Tuesday, April 15, 2014

ಕಲ್ದವಸಿ - ಕೆ ಎನ್ ಗಣೇಶಯ್ಯ

Kaldavasi - K. N. Ganeshaiahಮುನ್ನುಡಿಯಿಂದ 

ನಮ್ಮ ಸಂಸ್ಕೃತಿ ಅನಾದಿ ಕಾಲದ್ದು; ನಮ್ಮ ದೇಶಕ್ಕೆ ಭವ್ಯವಾದ ಚರಿತ್ರೆ ಇದೆ. ನಮ್ಮ ಪೂರ‍್ವಜರಿಗೆ ಎಲ್ಲವೂ ವೇದ್ಯವಾಗಿತ್ತು; ಅವರು ಬರೆದಿರುವುದನ್ನು ಡಿಕೋಡ್ ಮಾಡಿದರೆ ಸಾಕು ಈಗಿನ ವಿಜ್ಞಾನದ ಅದ್ಭುತ ಆವಿಷ್ಕಾರಗಳೇ ಅಲ್ಲಿ ಅಡಗಿವೆ .... ಹೀಗೆ ಬುರುಡೆ ಬಿಡುವಲ್ಲಿ ನಾವು ನಿಸ್ಸೀಮರು. ಅದಕ್ಕೆ ಹುಚ್ಚು ಹುಚ್ಚು ಆಧಾರಗಳನ್ನೂ ಹುಡುಕಿ ತೆಗೆಯುತ್ತೇವೆ ಕೂಡ- ಪೋಸ್ಟ್‌ಮಾರ‍್ಟಮ್ ಆಗಿ.
ಡಾರ್ವಿನ್, ಮನುಷ್ಯನು ಸರಳ ಜೀವಿಗಳಿಂದ ಹಂತ ಹಂತವಾಗಿ ವಿಕಾಸಗೊಂಡ ಒಂದು ಸಂಕೀರ್ಣ ಪ್ರಭೇದ ಎಂದು ವಾದಿಸಿದ ಕೂಡಲೆ, ನಮ್ಮ ದಶಾವತಾರಗಳನ್ನು ತೋರಿಸಿ, ಅಗೋ ನಮ್ಮವರಿಗೆ ಅದು ಗೊತ್ತಿತ್ತು ಎಂದು ಘೋಷಿಸಿಬಿಡುತ್ತೇವೆ- ಅದರ ಪರಿಣಾಮದ ಬಗ್ಗೆ ಯೋಚಿಸದೆ. ದಶಾವತಾರದ ಮತ್ಸ್ಯ, ಆಮೆ, ವರಾಹ ಇವು ಮಾನವನ ವಿಕಾಸದ ಹಂತಗಳನ್ನು ತೋರುವ ಹಾಗಿದ್ದರೆ 'ಸಂಭವಾಮಿ ಉಘೇ ಉಘೇ' ಒಂದು ಉಡಾಫೆಯೆ? ಅಥವ, 'ಸಂಭವಾಮಿ ಉಘೇ ಉಘೇ' ಮತ್ತು ದಶಾವತಾರದ ಕಥೆಗಳು ಸತ್ಯವಾಗಿದ್ದಲ್ಲಿ, ಆ ಅವತಾರಗಳು ಮಾನವನ ವಿಕಾಸವನ್ನು ಸೂಚಿಸುತ್ತವೆ ಎನ್ನುವುದು ಉಡಾಫೆಯಾಗಿರಬೇಕಲ್ಲವೆ?
'ಆ ಎರಡೂ ಸಹ ಒಂದರೊಳಗೊಂದು ಅಡಗಿಕೊಂಡಿರುವ ಸತ್ಯಗಳು' ಎಂದು ವಾದಿಸಿ, ಈ ದ್ವಂದ್ವವನ್ನು ಸುಲಭವಾಗಿ ನೀಗಿಸುವವರಿಗೂ ಬರವಿಲ್ಲ. ನಾವು ಬಹು ತತ್ವ ಪ್ರವೀಣರಲ್ಲವೆ? ಹಾಗಾಗಿ ಬಹು-ಅರ್ಥಗಳೂ ಅಲ್ಲಿರಲು ಸಾಧ್ಯ ಎಂದು ನಂಬುವುದು, ಅಥವ ನಂಬಿಸುವುದು ನಮಗೆ ಕಷ್ಟವಿಲ್ಲ.
