Tuesday, June 24, 2014

ಕರಿಸಿರಿಯಾನ - ಕೆ ಎನ್ ಗಣೇಶಯ್ಯ

Karisiriyaana K. N. Ganeshaiah




ಈ ಕಾದ೦ಬರಿಯು ಒ೦ದು ಕಾಲ್ಪನಿಕ ಕತೆ. ಆದರೆ ಇದರಲ್ಲಿ ಬರುವ ಎಲ್ಲಾ ವಿವರಗಳು ಕಾಲ್ಪನಿಕವಲ್ಲ. ದಕ್ಷಿಣ ಭಾರತದ ಇತಿಹಾಸದ ಹಲವು ರಹಸ್ಯಗಳು ಇಲ್ಲಿ ತೆರೆದುಕೊಳ್ಳುತ್ತವೆ. ಕಾದ೦ಬರಿ ಮೂಲ ವಸ್ತು : ವಿಜಯನಗರ ಸಾಮ್ರಾಜ್ಯದ ಬೀದಿ ಬೀದಿಗಳಲ್ಲಿ ತಕ್ಕಡಿಗಳಲ್ಲಿ ಮಾರುತ್ತಿದ್ದರೆನ್ನಲಾದ ಮುತ್ತು, ರತ್ನ, ವಜ್ರ ಮು೦ತಾದ ನವರತ್ನಗಳು ಎಲ್ಲಿ ಹೋದವು? ವಿಜಯನಗರದ ಅಗಾಧ ನಿಧಿಯು ಎಲ್ಲಿ ಕಳೆದು ಹೋಯಿತು? ನಿಧಿಯು ಹಲವಾರು ಒಗಟು-ಒಗಟಾಗಿರುವ ಸುಳಿವುಗಳಲ್ಲಿ ಅಡಗಿರುವ ಹಾಗೆ ಮತ್ತು ಕೆಲವರು ಅದನ್ನು ಬೆನ್ನಟ್ಟುವ ಹಾಗೆ ಗಣೇಶಯ್ಯನವರು ಕಥೆ ಹೆಣೆಯುತ್ತಾರೆ. ಹಾಗೆಯೇ ತಿರುಪತಿಯು ವಿಶ್ವದ ಶ್ರೀಮ೦ತ ಹಿ೦ದೂ ದೇವಸ್ಥಾನ ಹೇಗಾಯಿತು? ಎ೦ಬುದರ ಸುತ್ತಲೂ ಕತೆ ಸುತ್ತುತ್ತದೆ. ಗಣೇಶಯ್ಯನವರ ಕಾದ೦ಬರಿಯ ವಿಶೇಷವೆ೦ದರೆ ಅವರು ಕಾದ೦ಬರಿಯಲ್ಲಿ ಹೇಳುವ ಹಲವು ವಿವರಗಳಿಗೆ ಪರಾಮರ್ಶನ ಗ್ರ೦ಥಗಳಲ್ಲಿರುವ ಆಧಾರಗಳನ್ನು ಅಡಿ ಟಿಪ್ಪಣಿಯಲ್ಲಿ ಒದಗಿಸುವುದು. ಇವುಗಳ ಜೊತೆಗೆ ಸಚಿತ್ರ ವಿವರಗಳನ್ನೂ ಕೂಡಾ ಆಧಾರವಾಗಿ ನೀಡುತ್ತಾರೆ. ಹಾಗಾಗಿ ಕಲ್ಪನೆ ಮತ್ತು ನೈಜತೆಗೆ ಸಾಕಷ್ಟು ವ್ಯತ್ಯಾಸವಿರುವುದಿಲ್ಲ ಮತ್ತು ಇದು ಓದುಗನ ಕುತೂಹಲವನ್ನು ಇಮ್ಮಡಿಗೊಳಿಸುತ್ತವೆ. ಅಲ್ಲದೆ ಪ್ರತಿಯೊ೦ದು ಅಧ್ಯಾಯದ ಮೊದಲು ಘಟನೆಯು ನಡೆಯುವ ದಿನಾ೦ಕ, ಸಮಯ ಹಾಗೂ ಸ್ಥಳವನ್ನು ಲೇಖಕರು ನೀಡುತ್ತಾರೆ. ಮೊದಲ ಕೆಲವು ಅಧ್ಯಾಯಗಳನ್ನು ಓದುವಾಗ ನನಗೆ ಇವು ಅನಗತ್ಯವೆನಿಸಿದರೂ, ನ೦ತರ ಇವು ಕಥೆಗೆ ಪೂರಕವೆನಿಸಿದವು. ಓದುಗನ ಘಟನೆಯ ಕಲ್ಪನೆಗೆ ಇನ್ನಷ್ಟು ಸಾಮಾಗ್ರಿ ಇವು ಒದಗಿಸುತ್ತವೆ.

ಚರಿತ್ರೆಯ ಎರಡು ಪತ್ರಗಳ ಉಲ್ಲೇಖದೊ೦ದಿಗೆ ಕಾದ೦ಬರಿ ಆರ೦ಭಗೊಳ್ಳುತ್ತದೆ. ನ೦ತರ ಜಾನಪದ ಹಾಡುಗಾರ್ತಿ ನ೦ಜಮ್ಮ ಮುಳುಬಾಗಿಲಿನಿ೦ದ ಚಿತ್ತೂರಿಗೆ ಹೊರಡುವ ರಾಷ್ಟ್ರೀಯ ಹೆದ್ದಾರಿ 4ರ ರಸ್ತೆಯಲ್ಲಿ ಸಿಗುವ ನ೦ಗ್ಲಿಯ ತನ್ನ ಮನೆಯಲ್ಲಿ ಕೊಲೆಯಾದ ಮಾಹಿತಿ ಸಿಗುತ್ತದೆ. ವಿಜಯನಗರ ಕಾಲದ ಸಸ್ಯಗಳಿರುವ ಉದ್ಯಾನಗಳನ್ನು ಹ೦ಪಿಯಲ್ಲಿ ನಿರ್ಮಿಸುವುದು ASI ಯೋಜನೆ, ಅದಕ್ಕಾಗಿ ಹ೦ಪಿಯಲ್ಲಿರುವ ಮಣ್ಣಿನ ತಿರುಳುಗಳನ್ನು ಅಗೆದು, ವಿಜಯನಗರ ಕಾಲದ ಪರಾಗರೇಣುಗಳನ್ನು ಪಡೆದು ಪರಿಶೀಲಿಸಿ, ಆಗಿನ ಕಾಲದ ಸಸ್ಯ ಜಾತಿಗಳನ್ನು ಗುರುತಿಸುವುದರಲ್ಲಿ ಸಸ್ಯ ಶಾಸ್ತ್ರಜ್ಞ ಡಾ||ವಾಸುದೇವ್ ತೊಡಗಿದ್ದಾಗ, ಅವರ ತ೦ಡಕ್ಕೆ ಅಗೆದ ಮಣ್ಣಲ್ಲಿ ವಜ್ರಗಳು ದೊರಕುತ್ತವೆ. ’ವಿಜಯನಗರದ ರಾಜರ ಮತ್ತು ತಿರುಪತಿ ದೇವಾಲಯದ ನಡುವಿನ ನಿಗೂಢ ಆರ್ಥಿಕ ಸ೦ಬ೦ಧ’ ಎ೦ಬ ವಿಷಯದ ಕುರಿತಾಗಿ ಪೂಜಾ ಸ೦ಶೋಧನೆಯಲ್ಲಿ ತೊಡಗಿಕೊ೦ಡಿರುತ್ತಾಳೆ, ಅವಳು ತಿರುಪತಿಯ ಬೆಟ್ಟಗಳಲ್ಲಿ ಈ ಕುರಿತಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾಗ CBI ಅವಳನ್ನು ಬ೦ಧಿಸಿ ಕರೆದೊಯ್ಯುತ್ತದೆ. ಕಾಶ್ಮೀರದ ಮ೦ಜುಪ್ರದೇಶವೊ೦ದರಲ್ಲಿ ಒ೦ದು ವಿಶಿಷ್ಟ ಜನಾ೦ಗದ ಜಾನಪದ ಪದ್ಧತಿಗಳ ಅಧ್ಯಯನದಲ್ಲಿ ತೊಡಗಿದ್ದ ಭಾವನಾಳನ್ನು ಭಾರತೀಯ ಸೇನೆಯು ವಿಮಾನದಲ್ಲಿ ಸೆರೆಹಿಡಿದು ಹೊತ್ತೊಯ್ಯುತ್ತದೆ. UNESCO ಘೋಷಿಸಿರುವ ವಿಶ್ವ ಪರ೦ಪರೆ ತಾಣಗಳ(World Heritage Sites) ಸ೦ರಕ್ಷಣೆಯ ಉಸ್ತುವಾರಿ ಸ೦ಸ್ಥೆಯ ಸದಸ್ಯತ್ವಕ್ಕೆ ಲಾಬಿ ನಡೆಸಿ ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯ ಲಕ್ಷ್ಮಿಕಾ೦ತ್ ಪಟೇಲ್ ಆಯ್ಕೆಯಾಗುತ್ತಾನೆ. ಅರೆರೆ, ಇದೇನಿದು ಒ೦ದಕ್ಕೊ೦ದು ಸ೦ಬ೦ಧವಿಲ್ಲದ ವಿಷಯಗಳೆನ್ನುವಿರಾ? ಇಲ್ಲಾ, ಇವಗಳನ್ನು ಒಟ್ಟಾಗಿ ಬೆಸೆದು ಕಾದ೦ಬರಿ ಮು೦ದಕ್ಕೆ ಸಾಗುತ್ತದೆ. ಇದಲ್ಲದೆ ಹಲವು ಕುತೂಹಲಕರ ಪ್ರಶ್ನೆಗಳೂ ಮೇಲೇಳುತ್ತವೆ - ವಿಜಯನಗರದ ಪತನದ ನ೦ತರ ಅಲ್ಲಿಯ ಸಿರಿ ಎಲ್ಲಿ ಹೋಯಿತು? ಹ೦ಪಿಯ ನಗರದ ರಚನೆಯಲ್ಲಿ Cosmic Geometry(ಹ೦ಪಿಯಲ್ಲಿರುವ ಪುಣ್ಯಸ್ಥಳಗಳಿಗೂ, ಆಕಾಶದಲ್ಲಿರುವ ಖಗೋಳ ಕಾಯಗಳಿಗೂ ಹಾಗೂ ನಗರದ ರಚನೆಯ ಪ್ರಾಕಾರಕ್ಕೂ ಇರುವ ಸ೦ಬ೦ಧ) ಯ ಪಾತ್ರವೇನು? ವಿಜಯನಗರದ ಸಾಮ್ರಾಜ್ಯದಲ್ಲಿ ಅಷ್ಟೊ೦ದು ಸ೦ಪತ್ತು ಶೇಖರಣೆಯಾಗಲು ಕಾರಣಗಳೇನು? ಕನ್ನಡದಲ್ಲಿ ಚಿನ್ನ/ಬೆಳ್ಳಿ ನಾಣ್ಯಗಳಿಗೆ ವರಹಗಳೆ೦ದು ಹಿ೦ದೆ ಏಕೆ ಕರೆಯುತ್ತಿದ್ದರು? ಕೃಷ್ಣದೇವರಾಯನ ಮಾತೃಭಾಷೆ ತೆಲುಗಲ್ಲದಿದ್ದರೆ ಬೇರೆ ಯಾವುದು? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಕಾದ೦ಬರಿಕಾರರು ಉತ್ತರಗಳನ್ನೂ ಒದಗಿಸುತ್ತಾರೆ. 

