Wednesday, May 28, 2014

Filled Under:
, ,

ವಂಶವೃಕ್ಷ - ಎಸ್ ಎಲ್ ಭೈರಪ್ಪ

Vamshavruksha - S L Bhyrappa


ಈ ಕಾದಂಬರಿ ಮೂರು ತಲೆಮಾರಿನದ್ದು. ಈ ಕಾದಂಬರಿಯಲ್ಲಿ ಆಧ್ಯಾತ್ಮ, ವಿದವೆಯ ಮರು ಮದುವೆ, ಎರಡನೇ ಮದುವೆ, ಪ್ರೀತಿ, ಕಟ್ಟು ಪಾಡು ಎಲ್ಲವನ್ನು ಒಂದು ಸುಸಜ್ಜಿತ ರಂಗಮಂಚದ ಮೇಲೆ ತೋರಿಸುವಂತೆ ಭೈರಪ್ಪನವರು ಬರೆದಿದ್ದಾರೆ. ಇಲ್ಲಿ ನಾವು ತಿಯಬೇಕಾದ ವಿಷಯ ಏನೆಂದರೆ ಈ ಕಾದಂಬರಿ ಪ್ರಕತವಾದುದ್ದು ೧೯೬೫ರಲ್ಲಿ, ಆ ಕಾಲದಲ್ಲಿ ಭಾರತದಲ್ಲಿ ವಿದವೆಯ ಮರು ಮಾಡುವೆ ಎಂದರೆ ಮೂಗು ಮುರಿಯುತ್ತಿದ್ದರು ಅಂಥ ಕಾಲದಲ್ಲಿ ಈ ಕಾದಂಬರಿಯನ್ನು ಬರೆದಿದ್ದಾರೆ. ಇಲ್ಲಿ ಬರುವ ಪಾತ್ರಗಳು ಸಮಜಾದ ಕಟ್ಟು ಪಾಡನ್ನು ಮುರಿದು ಹೊಸ ಜೀವನಕ್ಕೆ ನಾಂದಿ ಹಾಡುತ್ತಾರೆ. 

ಶ್ರೀನಿವಾಸ ಶ್ರೋತೃಗಳ ಮಗ ಕಪಿಲ ನದಿಯ ರಬಸಕ್ಕೆ ಸಿಲುಕಿ ಸತ್ತಿರುತ್ತಾನೆ, ಅವನ ಹೆಂಡತಿ ಕಾತ್ಯಯಿನಿ ಒಂದು ಗಂಡು ಮಗುವಿನ ತಾಯಿ. ಕಾತ್ಯಯಿನಿ ಗೆ ಇನ್ನು ಚಿಕ್ಕ ವಯಸ್ಸು ಶ್ರೀನಿವಾಸ ಶ್ರೋತೃಗಳು ಆಧ್ಯಾತ್ಮ ಮನೋಭಾವದವರಾದರು ಅದನ್ನು ಯಾರ ಮೇಲು ಹೇರುವುದಿಲ್ಲ ಅದಕ್ಕೆ ಮಗ ಸತ್ತ ಮೇಲೆ ಕಾತ್ಯಯಿನಿಗೆ ಸಂಪ್ರದಾಯದಂತೆ ತಲೆ ಬೋಳಿಸಿ ಕೆಂಪು ಸೀರೆ ಉಡಲು ಹೇಳುವುದಿಲ್ಲ. ಕಾತ್ಯಯಿನಿಗೆ ಮನೆಯಲ್ಲಿ ಗಂಡ ಇಲ್ಲ ಎನ್ನುವುದು ಬಿಟ್ಟರೆ ಬೇರೆ ತೊಂದರೆಗಳಿಲ್ಲ. ಅತ್ತೆ ತುಂಬ ಒಳ್ಳೆಯವರು, ಮನೆ ಕೆಲಸ, ಮಗು ಹಾಡಿಸುವುದರಲ್ಲಿ ಕಾಲ ಹೊಗುತ್ತದೆ. ಆದರು ಒಂದೊಂದು ದಿನ ಬೇಜಾರಾಗುವುದು ಸಾಮಾನ್ಯ. 

ಸದಾಶಿವರಾಯರು ಆಗ ತಾನೆ ಭಾರತದ ಐತಿಹಾಸಿಕ ಪುಸ್ತಕ ಬರೆದು ಇಂಗ್ಲೆಂಡಿನಲ್ಲಿ ಪ್ರಸಿದ್ದರಾಗಿದ್ದರು. ಈ ಪುಸ್ತಕ ಬರೆಯುವಾಗ ಶ್ರೀನಿವಾಸ ಶ್ರೋತೃಗಳು ತುಂಬಾ ಸಹಾಯ ಮಾಡಿದ್ದರು, ತಿದ್ದುವುದು, ಘಟನೆಯ ವಿವರಗಳು, ಯಾವುದೇ ವಿಷಯದ ಬಗ್ಗೆ ಚರ್ಚಿಸುವುದು ಸದಾಶಿವರಾಯರಿಗೆ ತುಂಬಾ ಅನುಕೂಲವಾಹಿತು ಅದಕ್ಕಾಗಿಯೆ ಅವರು ಈ ಪುಸ್ತಕವನ್ನು ಸದಾಶಿವರಾಯರಿಗೆ ಅರ್ಪಿಸಿದ್ದರು. ಈ ಪುಸ್ತಕವನ್ನು ಮೆಚ್ಚಿಗೆಯನ್ನು ನೋಡಿ ಮತ್ತು ಅವರ ಮನದ ಅಭಿಲಾಷೆಯಂತೆ ಅವರಿಗೆ ಭಾರತದ ಸಂಸೃತಿಕೆ ಸಂಭಂದಿಸಿದ ಒಂದು ದೊಡ್ಡ ಗ್ರಂಥವನ್ನು ರಚಿಸಬೇಕು ಎಂದನಿಸಿತು. ಅದನ್ನು ಪ್ರಾರಂಬಿಸುವ ಮುಂಚೆ ಶ್ರೀನಿವಾಸ ಶ್ರೋತೃಗಳ ತಿಳಿಸಿ ಆಶೀರ್ವಾದ ಪಡೆದರು. ಸದಾಶಿವರಾಯರಿಗೆ ಮನೆಯಲ್ಲಿ ಹೆಂಡತಿ ನಾಗ ಲಕ್ಷ್ಮಿ, ಮಗುಪೃಥ್ವಿ  ಮತ್ತು ತಮ್ಮ. ರಾಜ. 