ಹೀಗೆ ನಮ್ಮ ಆದಿಕಾಲದ ಜ್ಞಾನದ ಪೋಸ್ಟ್-ಮಾರ್ಟಮ್ ಅವಲೋಕನೆ ಎಷ್ಟರಮಟ್ಟಿಗೆ ಹೋಗಿದೆ ಎಂದರೆ, ಇತ್ತೀಚೆಗೆ ಒಂದೆಡೆ, ಶ್ರಿಚಕ್ರದ ಪ್ರಾಕಾರವು 'ಗಾಡ್ ಪಾರ್ಟಿಕಲ್'ಗಳನ್ನು ತೋರುತ್ತದೆ ಎಂಬ ವಾದವನ್ನೂ ಓದಿದೆ!! ನನಗೆ ಆಶ್ಚರ್ಯವಾಗುವುದೆಂದರೆ, ಗಾಡ್ ಪಾರ‍್ಟಿಕಲ್ ಅನ್ನು ವಿಜ್ಞಾನಿಗಳು ಅಷ್ಟು ಮೈಮುರಿದು ಪ್ರಯೋಗ ಕೈಗೊಂಡು ತೋರುವ ಮುನ್ನವೆ ಅಂತಹ ರಹಸ್ಯ ಜ್ಞಾನ ನಮ್ಮ ಪೂರ್ವಜರು ಅರಿತಿದ್ದರೆಂದು ತೋರಿಸಬಲ್ಲವರು ಅಥವ ಪುರಾವೆಗಳಿಂದ ವಾದಿಸುವವರು ಏಕೆ ಯಾರೂ ಇಲ್ಲ ಎನ್ನುವುದು. ಎಲ್ಲವೂ ಏಕೆ ಪೋಸ್ಟ್-ಮಾರ್ಟೆಮ್ ಆಗಿ ಅವಲೋಕನಗೊಳ್ಳುತ್ತವೆ?
ಇಂತಹ ಕುರುಡು ಪ್ರೇಮದಿಂದ, ಇವೆಲ್ಲಕ್ಕೂ ಮಿಗಿಲಾದ ಅಪಾಯ ಒಂದಿದೆ: ಮುಂದಿನ ಜನಾಂಗಕ್ಕೂ ಈ ದೇಶದ ಚರಿತ್ರೆ ಮತ್ತು ಸಂಸ್ಕೃತಿಯ ಬಗ್ಗೆ ನಮ್ಮ ಎಲ್ಲಕುರುಡು ನಂಬಿಕೆಗಳನ್ನೂ ಸತ್ಯವೆಂದು ಬೋಧಿಸಿ, ನಂಬಿಸಿ, ಬೆನ್ನು ತಟ್ಟಿಕೊಂಡು, ತಟ್ಟಿಸಿಕೊಂಡು, ಸ್ವಪ್ರಶಂಸೆಯಲ್ಲಿಯೆ ತೃಪ್ತಿಪಟ್ಟುಕೊಳ್ಳುವುದರ ಜೊತೆಗೆ, ಅಂತಹ ಹುಸಿ ಸಂತೃಪ್ತಿಯನ್ನು ಎಳೆ ಮನಗಳಲ್ಲಿಯೂ ತುಂಬಿ, ನಮ್ಮ ಸಂಸ್ಕೃತಿಯ ಎಲ್ಲ ಅವಶೇಷಗಳನ್ನೂ ಯಾವುದೇ ಅವಲೋಕನೆಯಿಲ್ಲದೆ ಸ್ವೀಕರಿಸಲು ಪ್ರೇರೇಪಿಸಿ, ಅವರನ್ನು ವಿಚಾರವಂತಿಕೆಯಲ್ಲಿ ಮತ್ತು ಚಿಂತನೆಯಲ್ಲಿ ನಿರ್ವೀರ್ಯರನ್ನಾಗಿಸುವ ಸಾಧ್ಯತೆಯ ಅಪಾಯ.