’ಕರಿಸಿರಿಯಾನ’ದ ಓದು ಒ೦ದು ರೋಮಾ೦ಚಕ ಅನುಭವ. ಬಹುಶ: ಕನ್ನಡದಲ್ಲಿ ಇತಿಹಾಸದೊ೦ದಿಗೆ ಬೆರೆಸಿ ಕಥೆ ಬರೆಯುವ ಇ೦ಥಾ ಪ್ರಯತ್ನ ಈ ದಿನಗಳಲ್ಲಿ ಖ೦ಡಿತಾ ಶ್ಲಾಘನೀಯ. ಗಣೇಶಯ್ಯನವರೇ, ನಿಮ್ಮಿ೦ದ ಇನ್ನಷ್ಟು ಈ ಬಗೆಯ ಕಾದ೦ಬರಿಗಳನ್ನು ನಿರೀಕ್ಷಿಸುತ್ತಿದ್ದೇವೆ.

ಮೂಲ :-  http://goo.gl/yQdpJa


Monday, June 23, 2014

ನಿರಾಕರಣ - ಎಸ್ ಎಲ್ ಭೈರಪ್ಪ

Nirakarana - S L Bhyrappa



ಒಬ್ಬ ಮನುಷ್ಯ ಹುಟ್ಟಿದ ಮೇಲೆ  ಕಷ್ಟಗಳು ತಪ್ಪಿದ್ದಲ್ಲ. ಕಷ್ಟಗಳನ್ನು ನಿವಾರಿಸಲು ಇನ್ನು ಕಷ್ಟಗಳನ್ನು ಅನುಭವಿಸುತ್ತಾರೆ ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಾರೆ. ಎಲ್ಲಾ ಪ್ರಯತ್ನ ಮಾಡಿದ ಮೇಲೆ ಕಷ್ಟ ತೀರದಿದ್ದರೆ ಕೆಟ್ಟ ದಾರಿ ಹಿಡಿಯುತ್ತಾರೆ, ಅಡ್ಡ ದಾರಿ ಹುಡುಕುತ್ತಾರೆ, ಇನ್ನು ಕೆಲವರು ಕಷ್ಟ ಸಾಕು ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಒಳ್ಳೆ ಜನರು ಆತ್ಮಹತ್ಯೆ ಮಾಡಿಕೊಳ್ಳಲು ಆಗುವುದಿಲ್ಲ, ಕೆಟ್ಟ ಕೆಲಸ ಮಾಡುವುದಿಲ್ಲ ಅಂಥವರು ಸನ್ಯಸವೊ ಇಲ್ಲ ವನವಾಸಕ್ಕೋ ಹೊರಟುಬಿಡುತ್ತಾರೆ. ಇಂತವರು ತಮ್ಮ ಜವಬ್ದಾರಿಯನ್ನು ಮುಗಿಸಿ ಇಲ್ಲವೇ ಬೇರೆಯವರಿಗೆ ವಹಿಸಿ ಕೈ ತೊಳೆದುಕೊಳ್ಳುತ್ತಾರೆ. ಒಬ್ಬನೇ ತಂದೆ ಮತ್ತು ಅವನಿಗೆ ಐದು ಮಕ್ಕಳು ಹಾಗು ಹೆಂಡತಿ ಇಲ್ಲ ಎಂದರೆ ಅಂತವನು ಏನು ಮಾದುತ್ತಾನೆ.... ಮಕ್ಕಳನ್ನು ದತ್ತು ಕೊಡಲು ನಿರ್ಧರಿಸಿ ಪತ್ರಿಕೆಯಲ್ಲಿ ಜಾಹಿರಾತು ನೀಡುತ್ತಾನೆ. ಇದೆ ಭೈರಪ್ಪನವರ 'ನಿರಾಕರಣೆ'ಯಾ ಕಥೆ. 

ಬೇರೆ ದಾರಿ ಕಾಣದೆ ಪತ್ರಿಕೆಯಲ್ಲಿ ಜಾಹಿರಾತು ಕೊಟ್ಟು ನರಹರಿ ತನ್ನ ಮಕ್ಕಳ ಬಳಿ ಹೆಚ್ಚು ಸಮಯ ಕಳೆಯಲೆಂದು ಪ್ರತಿ ದಿನ ಸಂಜೆ ಐದಕ್ಕೆ ಆಫೀಸ್ ಇಂದ ಹೊರಡಲು ನಿರದರಿಸುತ್ತಾನೆ. ಜಾಹಿರಾತು ಕೊಟ್ಟ ಒಂದು ಎರಡು ತಿಂಗಳಲ್ಲಿ ಐದು ಮಕ್ಕಳ್ಳನ್ನು ಒಳ್ಳೆ ಒಳ್ಳೆ ಮನೆಗೆ ಶೆಣೈ ಸಹಾಯದಿಂದ ದತ್ತು ಕೊಟ್ಟು ಸನ್ಯಾಸಿಯಾಗುತ್ತಾನೆ. ಸನ್ಯಾಸಿಯಾಗಿ ಅವನು ಊರೂರು ಅಲೆಯುತ್ತಾನೆ. ಹಿಮಾಲಯ ಏರುತ್ತಾನೆ, ನದಿಯಲ್ಲಿ ಈಜುತ್ತಾನೆ, ಬಿಕ್ಷೆ ಬೇಡಿ ಊಟ ಮಾಡುತ್ತಾನೆ. ಆದರೆ ಅವನು ಪೂರ್ವದಲ್ಲಿ ನಿರ್ಧರಿಸಿದಂತೆ ತನ್ನ ಎಲ್ಲ ಸಂಭಂದಗಳನ್ನು ಕಳೆದು ಕೊಳ್ಳಲು ಆಗುವುದಿಲ್ಲ. ಅವನಿಗೆ ತನ್ನ ಮಕ್ಕಳ ನೆನಪು, ಹೆಂಡತಿಯ ನೆನಪು ಮತ್ತು ತನ್ನ ಜೀವನದ ನೆನಪು ಎಲ್ಲ ಕಡೆಯಲ್ಲೂ ಬರುತಿರುತ್ತದೆ. ತಾನು ಮಾಡಿದ ನಿರ್ಧಾರ ತಪ್ಪಿರಬಹುದು, ತಾನು ಇನ್ನು ಕಷ್ಟ ಪಟ್ಟು ಕೆಲೆಸ ಮಾಡಿದ್ದರೆ ಮಕ್ಕಳನ್ನು ಸಾಕಬಹುದಿತ್ತೇನೋ, ದತ್ತು ಕೊಟ್ಟು ತಪ್ಪು ಮಾಡಿದೆ ಎಂದನಿಸುತ್ತದೆ. ಅತ್ತ ಪೂರ್ಣ ಸನ್ಯಾಸಿಯಾಗದೆ ಇತ್ತ ಪೂರ್ತಿ ಸಂಸಾರಿಯಾಗದೆ ಒದ್ದಾಡುತ್ತಾನೆ. ಕೊನೆಗೆ ಮತ್ತೆ ಮರಳಿ ಮುಂಬೈಗೆ ಬಂದು ಸೇರುತ್ತಾನೆ. 

ಅವನು ಬಂಡ ಮೇಲೆ ಮಕ್ಕಳ ನೆನಪು ಕಾಡುತ್ತದೆ. ಆದರೆ ಅವನು ದತ್ತು ಕೊಟ್ಟ ಮೇಲೆ ನೋಡಲು ಹೋಗಬಾರದು ಎಂದು ನಿರ್ಧರಿಸುತ್ತಾನೆ. ಅವನು ಕೆಲಸ ಮಾಡುವ ಹಾಸ್ಟೆಲ್ ನ ಲೆಕ್ಕ ಬರೆಯುವ ರಾಳೆ ಅವರಿಗೆ ತಿಳಿಯದ ಹಾಗೆ ಎಲ್ಲಾ ದತ್ತು ಮಕ್ಕಳ ಮನೆಗೆ ಹೋಗಿ ವಿಚಾರಿಸಿಕೊಂಡು ಬರುತ್ತಾನೆ. ಅವರು ಏಗಿದ್ದಾರೆ, ಅವರೆಲ್ಲ ಏನು ಮಾಡುತ್ತಿದ್ದಾರೆ, ಅವರ ಜೀವನದ ಸ್ಥಿತಿ ಹೇಗಿದೆ ಎನ್ನುವುದನ್ನು ಅವನಿಗೆ ಹೇಳುತ್ತಾರೆ (ಅದನ್ನು ನೀವು ಓದಿ ತಿಳಿಯಿರಿ)

’ಬಂಧನಕ್ಕೆ ಮಿತಿ ಎಂಬುದು ಸುಳ್ಳು. ಅಂಟಿದರೆ ಪೂರ್ತಿಯಾಗಿಯೂ ಸೆಳೆದುಬಿಡುತ್ತದೆ - ವಿದ್ಯುತ್‍ಶಾಕ್‍ನಂತೆ. ಇಲ್ಲ, ಸ್ಪರ್ಶಕ್ಕೆ ಸಿಕ್ಕದಷ್ಟು ದೂರವೇ ಇರಬೇಕು. ಇದಕ್ಕೆ ಮಧ್ಯಮ ಸ್ಥಿತಿ ಇಲ್ಲ’ ಎಂಬ ಗ್ರಹಿಕೆಯಿಂದ ಅವನು ನಿರ್ಧರಿಸುತ್ತಾನೆ.

’ನೀರು ಹರಿಯದಿದ್ದಾಗಲೂ ಅದನ್ನು ನದಿ ಅನ್ನಬಹುದೇ?’

’ಇಲ್ಲ. ಅದು ಬರೀ ರೂಢಿಯ ಸಂಕೇತ. ಹರಿದರೆ ಮಾತ್ರ ಕಾಲ, ಹೆಪ್ಪುಗಟ್ಟಿದರೆ ಅಲ್ಲ..... ಉಷ್ಣ ಚಂಚಲ, ಶೀತ ಅಚಲ.’

ಹೆಪ್ಪುಗಟ್ಟಲೇಬೇಕೆಂದು ಬಯಲನ್ನು ನಿರಾಕರಿಸಿ ಬೆಟ್ಟವನ್ನು ಏರುತ್ತಾನೆ.

ಒಟ್ಟಿನಲ್ಲಿ ಹೇಳುವುದಾದರೆ ಕನ್ನಡ ಕಾದಂಬರೀ ಪ್ರಪಂಚದಲ್ಲಿ ಇದೊಂದು ವಿನೂತನ ಕೃತಿ.



Thursday, June 12, 2014

ಸಮೀಕ್ಷೆ - ಶಿವರಾಮ ಕಾರಂತ


Sameekshe - Shivarama Karanth




ಈ ಬರಹ, ಕೆಲವು ವ್ಯಕ್ತಿಗಳನ್ನು ತನ್ನ ಮುಂದಕ್ಕಿರಿಸಿಕೊಂಡು, ಅವರ ಬಾಳಿನ ಸಮೀಕ್ಷೆ ನಡೆಯಿಸಲೆತ್ನಿಸುತ್ತದೆ. ಯಾವುದು ಸಾರ್ಥಕ, ಯಾವುದು ನಿರರ್ಥಕ? ಈ ‘ಅರ್ಥ’ ಯಶಸ್ಸಿನ ದೃಷ್ಟಿಯಿಂದಲ್ಲ-ಜೀವನ ಅರ್ಥವತ್ತಾಗಿ, ರಸವತ್ತಾಗಿ, ಸಹ್ಯವಾಗಿ ಕಾಣಿಸಬೇಕೆಂಬ ದೃಷ್ಟಿಯಿಂದ.