ಕಾತ್ಯಯಿನಿಗೆ ಅವಳ ಗಂಡ ಅರ್ಧದಲ್ಲೇ ಬಿಟ್ಟ ಬಿ.ಎ ಪಾಸ್ ಮಾಡಬೇಕೆಂಬ ಆಸೆಯಾಗುತ್ತದೆ. ಮಾವನ ಒಪ್ಪಿಗೆ ಸಿಕ್ಕ ಮೇಲೆ ಮೈಸೂರಿನ ಕಾಲೇಜ್ ನಲ್ಲಿ ಸೇರುತ್ತಾಳೆ, ಅಲ್ಲಿ ರಾಜನ ಪರಿಚವಾಗುತ್ತದೆ. ಪರಿಚಯ ಪ್ರೀತಿಯಾಗಿ ಬೆಳೆದು ಒಬ್ಬರನೊಬ್ಬರು ಬಿಟ್ಟು ಇರಲಾರದೆ ರಿಜಿಸ್ಟರ್ ಮಾಡುವೆ ಯಾಗುತ್ತಾರೆ. ಇತ್ತ ಸದಾಶಿವರಾಯರು ತಮ್ಮ ಸಂಶೋದನೆಗೆ ಇಡಿ ಭಾರತವನ್ನು ಸುತ್ತುರಿತ್ತಾರೆ ಆಗೇ ಪರಿಚಯವಾದ ಕರುಣಾ ರತ್ನೆ ಪರಿಚವಾಗಿ ಅವಳ ಸಹವಿಲ್ಲದೆ ತಾನು ಗ್ರಂಥವನ್ನು ರಚಿಸಲ್ಲರೆ ಎಂದು ತಿಳಿದು ಎರಡನೇ ಮದುವಯಾಗುತ್ತಾರೆ. ಹೇಗೆ ಮುಂದೆ ಅವರ ಜೀವನ ಹೇಗೆ ಸಾಗುತ್ತದೆ, ಅತ್ತೆ ಮಾವನ ಸ್ತಿತಿ ಏನು, ನಾಗಲಕ್ಷ್ಮಿ ಏನಾಗುತ್ತಾಳೆ ಎಲ್ಲವನ್ನು ಅರ್ಥ ಗರ್ಭಿತವಾಗಿ ಬರೆದಿದ್ದಾರೆ ಭೈರಪ್ಪನವರು. 

ಇಲ್ಲಿ ಭೈರಪ್ಪನವರು ಸಮಾಜದ ಮೂಲ ಕಷ್ಟಗಳನ್ನು ಎತ್ತಿ ಅದರ ಪರಿಹಾರ ಹೇಗೆ ಮತ್ತು ನಮ್ಮ ಕಟ್ಟು ಪಾಡುಗಳನ್ನು ಮೀರಿ ಹೇಗೆ ಜೀವನ ಮಾಡಬೇಕು ಎಂದು ತಿಳಿಸಿದ್ದಾರೆ. ಇದು ಎಂಥ ಅಧ್ಬುತ ಕೃತಿ ಎನ್ನುವುದಕ್ಕೆ ಸಾಕ್ಷಿ ಇದು ೧೭ನೆ ಮುದ್ರಣ ಕಂಡಿದೆ ಮತ್ತು ಈ ಕೃತಿ ತೆಲಗು, ಮರಾಠಿ, ಹಿಂದಿ, ಉರ್ದು, ಇಂಗ್ಲಿಷ್, ಸಂಸೃತ ಅನುವಾದ ವಾಗಿದೆ. 


ಇನ್ನೊಂದು ವಿಮರ್ಶೆ:

ನಮ್ಮ ಮನೆಯ ಬಳಿ ಒಂದು ನಗರ ಕೇಂದ್ರ ಗ್ರಂಥಾಲಯವಿದೆ. ಅಲ್ಲಿ ಹೊಸ ಪುಸ್ತಕಗಳೇನು ಇಲ್ಲದಿದ್ದರು, ಹಿಂದೆ ಪ್ರಕಟವಾದ ಕೆಲವು ಒಳ್ಳೆಯ ಪುಸ್ತಕಗಳ ಸರಕು ಅಲ್ಲಿದೆ. ಆ ಪುಸ್ತಕಗಳಲ್ಲಿ ಭೈರಪ್ಪನವರ ಕೆಲವು ಪುಸ್ತಕಗಳೂ ಇದ್ದುವು. ವಂಶವೃಕ್ಷ ನಾನು ಹಿಂದೆಯೇ ಓದಿದ್ದ ಕೃತಿ. ಆದರೆ ಆಗ ಓದಿದ್ದು ಆಂಗ್ಲದ ಅನುವಾದದಲ್ಲಿ. ಈ ಪುಸ್ತಕವನ್ನು ನಾನೋದಿದ್ದೇನೆ ಎಂದು ತಿಳಿದಿದ್ದೆ. ಆದರೂ ಒಮ್ಮೆ ಮೂಲದ ಕನ್ನಡದಲ್ಲಿ ಓದಿ ನೋಡೋಣವೆಂಬ ಆಸಕ್ತಿ. ಮನೆಗೆ ತಂದಾಗ ನನಗೆ ಮತ್ತೆ ತಿಳಿಯಿತು - ಎಷ್ಟೇ ಒಳ್ಳೆಯ ಅನುವಾದವಾದರೂ ಮೂಲದ ಸೊಗಡನ್ನು ಉಳಿಸಿಕೊಳ್ಳುವುದು ಕಷ್ಟ ಎಂದು. ಖ್ಯಾತ ಸಿನೆಮಾ ಕೂಡ ಆದ ವಂಶವೃಕ್ಷದಲ್ಲಿ ಈ ನಿಜ ಪ್ರಖರವಾಗಿ ಗೋಚರಿಸಿತು. 

ವಂಶವೃಕ್ಷ ನಂಜನಗೂಡು-ಮೈಸೂರು ಪ್ರಾಂತಗಳಲ್ಲಿರುವ ಕುಟುಂಬಗಳ ಕಥೆ. ಭೈರಪ್ಪನವರ ಕಥಾಪುಸ್ತಕಗಳ ಹೆಸರುಗಳು ಕಥೆಯನ್ನು ಬಹಳ ಚೆನ್ನಾಗಿ ಸೂಕ್ತವಾಗಿ ಪ್ರತಿಬಿಂಬಿಸುತ್ತವೆ. ಇಲ್ಲಿಯೂ ಹಾಗೆಯೇ. ಈ ಕಥೆಗೆ "ವಂಶವೃಕ್ಷ" ಎಂಬ ಹೆಸರು ಎಷ್ಟು ಸರಿಯೆಂಬುದು ಪುಸ್ತಕದ ಮಧ್ಯದಿಂದ ತಿಳಿಯಲು ಪ್ರಾರಂಭವಾಗಿ ಕಥೆ ಕೊನೆಗೊಳ್ಳುವೆ ವೇಳೆ ಆ ವೃಕ್ಷ ನಮ್ಮ ಕಲ್ಪನೆಯನ್ನೆಲ್ಲಾ ವ್ಯಾಪಿಸಿಬಿಟ್ಟಿರುತ್ತದೆ. 

ಕರ್ಮಠರಾದ ಆದರೆ ವಿದ್ವಾಂಸ ಹಾಗು ಯೋಚನಾಶಕ್ತಿಯನ್ನು ಹೊಂದಿದ ಶ್ರೀನಿವಾಸ ಶ್ರೋತ್ರಿಗಳು ಈ ಕಥೆಯ ಮುಖ್ಯ ಪಾತ್ರ. ಇವರೇ ಈ ವಂಶವೃಕ್ಷದ ಕಥೆಗೆ ಬೇರು ಮತ್ತು ಮರದ ಮುಖ್ಯ ಭಾಗ. ಕಥೆ ಇವರ ಮಗನಾದ ನಂಜುಂಡ ಶ್ರೋತ್ರಿಯನ ಮರಣದೊಂದಿಗೆ ಆರಂಭವಾಗುತ್ತದೆ. ಮಗನನ್ನು ಕಳೆದುಕೊಂಡ ತಾಯಿ ಭಾಗೀರಥಮ್ಮ, ಗಂಡನನ್ನು ಕಳೆದುಕೊಂಡ ಕಾತ್ಯಾಯನಿ ಮತ್ತು ತನಗೆ ತಿಳಿಯುವ ಮುಂಚೆಯೇ ತಂದೆಯನ್ನು ಕಳೆದುಕೊಂಡ ಮಗು ಚೀನಿ ಆರಂಭದಲ್ಲಿ ಕಾಣುತ್ತಾರೆ. ಇದೇ ಕುಟುಂಬಕ್ಕೆ ಸೇರಿದ ಮತ್ತೊಂದು ಬಹಳ ಒಳ್ಳೆಯ ಪಾತ್ರ - ಕೆಲಸದವಳಾದರೂ ಮನೆಯ ಸದಸ್ಯೆಯಂತೆ ನಡೆಯುವ ಲಕ್ಷ್ಮಿಯದು. 

ಈ ಕುಟುಂಬಕ್ಕೆ ಒಂದು ವಿದ್ವತ್ತಿನ ಸಂಬಂಧದಿಂದ ಮತ್ತೊಂದು ಕುಟುಂಬ ಸೇರುತ್ತದೆ. ಮೈಸೂರಿನ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರು ಮತ್ತು ಸಂಶೋಧಕರು ಆದ ಸದಾಶಿವರಾಯರದೇ ಈ ಕುಟುಂಬ. ಇವರಿಗೆ ಒಬ್ಬ ತಮ್ಮ - ಇಂಗ್ಲೀಷಿನ ಅಧ್ಯಾಪಕ ಹಾಗು ನಾಟಕಪ್ರಿಯ ಆಧುನಿಕ - ರಾಜಾರಾಯ. ಸದಾಶಿವರಾಯರ ಹೆಂಡತಿಯಾದ ಮುಗ್ಧೆ ನಾಗಲಕ್ಷ್ಮಿ. ಇವರ ಮಗ ಪೃಥ್ವಿ. 

