Monday, April 14, 2014

ಝೆನ್ ಕಥೆಗಳು - ಕಣ್ಣು ಮಿಟುಕಿಸದೆ


ಆಂತರಿಕ ಯುದ್ಧಗಳಲ್ಲಿ ತೊಡಗಿದ್ದ ಜಪಾನಿನಲ್ಲಿ ಸೈನ್ಯ ಊರೊಂದಕ್ಕೆ ನುಗ್ಗಿದರೆ ಕೈಗೆ ಸಿಕ್ಕವರನ್ನೆಲ್ಲ ಕೊಂದು ಊರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದರು. ಆ ಒಂದು ಹಳ್ಳಿಯಲ್ಲಿನ ಜನರು ಸೈನ್ಯ ಆಕ್ರಮಣ  ಮಾಡುವ ಮುನ್ನವೇ ತಮ್ಮ ಸಾಮಾನು ಸರಂಜಾಮುಗಳನ್ನು ಕಟ್ಟಿಕೊಂಡು ಪಲಾಯನ ಗೈದಿದ್ದರು.

ಹಳ್ಳಿಗೆ ದಾಳಿಯಿಟ್ಟ ಸೈನ್ಯಕ್ಕೆ ಬರಿದಾದ ಮನೆಗಳು, ಮಾರುಕಟ್ಟೆಗಳು ಕಂಡವು. ಆದರೆ ಒಂದು ವಿಹಾರದಲ್ಲಿ ವಯಸ್ಸಾದ ಒಬ್ಬ ಝೆನ್ ಗುರು ಮಾತ್ರ ಉಳಿದಿದ್ದ. ಆ ವೃದ್ಧ ಗುರುವಿನ ಬಗ್ಗೆ ಕುತೂಹಲ ಉಂಟಾಗಿ ಸೈನ್ಯದ ದಂಡನಾಯಕ ಆತನನ್ನು ನೋಡಲು ವಿಹಾರಕ್ಕೆ ಬಂದ.

ದಂಡನಾಯಕನನ್ನು ಕಂಡೂ ಗುರುವು ವಿಚಲಿತನಾಗಲಿಲ್ಲ. ತನ್ನನ್ನು ಕಂಡು ನಡುಗುವ, ಮಂಡಿಯೂರಿ ಕುಳಿತುಕೊಳ್ಳುವವರನ್ನೇ ಎಲ್ಲೆಡೆ ಕಂಡಿದ್ದ ದಂಡನಾಯಕನಿಗೆ ಕೋಪ ನೆತ್ತಿಗೇರಿತು.

“ಮೂರ್ಖ! ನೀನು ಯಾರ ಎದುರು ನಿಂತಿದ್ದೀಯ ಅಂತ ಗೊತ್ತಿದೆಯಾ? ಕಣ್ಣು ಮಿಟುಕಿಸದೆ ನಾನು ನಿನ್ನ ಕತ್ತು ಸೀಳಿಹಾಕಬಲ್ಲೆ” ದಂಡನಾಯಕ ಅಬ್ಬರಿಸಿದ.

ಗುರು ತಣ್ಣನೆಯ ಧ್ವನಿಯಲ್ಲಿ ಉತ್ತರಿಸಿದ, “ನೀನು ಯಾರ ಎದುರು ನಿಂತಿದ್ದೀಯ ಅಂತ ತಿಳಿದಿದೆಯಾ? ಕಣ್ಣು ಮಿಟುಕಿಸದೆ ನಾನು ನಿನ್ನ ಕತ್ತಿಗೆ ಕತ್ತು ಒಡ್ಡಬಲ್ಲೆ.”




0 comments:

Post a Comment