ಒಬ್ಬೊಬ್ಬರ ಬದುಕಿಗೆ ಒಂದೊಂದು ಆದರ್ಶ ನೆರವಾಗಬಹುದು. ಒಂದೊಂದು ಗುರಿ ಕೈದೀವಿಗೆಯಂತೆ ನಡೆಯಿಸಿಕೊಂಡು ಹೋಗಬಹುದು. ಒಬ್ಬನ ಬೆಳಕು ಇನ್ನೊಬ್ಬನಿಗೆ ಬೆಳಕೇ ಆಗಿ ಕಾಣಿಸದಿರಲೂ ಬಹುದು. ಈ ತತ್ವವನ್ನು ಒಪ್ಪಲು ಸಿದ್ಧವಿದ್ದವರಿಗೆ - ತಮ್ಮ ಆಚೀಚೆ ಅನೇಕ ಸುಂದರ ದೃಶ್ಯಗಳು ಕಾಣಿಸಬಹುದು. ಆದರೆ, ಹುಡುಕಿ ನೋಡಬೇಕು. ಯಶಸ್ಸು ಬಾಜಾರದಲ್ಲಿ ಮೆರೆಯಬಲ್ಲದು. ಕರ್ತವ್ಯವಾಗಿ ಮಾಡಿದ್ದು ಅಷ್ಟೊಂದು ಬೆಳಕಿಗೆ ಬರಲಾರದು.

ಸೂರ್ಯಕಾಂತಿ ಹೂವು ದೊಡ್ಡದಾಗಿ ಆಡಂಬರದಿಂದ, ಸೂರ್ಯನ ಬೆಳಕು ಬೀಳುವ ಕಡೆಗೇನೆ ಮುಖ ಹಿಡಿದು 'ನಾನಿದ್ದೇನೆ' ಎಂದು ಸಾರಿ ಹೇಳುತ್ತದೆ. ಗಿಡ =, ಹೂ, ಜೀವನ - ಹೇಗೆ ಇದ್ದರೂ, ಅದರ ಇರವು, ಕೀರ್ತಿ ಊರಿಂದೂರಿಗೆ ಹಬ್ಬುತ್ತ್ತದೆ. ಆದರೆ ನೈದಿಲೆ? ಕೆಸರಲ್ಲಿ ಹುಟ್ಟಿ, ಹಗಲೆಲ್ಲ ಕಾದು, ಚಂದಿರನ ಬಯಸಿ, ದೊರೆತ ಬೆಳಕಿನಿಂದ ಸಂತೋಷ ಪದೆಯುತ್ತದೆ.

ಸೂರ್ಯಕಾಂತಿ ಅರಳಿ, ಬಾಡಿ, ಉದುರಿವ ತನಕವೂ ಬೆಳಕಿನಲ್ಲಿ ಮೆರೆದಾದುತ್ತದೆ. ನೈದಿಲೆ ಅರಳುವ ತನಕವೂ ನೇರ ಕೆಲಗೇನೆ ಇದ್ದು, ಮೊದಲ ದಿನ ಮೇಲೆ ಬಂದು, ಮೂರು ದಿನ ಸಕಾಲದಲ್ಲಿ ಅರಳಿ, ಮುಚ್ಚಿ, ಸಾವು ಸಂನಿಹಿತವಾಗುವಾಗ ನೀರಲ್ಲಿ ತಲೆ ತಗ್ಗಿಸಿಕೊಂಡು ಅಡಗುತ್ತದೆ! ಒಂದಿಷ್ಟೂ ಆಡಂಬರವಿಲ್ಲ: ಬಂದುದೂ ಗೊತ್ತಿಲ್ಲ; ಹೋದುದೂ ಗೊತ್ತಿಲ್ಲ

ಯಾವುದು ಅರ್ಥವತ್ತಾದ ಬಾಳು?

ಅರ್ಥವರಿಯಲೆತ್ನಿಸಿ, ಅದರಂತೆ ಬಾಳಲೆತ್ನಿಸಿದ ಸೋಲೂ - ಯಶಸ್ವಿಯಾದುದಲ್ಲವೇನು? ಬಾಳಿನಲ್ಲಿ ಕಾಣಿಸದ ಅರ್ಥ ಎಲ್ಲಿದ್ದರೇನು? ಎಷ್ಟಿದ್ದರೇನು? ಯಾರ ಸಲುವಾಗಿ ಅದಿರಬೇಕು?

ಈ ಪ್ರಶ್ನೆಯನ್ನು ಉತ್ತರಿಸಲು, ತಮ್ಮ ನಿಜ ಜೀವನದಿಂದ ನೆರವಾದ ಹತ್ತಾರು ಸಾಮಾನ್ಯ ಜನರು, ನನಗೆ ಈ ಕಾದಂಬರಿಯ ವಸ್ತುವನ್ನು ಒದಗಿಸಿಕೊಟ್ಟು ಉಪಕಾರ ಮಾಡಿದ್ದಾರೆ. ಅಂಥವರ ಹಿರಿತನವನ್ನು ಮರೆಯುವಂತಿಲ್ಲ.

- ಶಿವರಾಮ ಕಾರಂತ



Wednesday, May 28, 2014

ವಂಶವೃಕ್ಷ - ಎಸ್ ಎಲ್ ಭೈರಪ್ಪ

Vamshavruksha - S L Bhyrappa


ಈ ಕಾದಂಬರಿ ಮೂರು ತಲೆಮಾರಿನದ್ದು. ಈ ಕಾದಂಬರಿಯಲ್ಲಿ ಆಧ್ಯಾತ್ಮ, ವಿದವೆಯ ಮರು ಮದುವೆ, ಎರಡನೇ ಮದುವೆ, ಪ್ರೀತಿ, ಕಟ್ಟು ಪಾಡು ಎಲ್ಲವನ್ನು ಒಂದು ಸುಸಜ್ಜಿತ ರಂಗಮಂಚದ ಮೇಲೆ ತೋರಿಸುವಂತೆ ಭೈರಪ್ಪನವರು ಬರೆದಿದ್ದಾರೆ. ಇಲ್ಲಿ ನಾವು ತಿಯಬೇಕಾದ ವಿಷಯ ಏನೆಂದರೆ ಈ ಕಾದಂಬರಿ ಪ್ರಕತವಾದುದ್ದು ೧೯೬೫ರಲ್ಲಿ, ಆ ಕಾಲದಲ್ಲಿ ಭಾರತದಲ್ಲಿ ವಿದವೆಯ ಮರು ಮಾಡುವೆ ಎಂದರೆ ಮೂಗು ಮುರಿಯುತ್ತಿದ್ದರು ಅಂಥ ಕಾಲದಲ್ಲಿ ಈ ಕಾದಂಬರಿಯನ್ನು ಬರೆದಿದ್ದಾರೆ. ಇಲ್ಲಿ ಬರುವ ಪಾತ್ರಗಳು ಸಮಜಾದ ಕಟ್ಟು ಪಾಡನ್ನು ಮುರಿದು ಹೊಸ ಜೀವನಕ್ಕೆ ನಾಂದಿ ಹಾಡುತ್ತಾರೆ. 

ಶ್ರೀನಿವಾಸ ಶ್ರೋತೃಗಳ ಮಗ ಕಪಿಲ ನದಿಯ ರಬಸಕ್ಕೆ ಸಿಲುಕಿ ಸತ್ತಿರುತ್ತಾನೆ, ಅವನ ಹೆಂಡತಿ ಕಾತ್ಯಯಿನಿ ಒಂದು ಗಂಡು ಮಗುವಿನ ತಾಯಿ. ಕಾತ್ಯಯಿನಿ ಗೆ ಇನ್ನು ಚಿಕ್ಕ ವಯಸ್ಸು ಶ್ರೀನಿವಾಸ ಶ್ರೋತೃಗಳು ಆಧ್ಯಾತ್ಮ ಮನೋಭಾವದವರಾದರು ಅದನ್ನು ಯಾರ ಮೇಲು ಹೇರುವುದಿಲ್ಲ ಅದಕ್ಕೆ ಮಗ ಸತ್ತ ಮೇಲೆ ಕಾತ್ಯಯಿನಿಗೆ ಸಂಪ್ರದಾಯದಂತೆ ತಲೆ ಬೋಳಿಸಿ ಕೆಂಪು ಸೀರೆ ಉಡಲು ಹೇಳುವುದಿಲ್ಲ. ಕಾತ್ಯಯಿನಿಗೆ ಮನೆಯಲ್ಲಿ ಗಂಡ ಇಲ್ಲ ಎನ್ನುವುದು ಬಿಟ್ಟರೆ ಬೇರೆ ತೊಂದರೆಗಳಿಲ್ಲ. ಅತ್ತೆ ತುಂಬ ಒಳ್ಳೆಯವರು, ಮನೆ ಕೆಲಸ, ಮಗು ಹಾಡಿಸುವುದರಲ್ಲಿ ಕಾಲ ಹೊಗುತ್ತದೆ. ಆದರು ಒಂದೊಂದು ದಿನ ಬೇಜಾರಾಗುವುದು ಸಾಮಾನ್ಯ. 

ಸದಾಶಿವರಾಯರು ಆಗ ತಾನೆ ಭಾರತದ ಐತಿಹಾಸಿಕ ಪುಸ್ತಕ ಬರೆದು ಇಂಗ್ಲೆಂಡಿನಲ್ಲಿ ಪ್ರಸಿದ್ದರಾಗಿದ್ದರು. ಈ ಪುಸ್ತಕ ಬರೆಯುವಾಗ ಶ್ರೀನಿವಾಸ ಶ್ರೋತೃಗಳು ತುಂಬಾ ಸಹಾಯ ಮಾಡಿದ್ದರು, ತಿದ್ದುವುದು, ಘಟನೆಯ ವಿವರಗಳು, ಯಾವುದೇ ವಿಷಯದ ಬಗ್ಗೆ ಚರ್ಚಿಸುವುದು ಸದಾಶಿವರಾಯರಿಗೆ ತುಂಬಾ ಅನುಕೂಲವಾಹಿತು ಅದಕ್ಕಾಗಿಯೆ ಅವರು ಈ ಪುಸ್ತಕವನ್ನು ಸದಾಶಿವರಾಯರಿಗೆ ಅರ್ಪಿಸಿದ್ದರು. ಈ ಪುಸ್ತಕವನ್ನು ಮೆಚ್ಚಿಗೆಯನ್ನು ನೋಡಿ ಮತ್ತು ಅವರ ಮನದ ಅಭಿಲಾಷೆಯಂತೆ ಅವರಿಗೆ ಭಾರತದ ಸಂಸೃತಿಕೆ ಸಂಭಂದಿಸಿದ ಒಂದು ದೊಡ್ಡ ಗ್ರಂಥವನ್ನು ರಚಿಸಬೇಕು ಎಂದನಿಸಿತು. ಅದನ್ನು ಪ್ರಾರಂಬಿಸುವ ಮುಂಚೆ ಶ್ರೀನಿವಾಸ ಶ್ರೋತೃಗಳ ತಿಳಿಸಿ ಆಶೀರ್ವಾದ ಪಡೆದರು. ಸದಾಶಿವರಾಯರಿಗೆ ಮನೆಯಲ್ಲಿ ಹೆಂಡತಿ ನಾಗ ಲಕ್ಷ್ಮಿ, ಮಗುಪೃಥ್ವಿ  ಮತ್ತು ತಮ್ಮ. ರಾಜ. 