ಮರಣಿಸಿದ ಪತಿಯ ಬಿ.ಏ ಓದುವ ಆಸೆಯನ್ನು ನೆರವೇರಿಸುವ ನಂಬಿಕೆಯನ್ನು ಹೊಂದಿದ ಕಾತ್ಯಾಯನಿ ನಂಜನಗೂಡಿನಿಂದ ಮೈಸೂರಿನ ಕಾಲೇಜಿಗೆ ಹೋಗುವ ಪ್ರಸಂಗದೊಂದಿಗೆ ಕಥೆಗೆ ತಿರುವು ಸಿಗುತ್ತದೆ. ಅತ್ತೆ ಒಪ್ಪದಿದ್ದರೂ ಮಾವನವರು ಒಪ್ಪಿ ಸೊಸೆಯನ್ನು ಕಳಿಸುತ್ತಾರೆ. ಅಲ್ಲಿ ಆಕೆ ರಾಜಾರಾಯನ ಸಂಪರ್ಕವನ್ನು ಹೊಂದುತ್ತಾಳೆ. ಯೌವನಾವಸ್ಥೆಯ ಈರ್ವರ ಸಂಪರ್ಕ ಪರಿಚಯದಿಂದ ಪ್ರೇಮಕ್ಕೆ, ಪ್ರೇಮದಿಂದ ಉತ್ಕಟವಾದ ಪ್ರೇಮಕ್ಕೆ ತಿರುಗುವುದನ್ನು ಭೈರಪ್ಪನವರು ಚೆನ್ನಾಗಿ ನಿರೂಪಿಸಿದ್ದಾರೆ. ಒಂದು ಕಡೆ ತನ್ನ ಮರಣಿಸಿದ ಪತಿಯ ಕುಟುಂಬದ ಕಡೆಗಿನ ಕರ್ತವ್ಯ, ಮತ್ತೊಂದು ಕಡೆ ತನ್ನ ಯೌವನದ ಸಹಜ ವಾಂಛೆಗಳು - ಇವೆರಡರ ನಡುವೆ ಡೋಲಾಯಮಾನವಾದ ಕಾತ್ಯಾಯನಿಯ ಅವಸ್ಥೆ ಮನೋಜ್ಞವಾಗಿ ವರ್ಣಿತವಾಗಿದೆ. ಕೊನೆಗೆ ಆಶೆಯ ಮಹಾಪೂರ ಅವಳ ಧಮನಿಗಳಲ್ಲಿ ಹರಿಯುತ್ತಿದ್ದ ಸಂಪ್ರದಾಯವನ್ನು ಆ ಕಾಲಕ್ಕಾದರೂ ಮುಳುಗಿಸಿ ರಾಜಾರಾಯನ ಜೊತೆಗೆ ಮದುವೆ ನಡೆದುಹೋಗುತ್ತದೆ. ಇಲ್ಲಿ ಒಂದಂಶವನ್ನು ಗಮನಿಸಲೇ ಬೇಕು. ಇಪ್ಪತ್ತನೆಯ ಶತಮಾನದ ಮೊದಲನೆಯ/ಎರಡನೆಯ ದಶಕದಿಂದ ಮೂರು-ನಾಲ್ಕು ದಶಕಳ ಕಾಲ ನಡೆಯುವ ಈ ಕಥೆಯಲ್ಲಿ ಈ ಮದುವೆ ನಡೆಯುವ ಸಮಯದಲ್ಲಿ ವಿಧವಾ ವಿವಾಹಕ್ಕೆ ಮೈಸೂರಂಥ ಸಂಪ್ರದಾಯಸ್ಥ ನಗರ ಸರಿಯಾದ ತಾಣವಾಗಿರಲಿಲ್ಲ. ಈ ಸಂಗತಿ ಕಾತ್ಯಾಯನಿಯ ಯೌವನದ ಬಯಕೆಗಳ ತೀಕ್ಷ್ಣತೆಯನ್ನು ಮತ್ತು ಅವಳ ಸ್ವಾತಂತ್ರ್ಯಪ್ರೀತಿಯನ್ನು ಎತ್ತಿ ತೋರಿಸುತ್ತದೆ. 

