಾರಿಸಿದರು ಎಂದು ತಿಳಿಯುತ್ತದೆ. ಅಲ್ಲದೆ ರಾಮಸ್ವಾಮಿ ನಾನು ಹಾರ್ಡ್ವಿಕ್ ಹೈಸ್ಕೂಲಿನಲ್ಲಿ ಮಿಡಲ್ ಮೊದಲನೆಯ ಮತ್ತು ಎರಡನೆಯ ಇಯತ್ತೆ ಓದುತ್ತಿದ್ದಾಗ ನಮ್ಮ ಕ್ಲಾಸಿನಲ್ಲೇ ಇದ್ದ ಎಂಬ ಸಂಗತಿಯೂ  ತಿಳಿಯಿತು.)  ಅವನ  ನೆನಪಿನಲ್ಲೇ  ಅಂದಿನಿಂದ  ಆ  ವೃತ್ತಕ್ಕೆ  ರಾಮಸ್ವಾಮಿ ಸರ್ಕಲ್ ಎಂದು ಹೆಸರಾಗಿದೆ.




0 comments:

Post a Comment