ಕಾತ್ಯಯಿನಿಗೆ ಅವಳ ಗಂಡ ಅರ್ಧದಲ್ಲೇ ಬಿಟ್ಟ ಬಿ.ಎ ಪಾಸ್ ಮಾಡಬೇಕೆಂಬ ಆಸೆಯಾಗುತ್ತದೆ. ಮಾವನ ಒಪ್ಪಿಗೆ ಸಿಕ್ಕ ಮೇಲೆ ಮೈಸೂರಿನ ಕಾಲೇಜ್ ನಲ್ಲಿ ಸೇರುತ್ತಾಳೆ, ಅಲ್ಲಿ ರಾಜನ ಪರಿಚವಾಗುತ್ತದೆ. ಪರಿಚಯ ಪ್ರೀತಿಯಾಗಿ ಬೆಳೆದು ಒಬ್ಬರನೊಬ್ಬರು ಬಿಟ್ಟು ಇರಲಾರದೆ ರಿಜಿಸ್ಟರ್ ಮಾಡುವೆ ಯಾಗುತ್ತಾರೆ. ಇತ್ತ ಸದಾಶಿವರಾಯರು ತಮ್ಮ ಸಂಶೋದನೆಗೆ ಇಡಿ ಭಾರತವನ್ನು ಸುತ್ತುರಿತ್ತಾರೆ ಆಗೇ ಪರಿಚಯವಾದ ಕರುಣಾ ರತ್ನೆ ಪರಿಚವಾಗಿ ಅವಳ ಸಹವಿಲ್ಲದೆ ತಾನು ಗ್ರಂಥವನ್ನು ರಚಿಸಲ್ಲರೆ ಎಂದು ತಿಳಿದು ಎರಡನೇ ಮದುವಯಾಗುತ್ತಾರೆ. ಹೇಗೆ ಮುಂದೆ ಅವರ ಜೀವನ ಹೇಗೆ ಸಾಗುತ್ತದೆ, ಅತ್ತೆ ಮಾವನ ಸ್ತಿತಿ ಏನು, ನಾಗಲಕ್ಷ್ಮಿ ಏನಾಗುತ್ತಾಳೆ ಎಲ್ಲವನ್ನು ಅರ್ಥ ಗರ್ಭಿತವಾಗಿ ಬರೆದಿದ್ದಾರೆ ಭೈರಪ್ಪನವರು. 

ಇಲ್ಲಿ ಭೈರಪ್ಪನವರು ಸಮಾಜದ ಮೂಲ ಕಷ್ಟಗಳನ್ನು ಎತ್ತಿ ಅದರ ಪರಿಹಾರ ಹೇಗೆ ಮತ್ತು ನಮ್ಮ ಕಟ್ಟು ಪಾಡುಗಳನ್ನು ಮೀರಿ ಹೇಗೆ ಜೀವನ ಮಾಡಬೇಕು ಎಂದು ತಿಳಿಸಿದ್ದಾರೆ. ಇದು ಎಂಥ ಅಧ್ಬುತ ಕೃತಿ ಎನ್ನುವುದಕ್ಕೆ ಸಾಕ್ಷಿ ಇದು ೧೭ನೆ ಮುದ್ರಣ ಕಂಡಿದೆ ಮತ್ತು ಈ ಕೃತಿ ತೆಲಗು, ಮರಾಠಿ, ಹಿಂದಿ, ಉರ್ದು, ಇಂಗ್ಲಿಷ್, ಸಂಸೃತ ಅನುವಾದ ವಾಗಿದೆ. 


ಇನ್ನೊಂದು ವಿಮರ್ಶೆ:

ನಮ್ಮ ಮನೆಯ ಬಳಿ ಒಂದು ನಗರ ಕೇಂದ್ರ ಗ್ರಂಥಾಲಯವಿದೆ. ಅಲ್ಲಿ ಹೊಸ ಪುಸ್ತಕಗಳೇನು ಇಲ್ಲದಿದ್ದರು, ಹಿಂದೆ ಪ್ರಕಟವಾದ ಕೆಲವು ಒಳ್ಳೆಯ ಪುಸ್ತಕಗಳ ಸರಕು ಅಲ್ಲಿದೆ. ಆ ಪುಸ್ತಕಗಳಲ್ಲಿ ಭೈರಪ್ಪನವರ ಕೆಲವು ಪುಸ್ತಕಗಳೂ ಇದ್ದುವು. ವಂಶವೃಕ್ಷ ನಾನು ಹಿಂದೆಯೇ ಓದಿದ್ದ ಕೃತಿ. ಆದರೆ ಆಗ ಓದಿದ್ದು ಆಂಗ್ಲದ ಅನುವಾದದಲ್ಲಿ. ಈ ಪುಸ್ತಕವನ್ನು ನಾನೋದಿದ್ದೇನೆ ಎಂದು ತಿಳಿದಿದ್ದೆ. ಆದರೂ ಒಮ್ಮೆ ಮೂಲದ ಕನ್ನಡದಲ್ಲಿ ಓದಿ ನೋಡೋಣವೆಂಬ ಆಸಕ್ತಿ. ಮನೆಗೆ ತಂದಾಗ ನನಗೆ ಮತ್ತೆ ತಿಳಿಯಿತು - ಎಷ್ಟೇ ಒಳ್ಳೆಯ ಅನುವಾದವಾದರೂ ಮೂಲದ ಸೊಗಡನ್ನು ಉಳಿಸಿಕೊಳ್ಳುವುದು ಕಷ್ಟ ಎಂದು. ಖ್ಯಾತ ಸಿನೆಮಾ ಕೂಡ ಆದ ವಂಶವೃಕ್ಷದಲ್ಲಿ ಈ ನಿಜ ಪ್ರಖರವಾಗಿ ಗೋಚರಿಸಿತು. 

ವಂಶವೃಕ್ಷ ನಂಜನಗೂಡು-ಮೈಸೂರು ಪ್ರಾಂತಗಳಲ್ಲಿರುವ ಕುಟುಂಬಗಳ ಕಥೆ. ಭೈರಪ್ಪನವರ ಕಥಾಪುಸ್ತಕಗಳ ಹೆಸರುಗಳು ಕಥೆಯನ್ನು ಬಹಳ ಚೆನ್ನಾಗಿ ಸೂಕ್ತವಾಗಿ ಪ್ರತಿಬಿಂಬಿಸುತ್ತವೆ. ಇಲ್ಲಿಯೂ ಹಾಗೆಯೇ. ಈ ಕಥೆಗೆ "ವಂಶವೃಕ್ಷ" ಎಂಬ ಹೆಸರು ಎಷ್ಟು ಸರಿಯೆಂಬುದು ಪುಸ್ತಕದ ಮಧ್ಯದಿಂದ ತಿಳಿಯಲು ಪ್ರಾರಂಭವಾಗಿ ಕಥೆ ಕೊನೆಗೊಳ್ಳುವೆ ವೇಳೆ ಆ ವೃಕ್ಷ ನಮ್ಮ ಕಲ್ಪನೆಯನ್ನೆಲ್ಲಾ ವ್ಯಾಪಿಸಿಬಿಟ್ಟಿರುತ್ತದೆ. 

ಕರ್ಮಠರಾದ ಆದರೆ ವಿದ್ವಾಂಸ ಹಾಗು ಯೋಚನಾಶಕ್ತಿಯನ್ನು ಹೊಂದಿದ ಶ್ರೀನಿವಾಸ ಶ್ರೋತ್ರಿಗಳು ಈ ಕಥೆಯ ಮುಖ್ಯ ಪಾತ್ರ. ಇವರೇ ಈ ವಂಶವೃಕ್ಷದ ಕಥೆಗೆ ಬೇರು ಮತ್ತು ಮರದ ಮುಖ್ಯ ಭಾಗ. ಕಥೆ ಇವರ ಮಗನಾದ ನಂಜುಂಡ ಶ್ರೋತ್ರಿಯನ ಮರಣದೊಂದಿಗೆ ಆರಂಭವಾಗುತ್ತದೆ. ಮಗನನ್ನು ಕಳೆದುಕೊಂಡ ತಾಯಿ ಭಾಗೀರಥಮ್ಮ, ಗಂಡನನ್ನು ಕಳೆದುಕೊಂಡ ಕಾತ್ಯಾಯನಿ ಮತ್ತು ತನಗೆ ತಿಳಿಯುವ ಮುಂಚೆಯೇ ತಂದೆಯನ್ನು ಕಳೆದುಕೊಂಡ ಮಗು ಚೀನಿ ಆರಂಭದಲ್ಲಿ ಕಾಣುತ್ತಾರೆ. ಇದೇ ಕುಟುಂಬಕ್ಕೆ ಸೇರಿದ ಮತ್ತೊಂದು ಬಹಳ ಒಳ್ಳೆಯ ಪಾತ್ರ - ಕೆಲಸದವಳಾದರೂ ಮನೆಯ ಸದಸ್ಯೆಯಂತೆ ನಡೆಯುವ ಲಕ್ಷ್ಮಿಯದು. 

ಈ ಕುಟುಂಬಕ್ಕೆ ಒಂದು ವಿದ್ವತ್ತಿನ ಸಂಬಂಧದಿಂದ ಮತ್ತೊಂದು ಕುಟುಂಬ ಸೇರುತ್ತದೆ. ಮೈಸೂರಿನ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರು ಮತ್ತು ಸಂಶೋಧಕರು ಆದ ಸದಾಶಿವರಾಯರದೇ ಈ ಕುಟುಂಬ. ಇವರಿಗೆ ಒಬ್ಬ ತಮ್ಮ - ಇಂಗ್ಲೀಷಿನ ಅಧ್ಯಾಪಕ ಹಾಗು ನಾಟಕಪ್ರಿಯ ಆಧುನಿಕ - ರಾಜಾರಾಯ. ಸದಾಶಿವರಾಯರ ಹೆಂಡತಿಯಾದ ಮುಗ್ಧೆ ನಾಗಲಕ್ಷ್ಮಿ. ಇವರ ಮಗ ಪೃಥ್ವಿ. 