ಇನ್ನೊಂದು ಕಡೆ ಸದಾಶಿವರಾಯರ ಕನಸು. ಅವರದು ಭಾರತೀಯ ಸಂಸ್ಕೃತಿ ಮತ್ತು ಇತಿಹಾಸಗಳನ್ನು ಕುರಿತು ಉದ್ಗ್ರಂಥವನ್ನು ರಚಿಸಬೇಕೆಂಬ ಹಂಬಲ. ಸಾಕಷ್ಟು ಸಾಮರ್ಥ್ಯ ಅವರಲ್ಲಿತ್ತು ಎಂಬುದನ್ನು ಭೈರಪ್ಪನವರು ನಮಗೆ ತೋರಿಸುತ್ತಾರೆ. ಇವರ ವಿದ್ವನ್ಮಿತ್ರರು ನಂಜನಗೂಡಿನ ಶ್ರೀನಿವಾಸ ಶ್ರೋತ್ರಿಯರು. ಇಬ್ಬರೂ ವಿದ್ವಾಂಸರಾದರು ಅವರಲ್ಲಿರುವ ಭೇದವನ್ನು ಭೈರಪ್ಪನವರು ಸೂಕ್ಷ್ಮವಾದರೂ ಸೊಗಸಾಗಿ ತೋರಿದ್ದಾರೆ. ಸದಾಶಿವರಾಯರದ್ದು ಪಾಶ್ಚಾತ್ಯರ ರೀತಿ. ಅಧ್ಯಯನ ಮಾಡಬೇಕು, ಗ್ರಂಥರಚನೆ ಮಾಡಬೇಕು ಎಂಬ ಹಂಬಲ, ಸ್ವಲ್ಪ ಕೀರ್ತಿಯ ಆಸೆಯೂ ಕಾಣುತ್ತದೆ. ಸಂಸ್ಕೃತಿಯ ಅಧ್ಯಯನಕ್ಕೂ ಜೀವನಕ್ಕೂ ಸಂಬಂಧವಿಲ್ಲದ ಹಾಗೆ ನಡೆಯುತ್ತಾರೆ. ಅಧ್ಯಯನಕ್ಕಾಗಿ ಅಧ್ಯಯನ ಎಂಬುದು ಅವರ ರೀತಿ. ಆದರೆ ಶ್ರೀನಿವಾಸ ಶ್ರೋತ್ರಿಯರದು ಅಪ್ಪಟ ಭಾರತೀಯ ರೀತಿ. ಸದಾಶಿವರಾಯರ ಸಂದೇಹಗಳನ್ನು ಪುಸ್ತಕಗಳನ್ನು ನೋಡದೆಯೇ ಪರಿಹರಿಸಬಲ್ಲ ವಿದ್ವತ್ತು ಇವರಲ್ಲಿದ್ದರೂ, ಪುಸ್ತಕ ರಚನೆಗೆ ಕೈಹಾಕಿದವರಲ್ಲ. ಕೀರ್ತಿಯ ಲಾಲಸರಲ್ಲ. ತಮ್ಮ ಓದನ್ನೆಲ್ಲ ಬದುಕಿನಲ್ಲಿ ಕಾಣಿಸುವ ಋಷಿಕಲ್ಪ ವ್ಯಕ್ತಿತ್ವ ಇವರದು. ಭೈರಪ್ಪನವರ ideal ಏನು, ಅವರ ವೈಯಕ್ತಿಕ ಅಭಿಪ್ರಾಯವೇನು, ಅವರ ಒಲವೆಲ್ಲಿದೆ ಎಂದು ಇವರಿಬ್ಬರ ಪಾತ್ರಗಳ ಅಧ್ಯಯನದಿಂದ ಚೆನ್ನಾಗಿ ತಿಳಿಯಬಹುದು. ಭೈರಪ್ಪನವರಿಗೆ ಪಾಶ್ಚಾತ್ಯರ ಬಗ್ಗೆ ಗೌರವ ಮತ್ತು ಕಾಳಜಗಳಿವೆ, ಆದರೆ ಭಾರತೀಯ ವಿಚಾರಧಾರೆಯಲ್ಲಿ ಶ್ರದ್ಧೆಯಿದೆ ಎಂಬುದನ್ನು ಸುವಿದಿತ ಮಾಡಿಸುತ್ತಾರೆ.

ಸದಾಶಿವರಾಯರ ಹಂಬಲವು ಬೌದ್ಧಿಕ ಸಾಹಚರ್ಯವನ್ನು ಅಪೇಕ್ಷಿಸುವ ಬಗೆ ಸೊಗಸಾಗಿ ವ್ಯಕ್ತವಾಗಿದೆ. ಓದು-ಬರಹ ತಿಳಿಯದ ಪತ್ನಿಯಿಂದ ಬೌದ್ದಿಕ ಸಾಹಚರ್ಯ ಸಿಗದ ರಾಯರಿಗೆ ಶ್ರೀಲಂಕದವಳಾದ ಕೇಂಬ್ರಿಡ್ಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಕರುಣಾ ರತ್ನೆ ಜೊತೆಯಾಗಿ ಸಿಗುತ್ತಾಳೆ. ವಿದ್ಯಾರ್ಥಿನಿಯಾಗಿ ರಾಯರ ಜತೆ ಕೆಲಸ ಮಾಡಲು ಪ್ರಾರಂಭಿಸುವ ಕರುಣಾಳಿಗೆ ಕ್ರಮೇಣ ರಾಯರು ಅನಿವಾರ್ಯರಾಗುತ್ತಾರ, ಜೀವನದ ಗುರಿಯನ್ನು ತಲುಪಲು ಸಾಧನವಾಗುತ್ತಾರೆ. ರಾಯರಿಗೂ ಹಾಗೇ ಆಗಿ ಇಬ್ಬರೂ ಸಿವಿಲ್ ಮದುವೆ ಕೂಡ ಆಗುತ್ತಾರೆ. ಒಂದಂಶ ಇಲ್ಲಿ ನನಗೆ ಅಷ್ಟು ಹಿಡಿಸಲಿಲ್ಲ . ಕರುಣಾ ಎಂಬ ಸೊಗಸಾದ ಹೆಸರನ್ನು ಪಡೆದವಳನ್ನು ಭೈರಪ್ಪನವರು "ರತ್ನೆ" ಎಂದೇ ರಾಯರಿಂದ ಕರೆಸುತ್ತಾರೆ. ರತ್ನೆಯೆಂಬುದು surname. ಪತಿಪತ್ನಿಯರಿಬ್ಬರ ನಡುವೆ ಈ surname ಸಂಬೋಧನೆ ಅಷ್ಟು ಸರಿಯಿಲ್ಲ. ಅಥವಾ - ಇವರಿಬ್ಬರೂ ತಮ್ಮ profession ಗಾಗಿಯೇ ಹತ್ತಿರ ಬಂದದ್ದು, ಕೊನೆಯವರೆಗೂ ಇವರ ಸಂಬಂಧ ಹಾಗೆಯೇ ಉಳಿಯಿತು ಎಂಬುದನ್ನು ಓದುಗರಿಗೆ ಚೆನ್ನಾಗಿ ತಿಳಿಸುವುದಕ್ಕೆ ಹೀಗೆ ಉತ್ಪ್ರೇಕ್ಷೆ ಮಾಡಿದ್ದಾರೋ ಏನೋ! ದ್ವಿಪತ್ನೀತ್ವದಲ್ಲಿ ಓದದ ಹೆಂಡತಿಗೆ ತೊಂದರೆಯಿಲ್ಲ, ಆದರೆ ಓದಿದ ಹೆಂಡತಿಗೆ ತೊಂದರೆ. ಈ ಇಕ್ಕಟ್ಟಿನಲ್ಲಿ ಸದಾಶಿವರಾಯರನ್ನು ಸಿಕ್ಕಿಸಿ ಕೊನೆಯವರೆವಿಗೂ ಒದ್ದಾಡಿಸುತ್ತಾರೆ. ಏನೂ ತಿಳಿಯದ ಹೆಂಡತಿ ಆತಂಕದ ಸಮಯದಲ್ಲಿ ರಾಮನಾಮವನ್ನು ಬರೆದು ದುಗುಡ ಮರೆಯಲು ಯತ್ನಿಸಿ ಮರೆಯುವುದರಲ್ಲಿ ಯಶಸ್ವಿನಿಯೂ ಆಗುತ್ತಾಳೆ. ಇದರಿಂದ ಭೈರಪ್ಪನವರು ಮುಗ್ಧ ನಂಬಿಕೆಗೆ ಒಳ್ಳೆಯ ಸ್ಥಾನವನ್ನೇ ಕೊಟ್ಟ ಹಾಗೆ ಕಾಣುತ್ತದೆ. ಇದರಿಂದ ನಾಗಲಕ್ಷ್ನ್ಮಿಯಲ್ಲಿ ಮೂಡುವ ಒಂದು ನಿರ್ಲಿಪ್ತತೆ ಕೂಡ ನಿದರ್ಶನವೆಂಬುದಾಗಿ ಸಾರಿದ್ದಾರೆ.