ಇದಕ್ಕೆ ಹಲವು ದೃಷ್ಟಾಂತಗಳಿವೆ: ನಮ್ಮ ದೇವರುಗಳು ಹೆಂಡತಿಯರನ್ನು ಅಡ ಇಟ್ಟು ಮಾರಿಕೊಂಡರೂ ಅವರನ್ನು ಪೂಜಿಸಬೇಕೆನ್ನುತ್ತೇವೆ. 'ನೀನು ಎಂದಿಗೂ ಜೂಜು ಆಡಬಾರದು' ಎಂದು ಮಕ್ಕಳಿಗೆ ನೀತಿ ಪಾಠ ಹೇಳುತ್ತಲೆ, ಆ ಜೂಜಿನಿಂದಲೆ ಒಂದು ಇಡಿ ಯುಗವನ್ನೆ ಯುದ್ಧರಂಗವನ್ನಾಗಿಸಿದ ಧರ್ಮರಾಯನಿಗೆ ದೇವಾಲಯ ಕಟ್ಟಿಸಿ ಅಲ್ಲಿ ಅವನನ್ನು ಪೂಜಿಸಲು ಕಲಿಸುತ್ತೇವೆ. ಈ ಎಲ್ಲ ವೈರುದ್ಯಗಳ ಮಧ್ಯೆ, ಮಕ್ಕಳನ್ನು ಸರಿತಪ್ಪುಗಳ ತರ್ಕದ ಗೋಜಲಿಗೆ ಸಿಕ್ಕಿಸುತ್ತೇವೆ.
ರಾಮಾಯಣವನ್ನು ವೈಭವೀಕರಿಸುವಾಗ ರಾಮನ 'ಏಕಪತ್ನೀವ್ರತ'ದ ಬಗ್ಗೆ ಪೂಜಾಮನೋಭಾವ ಬೆಳೆಯುವಂತೆ ಬೋಧಿಸಿ, ಕೃಷ್ಣನ ಬೃಂದಾವನದ ಕಥೆಗೆ ಬಂದಾಗ, ಸಾವಿರ ಹೆಣ್ಣುಗಳ ಜೊತೆಯ ಅವನ ಚಕ್ಕಂದವನ್ನು ಮೆಚ್ಚಿ, ಗೌರವಿಸಬೇಕಾದ ದೇವರ ನಡತೆ ಎಂದು ತತ್ವೀಕರಿಸುತ್ತೇವೆ. ನಮ್ಮ ದೈವಗಳ ಈ ವೈರುಧ್ಯಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವ ಗೊಂದಲವನ್ನು ಪರಿಹರಿಸಲಾಗದ ಹರೆಯದ ಕಂದಮ್ಮಗಳು ಕೊನೆಗೆ ಯಾವುದರ ಬಗ್ಗೆಯೂ ಯೋಚಿಸದೆ ಇರುವುದೆ ಸುಲಭೋತ್ತಮ ಕ್ರಮವೆಂದು ಕಲಿತು, ಅವರು ತಾರ್ಕಿಕ- ಮತ್ತು ಚಿಂತನಾ-ಸೋಂಬೇರಿಗಳಾಗಲು ನಾವೇ ಕಾರಣವಾಗುತ್ತೇವೆ.
ಇಂತಹ ಸುಳ್ಳು ಬೋಧನೆಗಳಿಂದ ನಮ್ಮ ಮನಸ್ಸುಗಳನ್ನು ಬಿಡುಗಡೆಗೊಳಿಸುವ ಪ್ರಯತ್ನವಾಗಿ 'ಕಲ್ದವಸಿ' ರೂಪುಗೊಂಡಿದ್ದಾಳೆ. ಈ ಕಥೆಯಲ್ಲಿ ಕಥೆ ನಿಮಿತ್ತ. ಕುವೆಂಪು ಮತ್ತು ಸರಸ್ವತಿಯ ಸಂವಾದವೆ ಕಥೆಯ ಜೀವಾಳ.
