Thursday, June 12, 2014

ಸಮೀಕ್ಷೆ - ಶಿವರಾಮ ಕಾರಂತ


Sameekshe - Shivarama Karanth




ಈ ಬರಹ, ಕೆಲವು ವ್ಯಕ್ತಿಗಳನ್ನು ತನ್ನ ಮುಂದಕ್ಕಿರಿಸಿಕೊಂಡು, ಅವರ ಬಾಳಿನ ಸಮೀಕ್ಷೆ ನಡೆಯಿಸಲೆತ್ನಿಸುತ್ತದೆ. ಯಾವುದು ಸಾರ್ಥಕ, ಯಾವುದು ನಿರರ್ಥಕ? ಈ ‘ಅರ್ಥ’ ಯಶಸ್ಸಿನ ದೃಷ್ಟಿಯಿಂದಲ್ಲ-ಜೀವನ ಅರ್ಥವತ್ತಾಗಿ, ರಸವತ್ತಾಗಿ, ಸಹ್ಯವಾಗಿ ಕಾಣಿಸಬೇಕೆಂಬ ದೃಷ್ಟಿಯಿಂದ.

ಒಬ್ಬೊಬ್ಬರ ಬದುಕಿಗೆ ಒಂದೊಂದು ಆದರ್ಶ ನೆರವಾಗಬಹುದು. ಒಂದೊಂದು ಗುರಿ ಕೈದೀವಿಗೆಯಂತೆ ನಡೆಯಿಸಿಕೊಂಡು ಹೋಗಬಹುದು. ಒಬ್ಬನ ಬೆಳಕು ಇನ್ನೊಬ್ಬನಿಗೆ ಬೆಳಕೇ ಆಗಿ ಕಾಣಿಸದಿರಲೂ ಬಹುದು. ಈ ತತ್ವವನ್ನು ಒಪ್ಪಲು ಸಿದ್ಧವಿದ್ದವರಿಗೆ - ತಮ್ಮ ಆಚೀಚೆ ಅನೇಕ ಸುಂದರ ದೃಶ್ಯಗಳು ಕಾಣಿಸಬಹುದು. ಆದರೆ, ಹುಡುಕಿ ನೋಡಬೇಕು. ಯಶಸ್ಸು ಬಾಜಾರದಲ್ಲಿ ಮೆರೆಯಬಲ್ಲದು. ಕರ್ತವ್ಯವಾಗಿ ಮಾಡಿದ್ದು ಅಷ್ಟೊಂದು ಬೆಳಕಿಗೆ ಬರಲಾರದು.

ಸೂರ್ಯಕಾಂತಿ ಹೂವು ದೊಡ್ಡದಾಗಿ ಆಡಂಬರದಿಂದ, ಸೂರ್ಯನ ಬೆಳಕು ಬೀಳುವ ಕಡೆಗೇನೆ ಮುಖ ಹಿಡಿದು 'ನಾನಿದ್ದೇನೆ' ಎಂದು ಸಾರಿ ಹೇಳುತ್ತದೆ. ಗಿಡ =, ಹೂ, ಜೀವನ - ಹೇಗೆ ಇದ್ದರೂ, ಅದರ ಇರವು, ಕೀರ್ತಿ ಊರಿಂದೂರಿಗೆ ಹಬ್ಬುತ್ತ್ತದೆ. ಆದರೆ ನೈದಿಲೆ? ಕೆಸರಲ್ಲಿ ಹುಟ್ಟಿ, ಹಗಲೆಲ್ಲ ಕಾದು, ಚಂದಿರನ ಬಯಸಿ, ದೊರೆತ ಬೆಳಕಿನಿಂದ ಸಂತೋಷ ಪದೆಯುತ್ತದೆ.

ಸೂರ್ಯಕಾಂತಿ ಅರಳಿ, ಬಾಡಿ, ಉದುರಿವ ತನಕವೂ ಬೆಳಕಿನಲ್ಲಿ ಮೆರೆದಾದುತ್ತದೆ. ನೈದಿಲೆ ಅರಳುವ ತನಕವೂ ನೇರ ಕೆಲಗೇನೆ ಇದ್ದು, ಮೊದಲ ದಿನ ಮೇಲೆ ಬಂದು, ಮೂರು ದಿನ ಸಕಾಲದಲ್ಲಿ ಅರಳಿ, ಮುಚ್ಚಿ, ಸಾವು ಸಂನಿಹಿತವಾಗುವಾಗ ನೀರಲ್ಲಿ ತಲೆ ತಗ್ಗಿಸಿಕೊಂಡು ಅಡಗುತ್ತದೆ! ಒಂದಿಷ್ಟೂ ಆಡಂಬರವಿಲ್ಲ: ಬಂದುದೂ ಗೊತ್ತಿಲ್ಲ; ಹೋದುದೂ ಗೊತ್ತಿಲ್ಲ

ಯಾವುದು ಅರ್ಥವತ್ತಾದ ಬಾಳು?

ಅರ್ಥವರಿಯಲೆತ್ನಿಸಿ, ಅದರಂತೆ ಬಾಳಲೆತ್ನಿಸಿದ ಸೋಲೂ - ಯಶಸ್ವಿಯಾದುದಲ್ಲವೇನು? ಬಾಳಿನಲ್ಲಿ ಕಾಣಿಸದ ಅರ್ಥ ಎಲ್ಲಿದ್ದರೇನು? ಎಷ್ಟಿದ್ದರೇನು? ಯಾರ ಸಲುವಾಗಿ ಅದಿರಬೇಕು?

ಈ ಪ್ರಶ್ನೆಯನ್ನು ಉತ್ತರಿಸಲು, ತಮ್ಮ ನಿಜ ಜೀವನದಿಂದ ನೆರವಾದ ಹತ್ತಾರು ಸಾಮಾನ್ಯ ಜನರು, ನನಗೆ ಈ ಕಾದಂಬರಿಯ ವಸ್ತುವನ್ನು ಒದಗಿಸಿಕೊಟ್ಟು ಉಪಕಾರ ಮಾಡಿದ್ದಾರೆ. ಅಂಥವರ ಹಿರಿತನವನ್ನು ಮರೆಯುವಂತಿಲ್ಲ.

- ಶಿವರಾಮ ಕಾರಂತ





0 comments:

Post a Comment