ಕಾತ್ಯಾಯನಿ ಮದುವೆಯಾದ ಆರಂಭದ ದಿನಗಳಲ್ಲಿ ಬಹಳ ಸಂತೋಷದಿಂದಿದ್ದರೂ ಒಂದೆರಡು ವರ್ಷಗಳಲ್ಲಿ ತನ್ನ ಹಳೆಯ ಕುಟುಂಬದ ಬಗ್ಗೆ ನೆನಪು ಮಾಡಿಕೊಳ್ಳುತ್ತಾಳೆ. ಜತೆಗೆ ಅವಳಿಗಾಗುವ ಗರ್ಭಪಾತಗಳಿಂದ ಅವಳಿಗೆ ಮಕ್ಕಳಾಗಲು ಸಾಧ್ಯವಿಲ್ಲದೇ ಹೋಗುತ್ತದೆ. ಇದಾದ ಮೇಲಂತೂ ತನ್ನ ಮಗನಾದ ಚೀನಿಯ ಬಗ್ಗೆ ಹೆಚ್ಚಿನ ವಾತ್ಸಲ್ಯ ಅವಳಲ್ಲಿ ಮೂಡಿದರೂ ಏನೂ ಮಾಡಲಾರದೆ ಹೋಗುತ್ತಾಳೆ. ಚೀನಿಯನ್ನು ಕರೆತರುವ ಅವಳ ಪ್ರಯತ್ನಗಳು ವಿಫಲವಾಗಿ ಅವಳ ಖಿನ್ನತೆಗೆ ದಾರಿಯಾಗುತ್ತವೆ. ದುರದೃಷ್ಟವಶಾತ್ ಕಾತ್ಯಾಯನಿಯು ಈ ಗರ್ಭಪಾತಗಳೆಲ್ಲ ಅವಳ ಮಾವನವರ ಮನೆಯನ್ನು ಬಿಟ್ಟೂ ಪುನರ್ವಿವಾಹವಾದದ್ದಕ್ಕೆ ಎಂದು ಬಗೆದು ಮಾನಸಿಕ ರೋಗಕ್ಕೆ ತುತ್ತಾಗುತ್ತಾಳೆ. ಕಾಲೇಜಿಗೆ ಬರುವ ಮಗನೂ ಸಹ ತನ್ನನ್ನು ನಿರಾಕರಿಸಿದಾಗ ಅವಳ ರೋಗ ಉಲ್ಬಣಿಸಿ ಸಮಾಧಾನವಿಲ್ಲದೆಯೇ ಕೊರಗುತ್ತಾಳೆ. 

ಈಕೆಯ ವಿಧವಾ-ವಿವಾಹ ಮತ್ತು ವಂಶವೃಕ್ಷದ ಕಲ್ಪನೆಯ ನಡುವಿನ ಘರ್ಷಣೆ ಕೆಲವು ಒಳ್ಳೆಯ ಚಿಂತನೆಗಳನ್ನು ಮೂಡಿಸಿದೆ. ಭೈರಪ್ಪನವರು ಎತ್ತುವ ಪ್ರಶ್ನೆ - ಒಂದು ವಂಶವೃಕ್ಷದ ಬೀಜವನ್ನು ಫಲಿಸಿದ ಕ್ಷೇತ್ರ ಮತ್ತೊಂದು ವಂಶದ ಕ್ಷೇತ್ರವಾಗುವಾಗ ಏನಾಗಬಹುದು - ಎಂಬುದು? ಈ ಪ್ರಶ್ನೆ ಓದುಗರನ್ನೂ ಕಾಡಿಸುತ್ತದೆ. ಪುಸ್ತಕ ಓದಿದ ಬಹಳ ದಿನಗಳ ಮೇಲೆಯೂ!