ಭಾರತವರ್ಷದ ಇದೇ ಕಾಲಘಟ್ಟದಲ್ಲಿ ನಾವು ಮೇಲಿನ ಗುಂಪಿಗೆ ತದ್ವಿರುದ್ಧವಾದ ಮತ್ತೊಂದು 'ವಿಚಾರವಾದಿ' ಬಳಗವನ್ನೂ ಕಾಣುತ್ತೇವೆ. ಎಸ್.ಎಲ್. ಭೈರಪ್ಪನವರು ಚರಿತ್ರೆಯಲ್ಲಿ ಉಲ್ಲೇಖಿತ ಸತ್ಯಗಳನ್ನು ಆಧರಿಸಿ ಬರೆದ 'ಆವರಣ' ಕಾದಂಬರಿಯನ್ನು ಹಾಗೂ, ವಿ.ಎಸ್. ನೈಪಾಲ್‌ರು ತಮ್ಮ 'ವೂಂಡೆಡ್ ಸಿವಿಲೈಜೇಶನ್'ನಲ್ಲಿ ಉಚ್ಚರಿಸಿದ ಇತಿಹಾಸ ಸತ್ಯವನ್ನು 'ಸಮಾಜ ವಿರೋಧಿ', 'ಶಾಂತಿ ಕದಡುವ', ಅಥವ 'ಇನ್ಸೆನ್ಸಿಟಿವ್' ಬರಹಗಳೆಂಬ ಅರ್ಥ ಲೇಪಿಸಿ, ಅವುಗಳಲ್ಲಿ 'ಲಿಟರೇಚರ್- ಬಾಂಬ್' ಎಂಬಂತಹ ಭಯೋತ್ಪಾದಕ ಅಂಶಗಳನ್ನು ಹುಡುಕುವ ಈ ವಿಚಾರವಾದಿಗಳು, ಅದೇ ಭಾರತ ಚರಿತ್ರೆಯ ಜಾತಿ-ವರ್ಣ ಭೇದ, ಸತಿಯೊಡನೆ ಸಹಗಮನ, ಬಾಲ್ಯವಿವಾಹದಂತಹ ದುರಂತ ಸತ್ಯಗಳನ್ನು ಮಾತ್ರ ಎತ್ತಿಹಿಡಿಯುವ ಅರೆ-ಸತ್ಯ-ವಾದಿಗಳು.
ನಮ್ಮ ಸಂಸ್ಕೃತಿಯ ಈ ದುರಂತ ಸತ್ಯಗಳನ್ನು ಎತ್ತಿ ತೋರಬಾರದೆನ್ನುವುದು ನನ್ನ ವಾದವಲ್ಲ. ಅವೆಲ್ಲವೂ ಸತ್ಯ. ಆ ಸತ್ಯವನ್ನು ಗುರುತಿಸಲೇಬೇಕು. ಆದರೆ, ಅಂತೆಯೆ, ಬೇರೆ ಸತ್ಯಗಳನ್ನೂ ಗುರುತಿಸುವಲ್ಲಿ ನಾವು ಭೇದಭಾವ ಮಾಡಬಾರದು ಎನ್ನುವುದು ನನ್ನ ಒತ್ತಾಯ.
ಚರಿತ್ರೆಯನ್ನು ಚರಿತ್ರೆಯನ್ನಾಗಿ ಮಾತ್ರ ನೋಡುವ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕೆನ್ನುವುದು ನನ್ನ ವಾದ. ಆದರೆ, ಈ ಬುದ್ಧಿಜೀವಿಗಳು ಚರಿತ್ರೆಯ ಕೆಲವು ಸತ್ಯಗಳನ್ನು ಎತ್ತಿಹಿಡಿದು, ಕೆಲವನ್ನು ಕಾಣದಂತೆ ನಟಿಸುವ ಜಾಣಕುರುಡರು. ಚರಿತ್ರೆಯನ್ನು ತಮ್ಮ ವಾದಕ್ಕೆ ತಕ್ಕಂತೆ ಸ್ವೀಕರಿಸುವ ಅಥವ ತಿರಸ್ಕರಿಸುವ ಇವರು, ಪ್ರಸ್ತುತ ಸಾಮಾಜಿಕ ಮನೋಭಾವದ ದೃಷ್ಟಿಯಲ್ಲಿ ಗೌರವಕ್ಕೆ ಪಾತ್ರರಾಗುವಂತೆ, ರಾಜಕೀಯದ ಗಾಳಿಯ ದಿಕ್ಕಿಗೆ ಸರಿಹೊಂದುವಂತೆ, ತಮ್ಮ ವಾದಗಳನ್ನು ಮಂಡಿಸಿ ಬೇರೆಯವರಿಗಿಂತಲೂ ತಾವು 'ಸಾಮಾಜಿಕ ನ್ಯಾಯವಂತರು', 'ಸಾಮಾಜಿಕ ಪ್ರಜ್ಞಾವಂತರು' ಎಂದು ಎದೆ ತಟ್ಟಿ ಹೇಳಿಕೊಳ್ಳವಲ್ಲಿ ನಿಸ್ಸೀಮರು.
