Monday, April 21, 2014

ಝೆನ್ ಕಥೆಗಳು - ನಿಷ್ಪ್ರಯೋಜಕ ಜೀವನ



ಒಬ್ಬ ರೈತನಿಗೆ ಬಹಳ ವಯಸ್ಸಾಗಿತ್ತು. ಅವನಿಗೆ ಹೊಲದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಸದಾ ವರಾಂಡದಲ್ಲೇ ಕುಳಿತುಕೊಂಡು ದಿನ ಕಳೆಯುತ್ತಿದ್ದನು. ಅವನ ಮಗ ಯಾವಾಗಲೂ ಹೊಲದಲ್ಲಿ ಕೆಲಸ ಮಾಡುತ್ತಿದ್ದನು. ಮಗನು ಯಾವ ಸಮಯದಲ್ಲಿ ನೋಡಿದರೂ ಅವರ ತಂದೆ ಅಲ್ಲಿಯೇ ಕುಳಿತಿರುವುದು ಕಾಣುತ್ತಿತ್ತು. 

"ಇವರು ಇನ್ನು ಮುಂದೆ ಯಾವುದೇ ಕೆಲಸಕ್ಕೂ ಉಪಯೋಗಕ್ಕೆ ಬರುವುದಿಲ್ಲ" ಎಂದು ಮಗನು ಭಾವಿಸಿದನು. "ಇನ್ನು ಮುಂದೆ ಇವರಿಂದ ಏನೂ ಮಾಡಲು ಸಾಧ್ಯವಿಲ್ಲ" ಎಂದು ತಿಳಿಯಿತು. ಇದರಿಂದ ಮಗನಿಗೆ ತುಂಬಾ ನಿರಾಸೆಯಾಯಿತು. ಒಂದು ದಿನ ಮಗನು ಒಂದು ದೊಡ್ಡದಾದ ಮರದ ಶವದ ಪೆಟ್ಟಿಗೆಯನ್ನು ತಯಾರು ಮಾಡಿಸಿದನು. ಮತ್ತು ಅದನ್ನು ವರಾಂಡದಲ್ಲಿ ಎಳೆದು ತಂದು ಅವರ ತಂದೆಗೆ ಒಳಗೆ ಮಲಗಿಕೊಳ್ಳಲು ಹೇಳಿದನು.

ಏನೂ ಮಾತನಾಡದೇ ಅವರ ತಂದೆ ಅದರ ಮೇಲೆ ಏರಿ ಒಳಗೆ ಮಲಗಿದರು. ನಂತರ ಮಗನು ಆ ಶವದ ಪೆಟ್ಟಿಗೆಯ ಮುಚ್ಚಳವನ್ನು ಮುಚ್ಚಿ, ಅದನ್ನು ಹೊಲದ ಕೊನೆಯಲ್ಲಿ ಇರುವ ದೊಡ್ಡದಾದ ಪ್ರಪಾತಕ್ಕೆ ಎಳೆದು ತರುತ್ತಿದ್ದನು.


ಆ ಪ್ರಪಾತ ಸಮೀಪಿಸುತ್ತಿದ್ದಂತೆ ಶವದ ಪೆಟ್ಟಿಗೆಯ ಒಳಗಿನಿಂದ ನಿಧಾನವಾಗಿ ಮುಚ್ಚಳ ಸರಿದಾಡಲಾರಂಭಿಸಿತು. ಮಗನು ಆ ಮುಚ್ಚಳವನ್ನು ತೆರೆದು ನೋಡಿದನು. ಅದರ ಒಳಗೆ ಅವರ ತಂದೆ ಪ್ರಶಾಂತವಾಗಿ ಮಲಗಿದ್ದರು. ಅವರ ತಂದೆ ಮಗನ ಕಡೆ ನೋಡಿ "ಮಗನೇ ನೀನು ನನ್ನನ್ನು ಪ್ರಪಾತದಿಂದ ಕೆಳಗೆ ತಳ್ಳಲು ಕರೆದೊಯ್ಯುತ್ತಿದ್ದೀಯ ಅಂತ ನನಗೆ ಗೊತ್ತಿದೆ. ಆದರೆ ನೀನು ಹಾಗೆ ಮಾಡುವುದಕ್ಕಿಂತ ಮೊದಲು ನಾನು ನಿನಗೆ ಒಂದು ಸಲಹೆಯನ್ನು ನೀಡಲೇ? ಎಂದು ಕೇಳಿದನು. "ಏನದು..?" ಎಂದು ಮಗನು ಕೇಳಿದನು. "ನೀನು ನನ್ನನ್ನು ಪ್ರಪಾತದಿಂದ ಎಸೆಯಬೇಕು ಎಂದು ಬಯಸಿದರೆ ನನ್ನನ್ನು ಎಸೆದು ಬಿಡು. ಆದರೆ ಈ ಅತ್ಯುತ್ತಮವಾದ ಮರದ ಶವದ ಪೆಟ್ಟಿಗೆಯನ್ನು ಉಳಿಸಿ ಜೋಪಾನವಾಗಿ ಕಾಪಾಡು. ಮುಂದೆ ನಿನ್ನ ಮಕ್ಕಳು ಇದನ್ನು ಬಳಸಲು ಉಪಯುಕ್ತವಾಗುತ್ತದೆ!" ಎಂದು ಹೇಳಿದನು ಆ ವೃದ್ಧ ತಂದೆ. ಆಗ ಮಗನಿಗೆ ತನ್ನ ತಪ್ಪಿನ ಅರಿವಾಯಿತು. ತಂದೆಯ ಕ್ಷಮೆ ಕೇಳಿ, ಗೌರವದಿಂದ ತಂದೆಯನ್ನು ಮನೆಗೆ ವಾಪಸ್ ಕರೆದುಕೊಂಡು ಹೋದನು.





0 comments:

Post a Comment