ಬರುಬರುತ್ತಾ ಕೊನೆಯ ನೂರು ಪುಟಗಳಲ್ಲಿ ಅಕಸ್ಮಾತ್ತಾಗಿ ಗೋಚರವಾಗುವ ಸತ್ಯ ಶಾಂತರೂ ದಾಂತರೂ ಆದ ಶ್ರೀನಿವಾಸ ಶ್ರೋತ್ರಿಯರಿಗೂ ಆಘಾತಕರವಾಗಿ ಪರಿಣಮಿಸುತ್ತದೆ. ಪುತ್ರನ ಆಕಸ್ಮಿಕ ಮರಣದ ಸಮಯದಲ್ಲೂ ಅಲ್ಲಾಡದ ಬೆಟ್ಟದಂಥಿದ್ದ ಅವರ ವ್ಯಕ್ತಿತ್ವ ಈ ಸತ್ಯದಿಂದ ಸ್ವಲ್ಪ ಪೆಟ್ಟು ತಿನ್ನುತ್ತದೆ. (ಅದು ಏನು ಎಂದು ನಾನು ಹೇಳಿದರೆ ಓದುಗರಾದ ನೀವು ಈ ಪುಸ್ತಕವನ್ನು ಓದದೇ ಇರಬಹುದು. ಪುಸ್ತಕ ಓದಿದವರಿಗೆ ಹೇಗಿದ್ದರೂ ಗೊತ್ತು ತಾನೆ?) ವಂಶದ ಬಗ್ಗೆ ಬಹಳ ಹೆಚ್ಚಿನ ಗೌರವವಿರಿಸಿದ ಶ್ರೋತ್ರಿಯರಿಗಂತೂ ಈ ಆಘಾತ ಕಷ್ಟಸಹ್ಯವಾಗುತ್ತದೆ. ಅಷ್ಟೇ ಏಕೆ? ಅವರ ವಂಶಗೌರವವೆಂಬ ಕಲ್ಪನೆಯನ್ನೇ ಬುಡಮೇಲು ಮಾಡುತ್ತದೆ. ಆದರೆ ಹಿಂದೆ ಆತಂಕ ಮೂಡಿಸುವ ದುವಿಧೆಗಳಲ್ಲಿ ಗೆದ್ದು ಬಂದಿದ್ದ ಶ್ರೋತ್ರಿಯರು ಇಲ್ಲಿಯೂ ಕಡೆಯಲ್ಲಿ ಗೆಲ್ಲುತ್ತಾರೆ. "ಧರ್ಮದ ಮಾರ್ಗದಲ್ಲಿ ನಡೆಯುವವರಿಗೆ ಧರ್ಮವೇ ಮಾರ್ಗ ತೋರುತ್ತದೆ" ಎಂಬ ಅಚಲ ನಂಬಿಕೆಯನ್ನು ಹೊಂದಿದ ಶ್ರೋತ್ರಿಯರು ಅಂತ್ಯದಲ್ಲಿ ಭಾರತೀಯ ಆಶ್ರಮಧರ್ಮದ ಪಾಲನೆಯನ್ನೇ ಮಾಡುತ್ತಾರೆ. 

ಒಂದು ಭಾಗವನ್ನು ಮಾತ್ರ ಇಲ್ಲಿ ನಂಬಲು ಕಷ್ಟ. ಮನೆಯ ಕೆಲಸದವಳಾದ, ಶ್ರೋತ್ರಿಯರಿಗಿಂಥ ಸ್ವಲ್ಪ ಚಿಕ್ಕವಳಾದ ಲಕ್ಷ್ಮಿಗೆ ತಿಳಿದ ಒಂದು ಸತ್ಯ ಇವರಿಗೆ ಹೇಗೆ ತಿಳಿಯದೇ ಹೋಯಿತೆಂಬುದು. ಅದೂ ಅದೇ ಊರಿನಲ್ಲಿಯೇ ಇದ್ದಂಥವರಾದ ಶ್ರೋತ್ರಿಯರು ತಕ್ಕ ಮಟ್ಟಿಗೆ ಜನಜನಿತವಾದ ಒಂದು ವಾರ್ತೆಯನ್ನು ತಿಳಿಯದೇ ಹೋದರಲ್ಲಾ ಎಂದು ನಂಬಲು ಸ್ವಲ್ಪ ಕಷ್ಟ. ಆದರೂ ಹೇಳುತ್ತಾರಲ್ಲಾ, ಕಾವ್ಯಾಸ್ವಾದನೆಗೆ ಅಥವಾ ರಸಾಸ್ವಾದನೆಗೆ ಮೊದಲಿಗೆ ಬೇಕಾಗಿರುವುದು ಕೋಲ್ರಿಜ್ ಹೇಳಿದ "willing suspension of disbelief". ನಾವೂ ಇಲ್ಲಿ ಅದನ್ನೇ ಆಶ್ರಯಿಸಿದಾಗೆ ಒದುಗರಿಗೆ ಒಂದು ಅದ್ಭುತ ಪ್ರಸಂಗ ಮೂಡುತ್ತದೆ. ಒಬ್ಬ ಮಹಾಪುರುಷನು ಒದಗಿದ ಕಷ್ಟವನ್ನು ಹೇಗೆ ನಿಭಾಯಿಸಬಲ್ಲ ಎಂಬುದು ಎಲ್ಲ ಓದುಗರಿಗೆ ಆಗುವ ಒಂದು ಪಾಠ. ಅದನ್ನು ದರ್ಶನಶಾಸ್ತ್ರವನ್ನು ಅಭ್ಯಸಿಸಿದ ಭೈರಪ್ಪನವರು ಚೆನ್ನಾಗಿಯೇ ಮಾಡಿಸುತ್ತಾರೆ. 

