Bettada Jeeva - Shivarama Karanth
ತುಂಬಾ ದಿನಗಳ ಹಿಂದೆ ಶಿವರಾಮ ಕಾರಂತರ, "ಬೆಟ್ಟದ ಜೀವ" ಅನ್ನುವ ಚಿಕ್ಕ ಕಾದಂಬರಿಯೊಂದನ್ನ ಓದಲು ಶುರುಮಾಡಿದ್ದೆ. ಅದು ಕಾರಂತಜ್ಜರ ಮೇರುಕೃತಿಗಳಲ್ಲಿ ಒಂದೆಂಬುದನ್ನ ಕೇಳಿದ್ದೆ. ಅದು ಸುಮಾರು ನೂರೈವತ್ತು ಪುಟಗಳ ಚಿಕ್ಕ ಪುಸ್ತಕವಾದರೂ ಅದನ್ನ ಓದಿ ಮುಗಿಸಲು ಇಪ್ಪತ್ತು ದಿನಗಳಿಗೂ ಹೆಚ್ಚು ಸಮಯವಾಯ್ತು. ಅಷ್ಟೊಂದು ಸಮಯ ಹಿಡಿಯಲು ನನ್ನ ಕೆಲಸದ ಒತ್ತಡವಾಗಲಿ, ಪುಸ್ತಕವಾಗಲಿ ಕಾರಣವಾಗಿರಲಿಲ್ಲ, ಬದಲಾಗಿ ಓದುತ್ತಾ ಹೋದಂತೆಲ್ಲ ಎಲ್ಲಿ ಬೇಗನೆ ಮುಗಿದು ಬಿಡುವುದೊ ಅನ್ನುವ ಬೇಸರ ಅಷ್ಟೇ. ಹಾಗಾಗಿಯೇ ಮುಂದುವರೆದಂತೆಲ್ಲ ದಿನಕ್ಕೆ ಎರಡು-ಮೂರು ಪುಟಗಳನ್ನ ಮಾತ್ರ ಓದಿ ಮುಚ್ಚಿಡುತ್ತಿದ್ದೆ. ಒಮ್ಮೆ ಓದಿ ಮುಗಿಸಿದ ನಂತರ ಮತ್ತೆರಡು ಸಲ ಓದಿದೆ. ಕಾರಂತರಲ್ಲಿ ನಮ್ಮನ್ನ ಬರಹಗಳ ಮೂಲಕ ಕಟ್ಟಿಹಾಕುವ ಮಹತ್ತರವಾದ ಶಕ್ತಿಯಿತ್ತು. ಅದನ್ನ ಈ ಪುಸ್ತಕದಲ್ಲಿ ಹೆಚ್ಚಾಗಿಯೇ ತುಂಬಿದ್ದರು.
"ಬೆಟ್ಟದ ಜೀವ", ಬೆಟ್ಟದ ಪರಿಸರದಲ್ಲಿ
ತೋಟ, ಗದ್ದೆ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಗೋಪಾಲಯ್ಯ ಮತ್ತು ಶಂಕರಿ ಎನ್ನುವ
ವೃದ್ದ ದಂಪತಿಗಳ ಕಥೆಯಿದು. ಕಥೆಯ ಆಳ, ಎತ್ತರ ತುಂಬಾ ಚಿಕ್ಕದಿದ್ದರು ಅದನ್ನ
ಬಿಂಬಿಸಿದ್ದ ರೀತಿ ಕಾರಂತರ ವಿಶೇಷತೆಗೆ ಸಾಕ್ಷಿ. ಪಶ್ಚಿಮ ಘಟ್ಟಗಳ ನಡುವೆ, ಸುಬ್ರಮಣ್ಯ ದ
ಸಮೀಪ, ಕುಮಾರ ಪರ್ವತದ ತಪ್ಪಲಲ್ಲಿ ಮನೆಬಿಟ್ಟಿರುವ ಮಗನ ಅಗಲಿಕೆಯನ್ನ ಭರಿಸಿಕೊಂಡು,
ಬದುಕಿನೆಡೆಗೆ ಉತ್ಸಾಹವನ್ನ ಕಳೆದುಕೊಳ್ಳದೆ, "ಸುಖ" ಎನ್ನುವ ಪದಕ್ಕೆ ಬೇರೆಯದೇ ಅರ್ಥ
ಕಂಡುಕೊಂಡು ಬದುಕುವ ವೃದ್ದರ ಜೀವನಗಾಥೆಯನ್ನ ಕಾರಂತರು ನಮ್ಮೆದುರು ಬಿಡಿಸಿಟ್ಟಿದ್ದ ಪರಿ
ಅದ್ಭುತವಾಗಿತ್ತು. ನಿಸರ್ಗದ ಸೊಬಗನ್ನ, ಅಲ್ಲಿಯ ಜನರ ಬದುಕನ್ನ, ಕಣ್ಣಿಗೆ ಕಟ್ಟುವಂತೆ
ಪುಸ್ತಕದಲ್ಲಿ ಹೇಳಲಾಗಿತ್ತು. ಓದುತ್ತಾ ಸಾಗಿದಂತೆಲ್ಲ ಘಟ್ಟಗಳ ನಡುವಿನ ಸೌಂದರ್ಯ ರಾಶಿ
ಸವಿದ ಅನುಭವವಾಗುತ್ತಿತ್ತು.