'ನಮ್ಮ ಚರಿತ್ರೆಯು ಗೆದ್ದವರು ಬರೆದ ಸುಳ್ಳಿನ ಕಂತೆ' ಎಂಬ ಸತ್ಯದ ಬಗ್ಗೆ ಬಿಡುಬೀಸಾಗಿ ಮಾತನಾಡಿ, ಅಂದಿನ ಚರಿತ್ರಕಾರರನ್ನು ಮೂದಲಿಸುವ ಈ ಬಳಗ, ಇಂದಿನ ಕಾಲ ಘಟ್ಟದಲ್ಲಿ ತಾವೂ ಸಹ ಅಂಥದೆ ಅರ್ಧ ಸತ್ಯವನ್ನು ಹುಟ್ಟುಹಾಕುತ್ತಿರುವ 'ಚರಿತ್ರೆ-ಕಳ್ಳರು' ಎಂದು ನನ್ನ ಭಾವನೆ.
ಈ 'ವಿಚಾರವಾದಿ'ಗಳಿಗೆ ಮತ್ತೊಂದು ದಾಯಾದಿ ಬಳಗವಿದೆ. ಈ ಬಳಗವೂ ಸಹ ಹೀಗೆಯೆ ವೈರುಧ್ಯ ಮೌಲ್ಯಗಳಿಗೆ ಅಂಟಿಕೊಂಡು, ಕಾಣದ ತಮ್ಮ ಬೆನ್ನಿಗೆ ಕನ್ನಡಿ ಹಿಡಿಯದ ಜಾಣ ಜಾತಿ. ಬಹುಪಾಲು, ಮೀಡಿಯಾಗಳಲ್ಲಿ ಕಾಣಿಸಿಕೊಳ್ಳುವ ಇವರು ನಮ್ಮ ಯುವ ಜನಾಂಗವು ಅಸಭ್ಯ ಉಡುಪುಗಳನ್ನು ಧರಿಸುವುದರ ಮತ್ತು ಚಲನಚಿತ್ರಗಳ 'ಐಟಂ ನೃತ್ಯ'ಗಳ ಸಾಮಾಜಿಕ ಪರಿಣಾಮವನ್ನು ಅವಲೋಕಿಸುವುದೇ ಅನಾಗರಿಕ ಎಂದು ತೀರ್ಮಾನಿಸಿದರೂ, ಅಮೆರಿಕದ ಪ್ರೆಸಿಡೆಂಟ್ ಒಬ್ಬಾಕೆಯನ್ನು ಗೌರವಯುತವಾಗಿ, 'ಬೆಸ್ಟ್ ಲುಕಿಂಗ್' ಎಂದು ಹೇಳಿದರೆ, ಅದು 'ಸೆಕ್ಸಿಸ್ಟ್ ಕಾಮೆಂಟ್' ಎಂದೇ ತೀರ್ಮಾನಿಸಿ ಖಂಡಿಸಲು ಮುಂದಾಗುತ್ತಾರೆ.