ಮರಣಿಸಿದ ಪತಿಯ ಬಿ.ಏ ಓದುವ ಆಸೆಯನ್ನು ನೆರವೇರಿಸುವ ನಂಬಿಕೆಯನ್ನು ಹೊಂದಿದ ಕಾತ್ಯಾಯನಿ ನಂಜನಗೂಡಿನಿಂದ ಮೈಸೂರಿನ ಕಾಲೇಜಿಗೆ ಹೋಗುವ ಪ್ರಸಂಗದೊಂದಿಗೆ ಕಥೆಗೆ ತಿರುವು ಸಿಗುತ್ತದೆ. ಅತ್ತೆ ಒಪ್ಪದಿದ್ದರೂ ಮಾವನವರು ಒಪ್ಪಿ ಸೊಸೆಯನ್ನು ಕಳಿಸುತ್ತಾರೆ. ಅಲ್ಲಿ ಆಕೆ ರಾಜಾರಾಯನ ಸಂಪರ್ಕವನ್ನು ಹೊಂದುತ್ತಾಳೆ. ಯೌವನಾವಸ್ಥೆಯ ಈರ್ವರ ಸಂಪರ್ಕ ಪರಿಚಯದಿಂದ ಪ್ರೇಮಕ್ಕೆ, ಪ್ರೇಮದಿಂದ ಉತ್ಕಟವಾದ ಪ್ರೇಮಕ್ಕೆ ತಿರುಗುವುದನ್ನು ಭೈರಪ್ಪನವರು ಚೆನ್ನಾಗಿ ನಿರೂಪಿಸಿದ್ದಾರೆ. ಒಂದು ಕಡೆ ತನ್ನ ಮರಣಿಸಿದ ಪತಿಯ ಕುಟುಂಬದ ಕಡೆಗಿನ ಕರ್ತವ್ಯ, ಮತ್ತೊಂದು ಕಡೆ ತನ್ನ ಯೌವನದ ಸಹಜ ವಾಂಛೆಗಳು - ಇವೆರಡರ ನಡುವೆ ಡೋಲಾಯಮಾನವಾದ ಕಾತ್ಯಾಯನಿಯ ಅವಸ್ಥೆ ಮನೋಜ್ಞವಾಗಿ ವರ್ಣಿತವಾಗಿದೆ. ಕೊನೆಗೆ ಆಶೆಯ ಮಹಾಪೂರ ಅವಳ ಧಮನಿಗಳಲ್ಲಿ ಹರಿಯುತ್ತಿದ್ದ ಸಂಪ್ರದಾಯವನ್ನು ಆ ಕಾಲಕ್ಕಾದರೂ ಮುಳುಗಿಸಿ ರಾಜಾರಾಯನ ಜೊತೆಗೆ ಮದುವೆ ನಡೆದುಹೋಗುತ್ತದೆ. ಇಲ್ಲಿ ಒಂದಂಶವನ್ನು ಗಮನಿಸಲೇ ಬೇಕು. ಇಪ್ಪತ್ತನೆಯ ಶತಮಾನದ ಮೊದಲನೆಯ/ಎರಡನೆಯ ದಶಕದಿಂದ ಮೂರು-ನಾಲ್ಕು ದಶಕಳ ಕಾಲ ನಡೆಯುವ ಈ ಕಥೆಯಲ್ಲಿ ಈ ಮದುವೆ ನಡೆಯುವ ಸಮಯದಲ್ಲಿ ವಿಧವಾ ವಿವಾಹಕ್ಕೆ ಮೈಸೂರಂಥ ಸಂಪ್ರದಾಯಸ್ಥ ನಗರ ಸರಿಯಾದ ತಾಣವಾಗಿರಲಿಲ್ಲ. ಈ ಸಂಗತಿ ಕಾತ್ಯಾಯನಿಯ ಯೌವನದ ಬಯಕೆಗಳ ತೀಕ್ಷ್ಣತೆಯನ್ನು ಮತ್ತು ಅವಳ ಸ್ವಾತಂತ್ರ್ಯಪ್ರೀತಿಯನ್ನು ಎತ್ತಿ ತೋರಿಸುತ್ತದೆ. 

ಇನ್ನೊಂದು ಕಡೆ ಸದಾಶಿವರಾಯರ ಕನಸು. ಅವರದು ಭಾರತೀಯ ಸಂಸ್ಕೃತಿ ಮತ್ತು ಇತಿಹಾಸಗಳನ್ನು ಕುರಿತು ಉದ್ಗ್ರಂಥವನ್ನು ರಚಿಸಬೇಕೆಂಬ ಹಂಬಲ. ಸಾಕಷ್ಟು ಸಾಮರ್ಥ್ಯ ಅವರಲ್ಲಿತ್ತು ಎಂಬುದನ್ನು ಭೈರಪ್ಪನವರು ನಮಗೆ ತೋರಿಸುತ್ತಾರೆ. ಇವರ ವಿದ್ವನ್ಮಿತ್ರರು ನಂಜನಗೂಡಿನ ಶ್ರೀನಿವಾಸ ಶ್ರೋತ್ರಿಯರು. ಇಬ್ಬರೂ ವಿದ್ವಾಂಸರಾದರು ಅವರಲ್ಲಿರುವ ಭೇದವನ್ನು ಭೈರಪ್ಪನವರು ಸೂಕ್ಷ್ಮವಾದರೂ ಸೊಗಸಾಗಿ ತೋರಿದ್ದಾರೆ. ಸದಾಶಿವರಾಯರದ್ದು ಪಾಶ್ಚಾತ್ಯರ ರೀತಿ. ಅಧ್ಯಯನ ಮಾಡಬೇಕು, ಗ್ರಂಥರಚನೆ ಮಾಡಬೇಕು ಎಂಬ ಹಂಬಲ, ಸ್ವಲ್ಪ ಕೀರ್ತಿಯ ಆಸೆಯೂ ಕಾಣುತ್ತದೆ. ಸಂಸ್ಕೃತಿಯ ಅಧ್ಯಯನಕ್ಕೂ ಜೀವನಕ್ಕೂ ಸಂಬಂಧವಿಲ್ಲದ ಹಾಗೆ ನಡೆಯುತ್ತಾರೆ. ಅಧ್ಯಯನಕ್ಕಾಗಿ ಅಧ್ಯಯನ ಎಂಬುದು ಅವರ ರೀತಿ. ಆದರೆ ಶ್ರೀನಿವಾಸ ಶ್ರೋತ್ರಿಯರದು ಅಪ್ಪಟ ಭಾರತೀಯ ರೀತಿ. ಸದಾಶಿವರಾಯರ ಸಂದೇಹಗಳನ್ನು ಪುಸ್ತಕಗಳನ್ನು ನೋಡದೆಯೇ ಪರಿಹರಿಸಬಲ್ಲ ವಿದ್ವತ್ತು ಇವರಲ್ಲಿದ್ದರೂ, ಪುಸ್ತಕ ರಚನೆಗೆ ಕೈಹಾಕಿದವರಲ್ಲ. ಕೀರ್ತಿಯ ಲಾಲಸರಲ್ಲ. ತಮ್ಮ ಓದನ್ನೆಲ್ಲ ಬದುಕಿನಲ್ಲಿ ಕಾಣಿಸುವ ಋಷಿಕಲ್ಪ ವ್ಯಕ್ತಿತ್ವ ಇವರದು. ಭೈರಪ್ಪನವರ ideal ಏನು, ಅವರ ವೈಯಕ್ತಿಕ ಅಭಿಪ್ರಾಯವೇನು, ಅವರ ಒಲವೆಲ್ಲಿದೆ ಎಂದು ಇವರಿಬ್ಬರ ಪಾತ್ರಗಳ ಅಧ್ಯಯನದಿಂದ ಚೆನ್ನಾಗಿ ತಿಳಿಯಬಹುದು. ಭೈರಪ್ಪನವರಿಗೆ ಪಾಶ್ಚಾತ್ಯರ ಬಗ್ಗೆ ಗೌರವ ಮತ್ತು ಕಾಳಜಗಳಿವೆ, ಆದರೆ ಭಾರತೀಯ ವಿಚಾರಧಾರೆಯಲ್ಲಿ ಶ್ರದ್ಧೆಯಿದೆ ಎಂಬುದನ್ನು ಸುವಿದಿತ ಮಾಡಿಸುತ್ತಾರೆ.

ಸದಾಶಿವರಾಯರ ಹಂಬಲವು ಬೌದ್ಧಿಕ ಸಾಹಚರ್ಯವನ್ನು ಅಪೇಕ್ಷಿಸುವ ಬಗೆ ಸೊಗಸಾಗಿ ವ್ಯಕ್ತವಾಗಿದೆ. ಓದು-ಬರಹ ತಿಳಿಯದ ಪತ್ನಿಯಿಂದ ಬೌದ್ದಿಕ ಸಾಹಚರ್ಯ ಸಿಗದ ರಾಯರಿಗೆ ಶ್ರೀಲಂಕದವಳಾದ ಕೇಂಬ್ರಿಡ್ಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಕರುಣಾ ರತ್ನೆ ಜೊತೆಯಾಗಿ ಸಿಗುತ್ತಾಳೆ. ವಿದ್ಯಾರ್ಥಿನಿಯಾಗಿ ರಾಯರ ಜತೆ ಕೆಲಸ ಮಾಡಲು ಪ್ರಾರಂಭಿಸುವ ಕರುಣಾಳಿಗೆ ಕ್ರಮೇಣ ರಾಯರು ಅನಿವಾರ್ಯರಾಗುತ್ತಾರ, ಜೀವನದ ಗುರಿಯನ್ನು ತಲುಪಲು ಸಾಧನವಾಗುತ್ತಾರೆ. ರಾಯರಿಗೂ ಹಾಗೇ ಆಗಿ ಇಬ್ಬರೂ ಸಿವಿಲ್ ಮದುವೆ ಕೂಡ ಆಗುತ್ತಾರೆ. ಒಂದಂಶ ಇಲ್ಲಿ ನನಗೆ ಅಷ್ಟು ಹಿಡಿಸಲಿಲ್ಲ . ಕರುಣಾ ಎಂಬ ಸೊಗಸಾದ ಹೆಸರನ್ನು ಪಡೆದವಳನ್ನು ಭೈರಪ್ಪನವರು "ರತ್ನೆ" ಎಂದೇ ರಾಯರಿಂದ ಕರೆಸುತ್ತಾರೆ. ರತ್ನೆಯೆಂಬುದು surname. ಪತಿಪತ್ನಿಯರಿಬ್ಬರ ನಡುವೆ ಈ surname ಸಂಬೋಧನೆ ಅಷ್ಟು ಸರಿಯಿಲ್ಲ. ಅಥವಾ - ಇವರಿಬ್ಬರೂ ತಮ್ಮ profession ಗಾಗಿಯೇ ಹತ್ತಿರ ಬಂದದ್ದು, ಕೊನೆಯವರೆಗೂ ಇವರ ಸಂಬಂಧ ಹಾಗೆಯೇ ಉಳಿಯಿತು ಎಂಬುದನ್ನು ಓದುಗರಿಗೆ ಚೆನ್ನಾಗಿ ತಿಳಿಸುವುದಕ್ಕೆ ಹೀಗೆ ಉತ್ಪ್ರೇಕ್ಷೆ ಮಾಡಿದ್ದಾರೋ ಏನೋ! ದ್ವಿಪತ್ನೀತ್ವದಲ್ಲಿ ಓದದ ಹೆಂಡತಿಗೆ ತೊಂದರೆಯಿಲ್ಲ, ಆದರೆ ಓದಿದ ಹೆಂಡತಿಗೆ ತೊಂದರೆ. ಈ ಇಕ್ಕಟ್ಟಿನಲ್ಲಿ ಸದಾಶಿವರಾಯರನ್ನು ಸಿಕ್ಕಿಸಿ ಕೊನೆಯವರೆವಿಗೂ ಒದ್ದಾಡಿಸುತ್ತಾರೆ. ಏನೂ ತಿಳಿಯದ ಹೆಂಡತಿ ಆತಂಕದ ಸಮಯದಲ್ಲಿ ರಾಮನಾಮವನ್ನು ಬರೆದು ದುಗುಡ ಮರೆಯಲು ಯತ್ನಿಸಿ ಮರೆಯುವುದರಲ್ಲಿ ಯಶಸ್ವಿನಿಯೂ ಆಗುತ್ತಾಳೆ. ಇದರಿಂದ ಭೈರಪ್ಪನವರು ಮುಗ್ಧ ನಂಬಿಕೆಗೆ ಒಳ್ಳೆಯ ಸ್ಥಾನವನ್ನೇ ಕೊಟ್ಟ ಹಾಗೆ ಕಾಣುತ್ತದೆ. ಇದರಿಂದ ನಾಗಲಕ್ಷ್ನ್ಮಿಯಲ್ಲಿ ಮೂಡುವ ಒಂದು ನಿರ್ಲಿಪ್ತತೆ ಕೂಡ ನಿದರ್ಶನವೆಂಬುದಾಗಿ ಸಾರಿದ್ದಾರೆ.