ಈ ಪುಸ್ತಕದ ಮೇಲೆ ಚಿತ್ರವನ್ನು ಮಾಡಿದ ಗಿರೀಶ್ ಕಾರ್ಣಾಡರ ಪ್ರಕಾರ ಈ ಸಿನಿಮಾ ಕೃತಿ ತಮ್ಮ ಅತ್ಯಂತ ದುರ್ಬಲ ಕೃತಿಗಳಲ್ಲಿ ಒಂದು ಎಂಬುದು. ಹಾಗೆ ಹೇಳಲು ಕಾರಣ ಸ್ವಲ್ಪವಿದೆಯೋ ಏನೋ! ಕಾತ್ಯಾಯನಿಯ ಪಾಡು ಎಂಥ ನಾಯಿಗೂ ಬೇಡವೆಂಬಂತೆ ನಿರೂಪಿಸಿದ ಭೈರಪ್ಪನವರು ಆಧುನಿಕ ಕಾದಂಬರಿಕಾರನ ಮುಸುಕು ಹಾಕಿಕೊಂಡ "ಸನಾತನಿ" ಎಂಬುದೇ ಆ ಕಾರಣವಿರಬಹುದೇ? ಆಧುನಿಕನಾದ ನನ್ನಲ್ಲೂ ಈ ವಿಷಯ ಸ್ವಲ್ಪ ಕಳವಳ ಮೂಡಿಸದೇ ಇರಲಿಲ್ಲ. ಈಗ ಯುವತಿಯಾದ ಒಬ್ಬ ವಿಧವೆ ಮತ್ತೆ ಮದುವೆಯೇ ಆಗಬಾರದೇ? ಮಕ್ಕಳಿಲ್ಲದಿದ್ದರೆ ಹೇಗೆ? ಮಕ್ಕಳಿದ್ದರೆ ಹೇಗೆ? ಇಲ್ಲಿ ಅಸಂಖ್ಯಾತ ಸಾಧ್ಯತೆಗಳಿದ್ದರೂ ಅವುಗಳಲ್ಲಿ ಒಂದನ್ನು ತೋರಿಸಿ ಈ ವಿಷಯದ ಬಗ್ಗೆ ಚಿಂತನೆಯನ್ನು ಪ್ರಚೋದಿಸುವುದೇ ಭೈರಪ್ಪನವರ ಕಥನಾಕೌಶಲವೆಂದು ಹೇಳಬೇಕೇ ಹೊರತು "ಅವರು ಹಾಗೆ ಚಿತ್ರಿಸಿದ್ದಾರೆ, ಆದ್ದರಿಂದ ಅವರು ಸನಾತನಿಗಳು" ಎಂದು ಹೇಳುವುದು ನನ್ನ ಪ್ರಕಾರ ಸರಿಯೆನಿಸುವುದಿಲ್ಲ. 

ಇನ್ನೊಂದು ಸಣ್ಣ ತಪ್ಪೂ ಪುಸ್ತಕದಲ್ಲಿದೆ. ಕೊಲಂಬಸನು ಅಮೇರಿಕೆಯನ್ನು ಕಂಡುಹಿಡಿದನೆಂದರೆ ಅದು ಹಾಸ್ಯಾಸ್ಪದವಾದ ಸಂಗತಿಯನ್ನು ಹೇಳುತ್ತಾ ಹೊರಟ ಭೈರಪ್ಪನವರು ಅಲ್ಲಿ ಭಾರತೀಯ ಮೂರ್ತಿಗಳ ಅವಶೇಷಗಳಿದ್ದವು ಎಂದು ನನ್ನ ಪ್ರಕಾರ ತಪ್ಪಾಗಿ ಬರೆದಿದ್ದಾರೆ. ಇದಕ್ಕೆ ಪುರಾವೆ ಎಲ್ಲಿಯೂ ಇಲ್ಲ ಎಂದು ನನ್ನ ತಿಳಿವಳಿಕೆ. ತಪ್ಪಿದ್ದಲ್ಲಿ ತಿದ್ದಿಕೊಳ್ಳಲು ಸಿದ್ಧನಾಗಿರುವೆ.

ಒಟ್ಟಿನಲ್ಲಿ, ಚಿಂತನೆಗೆ ಒಳ್ಳೆಯ ಗ್ರಾಸವಾಗುವ ಈ ವಂಶವೃಕ್ಷ ಅತ್ಯಂತ ಜನಪ್ರಿಯ ಕಾದಂಬರಿಗಳಲ್ಲಿ ಒಂದು. ಈ ಪುಸ್ತಕವನ್ನೋದಿದ ಅಥವಾ ಓದದ ಇತರರಿಗೆ ನನ್ನ ಅನಿಸಿಕೆಗಳನ್ನು ಓದಿ ಏನನ್ನಿಸಿದೆಯೋ ಎಂಬುದನ್ನು ತಿಳಿಯಲು ನಾನು ಕುತೂಹಲಿಯಾಗಿದ್ದೇನೆ.

ಮೂಲ:  http://goo.gl/wG11ZX





0 comments:

Post a Comment