ತಮ್ಮನ್ನು ತಾವೆ 'ಲಿಬರೇಟೆಡ್' ಎಂದು ಕರೆದುಕೊಳ್ಳುವ ಈ ಜಾತಿ, 'ಲಿವಿಂಗ್ ರಿಲೇಶನ್'ನಂತಹ ಜೀವನ ಕ್ರಮಗಳನ್ನೂ, ಹೆಣ್ಣು ಅಥವಾ ಗಂಡು ಅಸಭ್ಯವಾದ ವೇಷಗಳನ್ನು ಧರಿಸುವುದನ್ನು ವೈಯುಕ್ತಿಕ ಸ್ವಾತಂತ್ರ್ಯ ಎಂದು ಸಮರ್ಥಿಸಿಕೊಳ್ಳುವುದೆ ಒಂದು ಹೆಗ್ಗಳಿಕೆ ಎಂದು ಭಾವಿಸುತ್ತಾರೆ. ಆದರೆ, ಒಂದು
ಹೆಣ್ಣು ಮತ್ತು ಗಂಡನ್ನು ಬೆಸೆಯಲು ನಡೆಯುವ ಮದುವೆ ಮುಂತಾದ ಸಾಂಸ್ಕೃತಿಕ ವ್ಯವಸ್ಥೆಗಳು, ಮತ್ತು ಸಮಾಜದಲ್ಲಿ ನಾವು ಅಳವಡಿಸಿಕೊಳ್ಳಬೇಕಿರುವ ಸಭ್ಯ ವರ್ತನೆಗಳು, ಸಮಾಜದ ಏಳಿಗೆಗಾಗಿ ಶತಮಾನಗಳ ಕಾಲದಿಂದ ವಿಕಾಸಗೊಂಡಿರುವ ಸಾಮಾಜಿಕ ನಡತೆಗಳು ಎಂಬ ಸತ್ಯಕ್ಕೆ ಜಾಣ ಕುರುಡರಾಗಿ ವರ್ತಿಸುತ್ತಾರೆ. ಆ ವ್ಯವಸ್ಥೆಗಳನ್ನು ನಾವು ಸಾರಾ ಸಗಟಾಗಿ ನಿರ್ಲಕ್ಷಿಸುವುದರಿಂದ ಸಮಾಜದ ಸಮೂಹ ನಡವಳಿಕೆಗಳಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸುವುವರನ್ನೆಲ್ಲ 'ದಡ್ಡರು', 'ಅನಾಗರಿಕರು' ಎಂದು ಗುಡಿಸಿ ಗುಡ್ಡೆಹಾಕುತ್ತಾರೆ.

ಇವರನ್ನು ಕಂಡಾಗ ನನಗೆ ನೆನಪಾಗುವುದೆಂದರೆ, ೧೭ನೆ ಮತ್ತು ೧೮ನೆ ಶತಮಾನದ ಯೂರೋಪಿನಲ್ಲಿ ಕಂಡುಬಂದ ಇಂಥದೆ ಒಂದು ಚಾಲನೆ: ಅಂದಿನ ಕಾಲ ಘಟ್ಟದ ಯೂರೋಪಿನ ಕೆಲವರು 'ಬುದ್ಧಿವಂತ'ರು (ಲಿನ್ನೇಸ್ ಸೇರಿ), ತಮ್ಮ ಜನಾಂಗ, ಅಂದರೆ ಬಿಳಿಯರು, ಮಾತ್ರ ಉನ್ನತ ಮಟ್ಟದ ನಾಗರಿಕರು ಮಿಕ್ಕೆಲ್ಲರೂ ಅನಾಗರಿಕ ಕೀಳು ಜನಾಂಗದವರು ಎಂದು ತೀರ್ಮಾನಿಸಿ ಪುಟಗಟ್ಟಲೆ
ಬರೆದು, ಭಾಷಣಗಳನ್ನು ಬಿಗಿದು ತಮ್ಮ ಪ್ರತಿಷ್ಟೆಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಈಗಿನ ಕಾಲದ ಈ ಮೀಡಿಯ ಬಳಗ, ಅಂದಿನ ಕಾಲದ ಯೂರೋಪಿನ 'ಬುದ್ಧಿವಂತರ' ಹಾದಿ ತುಳಿಯುವುದೆ 'ನಾಗರೀಕತೆ' ಎಂದು ಭಾವಿಸಿದಂತಿದೆ.

ಧರ್ಮಗಳ ಅವಶ್ಯಕತೆಯ ಬಗ್ಗೆ ಮಾತನಾಡುವವರನ್ನೂ ಹಾಗೆಯೆ ತಿರಸ್ಕಾರ ಮನೋಭಾವದಿಂದ ನೋಡುವ ಈ ಎರಡೂ ವಿಚಾರವಾದಿ'ಗಳು, ಧರ್ಮಗಳು ಮತ್ತು ಹಲವು ಧಾರ್ಮಿಕ ವಿಧಿಗಳು, ಸಾಮಾಜಿಕ ಅವಶ್ಯಕತೆಯಿಂದಾಗಿ ವಿಕಾಸಗೊಂಡ ವ್ಯವಸ್ಥೆಗಳು, ಹಾಗೂ, ಮಾನವನಲ್ಲಿ ಸಮಾಜ-ಪರ ನಡತೆಗಳು ವಿಕಾಸಗೊಂಡಿರುವುದೆ ಧರ್ಮಗಳ ಆವರಣದೊಳಗೆ ಎಂಬ ವೈಜ್ಞಾನಿಕ ಸತ್ಯಕ್ಕೆ ಕಣ್ಣು ಮುಚ್ಚಿಬಿಟ್ಟಂತಿದೆ. ಅಂತೆಯೆ, ಧಾರ್ಮಿಕ ವಿಧಿಗಳನ್ನು ಧಿಕ್ಕರಿಸುವ ಮುನ್ನ ಅವುಗಳ ಅವಲೋಕನೆ ಅವಶ್ಯಕ ಎಂದು ವಾದಿಸುವವರನ್ನು ಇವರು, 'ಮೂಲಭೂತ ವಾದಿಗಳೆಂದು' ತಿರಸ್ಕರಿಸುತ್ತಾರೆ.