ಕಾತ್ಯಾಯನಿ ಮದುವೆಯಾದ ಆರಂಭದ ದಿನಗಳಲ್ಲಿ ಬಹಳ ಸಂತೋಷದಿಂದಿದ್ದರೂ ಒಂದೆರಡು ವರ್ಷಗಳಲ್ಲಿ ತನ್ನ ಹಳೆಯ ಕುಟುಂಬದ ಬಗ್ಗೆ ನೆನಪು ಮಾಡಿಕೊಳ್ಳುತ್ತಾಳೆ. ಜತೆಗೆ ಅವಳಿಗಾಗುವ ಗರ್ಭಪಾತಗಳಿಂದ ಅವಳಿಗೆ ಮಕ್ಕಳಾಗಲು ಸಾಧ್ಯವಿಲ್ಲದೇ ಹೋಗುತ್ತದೆ. ಇದಾದ ಮೇಲಂತೂ ತನ್ನ ಮಗನಾದ ಚೀನಿಯ ಬಗ್ಗೆ ಹೆಚ್ಚಿನ ವಾತ್ಸಲ್ಯ ಅವಳಲ್ಲಿ ಮೂಡಿದರೂ ಏನೂ ಮಾಡಲಾರದೆ ಹೋಗುತ್ತಾಳೆ. ಚೀನಿಯನ್ನು ಕರೆತರುವ ಅವಳ ಪ್ರಯತ್ನಗಳು ವಿಫಲವಾಗಿ ಅವಳ ಖಿನ್ನತೆಗೆ ದಾರಿಯಾಗುತ್ತವೆ. ದುರದೃಷ್ಟವಶಾತ್ ಕಾತ್ಯಾಯನಿಯು ಈ ಗರ್ಭಪಾತಗಳೆಲ್ಲ ಅವಳ ಮಾವನವರ ಮನೆಯನ್ನು ಬಿಟ್ಟೂ ಪುನರ್ವಿವಾಹವಾದದ್ದಕ್ಕೆ ಎಂದು ಬಗೆದು ಮಾನಸಿಕ ರೋಗಕ್ಕೆ ತುತ್ತಾಗುತ್ತಾಳೆ. ಕಾಲೇಜಿಗೆ ಬರುವ ಮಗನೂ ಸಹ ತನ್ನನ್ನು ನಿರಾಕರಿಸಿದಾಗ ಅವಳ ರೋಗ ಉಲ್ಬಣಿಸಿ ಸಮಾಧಾನವಿಲ್ಲದೆಯೇ ಕೊರಗುತ್ತಾಳೆ. 

ಈಕೆಯ ವಿಧವಾ-ವಿವಾಹ ಮತ್ತು ವಂಶವೃಕ್ಷದ ಕಲ್ಪನೆಯ ನಡುವಿನ ಘರ್ಷಣೆ ಕೆಲವು ಒಳ್ಳೆಯ ಚಿಂತನೆಗಳನ್ನು ಮೂಡಿಸಿದೆ. ಭೈರಪ್ಪನವರು ಎತ್ತುವ ಪ್ರಶ್ನೆ - ಒಂದು ವಂಶವೃಕ್ಷದ ಬೀಜವನ್ನು ಫಲಿಸಿದ ಕ್ಷೇತ್ರ ಮತ್ತೊಂದು ವಂಶದ ಕ್ಷೇತ್ರವಾಗುವಾಗ ಏನಾಗಬಹುದು - ಎಂಬುದು? ಈ ಪ್ರಶ್ನೆ ಓದುಗರನ್ನೂ ಕಾಡಿಸುತ್ತದೆ. ಪುಸ್ತಕ ಓದಿದ ಬಹಳ ದಿನಗಳ ಮೇಲೆಯೂ!

ಬರುಬರುತ್ತಾ ಕೊನೆಯ ನೂರು ಪುಟಗಳಲ್ಲಿ ಅಕಸ್ಮಾತ್ತಾಗಿ ಗೋಚರವಾಗುವ ಸತ್ಯ ಶಾಂತರೂ ದಾಂತರೂ ಆದ ಶ್ರೀನಿವಾಸ ಶ್ರೋತ್ರಿಯರಿಗೂ ಆಘಾತಕರವಾಗಿ ಪರಿಣಮಿಸುತ್ತದೆ. ಪುತ್ರನ ಆಕಸ್ಮಿಕ ಮರಣದ ಸಮಯದಲ್ಲೂ ಅಲ್ಲಾಡದ ಬೆಟ್ಟದಂಥಿದ್ದ ಅವರ ವ್ಯಕ್ತಿತ್ವ ಈ ಸತ್ಯದಿಂದ ಸ್ವಲ್ಪ ಪೆಟ್ಟು ತಿನ್ನುತ್ತದೆ. (ಅದು ಏನು ಎಂದು ನಾನು ಹೇಳಿದರೆ ಓದುಗರಾದ ನೀವು ಈ ಪುಸ್ತಕವನ್ನು ಓದದೇ ಇರಬಹುದು. ಪುಸ್ತಕ ಓದಿದವರಿಗೆ ಹೇಗಿದ್ದರೂ ಗೊತ್ತು ತಾನೆ?) ವಂಶದ ಬಗ್ಗೆ ಬಹಳ ಹೆಚ್ಚಿನ ಗೌರವವಿರಿಸಿದ ಶ್ರೋತ್ರಿಯರಿಗಂತೂ ಈ ಆಘಾತ ಕಷ್ಟಸಹ್ಯವಾಗುತ್ತದೆ. ಅಷ್ಟೇ ಏಕೆ? ಅವರ ವಂಶಗೌರವವೆಂಬ ಕಲ್ಪನೆಯನ್ನೇ ಬುಡಮೇಲು ಮಾಡುತ್ತದೆ. ಆದರೆ ಹಿಂದೆ ಆತಂಕ ಮೂಡಿಸುವ ದುವಿಧೆಗಳಲ್ಲಿ ಗೆದ್ದು ಬಂದಿದ್ದ ಶ್ರೋತ್ರಿಯರು ಇಲ್ಲಿಯೂ ಕಡೆಯಲ್ಲಿ ಗೆಲ್ಲುತ್ತಾರೆ. "ಧರ್ಮದ ಮಾರ್ಗದಲ್ಲಿ ನಡೆಯುವವರಿಗೆ ಧರ್ಮವೇ ಮಾರ್ಗ ತೋರುತ್ತದೆ" ಎಂಬ ಅಚಲ ನಂಬಿಕೆಯನ್ನು ಹೊಂದಿದ ಶ್ರೋತ್ರಿಯರು ಅಂತ್ಯದಲ್ಲಿ ಭಾರತೀಯ ಆಶ್ರಮಧರ್ಮದ ಪಾಲನೆಯನ್ನೇ ಮಾಡುತ್ತಾರೆ. 

ಒಂದು ಭಾಗವನ್ನು ಮಾತ್ರ ಇಲ್ಲಿ ನಂಬಲು ಕಷ್ಟ. ಮನೆಯ ಕೆಲಸದವಳಾದ, ಶ್ರೋತ್ರಿಯರಿಗಿಂಥ ಸ್ವಲ್ಪ ಚಿಕ್ಕವಳಾದ ಲಕ್ಷ್ಮಿಗೆ ತಿಳಿದ ಒಂದು ಸತ್ಯ ಇವರಿಗೆ ಹೇಗೆ ತಿಳಿಯದೇ ಹೋಯಿತೆಂಬುದು. ಅದೂ ಅದೇ ಊರಿನಲ್ಲಿಯೇ ಇದ್ದಂಥವರಾದ ಶ್ರೋತ್ರಿಯರು ತಕ್ಕ ಮಟ್ಟಿಗೆ ಜನಜನಿತವಾದ ಒಂದು ವಾರ್ತೆಯನ್ನು ತಿಳಿಯದೇ ಹೋದರಲ್ಲಾ ಎಂದು ನಂಬಲು ಸ್ವಲ್ಪ ಕಷ್ಟ. ಆದರೂ ಹೇಳುತ್ತಾರಲ್ಲಾ, ಕಾವ್ಯಾಸ್ವಾದನೆಗೆ ಅಥವಾ ರಸಾಸ್ವಾದನೆಗೆ ಮೊದಲಿಗೆ ಬೇಕಾಗಿರುವುದು ಕೋಲ್ರಿಜ್ ಹೇಳಿದ "willing suspension of disbelief". ನಾವೂ ಇಲ್ಲಿ ಅದನ್ನೇ ಆಶ್ರಯಿಸಿದಾಗೆ ಒದುಗರಿಗೆ ಒಂದು ಅದ್ಭುತ ಪ್ರಸಂಗ ಮೂಡುತ್ತದೆ. ಒಬ್ಬ ಮಹಾಪುರುಷನು ಒದಗಿದ ಕಷ್ಟವನ್ನು ಹೇಗೆ ನಿಭಾಯಿಸಬಲ್ಲ ಎಂಬುದು ಎಲ್ಲ ಓದುಗರಿಗೆ ಆಗುವ ಒಂದು ಪಾಠ. ಅದನ್ನು ದರ್ಶನಶಾಸ್ತ್ರವನ್ನು ಅಭ್ಯಸಿಸಿದ ಭೈರಪ್ಪನವರು ಚೆನ್ನಾಗಿಯೇ ಮಾಡಿಸುತ್ತಾರೆ. 

ಈ ಪುಸ್ತಕದ ಮೇಲೆ ಚಿತ್ರವನ್ನು ಮಾಡಿದ ಗಿರೀಶ್ ಕಾರ್ಣಾಡರ ಪ್ರಕಾರ ಈ ಸಿನಿಮಾ ಕೃತಿ ತಮ್ಮ ಅತ್ಯಂತ ದುರ್ಬಲ ಕೃತಿಗಳಲ್ಲಿ ಒಂದು ಎಂಬುದು. ಹಾಗೆ ಹೇಳಲು ಕಾರಣ ಸ್ವಲ್ಪವಿದೆಯೋ ಏನೋ! ಕಾತ್ಯಾಯನಿಯ ಪಾಡು ಎಂಥ ನಾಯಿಗೂ ಬೇಡವೆಂಬಂತೆ ನಿರೂಪಿಸಿದ ಭೈರಪ್ಪನವರು ಆಧುನಿಕ ಕಾದಂಬರಿಕಾರನ ಮುಸುಕು ಹಾಕಿಕೊಂಡ "ಸನಾತನಿ" ಎಂಬುದೇ ಆ ಕಾರಣವಿರಬಹುದೇ? ಆಧುನಿಕನಾದ ನನ್ನಲ್ಲೂ ಈ ವಿಷಯ ಸ್ವಲ್ಪ ಕಳವಳ ಮೂಡಿಸದೇ ಇರಲಿಲ್ಲ. ಈಗ ಯುವತಿಯಾದ ಒಬ್ಬ ವಿಧವೆ ಮತ್ತೆ ಮದುವೆಯೇ ಆಗಬಾರದೇ? ಮಕ್ಕಳಿಲ್ಲದಿದ್ದರೆ ಹೇಗೆ? ಮಕ್ಕಳಿದ್ದರೆ ಹೇಗೆ? ಇಲ್ಲಿ ಅಸಂಖ್ಯಾತ ಸಾಧ್ಯತೆಗಳಿದ್ದರೂ ಅವುಗಳಲ್ಲಿ ಒಂದನ್ನು ತೋರಿಸಿ ಈ ವಿಷಯದ ಬಗ್ಗೆ ಚಿಂತನೆಯನ್ನು ಪ್ರಚೋದಿಸುವುದೇ ಭೈರಪ್ಪನವರ ಕಥನಾಕೌಶಲವೆಂದು ಹೇಳಬೇಕೇ ಹೊರತು "ಅವರು ಹಾಗೆ ಚಿತ್ರಿಸಿದ್ದಾರೆ, ಆದ್ದರಿಂದ ಅವರು ಸನಾತನಿಗಳು" ಎಂದು ಹೇಳುವುದು ನನ್ನ ಪ್ರಕಾರ ಸರಿಯೆನಿಸುವುದಿಲ್ಲ. 