ಈಗ
ಪುಸ್ತಕದ ಬಗ್ಗೆ ಪೀಠಿಕೆ ಹಾಕಿದ್ದಕ್ಕೆ ಕಾರಣ ಇದೆ. ಈ ಪುಸ್ತಕ ಚಲನಚಿತ್ರವಾಗಿದೆ.
ಹೌದು, ಬೆಂಗಳೂರಿನ ಎರಡು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಈ ಚಿತ್ರ ಮಾಡುವ ಮೊದಲು
ಯಾರಾದರು ನನ್ನಲ್ಲಿ ಈ ಪುಸ್ತಕವನ್ನ ಆದರಿಸಿ ಚಲನಚಿತ್ರ ಮಾಡಬಹುದಲ್ವೆ ಅನ್ನುವ ಪ್ರಶ್ನೆ
ಮಾಡಿದ್ದರೆ, ಖಂಡಿತ ಸಾದ್ಯವಿಲ್ಲ ಅನ್ನುವ ಉತ್ತರ ಬರುತ್ತಿತ್ತು. ಕಾರಣ ಕಾರಂತರು
ವರ್ಣಿಸಿದ ರೀತಿಯಲ್ಲಿ ಪ್ರಕೃತಿಯನ್ನು ಮತ್ತು ಅಷ್ಟು ಚಿಕ್ಕ ಎಳೆಯಿರುವ ಕಥೆಯನ್ನ ತೆರೆಯ
ಮೇಲೆ ಬಿಡಿಸಿದುವುದು ಸಾದ್ಯವಿಲ್ಲ ಅನ್ನುವ ಭಾವನೆ.
ಆದರೆ
ಚಿತ್ರ ನೋಡಿ ಬಂದ ನಂತರ ನನ್ನ ಅನಿಸಿಕೆ ಬದಲಾಗಿದೆ. ಇಂತಹ ಅದ್ಬುತ ಕಾದಂಬರಿಯನ್ನ ಅದರ
ಮೂಲಸ್ವರೂಪಕ್ಕೆ ತೊಂದರೆಯಾಗದಂತೆ ನಿರ್ದೇಶಕ ಶೇಷಾದ್ರಿ ತೋರಿಸಿದ್ದಾರೆ. ಅವರ ಈ
ಪ್ರಯತ್ನ ಮೆಚ್ಚುವಂತದ್ದು. ಬೆಂಗಳೂರಿನ ಕಾಂಕ್ರಿಟ್ ಕಾಡನ್ನ ಮರೆತು, ನಮ್ಮ ಪಶ್ಚಿಮ
ಘಟ್ಟಗಳ ಸುಂದರ ಕಾಡಿನೊಂದಿಗೆ ಮೈಮರೆತು ವಿಹರಿಸುವ ತವಕವಿದ್ದವರು ನೋಡಲೇಬೇಕಾದ
ಚಿತ್ರವಿದು. ಚಿತ್ರದ ಕತೆ ಚಿಕ್ಕದಾದುದರಿಂದ ಸ್ವಲ್ಪ ಮಂದಗತಿಯಲ್ಲಿ ಸಾಗಿದರು, ತೆರೆಯ
ಮೇಲೆ ಕಾಣುವ ಪ್ರಕೃತಿ ಸೌಂದರ್ಯದ ಶ್ರೀಮಂತ ದೃಶ್ಯಗಳು ಎಲ್ಲಿಯೂ ಬೇಸರವೆನಿಸದಂತೆ
ನೋಡಿಕೊಳ್ಳುತ್ತವೆ. ಅನಂತ ಅರಸ್ ಅವರ ಛಾಯಾಗ್ರಹಣ ಚಿತ್ರದ ಯಶಸ್ಸಿನಲ್ಲಿ ಪ್ರಮುಕ ಪಾತ್ರ
ವಹಿಸಿದೆ. ಗೊಪಲಯ್ಯನ ಪಾತ್ರದಲ್ಲಿ ಧತ್ತಾತ್ರೆಯ ಅವರು ವಯಸ್ಸು ಮರೆತು ನಟಿಸಿದ್ದಾರೆ.
ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದರೆ. ಮಚ್ಚು-ಲಾಂಗುಗಳು ಗುಡುಗುವ ಇವತ್ತಿನ
ಚಲನಚಿತ್ರಗಳ ಮದ್ಯೆ "ಬೆಟ್ಟದ ಜೀವ" ಚಿತ್ರ ವಿಶೇಷವಾಗಿ ಕಾಣುತ್ತದೆ. ಆದರೆ ಕೇವಲ ಎರಡು
ಚಿತ್ರಮಂದಿರಗಳಲ್ಲಿ ಮಾತ್ರ ತೆರೆ ಕಂಡಿರುವುದು ಬೇಸರದ ಸಂಗತಿ. ಅದಕ್ಕೆ ಜನರ ಅಭಿರುಚಿಯ
ಬಗ್ಗೆ ನಿರ್ಮಾಪಕರಿಗೆ ಇರುವ ಅಳುಕು ಕಾರಣವಿರಬಹುದು. ಅಪರೂಪವಾಗಿರುವ ಇಂತಹ ಚಿತ್ರಗಳ
ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ ಎನ್ನುವ ಆಶಯ ನಮ್ಮದು.
ಮೂಲ: http://goo.gl/72JEd
ಚಿತ್ರದ ಬಗ್ಗೆ: http://goo.gl/qNg9T
0 comments:
Post a Comment