ಇಂತಹ 'ವಿಚಾರವಂತ'ರ ವಾದಗಳಲ್ಲಿರಬಹುದಾದ ಟೊಳ್ಳನ್ನು ತೆರೆದಿಡುವ ಪ್ರಯತ್ನವೆ 'ಅಂಗದಾನ'. ನನ್ನ ಉದ್ದೇಶ ಇಷ್ಟೇ: ಧರ್ಮಗಳ ಉಗಮ ಮತ್ತು ಅವಶ್ಯಕತೆ ಗಳನ್ನು ನಾವು ಉದ್ವೇಗರಹಿತವಾಗಿ, ರಾಜಕೀಯ-ಮುಕ್ತವಾಗಿ, ಹಾಗೂ ಕಾಲಾತೀತವಾಗಿ ಗ್ರಹಿಸಿದರೆ, ಆಗ ದೊರೆಯುವ ಉತ್ತರಗಳು, ಬಹುಶಃ ನಮ್ಮ ಈಗಿನ ರಾಜ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಗಳಲ್ಲಿ ತರಬೇಕಾದ ಕೆಲವು ಬದಲಾವಣೆಗಳ ಅವಶ್ಯಕತೆಯತ್ತ ಕೈಮರಗಳಾಗಬಹುದು ಎಂಬ ನಂಬಿಕೆ.
ಈ ನನ್ನ ನಂಬಿಕೆಯನ್ನು ಇನ್ನೂ ಹೆಚ್ಚಿನ ಚರ್ಚೆಯ ಓರೆಗಲ್ಲಿಗೆ ಹಚ್ಚಬೇಕು ಎಂದು ನಾನೂ ಒಪ್ಪಿಕೊಳ್ಳುತ್ತೇನೆ. ನಮ್ಮ ದೇಶಕ್ಕೆ ಅದ್ಭುತವಾದ ಚರಿತ್ರೆಯಿದೆ ಎಂದು ಬೊಗಳೆಬಿಡುವ, ನಾವು ಅದೆಷ್ಟು 'ಚರಿತ್ರೆ-ಹೀನ'ರು ಎಂದು ನಾಚಿಕೆ ಪಡಬೇಕಾಗಿದೆ:
ಅಶೋಕನ ಕಾಲದಲ್ಲಿ ಲಿಪಿಯನ್ನು ಅಳವಡಿಸಿಕೊಂಡ ನಂತರವೂ ಸಹ ಚರಿತ್ರೆಯ ಘಟನೆಗಳ ಬಗ್ಗೆ ಬರೆದು, ದಾಖಲಿಸುವ ರೂಢಿಯೇ ನಮ್ಮ ಭಾರತೀಯರ ರಕ್ತದಲ್ಲಿ ಕಂಡು ಬರುವುದಿಲ್ಲ. ವಿಜಯನಗರದ ವಿವರಗಳು ಬೇಕಿದ್ದರೆ, ಚೀನಾದ ಹುಯೆನ್‌ತ್ಸಾಂಗ್‌ನ ಯಾತ್ರೆಯ ದಾಖಲೆಗಳಿಗೆ ಹೋಗಬೇಕು. ಚಂದ್ರಗುಪ್ತನ ಬಗ್ಗೆ ತಿಳಿಯಬೇಕೆಂದರೆ ಅಲೆಕ್ಸಾಂಡರ್ ತನ್ನೊಂದಿಗೆ ಕರೆತಂದಿದ್ದ ಚರಿತ್ರಕಾರ, ಹೆರೊಡೋಟಸ್‌ನ ಬರಹಕ್ಕೆ ಶರಣಾಗಬೇಕು. ಬುದ್ಧನ ಹಾಗೂ ಅಶೋಕನ ಬಗ್ಗೆ ತಿಳಿಯಬೇಕೆಂದರೆ, ಶ್ರೀಲಂಕದ 'ಮಹಾವಂಶ' ದಂತಹ ಪುರಾಣಗಳಿಗೆ ಮೊರೆಹೋಗಬೇಕು.