ಇನ್ನೊಂದು ಸಣ್ಣ ತಪ್ಪೂ ಪುಸ್ತಕದಲ್ಲಿದೆ. ಕೊಲಂಬಸನು ಅಮೇರಿಕೆಯನ್ನು ಕಂಡುಹಿಡಿದನೆಂದರೆ ಅದು ಹಾಸ್ಯಾಸ್ಪದವಾದ ಸಂಗತಿಯನ್ನು ಹೇಳುತ್ತಾ ಹೊರಟ ಭೈರಪ್ಪನವರು ಅಲ್ಲಿ ಭಾರತೀಯ ಮೂರ್ತಿಗಳ ಅವಶೇಷಗಳಿದ್ದವು ಎಂದು ನನ್ನ ಪ್ರಕಾರ ತಪ್ಪಾಗಿ ಬರೆದಿದ್ದಾರೆ. ಇದಕ್ಕೆ ಪುರಾವೆ ಎಲ್ಲಿಯೂ ಇಲ್ಲ ಎಂದು ನನ್ನ ತಿಳಿವಳಿಕೆ. ತಪ್ಪಿದ್ದಲ್ಲಿ ತಿದ್ದಿಕೊಳ್ಳಲು ಸಿದ್ಧನಾಗಿರುವೆ.

ಒಟ್ಟಿನಲ್ಲಿ, ಚಿಂತನೆಗೆ ಒಳ್ಳೆಯ ಗ್ರಾಸವಾಗುವ ಈ ವಂಶವೃಕ್ಷ ಅತ್ಯಂತ ಜನಪ್ರಿಯ ಕಾದಂಬರಿಗಳಲ್ಲಿ ಒಂದು. ಈ ಪುಸ್ತಕವನ್ನೋದಿದ ಅಥವಾ ಓದದ ಇತರರಿಗೆ ನನ್ನ ಅನಿಸಿಕೆಗಳನ್ನು ಓದಿ ಏನನ್ನಿಸಿದೆಯೋ ಎಂಬುದನ್ನು ತಿಳಿಯಲು ನಾನು ಕುತೂಹಲಿಯಾಗಿದ್ದೇನೆ.

ಮೂಲ:  http://goo.gl/wG11ZX



ಅಜ್ಞಾತ ಸುಂದರಿ - ಸೂರ್ಯದೇವರ ರಾಮಮೊಹನರಾವ್ ( ಕನ್ನಡಕ್ಕೆ - ಅಜ್ಜಂಪೂರ ಜೆ. ಸೂರಿ )

Agnyata Sundari - Suryadevavara Raamamohanrao 




ಈ ಕಾದಂಬರಿ ಓದುವಾಗ ನನ್ನನ್ನು "ಬೆಳದಿಂಗಳ ಬಾಲೆ" ಕನ್ನಡದ ಚಲನಚಿತ್ರ ತುಂಬಾ ನೆನಪಾಯಿತು. ಸಿನಿಮಾ ನೋಡುವ ಎಲ್ಲರು ಕನ್ನಡದ 'ಬೆಳದಿಂಗಳ ಬಾಲೆ' ಚಿತ್ರ ಗೊತ್ತು, ಯಾಕೆ ಅಂದ್ರೆ ಅದು ಅಂಥ ಒಂದು ಅಧ್ಬುತ ಚಿತ್ರ. ನೋಡಿಲ್ಲ ಅಂದ್ರೆ ದಯವಿಟ್ಟು ನೊಡಿ. ಈ ಕಾದಂಬರಿ ಆ ಚಿತ್ರವನ್ನು ಬಹುತೇಕ ಹೋಲುತ್ತದೆ ಕೊನೆಯಲ್ಲಿ ಮಾತ್ರ ಸ್ವಲ್ಪ ವ್ಯತ್ಯಾಸವಿದೆ ಮತ್ತು ಇಲ್ಲಿ ಇಬ್ಬರು ನಾಯಕಿಯರು. ಈ ಕಾದಂಬರಿ ಮೂಲತ: ತೆಲುಗು ಭಾಷೆಯದ್ದು ಇದನ್ನು ಕನ್ನಡಕ್ಕೆ ಅಜ್ಜಂಪೂರ ಜೆ. ಸೂರಿಯವರು ಅನುವಾದಿಸಿದ್ದಾರೆ. 

ಇಲ್ಲಿ ಬರುವ ಶ್ರೀಧರ್ ಎಂಬಿಎ ಮಾಡುತ್ತಿದ್ದಾಗ ಅಪರ್ಣನನ್ನು ಪ್ರೀತಿಸುತ್ತಿರುತ್ತಾನೆ ಅವಳು ಹೇಳದೆ ಹೋದರು ಇವನ್ನನ್ನು ಪ್ರೀತಿಸುತ್ತಾಳೆ. ಓದು ಮುಗಿಯುವ ಮುಂಚೆ ಅಪರ್ಣಳಿಗೆ ನೃತ್ಯ ಕಲೆಯಲ್ಲಿ ಆಸಕ್ತಿ ಮೂಡಿ ಅದರಲ್ಲಿ ತಲ್ಲೀನಳಾಗುತ್ತಾಳೆ. ನೃತ್ಯಕ್ಕೆಂದು ಅವಳು ದೇಶ ವಿದೇಶ ಸುತ್ತುತ್ತಿರುತ್ತಾಳೆ ಆದರೆ ಪ್ರೀತಿ ಮಾತ್ರ ಫೋನಿನಲ್ಲಿ ಮುಂದುವರೆಯುತ್ತಿರುತ್ತದೆ. ಈಗಿರುವಾಗ ಒಂದು ದಿನ ಶ್ರೀಧರನ ಫ್ಲಾಟ್ ಗೆ ಒಂದು ಅಪರಿಚಿತ ಹುಡುಗಿಯ ಫೋನ್ ಬರುತ್ತದೆ. ಅಲ್ಲಿಂದ ಶುರುವಾದ ಮಾತು ಪ್ರೀತಿಯ ಹತ್ತಿರತ್ತಿರ ಹೋಗುತ್ತದೆ. ಆ ಹುಡುಗಿಗೆ ಅಪರ್ಣಳ ಬಗ್ಗೆ ಗೊತ್ತಿದ್ದರು ಇವನ್ನನ್ನು ಪ್ರೀತಿಸುತ್ತಾಳೆ, ಅವರಿಬ್ಬರ ಮೇಲಿನ ಆಸುಯೇ ಇಂದಲ್ಲ ಶ್ರೀಧರನ ಒಳ್ಳೆಯ ಸ್ವಭಾವದ ಮೇಲಿನ ಅಭಿಮಾನದಿಂದ. ಇವನಿಗೂ ಈ ಅಪರಿಚಿತ   ಹುಡುಗಿ ಮೇಲೆ ಪ್ರೀತಿ ಚಿಗುರುತ್ತದೆ. ಅಪರ್ಣಳ ನಿರಂತರ ಸುತ್ತುವುದು, ಶ್ರೀಧರ್ ಇನ್ನು ಇವಳ ಹತ್ತಿರವಾಗುತ್ತಾನೆ. 

ಶ್ರೀಧರ್ ಏನೇ ಮಾಡಿದರು ಪೂಜಾಗೆ(ಅಪರಿಚಿತಳ ಹೆಸರು) ಗೊತ್ತಾಗುತ್ತದೆ. ಹೇಗೆ ಎಂದು ದಿನ ರಾತ್ರಿ ತಲೆ ಕೆಡಿಸಿಕೊಳ್ಳುತ್ತಾನೆ. ಆಗ ಅವನ ಮಿತ್ರ ಯೋಗಿ ಶ್ರೀಧರನ ವಿಷಯವಲ್ಲ ತಿಳಿದು ಅವಳು ಅವನ ಬಿಲ್ಡಿಂಗ್ ನ ಎದುರುಗಡೆ ಬಿಲ್ಡಿಂಗ್ ನಲ್ಲಿ ಇರಬಹುದು ಎಂದು ಹುಹಿಸುತ್ತಾರೆ. ಅವರು ಏನೇನೋ ಯೋಜನೆಗಳನ್ನು ಹಾಕಿದರು ಪೂಜಳನ್ನು ಹುಡುಕಲು ಹಾಗುವುದಿಲ್ಲ. ಮುಂದೆ ಅವರಿಬ್ಬರೂ ಬೇಟಿ ಮಾಡುತ್ತಾರೆ, ಏನಾಗುತ್ತದೆ ಎಂದು ಓದಿ ನೋಡಬೇಕು. 

ಕಾದಂಬರಿಯಲ್ಲಿ  ಎಲ್ಲಲ್ಲಿ ಕೆಲವು ಪಾತ್ರಗಳನ್ನೂ ಪ್ರಯತ್ನ ಪೂರಕವಾಗಿ ತುರುಕಿದ್ದಾರೆ ಎಂದು ಅನಿಸುತ್ತದೆ. ಮೇರಿ ಪಾತ್ರ ಏನಾಗುತ್ತದೆ ಎಂದೇ ತಿಳಿಯುವುದಿಲ್ಲ. ಯೋಗಿ ಅವನ ಹಳೆಯ ಪ್ರೀತಿಯನ್ನು ಹಿಂದೂ ಮುಂದು ನೋಡದೆ ಮತ್ತೆ ಒಪ್ಪಿಕೊಳ್ಳುತ್ತಾನೆ ಯಾಕೆ ಎಂದೇ ಹೇಳುವುದಿಲ್ಲ. ನಿರ್ಮಲಾಳ ಮಗು ಯೋಗಿಯನ್ನು ಯಾವ ರೀತಿ ಸ್ವೀಕರಿಸುತ್ತದೆ ಎಂದು ಹೇಳುವುದಿಲ್ಲ. ನಾನು ಓದಿದ ಮೊದಲ ತೆಲಗು ಕಾದಂಬರಿ ಇದು, ಅಲ್ಲಿನ ಕಾದಂಬರಿಕಾರರ ಬಗ್ಗೆ ಅಷ್ಟು ಗೊತ್ತಿಲ್ಲದ ಕಾರಣ ನಾನು ಇದರ ಬಗ್ಗೆ ಏನು ಖಂಡಿತಾಗಿ ಇದನ್ನು ನೀವು ಓದಬೇಕು ಎಂದು ಹೇಳಲಾರೆ. 