ಹೀಗೆ ನಮ್ಮ ಇಡೀ ಚರಿತ್ರೆಯ ರಚನೆಗೆ ನಾವು ಹೊರಗಿನ ದಾಖಲೆಗಳನ್ನೇ ಆಶ್ರಯಿಸಬೇಕಿರುವಾಗ, ನಮ್ಮ ಚರಿತ್ರೆ ಅದ್ಭುತ ಎಂದು ಯಾವ ಖಚಿತತೆಯಿಂದ ಹೇಳಬಹುದು ಎಂದು ನನಗೆ ಆಶ್ಚರ್ಯ. ಬಹುಶಃ
ಇದೆ ಕಾರಣದಿಂದಲೇ ಹಲವು ಚಾರಿತ್ರಿಕ ವ್ಯಕ್ತಿಗಳ ಬಗ್ಗೆ ನಮಗೆ ಯಾವುದೇ ಖಚಿತ ಮಾಹಿತಿ ಇಲ್ಲದೆ, ಊಹಾಪೋಹಗಳ ಕಗ್ಗಂಟೆ ನಮ್ಮ ಮುಂದೆ ಎದುರಾಗುತ್ತದೆ.

ಉದಾಹರಣೆಗೆ, ಎರಡನೆ ಬುದ್ಧ ಎಂದೇ ಹೆಸರಾದ, ಬೌದ್ದ ಧರ್ಮಕ್ಕೆ ಮಹಾಯಾನ ಎಂಬ ಹೊಸ ಆಯಾಮವನ್ನೆ ಕಟ್ಟಿ ಕೊಟ್ಟ, ಇಂದಿನ ತತ್ವಜ್ಞಾನಿಗಳು ಕೂಡ ಅಚ್ಚರಿಪಡುವಂತಹ ತಾತ್ವಿಕ ವಾದಗಳನ್ನು ಮಂಡಿಸಿದ ನಾಗಾರ್ಜುನ ಆಚಾರ್ಯರ ಬಗ್ಗೆ ಅದೆಷ್ಟು ಊಹಾಪೋಹಗಳಿವೆ ಎಂದರೆ, ಅವೆಲ್ಲವೂ ನಿಜವಾಗಿದ್ದಲ್ಲಿ ಆತ ಕನಿಷ್ಟ ೪ ಶತಮಾನಗಳವರೆಗೆ ಬದುಕಿದ್ದ ಪವಾಡಪುರುಷನೂ, ತಾಂತ್ರಿಕನೂ, ಕಾಮುಕನೂ, ಕಲ್ಲನ್ನು ಬಂಗಾರಮಾಡುವ ಕಲೆ ಕಲಿತಿದ್ದ ಅದ್ಭುತ ರಸಾಯನ ಶಾಸ್ತ್ರಜ್ಞನೂ, ತನ್ನ ಕಾಲಕ್ಕೆ ಮೀರಿದ ಚಿಂತನಕಾರನೂ, ತರ್ಕವಾದಿಯೂ, ತತ್ವಶಾಸ್ತ್ರ ಪ್ರವೀಣನೂ. ....ಹೀಗೆ ಏನೇನೋ ಆಗಿರಬೇಕು!
ಅಂತಹ ಬಹು-ಆಕಾರದ ವ್ಯಕ್ತಿಯ ಚಿತ್ರಣ ಬರೆಯುವುದು ದೊಡ್ಡ ಸಾಹಸವೆ ಸರಿ. ಆ ಸಾಹಸವನ್ನು ಬದಿಗಿಟ್ಟು, ದೊರಕಿದ ಹಲವು ಮೂಲಗಳಿಂದ ಆತನ ಬಗ್ಗೆ ಒಂದು ಕೋನದ ಕಥೆ ನಿರ್ಮಿಸುವ ನನ್ನ ಪ್ರಯತ್ನವೆ 'ಧಮನಿ ಧರ್ಮ'
0 comments:

Post a Comment