Tuesday, May 13, 2014

ಜಲಪಾತ - ಎಸ್ ಎಲ್ ಭೈರಪ್ಪ

Jalapatha - S L Bhyrappa





ಈಗಿನ ಅಂದರೆ ಆಧುನಿಕ ಕಾಲದ ಜನರಿಗೆ ಅದರಲ್ಲೂ ನಗರದಲ್ಲಿ ಇರುವ ಜನರಿಗೆ ಹಳ್ಳಿಯ ಜೀವನ ಬಲು ಸುಂದರ, ಚಿಂತೆನೇ ಇಲ್ಲ ಮತ್ತು ಆರಾಮಾಗಿ ಜೀವನ ಸಾಗಿಸಬೌದು ಎನ್ದು. ಆದರ ಹಳ್ಳಿಯ ಜನಕ್ಕೆ ನಗರದ ಜೀವನ ಆರಾಮಾಗಿ ಕಾಣುತ್ತದೆ, ತಿಂಗಳಿಗೆ ಬರುವ ಸಂಬಳ, ನಗರದ ಮಳಿಗೆಗಳು, ಬೇಕೆಂದಾಗ ಸಿಗುವ ವಸ್ತುಗಳು ಅವರಿಗೆ ಹಿತವೆನುಸುತ್ತದೆ. ಇಲ್ಲಿ ಯಾರು ಸರಿ ಯಾರು ತಪ್ಪು ಎಂದು ಹೇಳಿಕ್ಕೆ ಆಗುವುದಿಲ್ಲ ಯಾಕೆಂದರೆ ಇಬ್ಬರು ಸರಿ ಮತ್ತು ಇಬ್ಬರು ತಪ್ಪು. ಹಳ್ಳಿಯ ಜನಕ್ಕೆ ಒಂದು ತಿಂಗಳ ಸಂಬಳದ ಹಿಂದೆ ಇರುವ ಕಷ್ಟಗಳು ಮತ್ತು ಅದನ್ನು ಪಡೆದು ನಡೆಸುವ ಸಂಸಾರ ಗೊತಿರುವುಡಿಲ ಹಾಗೆಯೇ ನಗರದ ಜನರಿಗೆ ಹುತ್ತಿ ಬಿತ್ತಿ ಮತ್ತು ಮಾರುವ ಕಷ್ಟ ಗೊತ್ತಿಲ್ಲ. ನಾವು ಯಾವುದು ಸರಿಎನ್ದರ ಅದು ಅವರವರಿಗೆ ಬಿಟ್ಟಿದ್ದು. 

ಇಲ್ಲಿ ಭ್ಯಪ್ಪನವರು ಈ ಜೀವನದ ವ್ಯತ್ಯಾಸದ ಚಿತ್ರಣವನ್ನೇ ಕಾದಂಬರಿಯಾಗಿಸಿದ್ದಾರೆ. ಭೂಪತಿ ಒಂದು ಅಡ್ವರ್ಟೈಸಿಂಗ್ ಕಂಪನಿಯಲ್ಲಿ ಫ್ರೀ ಲಾನ್ಸ್ ಪೈಂಟರ್, ಅವನಿಗೆ ಹೆಂಡತಿ ವಸು (ವಸುಂಧರಾ) ಮತ್ತು ಒಂದು ಗಂಡು ಮಗು ವಿಶ್ವ. ಅವರ ಜೀವನ ಭೂಪತಿಯ ಸಂಬಳದಲಿಯೇ ಸಾಗಬೇಕು. ಅವರ ಜೀವನ ಸುಮಾರಾಗಿ ಸಾಗುತ್ತಿದೆ. ಊರಿನಲ್ಲಿ ಅವರ ತಂದೆ ಮಾಡಿಟ್ಟ ಸ್ವಲ್ಪ ಆಸ್ತಿ ಇದೆ. ಹೆಂಡತಿ ಆಗಾಗ ಸಂಗೀತ ಕಲಿಯಲು ಹೋಗುತ್ತಾಳೆ. ಆದರೆ ಏನೋ ಒಂದು ಬೇಸರ ಅವರಿಬ್ಬರ ಮಧ್ಯದಲ್ಲಿ. ಜಗಳ ಆಡುವುದಿಲ್ಲ ಆದರು ಒಂದು ರೀತಿಯ ಒಡಕು ಇಬ್ಬರ ಮಧ್ಯೆ. ಅವರು ಇನ್ನೊದು ಮಗು ಬೇಡವೆಂದು ಒಂದು ಸಲ ಗರ್ಭಪಾಠ ಮಾಡಿಸಿಕೊಂಡಿದ್ದು ಇದೆ. ಆದರು ಮೊದಲಿನ ರೀತಿ ಅನ್ಯೊನ್ಯತೆ ಇಲ್ಲ. 

ಇದೆರೆಲ್ಲದುರ ಮಧ್ಯ ಬಂದು ಹೋಗುವ ಕೆಳಗಡೆ ಮನೆಯ ಸುಧಾಬಾಯಿ ಅವರ ಡಾಕ್ಟರ ಗಂಡ, ರೆಬೆಲ್ಲೊ, ಮತ್ರಾನಿ ಎಲ್ಲರ ಕತೆಗಳೆ ಒಂದು ವಿಚಿತ್ರ ಅನುಭವ. ಬೋಬಾಯಿಯಲ್ಲಿ ಎರಡು ಮಕ್ಕಳ ಜೊತೆ ಜೀವನ ಸಾಗಿಸಿಸುವುದು ಕಷ್ಟ ವೆಂದು ತಿಳಿದು ಎಲ್ಲ ಬಿಟ್ಟು ತಮ್ಮ ಹಳ್ಳಿಗೆ ಬರುತ್ತಾರೆ. ಇಲ್ಲಿ ಆರಾಮಾಗಿ ಜೀವನ ಸಾಗಿಸಬಹುದು ಎಂದು ತಿಳಿದು ಹಳ್ಳಿಗೆ ಬರುತ್ತಾರೆ. ಗುತ್ತಿಗೆಗೆ ಕೊಟ್ಟ ಭೂಮಿ, ಅವರು ನೋಡಿದ ಹಳ್ಳಿಯ ಜೀವನ ಮತ್ತು ಈಗಿರುವ ಜೀವನದ ವ್ಯತ್ಯಾಸ ಮತ್ತು ಅದರಿಂದ ಪಡುವ ಕಷ್ಟಗಳು ಎಲ್ಲ ಸತ್ಯಕ್ಕೆ ಹತ್ತಿರವಾದುದ್ದೆ ಎಂದು ಅನಿದುತ್ತದೆ. 

ಹಳ್ಳಿಯ ಜೀವನ ಸುಲಭ ಎನ್ನುವವರು ಈ ಕಾದಮಬ್ರು ಓದಬೇಕು ಮತ್ತು ಪಟ್ಟಣ ಜೀವನವೇ ಸುಂದರ ಎನ್ನುಅವರು ಇದನ್ನು ಓದಬೇಕು. 


Thursday, May 1, 2014

ಎರಡು ದಂಡೆಗಳು - ಬಿ ಪಿಶಿವಾನಂದ ರಾವ್

Yeradu Dandegalu - B P Shivananda Rao



ಒಂದು ದೇಶಕ್ಕೆ ಶ್ರೇಷ್ಠತೆ - ಗೌರವ ಹುಟ್ಟಿಸಿ ಕೊಡುವುದು ಅಲ್ಲಿರುವ ಕಾರ್ಖಾನೆಗಳು, ಸೇತುವೆ, ಸುಂದರ ಕಟ್ಟಡ, ರಸ್ತೆಗಳಿಂದ ಅಲ್ಲ ಬದಲು ಅಲ್ಲಿ ಜೀವಿಸಿರುವ ಕ್ರಿಯಾಶೀಲ ಬುದ್ದಿಯ, ಸಮಜೋತ್ಕರ್ಷಕ್ಕಾಗಿ ಪ್ರಾಮಾಣಿಕವಾಗಿ ತುಡಿಯುವ-ದುಡಿಯುವ ಮನಸ್ಸುಳ್ಳ ವ್ಯಕ್ತಿಗಳಿಂದಾಗಿ ಎಂಬುದು ಒಂದು ಶ್ಲಾಘನೀಯ ಸೂತ್ರ. 

ಚದ್ರಗಿರಿ-ಧರ್ಮಾಪುರ ಎರಡು ದಂಡೆಗಳಲ್ಲಿರುವ ಊರುಗಳು. ಮಧ್ಯ ಕಲ್ಹಳ್ಳ ಇದೆ. ಎರಡೂ ಸ್ಥಳಗಳಲ್ಲಿರುವ ವ್ಯಕ್ತಿಗಳ ಅಂತರ್ ದೃಷ್ಟಿ ದುಡಿಯುವ ಕಾರ್ಯವೈಖರಿ, ಸ್ವಾರ್ಥ-ದ್ವೇಷ, ಅದು ಇತರರ ಮೇಲೆ ಬೀರಿದ ಪ್ರಭಾವ; ಇದು ನನಗೆ ಇಷ್ಟವಾದ ಕಥಾ ವಸ್ತುವೇ 'ಎರಡು ದಂಡೆ' - ಕಾದಂಬರಿ. ಎರಡು ವಿಭಿನ್ನ ಅಭಿರುಚಿಯ ಜನರ ಬದುಕಿನ ಇತಿಹಾಸದಲ್ಲಿ ದುರಂತದ ಜೊತೆ ಉತ್ಕರ್ಷದ ಬೆಳಕು ಅಡಗಿದೆ. ಆಯಾ ಸ್ಥಳಗಳ ಉತ್ಥಾನ-ಪತನಕ್ಕೆ ಇಲ್ಲಿನ ನಿತ್ಯ ನಿದರ್ಶನವೆಂದು ಮಾತ್ರ ಹೇಳಬಯಸುವೆ. 

ಈ ಕಾದಂಬರಿಯಲ್ಲಿ ತಮ್ಮ ಊರಿನ ಏಳ್ಗೆಗಾಗಿ ಮಾತ್ರವಲ್ಲ ಕೆಲವಾದರೂ ಸಾಮಾಜಿಕ ಕಾರ್ಯಕ್ರಮಗಳಿಂದ ಸಾಮೂಹಿಕ ಉತ್ಕರ್ಷನಾ ದೃಷ್ಟಿಯಲ್ಲಿ ದುಡಿಯುವ-ದುಡಿಸುವ ಆತ್ಮವಿಶ್ವಾಸ ಹೊಂದಿದ ಗೋಪಾಲರು. ಅದಕ್ಕೆ ಸಚೇತನಾ ಶಕ್ತಿಯಾಗಿ ನಿಂತ ಅವರ ಮಗಳ ದಿಟ್ಟ ನಿಲುವಿನ ಗಟ್ಟಿ ಹೆಜ್ಜೆ. ಇವರ ಬದುಕಿನ ಚಿತ್ರಣ ಒಂದು ಕಡೆ. ಎರಡನೆಯದೆಂದರೆ ತಮ್ಮ ತಮ್ಮಲ್ಲಿ ಕಚ್ಚಾಡಿಕೊಳ್ಳುತ್ತ  ಸ್ವಾರ್ಥ-ದ್ವೇಷ-ಜಾತಿಯ ನಿಂದನೆಗಳಿಂದ ಏನೂ ಪ್ರಗತಿ ಸಾಧಿಸಿಕೊಳ್ಳದೆ ಕೊನೆಗೂ ಕೂಪಮಂಡೂಕಗಳಾಗಿ ಊಳಿಯೋ ಪಕ್ಕದ್ದೇ ಊರಿನ ಜನರ ಕರ್ಮಕಾಂಡದ್ದೇ ಚಿತ್ರಣ.